ಲೈಸೆನ್ಸ್ ರದ್ದಾದರೂ ವಾಹನ ಓಡಿಸಿದರೆ 10 ಸಾವಿರ ರೂ. ದಂಡ!

By Web DeskFirst Published Jun 25, 2019, 8:50 AM IST
Highlights

ಭಾರೀ ದಂಡಕ್ಕೆ ಅವಕಾಶವಿರುವ ಮೋಟಾರು ಮಸೂದೆಗೆ ಅಂಕಿತ| ಮೋಟಾರ್‌ ವಾಹನ ತಿದ್ದುಪಡಿ ಮಸೂದೆಗೆ ಕೇಂದ್ರದ ಅನುಮತಿ| ವಾಹನ ನಿಯಮ ಉಲ್ಲಂಘನೆಗೆ ಬೀಳಲಿದೆ ಭಾರೀ ದಂಡ| ಪ್ರಸ್ತಾವಿತ ಮಸೂದೆ ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡನೆ

ನವದೆಹಲಿ[ಜೂ.25]: ಚಾಲನಾ ಪರವಾನಗಿ ರದ್ದಾಗಿದ್ದರೂ ವಾಹನ ಓಡಿಸಿದರೆ ಮತ್ತು ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10 ಸಾವಿರ ರು.ವರೆಗೂ ದಂಡ ಸೇರಿದಂತೆ ಸಾರಿಗೆ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸುವ ಪ್ರಸ್ತಾವನೆ ಇರುವ ಮೊಟಾರ್‌ ವಾಹನ ತಿದ್ದುಪಡಿ ಕಾಯ್ದೆಗೆ ಕೇಂದ್ರಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

ರಾಜ್ಯಸಭೆಯಲ್ಲಿ ಬಾಕಿ ಉಳಿದಿದ್ದ ಈ ಮಸೂದೆ, 16ನೇ ಲೋಕಸಭೆ ಕೊನೆಗೊಂಡ ಹಿನ್ನೆಲೆಯಲ್ಲಿ ರದ್ದಾಗಿತ್ತು. ಇದೀಗ ಮಸೂದೆಯನ್ನು ಹೊಸದಾಗಿ ಮಂಡಿಸಬೇಕಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಮೋಟಾರ್‌ ವಾಹನ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ. ಹಾಲಿ ಸಂಸತ್‌ ಅಧಿವೇಶನದಲ್ಲೇ ಈ ಮಸೂದೆ ಮಂಡನೆ ಆಗುವ ಸಾಧ್ಯತೆ ಇದೆ.

ಮಸೂದೆಯಲ್ಲಿ ಏನಿದೆ?

ರಸ್ತೆ ಸುರಕ್ಷೆಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಪ್ರಾಪ್ತ ವಯಸ್ಕರ ವಾಹನ ಚಾಲನೆ, ಪರವಾನಗಿ ಇಲ್ಲದೇ ವಾಹನ ಚಾಲನೆ, ಅಪಾಯಕಾರಿ ಚಾಲನೆ, ಕುಡಿದು ವಾಹನ ಚಾಲನೆ, ಅತಿವೇಗದ ಚಾಲನೆ ಮತ್ತು ಅತಿ ಭಾರದ ಸರಕು ಸಾಗಣೆಗೆ ಭಾರೀ ದಂಡ ಬೀಳಲಿದೆ.

ಆ್ಯಂಬುಲೆನ್ಸ್‌ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10 ಸಾವಿರ ರು., ವಾಹನ ಪರವಾನಗಿ ರದ್ದಾಗಿದ್ದರೂ ವಾಹನ ಚಲಾಯಿಸಿದರೆ 10 ಸಾವಿರ ರು. ದಂಡ ವಿಧಿಸಬಹುದಾಗಿದೆ. ಚಾಲನಾ ಪರವಾನಗಿ ಉಲ್ಲಂಘಿಸುವ ಸಂಸ್ಥೆ ಅಥವಾ ಕಂಪನಿಗಳಿಗೆ 1 ಲಕ್ಷ ರು. ವರೆಗೂ ದಂಡ ವಿಧಿಸಲು ಪ್ರಸ್ತಾವಿತ ಮಸೂದೆಯಲ್ಲಿ ಅವಕಾಶವಿದೆ.

ಅತಿ ವೇಗದ ವಾಹನ ಚಾಲನೆಗೆ 1000ದಿಂದ 2000 ರು.ವರೆಗೂ ದಂಡ ವಿಧಿಸಬಹುದಾಗಿದೆ. ವಿಮೆ ಇಲ್ಲದೇ ವಾಹನ ಓಡಿಸಿದರೆ 2000 ರು.ವರೆಗೂ ದಂಡ, ಹೆಲ್ಮೆಟ್‌ ಇಲ್ಲದೇ ವಾಹನ ಓಡಿಸಿದರೆ 1000 ರು. ದಂಡ ಹಾಗೂ 3 ತಿಂಗಳು ಪರವಾನಗಿ ರದ್ದು ಮಾಡಬಹುದಾಗಿದೆ.

ಅಪ್ರಾಪ್ತ ವಯಸ್ಸಿನವರು ವಾಹನ ಓಡಿಸಿ ರಸ್ತೆ ಅಪಘಾತ ಉಂಟಾದರೆ ವಾಹನ ಮಾಲೀಕರನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ 25 ಸಾವಿರ ರು. ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆಯೂ ಮಸೂದೆಯಲ್ಲಿದೆ.

ಒಂದು ವೇಳೆ ಕುಡಿದು ವಾಹನ ಚಲಾಯಿಸಿದರೆ ನೂತನ ಕಾಯ್ದೆಯಲ್ಲಿ ಗರಿಷ್ಠ 10 ಸಾವಿರ ರು.ವರೆಗೂ ದಂಡ ವಿಧಿಸುವ ಮತ್ತು ಅಪಾಯಕಾರಿ ವಾಹನ ಚಲಾಯಿಸಿದರೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1000 ರು.ನಿಂದ 5,000 ರು.ಗೆ ಏರಿಕೆ ಮಾಡುವ ಪ್ರಸ್ತಾವನೆಯೂ ಉದ್ದೇಶಿತ ಮಸೂದೆಯಲ್ಲಿದೆ.

click me!