400 ಚಕ್ರಗಳ ಭಾರತದ ಅತೀ ಉದ್ದದ ಟ್ರಕ್‌, ಪ್ರಯಾಣ ಆರಂಭಿಸಿ ವರ್ಷವಾದರೂ ಈವರೆಗೂ ಗಮ್ಯ ತಲುಪಿಲ್ಲ!

By Santosh Naik  |  First Published Nov 9, 2024, 4:02 PM IST

ಭಾರತದಲ್ಲಿ 400 ಚಕ್ರಗಳ ಲಾರಿಯೊಂದು ಒಂದು ವರ್ಷದಿಂದ ಪ್ರಯಾಣ ಮಾಡುತ್ತಿದ್ದು, ಇನ್ನೂ ಗಮ್ಯಸ್ಥಾನ ತಲುಪಿಲ್ಲ. ಈ ಲಾರಿಯಲ್ಲಿ 8 ಲಕ್ಷ ಕೆಜಿ ತೂಕದ ಕೋಕ್ ಡ್ರಮ್ ಅನ್ನು ಸಾಗಿಸಲಾಗುತ್ತಿದ್ದು, ಇದರ ನಿಧಾನಗತಿಯ ಪ್ರಯಾಣಕ್ಕೆ ಕಾರಣವಾಗಿದೆ. ಗುಜರಾತ್‌ನಿಂದ ಹರಿಯಾಣಕ್ಕೆ ಸಾಗುತ್ತಿರುವ ಈ ಲಾರಿಯ ಪ್ರಯಾಣದಲ್ಲಿ ಹಲವು ಸವಾಲುಗಳಿವೆ.


ನವದೆಹಲಿ (ನ.9): ಭಾರತದಲ್ಲಿ ಸಂಕೀರ್ಣವಾದ ಹಾಗೂ ಅತ್ಯಂತ ಭಾರವಾದ ಮಷಿನ್‌ಗಳನ್ನು ಸಾಗಣೆ ಮಾಡುವುದೇ ಅತ್ಯಂತ ಕಠಿಣ ಕೆಲಸ. ಪ್ರಸ್ತುತ ಭಾರತದ ರಸ್ತೆಯೊಂದರಲ್ಲ 400 ಚಕ್ರಗಳ ಲಾರಿಯೊಂದು ಪ್ರಯಾಣ ಮಾಡುತ್ತಿದೆ. ಇದರ ಪ್ರಯಾಣ ಆರಂಭವಾಗಿ ಒಂದು ವರ್ಷಗಳೇ ಕಳೆದಿವೆ ಹಾಗಿದ್ದರೂ ಇದು ತಲುಪಬೇಕಾದ ಸ್ಥಳವನ್ನು ಇನ್ನೂ ತಲುಪಿಲ್ಲ ಎಂದರೆ ಅಚ್ಚರಿಯಾಗುವುದು ಸಹಜ. ಇದು ಭಾರತದ ಅತೀ ಉದ್ದದ ಟ್ರಕ್‌ ಎನ್ನುವ ಹೆಮ್ಮೆಗೂ ಪಾತ್ರವಾಗಿದೆ. ಕೈಗಾರಿಕೆಗಳು ರಾಷ್ಟ್ರವ್ಯಾಪಿ ವಿಸ್ತರಿಸುವುದರಿಂದ, ದೃಢವಾದ ಹೆದ್ದಾರಿ ಮೂಲಸೌಕರ್ಯಕ್ಕೆ ಬೇಡಿಕೆಯಿರುವುದರಿಂದ ಇಂತಹ ಭಾರೀ ವಾಹನಗಳು ಅತ್ಯಗತ್ಯ. ಅಷ್ಟಕ್ಕೂ ಈ ಲಾರಿಯಲ್ಲಿ ಸಾಗಾಟವಾಗುತ್ತಿರುವುದು ಏನು, ಯಾವ ಕೈಗಾರಿಕೆಗೆ ಬೇಕಾದ ಉತ್ಪನ್ನ ಎನ್ನುವುದ್ನು ತಿಳಿಯೋಣ.

ಈ ಟ್ರಕ್‌ ಒಟ್ಟು 1150 ಕಿಲೋಮೀಟರ್‌ ದೂರವನ್ನು ಪ್ರಯಾಣ ಮಾಡಬೇಕಾಗಿದೆ. ಈಗಾಗಲೇ ಒಂದು ವರ್ಷಗಳ ಕಾಲ ಇದು ತನ್ನ ಪ್ರಯಾಣವನ್ನು ನಡೆಸಿದ್ದರೂ, ಗಮ್ಯ ಸ್ಥಾನ ಮಾತ್ರ ತಲುಪಲು ಸಾಧ್ಯವಾಗಿಲ್ಲ. ಅಂದಾಜಿನ ಪ್ರಕಾರ ಇನ್ನೂ 2-3 ತಿಂಗಳ ಪ್ರಯಾಣದ ಬಳಿಕ ಇದು ಗುರಿ ತಲುಪಬಹುದು ಎನ್ನಲಾಗಿದೆ.

Latest Videos

ಹಾಗಂತ ಕೆಟ್ಟ ರಸ್ತೆಗಳ ಕಾರಣಕ್ಕೆ ಈ ಟ್ರಕ್‌ ನಿಧಾನವಾಗಿ ಹೋಗುತ್ತಿಲ್ಲ. ಬದಲಾಗಿ ಅದರಲ್ಲಿನ ವಸ್ತುಗಳ ಕಾರಣಕ್ಕಾಗಿ ನಿಧಾನವಾಗಿ ಹೋಗುತ್ತಿದೆ. ಈ ದೈತ್ಯ ಟ್ರಕ್‌ನಲ್ಲಿ ಕೋಕ್‌ ಡ್ರಮ್‌ಅನ್ನು ಸಾಗಾಣೆ ಮಾಡಲಾಗುತ್ತಿದೆ. ತೈಲ ಸಂಸ್ಕರಣಾಗಾರಗಳಲ್ಲಿ ಕೋಕ್‌ ಡ್ರಮ್‌ ಎನ್ನುವುದು ಪ್ರಮುಖ ಸಾಧನ. ಅಂದಾಜು ಇದರ ತೂಕವೇ 8 ಲಕ್ಷ ಕೆಜಿ. ಅದೇ ಕಾರಣಕ್ಕೆ ಇದನ್ನು ದೈತ್ಯ ಟ್ರಕ್‌ಗಳಲ್ಲಿ ಇರಿಸಿ ನಿಧಾನವಾಗಿ ರಸ್ತೆ ಮಾರ್ಗದಲ್ಲಿ ಸಾಗಿಸಲಾಗುತ್ತದೆ.ಈ ದೈತ್ಯ ಟ್ರಕ್ ಗುಜರಾತ್‌ನ ಕಾಂಡ್ಲಾ ಬಂದರಿನಿಂದ ಸುಮಾರು 1,150 ಕಿಲೋಮೀಟರ್ ದೂರದಲ್ಲಿರುವ ಹರಿಯಾಣದ ಪಾಣಿಪತ್‌ಗೆ ಹೋಗುತ್ತಿದೆ.

ಇಲ್ಲಿಯವರೆಗೂ 200ಕ್ಕೂ ಅಧಿಕ ಬಾರಿ ಈ ಟ್ರಕ್‌ನ ಟೈರ್‌ ಸ್ಫೋಟವಾಗಿ ಬದಲಾವಣೆ ಮಾಡಲಾಗಿದೆ. ದಿನಕ್ಕೆ ಗರಿಷ್ಠ 25 ಕಿಲೋಮೀಟರ್‌ ಮಾತ್ರವೇ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ತಿಂಗಳುಗಳ ಕಾಲ ಟ್ರಕ್‌ ನಿಂತಲ್ಲೇ ನಿಂತಿರುತ್ತದೆ. ಕೆಲವು ಕಡೆ ಈ ಟ್ರಕ್‌ ಸಾಗುವ ಕಾರಣಕ್ಕಾಗಿಯೇ ಅಧಿಕ ಭಾರದ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. 

ರೆಸ್ಟೋರೆಂಟ್‌ಗಳ ಜೊತೆ ಒಪ್ಪಂದ, Zomato, Swiggy ಕಳ್ಳಾಟ ಬಯಲು ಮಾಡಿದ ಸಿಸಿಐ

ಒಟ್ಟು ಮೂರೂ ವೋಲ್ವೋ ಟ್ರಕ್‌ಗಳು ಟ್ರಕ್‌ ಟ್ರೇಲರ್‌ಅನ್ನು ಎಳೆಯುತ್ತಿದ್ದು, 27 ಸಿಬ್ಬಂದಿಗಳು ಇದರಲ್ಲಿದ್ದಾರೆ. ಯಾವುದೇ ಸಮಸ್ಯೆ ಇರದೇ ಇದ್ದಾಗಿ 25 ಕಿಲೋಮೀಟರ್ ಪ್ರಯಾಣ ಮಾಡುವ ಟ್ರಕ್‌, ಒಮ್ಮೊಮ್ಮೆ ಜಿಲ್ಲೆಯಿಂದ ಜಿಲ್ಲೆಗೆ ದಾಟುವಾಗ ಅನುಮತಿಗಳಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪ್ರಯಾಣ ವಿಳಂಬಕ್ಕೆ ಕಾರಣವಾಗಿದೆ.

ವೆಂಟಿಲೇಟೆಡ್ ಸೀಟ್ ಹೊಂದಿರುವ ದೇಶದ ಅತಿಕಡಿಮೆ ಬೆಲೆಯ ಕಾರುಗಳು!

 

click me!