ಬಳ್ಳಾರಿಯಲ್ಲಿ ವಿವಿಐಪಿ ಗೆಸ್ಟ್‌ಹೌಸ್‌ ಲೋಕಾರ್ಪಣೆ

By Kannadaprabha NewsFirst Published Aug 5, 2022, 1:22 PM IST
Highlights
  • ಬಳ್ಳಾರಿಯಲ್ಲಿ ವಿವಿಐಪಿ ಗೆಸ್ಟ್‌ಹೌಸ್‌ ಲೋಕಾರ್ಪಣೆ
  • ಕಟ್ಟಡ ಉದ್ಘಾಟಿಸಿದ ಸಚಿವ ಸಿ.ಸಿ. ಪಾಟೀಲ್‌
  • .5 ಕೋಟಿ ವೆಚ್ಚದಲ್ಲಿ ನಿರ್ಮಾಣ
  • ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕಟ್ಟುನಿಟ್ಟಿನ ಸೂಚನೆ
  • ಪಾರಂಪರಿಕ ಕಟ್ಟಡ ನವೀಕರಣಕ್ಕೆ .5 ಕೋಟಿ ಬಿಡುಗಡೆ

ಬಳ್ಳಾರಿ (ಆ.5) : ಬಳ್ಳಾರಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 1 ವರ್ಷದಲ್ಲಿ .124 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನೂ 5-6 ತಿಂಗಳಲ್ಲಿ ಜಿಲ್ಲೆಯ ರಸ್ತೆ ಜಾಲಗಳನ್ನು ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್‌ ಹೇಳಿದರು. ನಗರದ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ .5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ವಿವಿಐಪಿ ಗೆಸ್ಟ್‌ಹೌಸ್‌ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಒಂದು ವರ್ಷದಲ್ಲಿ ಬಳ್ಳಾರಿ(Ballari) ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ .124 ಕೋಟಿ, ಕಟ್ಟಡಗಳಿಗಾಗಿ .15 ಕೋಟಿ, ಅತಿಥಿಗೃಹಕ್ಕೆ .5 ಕೋಟಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ . 8 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ ಸಚಿವ ಸಿ.ಸಿ. ಪಾಟೀಲ್‌, ಬಳ್ಳಾರಿಯಲ್ಲಿ ನಿರ್ಮಿಸಲಾಗಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಹೆಚ್ಚುವರಿಯಾಗಿ .112 ಕೋಟಿ ಕೇಳಲಾಗಿದ್ದು, ಇತ್ತೀಚೆಗೆ ಕ್ಯಾಬಿನೆಟ್‌ನಲ್ಲಿಯೂ ಚರ್ಚಿಸಿ ಮರುಪರಿಗಣನೆಗೆ ವಾಪಸ್‌ ಕಳುಹಿಸಲಾಗಿದೆ. ಇದಕ್ಕೂ ಅಗತ್ಯ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

BIG 3: ಬಳ್ಳಾರಿಯಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಪ್ರವಾಸಿ ಮಂದಿರ, ಉದ್ಘಾಟನೆಯಾಗದ 2 ವರ್ಷ

ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಕ್ಷಭೇದ ಮಾಡದೇ ಹಣಕಾಸಿನ ಇತಿಮಿತಿಯಲ್ಲಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ಒಂದು ಬಾರಿ ನಿರ್ಮಿಸಿದ ರಸ್ತೆ ಕನಿಷ್ಠವೆಂದರೂ 10ರಿಂದ 15 ವರ್ಷ ಉಳಿಯಬೇಕು; ನಿಗದಿಪಡಿಸಿದ ನಿಯನಗಳನ್ವಯ ರೂಪಿಸಬೇಕು ಎಂದರು.

ಪಾರಂಪರಿಕ ಅತಿಥಿಗೃಹ ನವೀಕರಣಕ್ಕೆ .5 ಕೋಟಿ ಬಿಡುಗಡೆ:

ಜಿಲ್ಲೆಯಲ್ಲಿರುವ ಪಾರಂಪರಿಕ ಕಟ್ಟಡವನ್ನು ನವೀಕರಣಗೊಳಿಸಿ ಚಟುವಟಿಕೆಯನ್ನು ನಿರಂತರವಾಗಿ ನಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ .5 ಕೋಟಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ನೂತನ ವಿವಿಐಪಿ ಕಟ್ಟಡ ನಿರ್ಮಿಸಲಾಗಿದ್ದು, ಪಾರಂಪರಿಕ ಅತಿಥಿಗೃಹವನ್ನು ಅಭಿವೃದ್ಧಿಪಡಿಸಬೇಕು ಎಂದು ಕೋರಿದ ಹಿನ್ನೆಲೆ ಸಚಿವ ಪಾಟೀಲ್‌ ಘೋಷಣೆ ಮಾಡಿದರು.

