ಡ್ರೈವರ್‌ನನ್ನೇ ನಂಬಿ ಪ್ರಯಾಣಿಕರು ರಾತ್ರಿ ಪ್ರಯಾಣ ಬೆಳೆಸುತ್ತಾರೆ. ತಾನು ನಿದ್ರೆ ಮಾಡದೇ, ಪ್ರಯಾಣಿಕರನ್ನು ಗುರಿ ತಲುಪಿಸುವ ಹೊಣೆ ಆತನ ಮೇಲಿರುತ್ತದೆ. ಆದರೆ, ಇಲ್ಲೊಬ್ಬ ಡ್ರೈವರ್ ಪ್ರಯಾಣಿಕರನ್ನು ರಸ್ತೆಯಲ್ಲಿಯೇ ಬಿಟ್ಟು, ಪರಾರಿಯಾಗಿದ್ದಾನೆ. ಪ್ರಯಾಣಿಕರು ಏನು ಮಾಡಲು ತೋಚದೆ ಗೊಂದಲಗೊಂಡಿದ್ದರು.
ತುಮಕೂರು (ಫೆ.11): ಇದೆಂಥಾ ವಿಚಿತ್ರ? ಪ್ರಯಾಣಿಕರು ಚಾಲಕನನ್ನೇ ನಂಬಿ ರಾತ್ರಿ ಪ್ರಯಾಣ ಬೆಳೆಸುತ್ತಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ನೆಮ್ಮದಿಯಾಗಿ ನಿದ್ರಿಸುವಂತೆ ಮಾಡಿ, ತಾನು ಎಚ್ಚರದಿಂದ ಇದ್ದು ಬಸ್ ಚಾಲನೆ ಮಾಡುವ ಚಾಲಕನಿಗೆ ಭೇಷ್ ಎನ್ನಲೇ ಬೇಕು. ಆದರೆ, ಇಲ್ಲೊಬ್ಬ ಡ್ರೈವರ್, ಪ್ರಯಾಣಿಕರನ್ನು ಗುರಿ ಮುಟ್ಟಿಸದೇ ಮಧ್ಯದಲ್ಲಿಯೇ ಬಸ್ ಬಿಟ್ಟು, ಪರಾರಿಯಾಗಿದ್ದಾನೆ!
ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕ ಬೆಳಗ್ಗೆ 5 ಗಂಟೆಗೆ ಬಸ್ ನಿಲ್ಲಿಸಿ, ಪರಾರಿಯಾಗಿದ್ದಾನೆ. ತುಮಕೂರು ಎಪಿಎಂಸಿ ಬಳಿ ಬಸ್ ನಿಲ್ಲಿಸಿದ ಡ್ರೈವರ್ ಪ್ರಯಾಣಿಕರನ್ನು ಹಾಗೆಯೇ ಬಿಟ್ಟು, ಹೋಗಿದ್ದಾನೆ.
ಜಿಪಿಆರ್ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್‌ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲಿಯಾಯಿತೋ ಅಲ್ಲಿಯೇ ಬಸ್ ಬಿಟ್ಟು ಹೋದಾಗ ಪ್ರಯಾಣಿಕರು ಪರದಾಡಬೇಕಾಯಿತು. ಓಡಿಸಲು ಅರ್ಹವಲ್ಲದ ಗುಜರಿ ಗಾಡಿಯಂತಿದ್ದ ಈ ಬಸ್ ಅನ್ನು ಓಡಿಸಲೂ ಡ್ರೈವಿಂಗ್ ಗೊತ್ತಿರೋರಿಗೂ ಸಾಧ್ಯವೂ ಆಗಲಿಲ್ಲ.
ಟ್ರಾವೆಲ್ಸ್‌ನವರಿಗೆ ಕರೆ ಮಾಡಿದರೂ, ಅಲ್ಲಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಬಹುತೇಕ ಪ್ರಯಾಣಿಕರು ಆನ್‌ಲೈನ್ ಮೂಲಕವೇ ಟಿಕೆಟ್ ಕಾಯ್ದಿರಿಸಿದ್ದರು. ಬಸ್ ಚಲಿಸುವಾಗಲ ಚಾಲಕ ನಿದ್ರಿಸುತ್ತಿದ್ದ, ಪದೇ ಪದೇ ಆತನನ್ನು ಎಚ್ಚರಿಸಬೇಕಾಗಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ನೂರಾರು ಹಣ ಪಡೆದು, ಟಿಕೆಟ್ ನೀಡುವ ಖಾಸಗಿ ಟ್ರಾವೆಲ್ಸ್‌ಗೆ ಯಾವುದೇ ಜವಾಬ್ದಾರಿ ಇಲ್ಲವೆ? ಎಂಬುವುದು ಪ್ರಯಾಣಿಕರ ಪ್ರಶ್ನೆ. ಇಂಥ ನಡೆಗೆ ಯಾರು ಹೊಣೆ? ಪ್ರಯಾಣಿಕರೊಂದಿಗೆ ಚೆಲ್ಲಾಟವಾಡುವ ಇಂಥ ಟ್ರಾವೆಲ್ಸ್ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಳ್ಳುವ ಅಗತ್ಯವಿದೆ.