ಎಲೆಕ್ಟ್ರಿಕ್‌ ವಾಹನ ಪ್ರಿಯರಿಗೆ ಶಾಕ್‌: ಸಬ್ಸಿಡಿ ಕಡಿತ ಎಫೆಕ್ಟ್‌; ನಾಳೆಯಿಂದ ಸ್ಕೂಟರ್‌, ಕಾರು, ಬಸ್‌ ದರ ಹೆಚ್ಚಳ

By Kannadaprabha NewsFirst Published May 31, 2023, 9:58 AM IST
Highlights

ಸ್ಕೂಟರ್‌ಗಳಿಗೆ ಅವುಗಳ ಶೋರೂಂ ಬೆಲೆಯ ಶೇ.40 ರಷ್ಟು ನೀಡಲಾಗುತ್ತಿದ್ದ ಸಹಾಯಧನವನ್ನು ಇದೀಗ ಶೇ.15ಕ್ಕೆ ಇಳಿಕೆ ಮಾಡಿದೆ. ಅಲ್ಲದೇ ಪ್ರತಿ ಕಿಲೋವ್ಯಾಟ್‌ ಬ್ಯಾಟರಿಗೆ ನೀಡಲಾಗುತ್ತಿದ್ದ 15 ಸಾವಿರ ರೂ. ಸಹಾಯಧನವನ್ನು 10 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ.

ನವದೆಹಲಿ (ಮೇ 31, 2023): ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜನಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಹಾಯಧನವನ್ನು ಕಡಿತ ಮಾಡಿದ ಹಿನ್ನೆಲೆಯಲ್ಲಿ ಜೂನ್‌ 1ರಿಂದ ಎಲ್ಲಾ ಮಾದರಿಯ ಎಲೆಕ್ಟ್ರಿಕ್‌ ವಾಹನಗಳು ದುಬಾರಿಯಾಗಲಿವೆ. ಎಲೆಕ್ಟ್ರಿಕ್‌ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಶೇ. 40ರಷ್ಟು ಸಹಾಯಧನವನ್ನು ನೀಡುತ್ತಿತ್ತು.

ನೆರವು ಕಡಿತ:
ಸ್ಕೂಟರ್‌ಗಳಿಗೆ ಅವುಗಳ ಶೋರೂಂ ಬೆಲೆಯ ಶೇ.40 ರಷ್ಟು ನೀಡಲಾಗುತ್ತಿದ್ದ ಸಹಾಯಧನವನ್ನು ಇದೀಗ ಶೇ.15ಕ್ಕೆ ಇಳಿಕೆ ಮಾಡಿದೆ. ಅಲ್ಲದೇ ಪ್ರತಿ ಕಿಲೋವ್ಯಾಟ್‌ ಬ್ಯಾಟರಿಗೆ ನೀಡಲಾಗುತ್ತಿದ್ದ 15 ಸಾವಿರ ರೂ. ಸಹಾಯಧನವನ್ನು 10 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ. ಹೀಗಾಗಿ ಸ್ಕೂಟರ್‌ಗಳ ಬೆಲೆ 25 ಸಾವಿರ ರೂ.ನಿಂದ 35 ಸಾವಿರ ರೂ.ಗೆ ಹೆಚ್ಚಳವಾಗಲಿದೆ.

ಇದನ್ನು ಓದಿ: 50 ಲಕ್ಷ ಮೌಲ್ಯದ ಕಾರು ಖರೀದಿಸಿದ್ದಕ್ಕೆ ಕಮ್ಯುನಿಸ್ಟ್‌ ನಾಯಕನ ವಿರುದ್ಧವೇ ತಿರುಗಿಬಿದ್ದ ಪಕ್ಷ: ತನಿಖೆ ಆರಂಭ

ಉದಾಹರಣೆಗೆ ಓಲಾ ಎಸ್‌ 1 ಸ್ಕೂಟರ್‌ನ ಬೆಲೆ ಸಹಾಯಧನದ ಬಳಿಕ 99,999 ರೂ. ಇತ್ತು. ಸಹಾಯಧನವನ್ನು ಶೇ.40ರಷ್ಟು ಎಂದು ಲೆಕ್ಕಹಾಕಿದರೆ ಅದು 39,999 ರೂ. ಆಗುತ್ತದೆ. ಕಿಲೋವ್ಯಾಟ್‌ಗೆ ನೀಡಲಾಗುತ್ತಿರುವ 15 ಸಾವಿರ ರೂ. ಸಹಾಯಧನವನ್ನು ಸೇರಿಸಿದರೆ 2 ಕಿಲೋವ್ಯಾಟ್‌ ಬ್ಯಾಟರಿಯ ಓಲಾ ಸ್ಕೂಟರ್‌ ಬೆಲೆ 1,29,999 ರೂ. ಆಗಲಿದೆ. ಸ್ಕೂಟರ್‌ ಬೆಲೆ ಅಂದಾಜು 19,499 ರು.ನಷ್ಟುಹೆಚ್ಚಳವಾಗಲಿದೆ. ಈ ಮೊದಲು 30 ಸಾವಿರ ರು.ನಷ್ಟು ಉಳಿತಾಯವಾಗುತ್ತಿತ್ತು.

ಗ್ರಾಹಕರು ದುಬಾರಿ ಬೆಲೆಯ ಸ್ಕೂಟರ್‌ಗಳನ್ನು ಆಯ್ಕೆ ಮಾಡಿಕೊಂಡಷ್ಟು ಅವುಗಳಿಂದ ಪಡೆದುಕೊಳ್ಳುತ್ತಿದ್ದ ಲಾಭದ ಪ್ರಮಾಣ ಕುಗ್ಗಲಿದೆ. ಹೀರೋ ವಿದಾ ಸ್ಕೂಟರ್‌ 30 ಸಾವಿರ ರೂ.ವರೆಗೆ ಬೆಲೆ ಹೆಚ್ಚಿಸಿಕೊಳ್ಳಲಿದೆ. ಅದೇ ರೀತಿ ಕಾರುಗಳಿಗೆ ಪ್ರತಿ ಕಿಲೋವ್ಯಾಟ್‌ಗೆ ನೀಡಲಾಗುತ್ತಿದ್ದ 10 ಸಾವಿರ ರೂ.ಗಳ ಸಹಾಯಧನವನ್ನು ಕಡಿಮೆ ಮಾಡಲಾಗಿದ್ದು, ಕಾರುಗಳ ಬೆಲೆ 1.5 ರಿಂದ 2 ಲಕ್ಷ ರೂ. ನಷ್ಟು ಹೆಚ್ಚಾಗಲಿದೆ. ಎಲೆಕ್ಟ್ರಿಕ್‌ ಬಸ್‌ ಹಾಗೂ ಟ್ರಕ್‌ಗಳ ಬೆಲೆ 35 ಲಕ್ಷ ರೂ. ನಷ್ಟು ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 2027ಕ್ಕೆ ದೇಶದಲ್ಲಿ ಡೀಸೆಲ್‌ ಕಾರು, ಜೀಪು ಬ್ಯಾನ್‌? ಎಲೆಕ್ಟ್ರಿಕ್‌, ಅನಿಲ ಆಧರಿತ ವಾಹನ ಬಳಕೆಗೆ ಶಿಫಾರಸು

click me!