20ನೇ ವರ್ಷದ ಅಂತರ ರಾಷ್ಟ್ರೀಯ ಜಾವ ಬೈಕ್ ಡೇ ಉಡುಪಿಯ ಜಾವ ಎಸ್.ಡಿ ಮೋಟಾರ್ ಸೈಕಲ್ ಕ್ಲಬ್ ಹಮ್ಮಿಕೊಂಡಿತ್ತು. ಈ ವೇಳೆ 40ಕ್ಕೂ ಹೆಚ್ಚು ಜಾವಾ ಬೈಕ್‌ಗಳ ಪ್ರದರ್ಶನ ನಡೆಯಿತು.
ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜು.18): ಉಡುಪಿಯ ಜಾವ ಎಸ್.ಡಿ ಮೋಟಾರ್ ಸೈಕಲ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ 20ನೇ ವರ್ಷದ ಅಂತರ ರಾಷ್ಟ್ರೀಯ ಜಾವ ಬೈಕ್ ಡೇ ಪರ್ಕಳ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. ಈ ವೇಳೆ 40ಕ್ಕೂ ಹೆಚ್ಚು ಜಾವಾ ಬೈಕ್‌ಗಳ ಪ್ರದರ್ಶನ ನಡೆಯಿತು. ದಶಕಗಳ ಹಿಂದಿನ ಜಾವಾ ಮೋಟಾರ್ ಸೈಕಲ್‌ಗಳಲ್ಲಿನ ಸಂಚಾರದ ಮಜಾ ಅನುಭವಿಸಿದವರಿಗೇ ಗೊತ್ತು! ಇವತ್ತಿಗೂ ಜಾವ ಬೈಕ್ ಗಳಲ್ಲಿ ರೈಡ್ ಅಂದ್ರೆ ಅದೇನೋ ರೋಮಾಂಛನ. ಇಲ್ಲಿ ಪ್ರದರ್ಶನ ಕ್ಕಿಟ್ಟ ಸಾಲು ಸಾಲು ಬೈಕುಗಳನ್ಬು ಕಂಡು ಬೈಕ್ ಪ್ರಿಯರು ಸಂತಸ ಪಟ್ಟರು. ಬೈಕ್ ಮಾಲಕರಿಂದ ಜಾವಾ ಮೋಟಾರ್ ಸೈಕಲ್ ಚಾಲನೆಯ ಅನುಭವ, ವೈಶಿಷ್ಟ್ಯವನ್ನು ತಿಳಿದುಕೊಂಡರು. ಹೊರ ಜಿಲ್ಲೆಗಳಿಂದ ಬಂದಿದ್ದ ಸವಾರರು ಜಾವಾ ಜೊತೆಗಿನ ಅನುಭವವನ್ನು ಹಂಚಿಕೊಂಡರು. ಬೆಂಗಳೂರಿನಿಂದ ಜಾವಾ ಚಲಾಯಿಸಿಕೊಂಡು ಬಂದಿದ್ದ ಶ್ರೀಧರ್ ಮಾತನಾಡಿ, ಪ್ರತಿವರ್ಷ ನಡೆಯುವ ಜಾವಾ ದಿನದಂದು ತಪ್ಪದೆ ಭಾಗವಹಿಸುತ್ತೇನೆ. ಬೆಂಗಳೂರಿನಿಂದ ಮಂಗಳೂರು ಹಾಗೂ ಉಡುಪಿಗೆ ಜಾವಾ ಸವಾರರು ಒಟ್ಟಾಗಿ ಬರುತ್ತೇವೆ. ಜಾವಾ ಮೋಟಾರ್ ಸೈಕಲ್ ಕಾರಣಕ್ಕೆ ಸ್ನೇಹಿತರ ಬಳಗ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
undefined
ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿ ಜಾವಾ ಸವಾರರನ್ನೊಳಗೊಂಡ ಕಿಂಗ್ಸ್ ರೈಡ್ ಎಂಬ ಗ್ರೂಪ್ ರಚಿಸಲಾಗಿದೆ. 2015ರ ಆಗಸ್ಟ್ 15ರಂದು ಬೆಂಗಳೂರಿನಿಂದ ಮಂಗಳೂರಿಗೆ ಮೊದಲಬಾರಿ ಜಾವಾ ಬೈಕ್ ರೈಡಿಂಗ್ ಮಾಡಲಾಗಿತ್ತು. ಬಳಿಕ ಮೂರು ತಿಂಗಳಿಗೊಮ್ಮೆ ಜಾವಾ ಮಾಲೀಕರು ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದು ಶ್ರೀಧರ್ ತಿಳಿಸಿದರು. ಈ ರೀತಿ ಬೈಕ್ ರೈಡ್ ನೆಪದಲ್ಲಿ ಪ್ರಕೃತಿಯ ರಮಣೀಯತೆಯನ್ನು ಅನುಭವಿಸುವಯದರ ಜೊತೆಗೆ ವಿವಿಧ ಜಿಲ್ಲೆಗಳ ಜನರೊಂದಿಗೆ ಬೆರೆಯುವ ಅವಕಾಶವೂ ದೊರೆತಂತಾಗಿದೆ.
ಉಡುಪಿಯ ಜಾವ ಎಸ್.ಡಿ ಮೋಟಾರ್ ಸೈಕಲ್ ಸಂಘಟನೆಯ ಮುಖ್ಯಸ್ಥ ರಿಚರ್ಡ್ ಮಾತನಾಡಿ 2016ರಲ್ಲಿ ಜಾವಾ ಕ್ಲಬ್ ಆರಂಭವಾಗಿದ್ದು, ಪ್ರತಿವರ್ಷ ನಿರ್ಧಿಷ್ಟ ಧ್ಯೇಯದೊಂದಿಗೆ ಅಂತರರಾಷ್ಟ್ರೀಯ ಜಾವಾ ಬೈಕ್ ಡೇ ಆಚರಿಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಮಾರಣಾಂತಿಕವಾಗಿ ಕಾಡುತ್ತಿರುವ ಬ್ಲೈಂಡ್ ಸ್ಪಾಟ್‌ಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಳೆಯ ಕಾರಣದಿಂದ ಮುಂದೂಡಲಾಗಿದ್ದು, ಶೀಘ್ರವೇ ಹಮ್ಮಿಕೊಳ್ಳುತ್ತೇವೆ ಎಂದರು.
ಕರಾವಳಿ ಭಾಗದಲ್ಲಂತೂ ಜಾವಾ ಕ್ರೇಜ್ ಜೋರಾಗಿದೆ. ಕೆಲ ಅಪೂರ್ವ ಸಂಗ್ರಹವೂ ಕರಾವಳಿಗರಲ್ಲಿದೆ. ಜಾವ ನಮ್ಮ ಜೀವ ಎಂಬ ದೊಡ್ಡ ತಂಡವೇ ಇಲ್ಲಿದ್ದು ಪ್ರತೀವರ್ಷ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.