ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ | ಅಧಿಕೃತ ರಾಜಕೀಯದಾಟಕ್ಕೆ ಇದೀಗ ಚಾಲನೆ | ಕೈ-ಕಮಲ-ತೆನೆ ಹೊತ್ತ ಮಹಿಳೆ ಸ್ಪರ್ಧೆ ಖಚಿತ | ಸಿಂಗ್ ಸ್ಪರ್ಧೆಗೆ ಸಿಗಲಿದೆಯೇ ಅವಕಾಶ|
ಕೆ.ಎಂ. ಮಂಜುನಾಥ್
ಬಳ್ಳಾರಿ[ನ.12]: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ರಾಜಕೀಯ ಚಟುವಟಿಕೆಗೆ ಅಧಿಕೃತ ಚಾಲನೆ ಸಿಕ್ಕಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ಶುರುವಾಗಿದ್ದು ಇನ್ನು ಮುಂದೆ ದಿನದಿನಕ್ಕೆ ಚುನಾವಣೆ ಕಾವು ಏರಿಕೆಯಾಗಲಿದೆ. ಏತನ್ಮಧ್ಯೆ ಅನರ್ಹ ಶಾಸಕ ಆನಂದ ಸಿಂಗ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿದೆಯೋ ಇಲ್ಲವೋ ಎಂಬ ಅನಿಶ್ಚಿತೆ ಮುಂದುವರಿದಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ಒಂದು ವೇಳೆ ಅನರ್ಹ ಶಾಸಕರು ಸ್ಪರ್ಧೆಗೆ ಕೋರ್ಟ್ ನಿರಾಕರಿಸಿದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಏರ್ಪಟ್ಟಿದೆ.
ನ್ಯಾಯಾಲಯದಲ್ಲಿ ತಮಗೆ ಜಯ ಸಿಗಲಿದೆ ಎಂಬ ವಿಶ್ವಾಸದಲ್ಲಿ ಆನಂದ ಸಿಂಗ್ ಅವರು ಚುನಾವಣೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕೋರ್ಟ್ ನಿರಾಕರಿಸಿದರೆ ಆನಂದಸಿಂಗ್ ಅವರು ಸೂಚಿಸುವವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದ್ದು, ಸಿಂಗ್ ದೃಷ್ಟಿ ಯಾರ ಮೇಲಿದೆ ಎಂಬ ಗುಟ್ಟು ಹೊರ ಬಿದ್ದಿಲ್ಲ. ಹೀಗಾಗಿ, ವಿಜಯನಗರ ಕ್ಷೇತ್ರದ ಉಪ ಚುನಾವಣೆ ತೀವ್ರ ಕುತೂಹಲಕ್ಕೆಡೆಮಾಡಿಕೊಟ್ಟಿದೆ.
ಕೈ ನಡೆ ಕುತೂಹಲ:
ಆನಂದ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಸಿಕ್ಕರೆ ಕಾಂಗ್ರೆಸ್‌ನಿಂದ ಯಾರು ಅಖಾಡಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ. ಈಗಾಗಲೇ ಪಕ್ಷದಿಂದ ಟಿಕೆಟ್ ಬಯಸಿರುವವರು 9 ಜನಕ್ಕೂ ಹೆಚ್ಚು ಜನರಿದ್ದಾರೆ. ಆನಂದ ಸಿಂಗ್ ಹತ್ತಿರದ ಸಂಬಂಧಿ ಪ್ರವೀಣ್‌ಸಿಂಗ್, ನಿಂಬಗಲ್ಲು ರಾಮಕೃಷ್ಣ, ಇಮಾಮ್ ನಿಯಾಜ್, ಗುಜ್ಜಲ ನಾಗರಾಜ್, ವೆಂಕಟೇಶ್ ತಾರಹಳ್ಳಿ, ಕೆ. ಕೊಟ್ರೇಶ್ ಸೇರಿದಂತೆ ಅನೇಕರು ಆಕಾಂಕ್ಷಿಗಳಿದ್ದಾರೆ. ಆದರೆ, ಪಕ್ಷ ಈ ವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಿಜೆಪಿಯಿಂದ ಯಾರು ಸ್ಪರ್ಧೆಗಿಳಿಯಲಿದ್ದಾರೆ? ಸುಪ್ರೀಂಕೋರ್ಟ್ ತೀರ್ಪು ಏನಾಗಲಿದೆ ಎಂಬುದರ ಮೇಲೆಯೇ ಕಾಂಗ್ರೆಸ್ ಅಭ್ಯರ್ಥಿ ಪಕ್ಕಾ ಆಗುವ ಸಾಧ್ಯತೆ ಇದೆ.
