ಆಗಸ್ಟ್ ಆಟೋಮೊಬೈಲ್ ಸೇಲ್ 2 ದಶಕಗಳಲ್ಲೇ ಅತ್ಯಂತ ಕನಿಷ್ಠ| 2018ಕ್ಕೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ಶೇ.23.55ರಷ್ಟುಭಾರೀ ಇಳಿಕೆ| 1997-98ರ ಬಳಿಕದ ಅತ್ಯಂತ ನಿರಾಶಾದಾಯಕ ವಾಹನ ಮಾರಾಟ ಸಂಖ್ಯೆ
ನವದೆಹಲಿ[ಸೆ.10]: ಆರ್ಥಿಕ ಹಿಂಜರಿತವು ವಾಹನ ಉದ್ಯಮದ ಮೇಲೆ ಬೀರಿರುವ ಕರಾಳ ಛಾಯೆ ಮತ್ತಷ್ಟುಗಾಢವಾಗಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿನ ವಾಹನ ಮಾರಾಟದಲ್ಲಿನ ಕುಸಿತ ಪ್ರಮಾಣವು ಕಳೆದ 2 ದಶಕಗಳಲ್ಲೇ ಅತ್ಯಂತ ಗರಿಷ್ಠ ಮಟ್ಟತಲುಪಿದೆ. 2018ರ ಆಗಸ್ಟ್‌ಗೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ಎಲ್ಲಾ ರೀತಿಯ ವಾಹನಗಳ ಮಾರಾಟ ಪ್ರಮಾಣದಲ್ಲಿ ಶೇ.23.55ರಷ್ಟುಭಾರೀ ಇಳಿಕೆಯಾಗಿದೆ. ಇದು 1997-98ರಲ್ಲಿ ಮೊದಲ ಬಾರಿಗೆ ಭಾರತೀಯ ವಾಹನ ಉತ್ಪಾದಕರ ಸಂಘಟನೆಯ ಒಟ್ಟಾರೆ ವಾಹನಗಳ ಮಾರಾಟದ ದಾಖಲು ಆರಂಭಿಸಿದ ಬಳಿಕ ಅತ್ಯಂತ ಗರಿಷ್ಠ ಕುಸಿತವಾಗಿದೆ.
ಭಾರತೀಯ ವಾಹನ ಉತ್ಪಾದಕರ ಸಂಘಟನೆಯ ವರದಿ ಅನ್ವಯ 2018ರ ಆಗಸ್ಟ್‌ನಲ್ಲಿ 18,21,490 ದ್ವಿಚಕ್ರ, ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ 2019ರ ಆಗಸ್ಟ್‌ನಲ್ಲಿ ಅದು 23,82,436ಕ್ಕೆ ಕುಸಿಯುವ ಮೂಲಕ ಶೇ.23.5ರಷ್ಟುಇಳಿಕೆ ದಾಖಲಿಸಿದೆ.
undefined
ಕಳೆದ ಜುಲೈ ತಿಂಗಳಲ್ಲಿ ಒಟ್ಟಾರೆ ಎಲ್ಲಾ ಮಾದರಿಯ ವಾಹನಗಳ ಮಾರಾಟವು ಶೇ.18.71ರಷ್ಟುಕುಸಿತ ಕಾಣುವ ಮೂಲಕ 19 ವರ್ಷಗಳಲ್ಲೇ ಕನಿಷ್ಠ ಮಟ್ಟತಲುಪಿತ್ತು. ಇದೀಗ ಆಗಸ್ಟ್ ವರದಿಯು ಆಟೋಮೊಬೈಲ್ ವಲಯದ ಮತ್ತಷ್ಟುಕರಾಳ ಚಿತ್ರವನ್ನು ಬಹಿರಂಗಪಡಿಸಿದೆ.
ಪ್ರಯಾಣಿಕ ವಾಹನ ಭಾರೀ ಕುಸಿತ:
2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.31.57ರಷ್ಟುಆತಂಕಕಾರಿ ಕುಸಿತ ದಾಖಲಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 2,87,198 ಪ್ರಯಾಣಿಕ ವಾಹನ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷ ಅದು 1,96,524ಕ್ಕೆ ಇಳಿದಿದೆ. ಪ್ರಯಾಣಿಕ ವಾಹನಗಳ ಮಾರಾಟವು ಹೀಗೆ ಸತತ 10 ತಿಂಗಳಿನಿಂದ ಇಳಿಕೆಯ ಹಾದಿಯಲ್ಲಿದೆ. ಪ್ರಸಕ್ತ ಆಗಸ್ಟ್‌ನಲ್ಲಿ ಮಾರುತಿ ಸುಝಕಿ ಶೇ.36.14, ಹ್ಯುಂಡೈ ಮೋಟಾರ್ಸ್ ಶೇ.16.58, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ.31.58 ಕುಸಿತ ಕಂಡಿತ್ತು.