ಬಳ್ಳಾರಿ ಗಣಿ ವಿರುದ್ಧ ದನಿಯೆತ್ತಿದ ರೈತರ ಮೇಲೆ ಸುಳ್ಳು ಪ್ರಕರಣ?

By Suvarna NewsFirst Published May 26, 2022, 11:05 AM IST
Highlights

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಶುರುವಾದ ಗಣಿ ಗದ್ದಲ. ಪ್ಯಾಕ್ಟರಿ ಸ್ಥಾಪನೆಗೆ ತೀವ್ರ ವಿರೋಧ.

ಪೈಲಟ್ ಪ್ಲ್ಯಾಂಟ್ ವಿರೋಧಿಸಿದ ರೈತರು-ಗ್ರಾಮಸ್ಥರ ವಿರುದ್ದ ಸುಳ್ಳು ಕೇಸ್ ದಾಖಲು.

ರೈತರ ವಿರುದ್ದ ರೌಡಿಶೀಟ್‌, ಬೆದರಿಕೆ, ದೊಂಬಿ ಗಲಾಟೆ ಕೇಸ್ ದಾಖಲು.

ಸಂಡೂರಿನ ಬಿಕೆಜಿ ಪ್ಯಾಕ್ಟರಿ ಪರವಾಗಿ ಪೊಲೀಸರ ವಕಾಲತ್ತಿಗೆ ರೈತರ ಆಕ್ರೋಶ.

ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ: ಅದು ಚಿನ್ನದಂತಹ ಭೂಮಿ. ಆ ಭೂಮಿಯಲ್ಲಿ ಅನ್ನದಾತರು ಬಂಗಾರದಂತಹ ಬೆಳೆ ಬೆಳೆಯುತ್ತಾರೆ. ಅಷ್ಟೇ ಅಲ್ಲ ಆ ಕೃಷಿ ಜಮೀನುಗಳ ಪಕ್ಕದಲ್ಲೆ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಆ ದಟ್ಟ ಅರಣ್ಯ ಪ್ರದೇಶದಲ್ಲಿ ಅಪರೂಪದ ಔಷಧಿ ಸಸ್ಯಗಳ ವನವಿದೆ.  ಅತಂಹ ಫಲವತ್ತಾದ ಪ್ರದೇಶದಲ್ಲೀಗ ಮೈನಿಂಗ್ ಸ್ಪಾಂಜ್ ಪ್ಯಾಕ್ಟರಿ ಪ್ರಾರಂಭವಾಗುತ್ತಿರುವುದಕ್ಕೆ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ಯಾಕ್ಟರಿ ಹಾಕೋದನ್ನು ವಿರೋಧಿಸಿದ ರೈತರು ಮತ್ತು ಗ್ರಾಮಸ್ಥರ ಮೇಲೆ ಪೊಲೀಸರು ಸುಳ್ಳು ಕೇಸ್ ದಾಖಲಿಸಿರುವುದು ರೈತರನ್ನ ಕೆರಳುವಂತೆ ಮಾಡಿದೆ. ಈ ಘಟನೆ ನಡೆದಿರೋದು ಬಳ್ಳಾರಿ ಜಿಲ್ಲೆಯ ಗಣಿನಾಡಿನ ಸಂಡೂರಿನಲ್ಲಿ. ಹೀಗಾಗಿ ಇದೀಗ ಅನ್ನದಾತರು ನ್ಯಾಯಕೊಡಿಸುವಂತೆ ಎಸ್ಪಿ ಕಚೇರಿಯ ಮೊರೆ ಹೋಗಿದ್ದಾರೆ.

ಮತ್ತೊಮ್ಮೆ ಬಳ್ಳಾರಿ ಅದಿರಿಗೆ ಚಿನ್ನದ ಬೆಲೆ:

ಬಳ್ಳಾರಿ ಜಿಲ್ಲೆಯ ಸಂಡೂರಿನ ಅದಿರಿಗೆ ಮತ್ತೆ ಚಿನ್ನದ ಬೆಲೆ ಬಂದಿದೆ. ಸುಪ್ರೀಂಕೋರ್ಟ್‌ ಮೊನ್ನೆ ಮೊನ್ನೆಯಷ್ಟೆ ಅದಿರು ರಫ್ತಿಗೆ ಅನುಮತಿ ನೀಡಿರೋದೇ ಇದಕ್ಕೆ ಕಾರಣ ಎನ್ನಲಾಗ್ತಿದೆ...ಇನ್ನೂ ವಿದೇಶದ ಮಾರುಕಟ್ಟೆ ಮಾದರಿಯಲ್ಲಿ ದೇಶಿಯ ಮಾರುಕಟ್ಟೆಗೂ ಕೂಡ ಬೆಲೆ ಬಂದ ಹಿನ್ನೆಲೆ ಸಂಡೂರಿನ ಅದಿರು ಬಳಸಿ ಪೈಲೆಟ್ ಪ್ಲ್ಯಾಂಟ್ ಸ್ಥಾಪನೆಗೆ ಬಿಕೆಜಿ ಗಣಿ ಕಂಪನಿ ಮುಂದಾಗಿದೆ. ಸಂಡೂರಿನ ಸೋಮಲಾಪುರ, ಅಂಕಮನಾಳ ಗ್ರಾಮದ ಬಳಿಯ 260 ಎಕರೆ ಪ್ರದೇಶದಲ್ಲಿ ಬಿಕೆಜಿ ಗಣಿ ಕಂಪನಿ ಸ್ಪಾಂಜ್ ಐರನ್ ಓರ್ ಪ್ಯಾಕ್ಟರಿ ಸ್ಥಾಪನೆ ಮಾಡಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿ ಭೂಮಿ ಹಾಗೂ ಅಪರೂಪದ ಔಷಧಿ ಸಸ್ಯಗಳಿರುವ ಪ್ರದೇಶದಲ್ಲಿ ಸ್ಪಾಂಜ್ ಐರನ್ ಓರ್ ಕಂಪನಿ ಸ್ಥಾಪನೆ ಮಾಡಿದ್ರೆ ಇಲ್ಲಿಯ ಪರಿಸರ ಹಾಳಾಗುತ್ತದೆ ಅನ್ನೋದು ರೈತರ ವಾದವಾಗಿದೆ. ಇದನ್ನೇ ರೈತರು ಪರಿಸರ ಆಲಿಕೆ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಆದರೆ, ಪರಿಸರ ಆಲಿಕೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ರೈತರ ವಿರುದ್ದ ಪ್ಯಾಕ್ಟರಿ ಪರವಾಗಿ ಇರೋ ಕೆಲವರು ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ ಅಲ್ಲದೇ  ಪ್ಯಾಕ್ಟರಿಯವರ ಪರವಾಗಿ ಪೊಲೀಸರು ಕೂಡ ಇದ್ದು, ಹೋರಾಟಗಾರರನ್ನ ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆಂದು ಶ್ರೀಶೈಲ ಆಲದಹಳ್ಳಿ ಮತ್ತು ಮಾಧವ ರೆಡ್ಡಿ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದ: ತಮ್ಮ ಪಠ್ಯವನ್ನೂ ಸಹ ಕೈಬಿಡಿ ಎಂದ ಸಾಹಿತಿ ದೇವನೂರು ಮಹಾದೇವ

ಖಾಸಗಿ ಕಂಪನಿ ಪರ ನಿಂತರಾ ಪೊಲೀಸರು?:

ಇನ್ನೂ ಸಂಡೂರಿನ  ಬಿಕೆಜಿ ಗಣಿ ಕಂಪನಿ ಸ್ಥಾಪಿಸುತ್ತಿರುವ ಸ್ಪಾಂಜ್ ಐರನ್ ಓರ್ ಕಂಪನಿ ವಿರುದ್ದ ರೈತರ ಹೋರಾಟ  ಹತ್ತಿಕ್ಕಲು ಸಂಡೂರು ಪೊಲೀಸರು ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಇದ್ರಿಂದ ಪೊಲೀಸರ ವಿರುದ್ದ ರೊಚ್ಚಿಗೆದ್ದಿರುವ ನೂರಾರು ಗ್ರಾಮಸ್ಥರು ಮತ್ತು ರೈತರು ಬಳ್ಳಾರಿಯಲ್ಲಿನ ಎಸ್ ಪಿ ಕಚೇರಿಗೆ  ಬಂದು ಸಂಡೂರು ಪೊಲೀಸರ ವಿರುದ್ಧವೇ ದೂರನ್ನು ನೀಡಿದ್ದಾರೆ. ಸಂಡೂರು ಠಾಣೆಯ ಪಿಎಸ್ ಐ ಬಸವರಾಜ ಅಡವಿಬಾವಿ ಹೋರಾಟಗಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಗ್ರಾಮಸ್ಥರ ಮನವಿ ಆಲಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗುರುನಾಥ ಮೂತ್ತರು ಸುಳ್ಳು ಕೇಸ್ ದಾಖಲಿಸಿದ್ರೆ ಪಿಎಸ್ ಐ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಜಿಪಂ, ತಾಪಂ ಚುನಾವಣೆಗೆ ಹೈಕೋರ್ಟ್‌ 3 ತಿಂಗಳ ಗಡುವು

ಮತ್ತೊಮ್ಮೆ ರಾಜ್ಯದಲ್ಲಿ ಸದ್ದು ಮಾಡ್ತದೆಯೇ ಗಣಿ ಹೋರಾಟ:

ಒಟ್ಟಾರೆ, ಸುಪ್ರೀಂಕೋರ್ಟ್‌ ಅದಿರು ರಪ್ತಿಗೆ ಅನುಮತಿ ನೀಡಿದ ಬೆನ್ನಲ್ಲೆ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಗಣಿ ಗದ್ದಲ ಶುರುವಾಗಿದ್ದು. ಸ್ಪಾಂಜ್ ಐರನ್ ಓರ್ ಪ್ಯಾಕ್ಟರಿ ಬೇಡವೇ ಬೇಡವೆಂದು ರೈತರು- ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ತ್ರೀವಗೊಂಡಿರೋದು ವಿಶೇಷವಾಗಿದೆ. ಆದ್ರೇ, ಪರವಿರೋಧದ ಮಧ್ಯೆ ಫ್ಯಾಕ್ಟ್ರಿ ನಿರ್ಮಾಣವಾಗ್ತಯೇ ?  ರೈತರು ಮತ್ತು ಗ್ರಾಮಸ್ಥರ ಹೋರಾಟ ಎಲ್ಲಿಗೆ ಹೋಗಿ ನಿಲ್ಲುತ್ತದೆ ? ಅನ್ನೋದನ್ನ ಕಾದುನೋಡಬೇಕಿದೆ.

click me!