ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

Published : Aug 06, 2019, 08:51 PM ISTUpdated : Aug 06, 2019, 09:18 PM IST
ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

ಸಾರಾಂಶ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅವಕಾಶಕ್ಕಾಗಿ ಹಲವರು ಹಾತೊರೆಯುತ್ತಾರೆ. ಆದರೆ ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ವಿದಾಯ ಹೇಳುವುದು ಸುಲಭದ ಮಾತಲ್ಲ. ಸೇನೆ ಜೊತೆಗಿನ ಒಡನಾಟಕ್ಕೆ ದಿಢೀರ್ ಫುಲ್ ಸ್ಟಾಪ್ ಇಡುವುದು ಕಠಿಣ ನಿರ್ಧಾರವೇ ಸರಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇದೀಗ ವಿದಾಯ ಹೇಳಲು ಸಜ್ಜಾಗಿರುವ ಹಿಂದೂಸ್ಥಾನ್ ಅಂಬಾಸಿಡರ್ ಕಾರಿನ ಪರಿಸ್ಥಿತಿ ಇದೇ ಆಗಿದೆ.

ನವದೆಹಲಿ(ಆ.06): ಇಂಡಿಯನ್ ಆರ್ಮಿ ಎಂದ ತಕ್ಷಣ ನಮ್ಮೆಲ್ಲರ ಕಿವಿ ನೆಟ್ಟಗಾಗುತ್ತೆ. ನಮ್ಮೊಳಗೆ ದೇಶಾಭಿಮಾನ ಜಾಗೃತವಾಗುತ್ತೆ. ದೇಶ ಕಾಯೋ ಸೈನಿಕರ ಬೆಂಬಲಕ್ಕೆ ಜಯಘೋಷಗಳನ್ನು ಹಾಕುತ್ತೇವೆ. ನಮ್ಮೆಲ್ಲರ ನೆಮ್ಮದಿಗಾಗಿ ಗಡಿಯಲ್ಲಿ ಹಗಲಿರುಳು ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರೇ ನಮ್ಮ ಸ್ಫೂರ್ತಿ. ಈ ಸೈನಿಕರಿಗೆ ಶಸ್ತಾಸ್ತ್ರ ಎಷ್ಟು ಮುಖ್ಯವೋ, ವಾಹನ ಕೂಡ ಅಷ್ಟೇ ಮುಖ್ಯ. ತುರ್ತು ಸಂದರ್ಭಕ್ಕೆ ಮಾತ್ರವಲ್ಲ, ಪತಿ ಕ್ಷಣವೂ ಸೈನಿಕರಿಗೆ ಮದ್ದು ಗುಂಡುಗಳ ಜೊತೆಗೆ ವಾಹನ ಕೂಡ ಇರಲೇಬೇಕು. ದಶಕಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ, ಸೈನಿಕರ ಸಂಗಾತಿಯಾಗಿದ್ದ ಹಿಂದೂಸ್ಥಾನ್ ಅಂಬಾಸಿಡರ್ ಕಾರು ಇದೀಗ ವಿದಾಯ ಹೇಳುತ್ತಿದೆ. 

ಇದನ್ನೂ ಓದಿ:  ಪೊಲೀಸ್ ಇಲಾಖೆಗೆ 242 ಮಹೀಂದ್ರ TUV300 SUV ಕಾರು!

ಹೌದು, ಭಾರತೀಯ ಸೇನೆಯಲ್ಲಿ ಸೈನ್ಯಾಧಿಕಾರಿಗಳು ಹೆಚ್ಚು ಹಿಂದೂಸ್ಥಾನ್ ಅಂಬಾಸಿಡರ್ ಕಾರನ್ನು ಉಪಯೋಗಿಸುತ್ತಾರೆ. ಸೇನೆ ಮಾತ್ರವಲ್ಲ, ಸರ್ಕಾರಿ ಕಚೇರಿ ಅಧಿಕಾರಿಗಳು ಈಗಲೂ ಅಂಬಾಸಿಡರ್ ಕಾರು ಬಳಕೆ ಮಾಡುತ್ತಾರೆ. ಶಾಸಕರ, ಸಂಸದರು ಕೂಡ ಅಂಬಾಸಿಡರ್ ಕಾರನ್ನೇ ನೆಚ್ಚಿಕೊಂಡಿದ್ದರು. ಆದರೆ ಸದ್ಯ ಹೊಸ ಹೊಸ ಕಾರುಗಳು ಸಚಿವರ ಕೈರೇಸಿದ್ದರೆ,  ಭಾರತೀಯ ಸೇನೆ ಮಾತ್ರ ನಂಬಿಕಸ್ಥ ಅಂಬಾಸಿಡರ್ ಕಾರನ್ನೇ ಬಳಸುತ್ತಿದೆ. ಇದೀಗ ಅಂಬಾಸಿಡರ್ ಕಾರಿಗೆ ವಿದಾಯ ಹೇಳಿ, ಮಹೀಂದ್ರ E ವೆರಿಟೋ ಕಾರು ಖರೀದಿಸಿದೆ.

ಇದನ್ನೂ ಓದಿ: ಸೇನಾ ವಾಹನ ಖ್ಯಾತಿಯ  ಜಿಪ್ಸಿಗೆ ಮಾರುತಿ ಗುಡ್‌ಬೈ!