ಜೆಡಿಎಸ್ ಅಖಾಡಕ್ಕೆ ಎಂಟ್ರಿ:
ಜಿಲ್ಲೆಯಲ್ಲಿ ಸಂಘಟನಾಶಕ್ತಿ ಹೆಚ್ಚಿಸಿಕೊಳ್ಳದ ಜೆಡಿಎಸ್ ವಿಜಯನಗರ ಉಪಚುನಾವಣೆಯ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಮಾಜಿ ಸಚಿವ ಎಂ.ಎನ್. ನಬಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಸ್ಪರ್ಧೆ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಪಕ್ಷ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ವಿಜಯನಗರ ಕ್ಷೇತ್ರದಲ್ಲಿಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತಗಳ ಮೇಲೆಯೇ ಜೆಡಿಎಸ್ ಕಣ್ಣಿಟ್ಟಿದೆ. ಚುನಾವಣೆಯಲ್ಲಿ ಗೆಲ್ಲದಿದ್ದರೂ ಸೋಲಿಸುವಷ್ಟು ಶಕ್ತಿ ನಮಗಿದೆ ಎಂದು ಜೆಡಿಎಸ್ ಹೇಳುತ್ತಿದೆ.
ಗವಿಯಪ್ಪ ಸ್ಪರ್ಧೆ ಖಚಿತ?:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉದ್ಯಮಿ ಎಚ್.ಆರ್. ಗವಿಯಪ್ಪ ಅವರ ರಾಜಕೀಯ ನಡೆ ಏನಾಗಲಿದೆ ಎಂಬ ಕೌತುಕ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ವಲಯದಲ್ಲಿದೆ. ಬಿಜೆಪಿಯಿಂದ ಸ್ಪರ್ಧಿಸಲು ಗವಿಯಪ್ಪ ಅವರಿಗೆ ಮನಸ್ಸಿದೆ. ಆದರೆ, ಆನಂದಸಿಂಗ್ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದರಿಂದ ಕಮಲ ಪಕ್ಷದ ಹೈ ಕಮಾಂಡ್‌ಸಿಂಗ್‌ಗೆ ಮನ್ನಣೆ ನೀಡುವ ಸಾಧ್ಯತೆ ಹೆಚ್ಚು. ಹೀಗಾದರೆ ಗವಿಯಪ್ಪ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಮೂಲಗಳ ಪ್ರಕಾರ ಗವಿಯಪ್ಪ ಅವರು ಈ ಬಾರಿ ಸ್ಪರ್ಧೆ ಮಾಡುವುದು ಖಚಿತವಾಗಿದ್ದು,ಪಕ್ಷೇತರವಾಗಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಗವಿಯಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಸ್ವಾಗತ ಮಾಡುವ ನಾಯಕರು ಹಾಗೂ ಕಾರ್ಯಕರ್ತರ ಪಡೆ ದೊಡ್ಡದಿದ್ದು ಅದೇನೇ ಆಗಲಿ ಸ್ಥಳೀಯರೇ ಸ್ಪರ್ಧಿಯಾಗಬೇಕು ಎಂಬುದು ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ಒತ್ತಾಸೆಯಾಗಿದೆ. ಹೊರಗಡೆಯಿಂದ ಯಾರಾದರೂ ಸ್ಪರ್ಧಿಸಿದರೆ ಕೈಪಾಳಯದಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಜೆಡಿಎಸ್‌ನಿಂದ ಮಾಜಿ ಸಚಿವಎಂ.ಎನ್. ನಬಿ ನಾಮಪತ್ರ ಸಲ್ಲಿಕೆ
ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಂ.ಎನ್. ನಬಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಎನ್.ಟಿ. ಬೊಮ್ಮಣ್ಣ, ಕಾರ್ಯಾಧ್ಯಕ್ಷ ಕೆ. ಕೊಟ್ರೇಶ್ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಹೊಸಪೇಟೆಯ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ ಅಭ್ಯರ್ಥಿ ಎಂ.ಎನ್.ನಬಿ ನಾಮಪತ್ರ ಸಲ್ಲಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚುನಾವಣೆ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ನಾಮಪತ್ರ ಪಡೆದರು. ಪಕ್ಷದ ಮುಖಂಡರಾದ ಲಾಲ್ಯಾನಾಯ್ಕ, ಜಿ.ನಾಗರಾಜ್, ಮಹಿಳಾ ಘಟಕದ ಮಮತಾ,ಮಹಾದೇವಿ, ರಾಘವೇಂದ್ರ ಕಟ್ಟೆಮನಿ, ಕೆ. ಕೃಷ್ಣ,ಹೊಲಿಬಾಷಾ, ಖಾಜಾ ಹುಸೇನ್ ಮತ್ತಿತರರಿದ್ದರು.ಜೆಡಿಎಸ್ ಅಭ್ಯರ್ಥಿಯಾಗಿ ಉಪ ಚುನಾವಣೆಯ ಅಖಾಡಕ್ಕೆ ಇಳಿದಿರುವ ಎಂ.ಎನ್. ನಬಿ ಅವರು 1994 ರಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಎಚ್.ಡಿ .ದೇವೇಗೌಡರ ಅವರ ರಾಜ್ಯ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದರು.