ಹೊಸ ಟ್ರಾಫಿಕ್ ನಿಯಮಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. 10 ಸಾವಿರ, 20 ಸಾವಿರ ದಂಡಕ್ಕೆ ವಾಹನದ ಸಹವಾಸವೇ ಬೇಡ ಅನ್ನುಂತವಾಗಿದೆ. ಈ ನಿಯಮ ಸಾರ್ವಜನಿಕರಿಗೆ ಮಾತ್ರವಲ್ಲ, ಪೊಲೀಸರಿಗೂ ಶಾಕ್ ನೀಡಿದೆ. ಕಾರಣ ಪೊಲೀಸರು ನಿಯಮ ಉಲ್ಲಂಘಿಸಿದರೆ ಡಬಲ್ ಮೊತ್ತ ಕಟ್ಟಬೇಕು.
ದೆಹಲಿ(ಸೆ.05): ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಇದೀಗ ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿದೆ. ದಂಡದ ಚಲನ್‌ಗೆ ಸವಾರರು ಬೆಚ್ಚಿ ಬೀಳುತ್ತಿದ್ದಾರೆ. ಟ್ರಕ್ ಡ್ರೈವರ್‌ಗೆ 59,000 ರೂಪಾಯಿ ದಂಡ, ಸ್ಕೂಟಿ ಸವಾರಿನಿಗೆ 23,000 ರೂಪಾಯಿ ದಂಡ.. ಹೀಗೆ ದೇಶದ ಮೂಲೆ ಮೂಲೆಯಲ್ಲಿ ಭಾರಿ ಮೊತ್ತದ ದಂಡ ಕಟ್ಟಿದ ಘಟನೆಗಳು ವರದಿಯಾಗುತ್ತಿವೆ. ಹೊಸ ನಿಯಮದ ಶಾಕ್ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲ ಪೊಲೀಸರಿಗೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಜಾರಿಯಾಯ್ತು ಹೊಸ ರೂಲ್ಸ್; ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ!
ಸೆಪ್ಟೆಂಬರ್ 4 ರಂದು ದೆಹಲಿ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಪ್ರಕಾರ, ಟ್ರಾಫಿಕ್ ಪೊಲೀಸರು, ಸರ್ಕಾರಿ ಅಧಿಕಾರಿಗಳು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಡಬಲ್ ಫೈನ್ ಕಟ್ಟಬೇಕು. ನೂತನ ದಂಡದ ಎರಡಷ್ಟು ಅಂದರೆ, ಸಾರ್ವಜನಿಕರಿಗೆ 500 ರೂಪಾಯಿ ಇದ್ದಲ್ಲಿ, ಪೊಲೀಸರು, ಸರ್ಕಾರಿ ಅಧಿಕಾರಿಗಳಿಗೆ 1000 ರೂಪಾಯಿ ದಂಡ ಕಟ್ಟಬೇಕು ಎಂದು ಆಯುಕ್ತರು ಹೇಳಿದ್ದಾರೆ.
ಇದನ್ನೂ ಓದಿ: ಭಾರೀ ಟ್ರಾಫಿಕ್ ದಂಡ ರಾಜ್ಯದಲ್ಲಿ ಜಾರಿ : ಬೈಕ್ ಸವಾರನೊಬ್ಬನಿಗೆ 17 ಸಾವಿರ ಫೈನ್
ಈ ನಿಯಮ ಸದ್ಯ ದೆಹಲಿಯಲ್ಲಿ ಜಾರಿಗೆ ತರಲಾಗಿದೆ. ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್, ರಾಂಗ್ ಸೈಡ್, ಪಾರ್ಕಿಂಗ್ ಸೇರಿದಂತೆ ಯಾವುದೇ ನಿಯಮವನ್ನು ಪೊಲೀಸರು, ಸರ್ಕಾರಿ ಅಧಿಕಾರಿಗಳು ಉಲ್ಲಂಘಿಸಿದರೆ ಡಬಲ್ ಮೊತ್ತ ದಂಡ ಕಟ್ಟಬೇಕು ಎಂದಿದ್ದಾರೆ. ಆದರೆ ದೆಹಲಿ ಆಯುಕ್ತರ ಸುತ್ತೋಲೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರೆ ನಿಯಮ ಉಲ್ಲಂಘಿಸಿದರೆ ಅವರನ್ನು ಹಿಡಿಯುವರು ಯಾರು? ದಂಡ ಹಾಕುವವರು ಯಾರು? ಅನ್ನೋ ಪ್ರಶ್ನೆ ಇದೀಗ ಎದ್ದಿದೆ.