
ಬೆಂಗಳೂರು: ಭಾರತದ ಮಾರುಕಟ್ಟೆಯಲ್ಲಿ 150cc ಯಿಂದ 200cc ಸೆಗ್ಮೆಂಟ್ ಬೈಕ್‌ಗಳಿಗೆ ಸಖತ್ ಡಿಮ್ಯಾಂಡ್ ಇದೆ. 2026ರ ಮಾರ್ಚ್ ತಿಂಗಳ ಮಾರಾಟದ ಲೆಕ್ಕಾಚಾರ ನೋಡಿದರೆ, ಈ ಬಾರಿ ಬಜಾಜ್ ಪಲ್ಸರ್, ಟಿವಿಎಸ್ ಅಪಾಚೆಯನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಮಾರ್ಚ್ ತಿಂಗಳಲ್ಲಿ ಪಲ್ಸರ್ ಸರಣಿಯ ಒಟ್ಟು 55,360 ಬೈಕ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಲ್ಸರ್ ಮಾರಾಟದಲ್ಲಿ ಸುಮಾರು 59% ರಷ್ಟು ಭರ್ಜರಿ ಏರಿಕೆ ಕಂಡಿದೆ. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2025ರ ಮಾರ್ಚ್‌ನಲ್ಲಿ, ಬಜಾಜ್ 34,820 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿತ್ತು. ಈ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಮಾಡೆಲ್‌ಗಳ ಬಗ್ಗೆ ವಿವರವಾಗಿ ನೋಡೋಣ.
ಕಳೆದ ತಿಂಗಳು ಮೊದಲ ಸ್ಥಾನದಲ್ಲಿದ್ದ ಟಿವಿಎಸ್ ಅಪಾಚೆ, ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. 2026ರ ಮಾರ್ಚ್‌ನಲ್ಲಿ ಟಿವಿಎಸ್ ಒಟ್ಟು 47,081 ಅಪಾಚೆ ಬೈಕ್‌ಗಳನ್ನು ಮಾರಾಟ ಮಾಡಿದ್ದು, 6.48% ವಾರ್ಷಿಕ ಬೆಳವಣಿಗೆ ದಾಖಲಿಸಿದೆ.
ಇನ್ನು ಹೋಂಡಾ ಯುನಿಕಾರ್ನ್ ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಹೋಂಡಾ ಕಂಪನಿ ಒಟ್ಟು 34,358 ಯುನಿಕಾರ್ನ್ ಬೈಕ್‌ಗಳನ್ನು ಮಾರಾಟ ಮಾಡಿದ್ದು, 17.01% ಬೆಳವಣಿಗೆ ಕಂಡಿದೆ. ಇನ್ನು, ಯಮಹಾ FZ ಸರಣಿಯು ನಾಲ್ಕನೇ ಸ್ಥಾನದಲ್ಲಿದ್ದು, 48.73% ವಾರ್ಷಿಕ ಬೆಳವಣಿಗೆಯೊಂದಿಗೆ 17,227 ಯುನಿಟ್‌ಗಳು ಮಾರಾಟವಾಗಿವೆ.
ಯಮಹಾ MT-15 ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಯಮಹಾ ಕಂಪನಿಯು ಒಟ್ಟು 9,343 MT-15 ಬೈಕ್‌ಗಳನ್ನು ಮಾರಾಟ ಮಾಡಿದ್ದು, 2.96% ವಾರ್ಷಿಕ ಬೆಳವಣಿಗೆ ಸಾಧಿಸಿದೆ. ಯಮಹಾ R15 ಆರನೇ ಸ್ಥಾನದಲ್ಲಿದೆ. ಕಂಪನಿಯು ಒಟ್ಟು 8,133 R15 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, 22.82% ಬೆಳವಣಿಗೆ ಕಂಡಿದೆ. ಮತ್ತೊಂದೆಡೆ, ಯಮಹಾದ XSR ಬೈಕ್ 948 ಯುನಿಟ್‌ಗಳ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದೆ.
ಅಡ್ವೆಂಚರ್ ಬೈಕ್ ಹೀರೋ ಎಕ್ಸ್‌ಪಲ್ಸ್ 200 ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹೀರೋ ಕಂಪನಿಯು ಈ ಅವಧಿಯಲ್ಲಿ ಒಟ್ಟು 3,845 ಎಕ್ಸ್‌ಪಲ್ಸ್ ಬೈಕ್‌ಗಳನ್ನು ಮಾರಾಟ ಮಾಡಿದ್ದು, ಬರೋಬ್ಬರಿ 194.86% ರಷ್ಟು ಮಾರಾಟ ಹೆಚ್ಚಿಸಿಕೊಂಡಿದೆ.
ಕೆಟಿಎಂ 200 ಸರಣಿ ಒಂಬತ್ತನೇ ಸ್ಥಾನದಲ್ಲಿದೆ. ಕೆಟಿಎಂ ಒಟ್ಟು 3,471 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, 34.95% ವಾರ್ಷಿಕ ಏರಿಕೆ ದಾಖಲಿಸಿದೆ. ಹೀರೋ ಎಕ್ಸ್‌ಟ್ರೀಮ್ 160 ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಈ ಬೈಕ್‌ನ 1,739 ಯುನಿಟ್‌ಗಳು ಮಾತ್ರ ಮಾರಾಟವಾಗಿದ್ದು, 25.72% ರಷ್ಟು ವಾರ್ಷಿಕ ಕುಸಿತ ಕಂಡಿದೆ.