ಗುಡ್ ಬೈ ಹೇಳಿದ ಹ್ಯುಂಡೈ ಇಯಾನ್, ಹೊಂಡಾ ಬ್ರಿಯೋ ಕಾರು !

By Web DeskFirst Published Nov 17, 2018, 4:13 PM IST
Highlights

ಹೊಂಡಾ ಬ್ರಿಯೋ ಹಾಗೂ ಹ್ಯುಂಡೈ ಇಯಾನ್ ಕಾರು ಭಾರತದಲ್ಲಿ ಓಟ ನಿಲ್ಲಿಸುತ್ತಿದೆ. ಸಣ್ಣ ಕಾರಿನಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದ ಇಯಾನ್ ಹಾಗೂ ಬ್ರಿಯೋ ದಿಢೀರ್ ನಿರ್ಮಾಣ ನಿಲ್ಲಿಸುತ್ತಿರುವುದೇಕೆ? ಇಲ್ಲಿದೆ ವಿವರ.

ಬೆಂಗಳೂರು(ನ.17): ಸಣ್ಣ ಕಾರಿನಲ್ಲಿ ಹೊಸ ಕ್ರಾಂತಿ ಮಾಡಿದ್ದ ಹ್ಯುಂಡೈ ಇಯಾನ್ ಹಾಗೂ ಹೊಂಡಾ ಬ್ರಿಯೋ ಭಾರತದಲ್ಲಿ ಓಟ ನಿಲ್ಲಿಸುತ್ತಿದೆ. ಹ್ಯುಂಡೈ ಇಯಾನ್ ಕಾರಿನ ಬದಲು ಇದೀಗ  ನೂತನ ಹ್ಯುಂಡೈ ಸ್ಯಾಂಟ್ರೋ ಕಾರು ಬಿಡುಗಡೆಯಾಗಿದೆ. ಹೀಗಾಗಿ ಇಯಾನ್ ನಿರ್ಮಾಣ ಸ್ಥಗಿತಗೊಳ್ಳಲಿದೆ.

ಇಯಾನ್ ಬದಲು ಸ್ಯಾಂಟ್ರೋ ರಸ್ತೆಗಿಳಿದಿದೆ. ಆದರೆ ಹೊಂಡಾ ಬ್ರಿಯೋ ಕಾರು ಮಾರಾಟದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಇಯಾನ್ ಸರಾಸರಿ 5000 ಕಾರುಗಳು ಪ್ರತಿ ತಿಂಗಳು ಮಾರಾಟವಾಗುತ್ತಿತ್ತು. ಆದರೆ ಹೊಂಡಾ ಬ್ರಿಯೋ ಕಾರು ಕೇವಲ 500 ಕಾರುಗಳು ಮಾತ್ರ ಮಾರಟಗೊಳ್ಳುತ್ತಿದೆ. ಹೀಗಾಗಿ ಹೊಂಡಾ ಬ್ರಿಯೋ ಭಾರತಕ್ಕೆ ಗುಡ್ ಬೈ ಹೇಳುತ್ತಿದೆ.

ನೂತನ ನಿಯಮದ ಪ್ರಕಾರ ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನ ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಹೀಗಾಗಿ ಇಯಾನ್ ಬದಲು ಸ್ಯಾಂಟ್ರೋ ರಸ್ತೆಗಿಳಿದಿದೆ. ನೂತನ ಸ್ಯಾಂಟ್ರೋ ಕನಿಷ್ಠ ಸುರಕ್ಷತೆ ನೀಡುವಲ್ಲಿ ಯಶಸ್ವಿಯಾಗಿದೆ. ಇನ್ನು ಹೊಂಡಾ ಬ್ರಿಯೋ ಕಾರಿನ ಸುರಕ್ಷತೆ ಹೆಚ್ಚಿಸಿದ್ದಲ್ಲಿ ದುಬಾರಿಯಾಗಲಿದೆ. ಈಗಲೇ ಮಾರಾಟದಲ್ಲೂ ಕುಸಿತ ಕಂಡಿರುವ  ಬ್ರಿಯೋ ಮತ್ತಷ್ಟು ದುಬಾರಿಯಾದರೆ ಮತ್ತಷ್ಟು ಹೊಡೆತ ಬೀಳಲಿದೆ.

2018ರ ಡಿಸೆಂಬರ್‌ನಿಂದ ಹ್ಯುಂಡೈ ಇಯಾನ್ ಹಾಗೂ ಹೊಂಡಾ ಬ್ರಿಯೋ ಯಾವುದೇ ಬುಕಿಂಗ್ ಸ್ವೀಕರಿಸುವ ಸಾಧ್ಯತೆ ಇಲ್ಲ. ಹೊಂಡಾ ಭಾರತದಲ್ಲಿ SUV ಕಾರಿನತ್ತ ಹೆಚ್ಚು ಗಮನ ನೀಡಿದೆ. ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿ ಹಾಗೂ ಸಬ್-4 ಮೀಟರ್ SUV ಕಾರು ಬಿಡುಗಡೆ ಮಾಡಲು ಮುಂದಾಗಿದೆ.  
 

click me!