ಅರ್ಧ ಹೆಲ್ಮೆಟ್‌ ಧರಿಸಿದರೂ ಬೀಳುತ್ತೆ ದಂಡ!

By Web DeskFirst Published Aug 29, 2019, 7:54 AM IST
Highlights

ಸ್ಟೈಲ್‌ ಆಗಿ ಟೋಪಿ ಮಾದರಿ ಹೆಲ್ಮೆಟ್‌ ಧರಿಸಿ ಹೊರಟಿದ್ದೀರಾ, ಹಾಗಾದರೆ ಸ್ವಲ್ಪ ಯೋಚಿಸಿ ಹೊರಡಿ. ಯಾಕೆಂದರೆ ಇನ್ಮುಂದೆ ಸಂಚಾರ ವಿಭಾಗದ ಪೊಲೀಸರಿಂದ ಇದಕ್ಕೂ ದಂಡ ಬೀಳಲಿದೆ. 

ಬೆಂಗಳೂರು [ಆ.29]:  ರಾಜಧಾನಿಯ ದ್ವಿಚಕ್ರ ವಾಹನ ಸವಾರರೇ ಸ್ಟೈಲ್‌ ಆಗಿ ಟೋಪಿ ಮಾದರಿ ಹೆಲ್ಮೆಟ್‌ ಧರಿಸಿ ಹೊರಟಿದ್ದೀರಾ, ಹಾಗಾದರೆ ಸ್ವಲ್ಪ ಯೋಚಿಸಿ ಹೊರಡಿ. ಯಾಕೆಂದರೆ ಇನ್ಮುಂದೆ ಸಂಚಾರ ವಿಭಾಗದ ಪೊಲೀಸರಿಂದ ದಂಡ ಪ್ರಯೋಗವಾಗಲಿದೆ..!

ಹೌದು. ತಮ್ಮ ಸುರಕ್ಷತೆ ದೃಷ್ಟಿಯಿಂದ ಹೆಲ್ಮಟ್‌ ಧರಿಸುವಂತೆ ಸೂಚಿಸಿದರೂ ಪಾಲಿಸದ ದ್ವಿಚಕ್ರ ವಾಹನ ಸವಾರರಿಗೆ ಬುದ್ಧಿ ಕಲಿಸಲು ಕೊನೆಗೆ ಖಾಕಿ ಪಡೆ ದಂಡಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.

ಈ ಸಂಬಂಧ ಮೊದಲ ಹಂತವಾಗಿ ಅರ್ಧ ಹೆಲ್ಮೆಟ್‌ ಧರಿಸಿ ದ್ವಿಚಕ್ರ ಓಡಿಸುವ ಪೊಲೀಸರಿಗೆ ಬಿಸಿ ಮುಟ್ಟಿಸಿ, ನಂತರ ಜನ ಸಾಮಾನ್ಯರನ್ನು ದಂಡಿಸಲು ಅಧಿಕಾರಿಗಳು ಸೂಚಿಸಿದ್ದಾರೆ.

ತಲೆಗೆ ಪೂರ್ತಿ ಮುಚ್ಚುವ ಹೆಲ್ಮೆಟ್‌ ಧರಿಸದೆ ಕೆಲವರು ಅರ್ಧ ತಲೆಗೆ ಮಾತ್ರ ಹೆಲ್ಮೆಟ್‌ ಹಾಕುತ್ತಿದ್ದಾರೆ. ಅದರಲ್ಲೂ ಕಾನೂನು ಪಾಲನೆ ಮಾಡಬೇಕಾದ ಪೊಲೀಸರೇ ಈ ರೀತಿಯ ಹೆಲ್ಮೆಟ್‌ ಧರಿಸುತ್ತಿರುವುದು ಕಂಡು ಬಂದಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸಂಚಾರ ವಿಭಾಗದ ಜಂಟಿ ಆಯುಕ್ತರು ಮೌಖಿಕ ಆದೇಶ ನೀಡಿದ್ದಾರೆ.

ಟೋಪಿ ಮಾದರಿಯ ಹೆಲ್ಮೆಟ್‌ ಧರಿಸುವವರಿಗೆ ದಂಡ ವಿಧಿಸಲು ಕಾನೂನು ಪ್ರಕಾರ ಅವಕಾಶವಿದೆ. ಈ ಸಂಬಂಧ ಹಿಂದೆಯೂ ಸಹ ಆದೇಶವಿತ್ತು. ಆ ಹಳೆಯ ಆದೇಶವನ್ನು ಮತ್ತೆ ಜಾರಿಗೆ ತರುವಂತೆ ಜಂಟಿ ಆಯುಕ್ತರು ಸೂಚಿಸಿರುವುದಾಗಿ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಡಾ.ಸೌಮ್ಯಲತಾ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹೆಲ್ಮೆಟ್‌ ಅಂದರೆ ತಲೆಗೆ ರಕ್ಷ ಕವಚವಾಗಬೇಕು. ಆದರೆ ಕೆಲವರು ಆ ಪದ ಅರ್ಥವೇ ಬದಲಾಗುವಂತೆ ಮಾಡಿದ್ದಾರೆ. ಅರ್ಧ ಶಿರ ಮುಚ್ಚುವಂತೆ ಧರಿಸಿದರೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಹೆಲ್ಮೆಟ್‌ ಧಾರಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಜಂಟಿ ಆಯುಕ್ತರರು ಮೌಖಿಕವಾಗಿ ಆದೇಶಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಕೆ.ಪಿ.ಜಗದೀಶ್‌ ಹೇಳಿದರು.

ಅರ್ಧ ಹೆಲ್ಮೆಟ್‌ ಧರಿಸುವವರಲ್ಲಿ ಪೊಲೀಸರು ಸೇರಿದ್ದಾರೆ. ಹೀಗಾಗಿ ಮೊದಲು ಇಲಾಖೆಯವರಿಗೆ ಅರಿವು ಮೂಡಿಸಬೇಕಿದೆ. ಆನಂತರ ಸಾರ್ವಜನಿಕರಿಗೆ ಹೇಳಬೇಕಿದೆ. ಈಗ ಟೋಪಿ ಆಕಾರದ ಹೆಲ್ಮೆಟ್‌ ಧರಿಸುವ ಪೊಲೀಸರು ಕಂಡು ಬಂದರೆ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಸ್ತೆ ಅಪಘಾತದಲ್ಲಿ ಪ್ರಾಣಹಾನಿ ತಪ್ಪಿಸುವ ಸಲುವಾಗಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿ ಸರ್ಕಾರ ನಿಯಮ ಜಾರಿಗೆ ತಂದಿದೆ. ಈ ವಿಚಾರದಲ್ಲಿ ನ್ಯಾಯಾಲಯವೂ ಸಹ ಕಠಿಣವಾದ ನಿಲುವು ತಾಳಿದೆ. ತಮ್ಮ ಸುರಕ್ಷತೆಗೆ ಕಾನೂನು ರೂಪಿಸಿದರೂ ಸಹ ಜನರು ಜಾಗ್ರತರಾಗುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಆಗಲೇ ಹೆಲ್ಮೆಟ್‌ ಧರಿಸದವರ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ. ಇನ್ನಾದರೂ ಜನರು ಸಂಚಾರ ನಿಯಮ ಪಾಲನೆ ಮಾಡುವಂತಾಗಬೇಕು. ಯಾವ ಕಂಪನಿಯದ್ದಾದರೂ ಸರಿಯೇ, ಆದರೆ ಅ ಹೆಲ್ಮೆಟ್‌ ಸವಾರರ ತಲೆಗೆ ರಕ್ಷಣ ಕೊಡಬೇಕು.

-ಜಗದೀಶ್‌, ಡಿಸಿಪಿ.

ಜಾಗೃತಿ ಮೂಡಿಸಿದರೂ ಎಚ್ಚೆತ್ತಿಲ್ಲ!

ಸವಾರ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯವಾಗಿದೆ. ಹೆಲ್ಮೆಟ್‌ ಧಾರಣೆ ಮಹತ್ವದ ಸಂಚಾರ ವಿಭಾಗದ ಪೊಲೀಸರು, ಬೀದಿ ನಾಟಕ, ಭಿತ್ತ ಪತ್ರ ಹಾಗೂ ಕರ ಪತ್ರ ಹಂಚಿಕೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹಾಗೆಯೇ ಹಲವು ಬಾರಿ ವಿಶೇಷ ಕಾರ್ಯಾಚರಣೆ ಸಹ ನಡೆಸಿದರೂ ದ್ವಿಚಕ್ರ ವಾಹನ ಸಂಚಾರರು ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ. ಕೆಲ ತಿಂಗಳ ಹಿಂದೆ ಗುಣಮಟ್ಟದ ಹೆಲ್ಮಟ್‌ ಧಾರಣೆ ಸಹ ಪೊಲೀಸರು ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ಆದರೆ ತಾಂತ್ರಿಕ ತೊಂದರೆಯಿಂದ ಆ ನಿರ್ಧಾರ ಕೈಬಿಟ್ಟರು. ಈಗ ಮತ್ತೊಮ್ಮೆ ಟೋಪಿ ಹೆಲ್ಮಟ್‌ಗಳ ವಿರುದ್ಧ ಪೊಲೀಸರ ಗುಡುಗಿದ್ದಾರೆ.

click me!