ಭಾರತೀಯ ಸೇನೆ ಪ್ರಾಥಮಿಕ ಹಂತದಲ್ಲಿ 10 ಇ ವೆರಿಟೊ ಕಾರುಗಳನ್ನು ಖರೀದಿಸಿದೆ. ಶೀಘ್ರದಲ್ಲೇ ಸೇನೆ ಸೆಡಾನ್ ಕಾರುಗಳೆಲ್ಲಾ ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿದೆ. ಸೈನ್ಯಾಧಿಕಾರಿಗಳ ಬಳಕೆಗೆ ಎಲೆಕ್ಟ್ರಿಕ್ ಕಾರು ನೀಡಲು ಭಾರತೀಯ ಸೇನೆ ನಿರ್ಧರಿಸಿದೆ. ಈ ಮೂಲಕ ಮಾಲಿನ್ಯ ಮಾತ್ರವಲ್ಲ ಇಂಧನ ಬಳಕೆಯನ್ನು ಕಡಿಮೆ ಮಾಡಬಹುದು. ಇದರಿಂದ ಭಾರತೀಯ ಸೇನೆಯ ವಾಹನದ ನಿರ್ವಹಣ ವೆಚ್ಚ ಕಡಿಮೆಯಾಗಲಿದೆ. 

ಹಿಂದಸ್ಥಾನ್ ಮೋಟಾರ್ಸ್ ಹಾಗೂ ಭಾರತೀಯ ಸೇನೆಗೆ ಅವಿನಭಾವ ಸಂಬಂಧವಿದೆ. ಕಾರಣ ಆರಂಭದಿಂದಲೂ ಅಂಬಾಸಿಡರ್ ಕಾರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. 1958ರಲ್ಲಿ ಅಂಬಾಸಿಡರ್ ಕಾರು ಭಾರತದಲ್ಲಿ ಬಿಡುಗಡೆಯಾಯಿತು. ಲಂಡನ್ ಮೂಲದ ಮೊರಿಸ್ ಆಕ್ಸಫರ್ಡ್ ಕಂಪನಿ ಭಾರತದಲ್ಲಿ ಬಿರ್ಲಾ ಗ್ರೂಪ್ ಸಹಯೋಗದೊಂದಿದೆ ಕಾರು ಉತ್ಪಾದನೆ ಆರಂಭಿಸಿತು. 1942ರಲ್ಲಿ ಕಾರಿನ ಬಿಡಿ ಭಾಗಗಳನ್ನು ಆಮದು ಮಾಡಿ, ಗುಜರಾತ್‌ನ ಪೋರ್ಟ್ ಒಖಾದಲ್ಲಿ ಕಾರು ನಿರ್ಮಾಣ ಆರಂಭಿಸಿತು. 

ಮೊರಿಸ್ ಆಕ್ಸಫರ್ಡ್ ಕಂಪನಿಯಿಂದ ಹಕ್ಕು ಪಡೆದ ಬಿರ್ಲಾ ಗ್ರೂಪ್ 1958ರಲ್ಲಿ ಹಿಂದೂಸ್ಥಾನ್ ಅಂಬಾಸಿಡರ್ ಹೆಸರಿನಲ್ಲಿ ಕಾರು ಬಿಡುಗಡೆ ಮಾಡುತು. 2014ರ ವರೆಗೆ ಅಂಬಾಸಿಡರು ಕಾರು ಭಾರತದ ಕಾರುಗಳ ರಾಜ ಎಂದೇ ಗುರುತಿಸಿಕೊಂಡಿತ್ತು. ಗರಿಷ್ಠ ಭದ್ರತೆಯ ಈ ಕಾರು ಅಷ್ಟೇ ವೇಗದಲ್ಲಿ ಭಾರತೀಯ ಸೇನೆ ಸೇರಿಕೊಂಡು ಸೇವೆ ಆರಂಭಿಸಿತು. ಹಿಂದೂಸ್ಥಾನ್ ಅಂಬಾಸಿಡರ್ ಕಾರು ಉತ್ಪಾದನೆ ಸ್ಥಗಿತಗೊಳಿಸಿ, ಕಂಪನಿ ಮುಚ್ಚಿದರೂ ಸೇನೆಯಲ್ಲಿ ಅಂಬಾಸಿಡರು ಕಾರು ಕಾರ್ಯನಿರ್ವಹಿಸುತ್ತಲೇ ಇದೆ. 

ಭಾರತೀಯ ಸೇನೆ ಶಸ್ತಾಸ್ತ್ರ, ಮದ್ದುಗುಂಡು, ವಿಮಾನ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದೆ. ಸದ್ಯ ಅಂಬಾಸಿಡರ್ ಕಾರು ಲಭ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಭಾರತೀಯ ಸೇನೆ ಬೇರೆ ವಾಹನದ ಮೊರೆ ಹೋಗಬೇಕಾಗಿದೆ. ಹೀಗಾಗಿ ಅತ್ಯಾಧುನಿಕ, ಮಾಲಿನ್ಯ ರಹಿತ ಎಲೆಕ್ಟ್ರಿಕ್ ವಾಹನ ಖರೀದಿಗೆ ಮುಂದಾಗಿದೆ. ಇದೀಗ ಮಹೀಂದ್ರ ಇ ವೆರಿಟೊ ಕಾರು ಖರೀದಿಸಿದ ಸೇನೆ, ಟಾಟಾ ಮೋಟಾರ್ಸ್ ಸಂಸ್ಥೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಕೂಡ ಖರೀದಿಗೆ ಚಿಂತನೆ ನಡೆಸಿದೆ. ಆದರೆ ಸೇನೆಯ ಅವಿಭಾಜ್ಯ ಅಂಗವಾಗಿದ್ದ ಅಂಬಾಸಿಡರ್ ಕಾರು ಕಣ್ಣೀರಿನೊಂದಿಗೆ ವಿದಾಯ ಹೇಳುತ್ತಿದೆ.
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