ಹಗರಿಬೊಮ್ಮನಹಳ್ಳಿಯಲ್ಲಿ ಎಲ್ಲಿ ನೋಡಿದ್ರೂ ಧೂಳೇ ಧೂಳು!

By Web DeskFirst Published Oct 10, 2019, 9:24 AM IST
Highlights

ಧೂಳೇ ಧೂಳು, ಕೇಳೋರಿಲ್ಲ ಸಾರ್ವಜನಿಕರ ಗೋಳು! ಹಗರಿಬೊಮ್ಮನಹಳ್ಳಿಯ ರಸ್ತೆಗಳೆಲ್ಲ ಧೂಳುಮಯ, ಅಧಿಕಾರಿಗಳ ನಿರ್ಲಕ್ಷ್ಯ| ಪಟ್ಟಣದ ಪ್ರಮುಖ ರಸ್ತೆ ಹಾಗೂ ರಾಜ್ಯ ಹೆದ್ದಾರಿಯೂ ಆಗಿದ್ದು| ರಸ್ತೆಯೆಲ್ಲ ತಗ್ಗು ಗುಂಡಿಗಳಿಂದ ಆವೃತ್ತಗೊಂಡಿವೆ| ಗುಂಡಿಗಳನ್ನು ಮುಚ್ಚಲು ಮಣ್ಣು ಹಾಕಿದ್ದು, ಬೃಹತ್ ವಾಹನಗಳ ಸಂಚಾರದಿಂದ, ಮರಳು ಸಾಗಾಣಿಕೆ ಟಿಪ್ಪರ್‌ಗಳಿಂದ ಉಂಟಾಗುವ ಧೂಳು ಜನರ ಕಣ್ಣಿಗೆ ಮಣ್ಣು ಹಾಕಿದಂತಾಗುತ್ತದೆ| 

ವಿಶ್ವನಾಥ ಬಾವಿಕಟ್ಟಿ 

ಹಗರಿಬೊಮ್ಮನಹಳ್ಳಿ(ಅ.10): ಪಟ್ಟಣದ ಹೆಸರೇ ಹೇಳುವಂತೆ ಇಂದಿಗೂ ಹಗರಿಬೊಮ್ಮನಹಳ್ಳಿ ಹಳ್ಳಿಗಿಂತ ಕಡೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ರಸ್ತೆಗಳು ಹೇಳುತ್ತವೆ. ಪಟ್ಟಣದ ಯಾವುದೇ ಓಣಿಗೆ ಕಾಲಿಟ್ಟರೂ ಧೂಳಿನ ಮಜ್ಜನ ಗ್ಯಾರಂಟಿ! 

ಹಳೇ ಊರಿನಿಂದ ಹೊಸ ಊರಿನವರೆಗೂ ಗಾಳೆಮ್ಮ ದೇವಸ್ಥಾನದವರೆಗೆ ಸುಮಾರು 3 ಕಿಮೀಗೂ ಹೆಚ್ಚು ಅಂತರ ಇದ್ದು, ಇದು ಪಟ್ಟಣದ ಪ್ರಮುಖ ರಸ್ತೆ ಹಾಗೂ ರಾಜ್ಯ ಹೆದ್ದಾರಿಯೂ ಆಗಿದ್ದು, ರಸ್ತೆಯೆಲ್ಲ ತಗ್ಗು ಗುಂಡಿಗಳಿಂದ ಆವೃತ್ತಗೊಂಡಿವೆ. ಗುಂಡಿಗಳನ್ನು ಮುಚ್ಚಲು ಮಣ್ಣು ಹಾಕಿದ್ದು, ಬೃಹತ್ ವಾಹನಗಳ ಸಂಚಾರದಿಂದ, ಮರಳು ಸಾಗಾಣಿಕೆ ಟಿಪ್ಪರ್‌ಗಳಿಂದ ಉಂಟಾಗುವ ಧೂಳು ಜನರ ಕಣ್ಣಿಗೆ ಮಣ್ಣು ಹಾಕಿದಂತಾಗುತ್ತದೆ. ಆದರೂ ಪುರಸಭೆಯವರಾಗಲಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಇನ್ನೂವರೆಗೂ ಕಣ್ಣೆತ್ತಿ ನೋಡಿಲ್ಲ. ಅಲ್ಲಲ್ಲಿ ತೆರೆದ ವಾಹನಗಳಲ್ಲಿ, ಮೊಬೈಲ್ ಕ್ಯಾಂಟಿನ್‌ಗಳಲ್ಲಿ ಇಡಲಾಗಿರುವ ಸಾರ್ವಜನಿಕರು ಸೇವಿಸುವ ಆಹಾರದ ಮೇಲೆ ಈ ಧೂಳು ಬಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದರೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಸಾರ್ವಜನಿಕರಿಗೆ 

