ದಂಡಕ್ಕೆ ಬೆಚ್ಚಿದ ಜನ, ಸಂಚಾರದಲ್ಲಿ ಶಿಸ್ತು!| ಮಹಾನಗರ, ಜಿಲ್ಲಾ ಕೇಂದ್ರಗಳಲ್ಲಿ ನಿಯಮ ಉಲ್ಲಂಘನೆ ಇಳಿಕೆ| ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಇನ್ನೂ ಬಿಂದಾಸ್ ಸಂಚಾರ
ಬೆಂಗಳೂರು[ಸೆ.10]: ಇದುವರೆಗೆ ಸಂಚಾರ ನಿಯಮ ಪಾಲಿಸುವಂತೆ ಪೊಲೀಸರು ಎಷ್ಟೇ ಮನವಿ ಮಾಡಿದರೂ ಕ್ಯಾರೆ ಎನ್ನದ ನಾಗರಿಕರು, ಈಗ ಸರ್ಕಾರವು ಪೊಲೀಸರ ಮೂಲಕ ಪ್ರಯೋಗಿಸಿದ ‘ದಂಡಾಸ್ತ್ರ’ಕ್ಕೆ ಬೆದರಿ ಕೊನೆಗೂ ನಿಧಾನವಾಗಿ ಶಿಸ್ತು ಮೈಗೂಡಿಸಿಕೊಳ್ಳುವ ಕಡೆಗೆ ಲಕ್ಷ್ಯ ತೋರಿಸುತ್ತಿದ್ದಾರೆ.
ದಂಡ ಕಟ್ಟು ಎಂದಿದ್ದಕ್ಕೆ ಎಎಸ್‌ಐಗೆ ಪಂಚ್!
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪರಿಷ್ಕರಣೆ ಜಾರಿಗೊಂಡ ಬಳಿಕ ಮಹಾನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ ನಿಯಮ ಪಾಲನೆ ಕಂಡು ಬಂದಿದೆ. ಆದರೆ ಹೋಬಳಿ, ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರ ಬಿಂದಾಸ್ ಓಡಾಟ ಮುಂದುವರಿದೆ. ಇದಕ್ಕೆ ಹಳ್ಳಿ ಜನರ ಬಗ್ಗೆ ಪೊಲೀಸರ ತುಸು ಮೃದು ಧೋರಣೆ ಕಾರಣವಾಗಿದೆ.
ವಾಣಿಜ್ಯ ಚಟುವಟಿಕೆಗಳ ಹೃದಯ ಭಾಗದಲ್ಲಿ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಅದರಂತೆ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕಲಬರಗಿ, ದಾವಣಗೆರೆ, ಬಳ್ಳಾರಿ ಹಾಗೂ ತುಮಕೂರು ಸೇರಿ ಮಹಾನಗರ ಪಾಲಿಕೆಗಳ ಪೊಲೀಸರು, ಬೆಳ್ಳಂಬೆಳಗ್ಗೆಯಿಂದ ರಸ್ತೆಗಿಳಿದು ಸಂಚಾರ ಉಲ್ಲಂಘಿಸುವವರ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ದಂಡ ಪರಿಷ್ಕರಣೆ ನಂತರ ಜಾಗೃತಗೊಂಡಿರುವ ಜನ ಸಹ ಮನಬಂದಂತೆ ವಾಹನ ಚಲಾಯಿಸದೆ ಸಹನೆ ಬೆಳೆಸಿಕೊಳ್ಳುತ್ತಿದ್ದಾರೆ.
ಬೆಂಗಳೂರಲ್ಲಿ ಒಂದೇ ದಿನ 30 ಲಕ್ಷ ಟ್ರಾಫಿಕ್ ದಂಡ!
ಮೊದಲಿನಂತೆ ಪಾನಮತ್ತರಾಗಿ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು, ಹೆಲ್ಮೆಟ್ ಇಲ್ಲದೆ ಚಾಲನೆ, ತ್ರಿಬಲ್ ರೈಡಿಂಗ್, ಸೀಟ್ ಬೆಲ್ಟ್ ಹಾಕಿಕೊಳ್ಳದೆ ಪ್ರಯಾಣ, ಸಿಗ್ನಲ್ ಜಂಪ್, ಅತಿವೇಗದ ಚಾಲನೆ ಹೀಗೆ ವಾಹನ ಓಡಿಸುವಾಗ ಸಹನೆ ಬೆಳೆಸಿಕೊಳ್ಳುತ್ತಿದ್ದಾರೆ. ಇದಲ್ಲದೆ ವರ್ಷಾನುಗಟ್ಟಲೇ ವಿಮಾ ಮಾಡಿಸದವರು, ದಿಢೀರನೇ ವಿಮಾ ಕಂಪನಿಗಳ ಗಲ್ಲಾ ಪೆಟ್ಟಿಗೆ ತುಂಬುವಂತೆ ಮಾಡುತ್ತಿದ್ದಾರೆ. ಹಾಗೆಯೇ ವಾಯು ಮಾಲಿನ್ಯ ಪರೀಕ್ಷಾ ಕೇಂದ್ರಗಳ ಜೇಬು ಸಹ ತುಂಬಲಾರಂಭಿಸಿದೆ. ನಿಷೇಧಿತ ಸ್ಥಳಗಳಲ್ಲಿ ವಾಹನ ನಿಲ್ಲುವಿಕೆ ಕಡಿಮೆಯಾಗಿದೆ.