ಬಿಜೆಪಿ ಸರ್ಕಾರಕ್ಕೂ ಮಳೆಗಾಲಕ್ಕೂ ವಿಶೇಷ ನಂಟಿದೆ ಎಂದು ಹೇಳಿದ ಸಚಿವ ಪಾಟೀಲ್‌, ಮಳೆ-ಚಳಿ, ರೋಗ-ರುಜಿನ ಎಲ್ಲವೂ ನಮ್ಮ ಅವಧಿಯಲ್ಲಿಯೇ ಬರತಾವೆ; ಅವುಗಳನ್ನು ಎದುರಿಸಿ ಉತ್ತಮ ಆಡಳಿತ ನೀಡಬೇಕು; ಅದನ್ನು ನಮ್ಮ ಸರ್ಕಾರ ಸಮರ್ಪಕವಾಗಿ ನೀಡುತ್ತಿದೆ ಎಂದರು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಲೋಕೋಪಯೋಗಿ ಇಲಾಖೆ ವತಿಯಿಂದ ಕಳೆದ ಒಂದು ವರ್ಷದಲ್ಲಿ 4040 ಕಿಮೀ ಹೆದ್ದಾರಿಗಳನ್ನು, 2338 ಜಿಲ್ಲಾ ಪ್ರಮುಖ ರಸ್ತೆಗಳನ್ನು ನಿರ್ಮಿಸಲಾಗಿದೆ. ಎಸ್‌ಎಚ್‌ಡಿಪಿ ಅಡಿ .3350 ಕೋಟಿ ವೆಚ್ಚದಲ್ಲಿ 2275 ಕಿಮೀ ರಸ್ತೆ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಗೆಸ್ಟ್‌ಹೌಸ್‌ ವಿಷಯಕ್ಕೆ ಎಚ್‌ಡಿಕೆ-ಜಮೀರ್‌ ಜಟಾಪಟಿ, ಮಾಜಿ ಮಿತ್ರರ ನಡುವೆ ಏನಿದು ಮುನಿಸು.?

.3900 ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಿ.ಸಿ. ಪಾಟೀಲ್‌ ಅವರು ಲೋಕೋಪಯೋಗಿ ಇಲಾಖೆ ಸಚಿವರಾದ ಆನಂತರ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೆಲಸಗಳು ಭರದಿಂದ ಸಾಗಿವೆ ಎಂದರು. ಶಾಸಕರಾದ ಈ. ತುಕಾರಾಂ, ಬಿ. ನಾಗೇಂದ್ರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಮಾತನಾಡಿದರು.

ವಿಧಾನಪರಿಷತ್‌ ಸದಸ್ಯ ವೈ.ಎಂ. ಸತೀಶ್‌, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಆದ್ಯಕ್ಷ ಉಮೇಶ, ಮಾಜಿ ಸಂಸದೆ ಜೆ. ಶಾಂತಾ, ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಎಂಜಿನಿಯರ್‌ ಜಗನ್ನಾಥ ಹಲಿಂಗೆ, ಲೋಕೋಪಯೋಗಿ ಇಲಾಖೆಯ ಬಳ್ಳಾರಿ ವೃತ್ತದ ಅಧೀಕ್ಷಕ ಮಲ್ಲಿಕಾರ್ಜುನ, ಜಿಪಂ ಸಿಇಒ ಜಿ. ಲಿಂಗಮೂರ್ತಿ, ಎಸ್ಪಿ ಸೈದುಲು ಅಡಾವತ್‌, ಸಹಾಯಕ ಆಯುಕ್ತ ಡಾ. ಆಕಾಶ ಶಂಕರ್‌, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎಸ್‌. ಪೂಜಾರಿ, ತಹಸೀಲ್ದಾರ್‌ ವಿಶ್ವನಾಥ, ಮಹಾನಗರ ಪಾಲಿಕೆಯ ಸದಸ್ಯರು ಇದ್ದರು.

ಬಳ್ಳಾರಿ ನಗರದ ತಾಳೂರು ರಸ್ತೆ ಕಾಮಗಾರಿ ಪರಿಶೀಲನೆ:

ನಗರದ ತಾಳೂರು ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಪರಿಶೀಲನೆ ನಡೆಸಿದರು. ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.

ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಮಾಜಿ ಸಂಸದೆ ಜೆ. ಶಾಂತಾ, ಎಸ್ಪಿ ಸೈದುಲು ಅಡಾವತ್‌, ಎಸಿ ಡಾ. ಆಕಾಶ ಶಂಕರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇದ್ದರು. ಬಳ್ಳಾರಿ ನಗರದ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ .5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ವಿವಿಐಪಿ ಗೆಸ್ಟ್‌ ಹೌಸ್‌ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್‌ ಉದ್ಘಾಟಿಸಿದರು

click me!