ಕಿರಿಕಿರಿ: 

ರಾಮನಗರ ಬಸ್ ನಿಲ್ದಾಣದಿಂದ ಎಪಿಎಂಸಿ ವೃತ್ತದವರೆಗೂ, ಜೆಸ್ಕಾಂ ಇಲಾಖೆಯ ರಸ್ತೆಯಿಂದ ಎಪಿಎಂಸಿ ವೃತ್ತದವರೆಗೂ ಸುಮಾರು ತಲಾ 1 ಕಿಮೀಗೂ ಹೆಚ್ಚು ಇರುವ ರಸ್ತೆ, ಶ್ರೀಹಾಲಸ್ವಾಮಿ ಮಠದಿಂದ ಬೈಪಾಸ್ ರಸ್ತೆ ಸೇರಿ ಚಿತ್ರಮಂದಿರದ ಮುಂದಿನಿಂದ ಎಪಿಎಂಸಿ ವೃತ್ತದವರೆಗೂ ಸುಮಾರು 2 ಕಿಮೀ ರಸ್ತೆ ಇವು ಸಂಪೂರ್ಣ ಮಣ್ಣಿನಿಂದ ಡಾಂಬರ್ ರಸ್ತೆಯನ್ನು ಮುಚ್ಚಿಕೊಂಡಿದ್ದು, ವಾಹನಗಳ ಭರಾಟೆಯಿಂದ ಏಳುವ ಮಣ್ಣು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ. ಒಳರಸ್ತೆಗಳು ಹಳೇ ಊರಿನ ಪ್ರಮುಖ ರಸ್ತೆಯಿಂದ ಹಾಗೂ ತಂಬ್ರಹಳ್ಳಿ ರಸ್ತೆ ಕಡೆಯಿಂದ ಜೆ.ಜೆ. ನಗರಕ್ಕೆ ತೆರಳುವ ರಸ್ತೆ ಸೇರಿ ನೇಕಾರ ಕಾಲೋನಿಯ ಎರಡು ರಸ್ತೆಗಳು, ಹಳೇ ಕೋರ್ಟ್ ರಸ್ತೆ, ತಂಬ್ರಹಳ್ಳಿ ವೃತ್ತದಿಂದ ಆಂಧ್ರ ಬ್ಯಾಂಕ್‌ವರೆಗಿನ ರಸ್ತೆಗಳು ಸಹ ಡಾಂಬರೀಕರಣ ರಸ್ತೆಯಂತೆ ಕಾಣದೆ ಮಣ್ಣಿನಿಂದ ನಿರ್ಮಿತವಾಗಿರುವ ರಸ್ತೆಗಳಂತೆ ಕಾಣುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಕೃಷ್ಣಾನಾಯ್ಕ ಅವರು, ಮಳೆಗಾಲ ಇರುವುದರಿಂದ ಧೂಳಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಮಳೆಗಾಲ ಮುಗಿದ ನಂತರ ಧೂಳಿನ ಸಮಸ್ಯೆಗೆ ಮುಕ್ತಿ ನೀಡಲಾಗುವುದು. ಅಲ್ಲದೇ ಅರೆಬರೆಯಾಗಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. 

ಪುರಸಭೆ ಇದ್ದು ಇಲ್ಲದಂತಾಗಿದೆ. ನಾವು ಸದಸ್ಯರಾಗಿ ಅಭಿವೃದ್ಧಿ ಕೆಲಸಗಳನ್ನು ಹೇಳಲು ಹೋದರೆ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಾರೆ. ರಸ್ತೆಗಳಲ್ಲಿ ತುಂಬಿರುವ ಮರಳು, ಅದರಿಂದ ಆಗುತ್ತಿರುವ ಕಿರಿಕಿರಿ ಮತ್ತು ಜನರ ಆರೋಗ್ಯದ ಮೇಲಾಗುವ ಪರಿಣಾಮಕ್ಕೆ ಯಾರು ಹೊಣೆ ಎಂದು  ಹಗರಿಬೊಮ್ಮನಹಳ್ಳಿ ಪುರಸಭೆಯ ಸದಸ್ಯರಾದ ಕನಕಪ್ಪ ಅವರು ಹೇಳಿದ್ದಾರೆ. 

click me!