
ನವದೆಹಲಿ: ಇನ್ನು ಭಾರತದ ಕಾರುಗಳು ಪೆಟ್ರೋಲ್, ಡೀಸೆಲ್‌ನಿಂದಲ್ಲ, ಆಲ್ಕೋಹಾಲ್‌ನಿಂದ ಓಡುತ್ತವೆ!
ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ತೈಲಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತವು ಬಯೋ ಇಂಧನ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲು ಹೊರಟಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರವು ಹಾಲಿ ಇರುವ ಶೇ.21ರಷ್ಟು ಎಥೆನಾಲ್ ಬದಲು ಶೇ.85ರಷ್ಟು ಎಥೆನಾಲ್(ಆಲ್ಕೋಹಾಲ್) ಅನ್ನು ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿ ಬಳಸುವ ಕುರಿತು ಚಿಂತನೆ ನಡೆಸುತ್ತಿದೆ. ಈ ಸಂಬಂಧ ಇ85 ನೀತಿಯ ಕರಡು ನಿಯಮಾವಳಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಎಥೆನಾಲ್ ಒಂದು ರೀತಿಯಲ್ಲಿ ಆಲ್ಕೋಹಾಲ್ ಆಗಿದ್ದು, ಇಥೆಲ್ ಆಲ್ಕೋಹಾಲ್, ಗ್ರೇನ್ ಆಲ್ಕೋಹಾಲ್ ಎಂದೂ ಕರೆಯಲಾಗುತ್ತದೆ.
ಸದ್ಯ ದೇಶದಲ್ಲಿ ಪೆಟ್ರೋಲ್‌ಗೆ ಶೇ.21ರಷ್ಟು ಎಥೆನಾಲ್ ಮಿಶ್ರಣ ಮಾಡಲು ಅವಕಾಶ ನೀಡಲಾಗಿದೆ. ಇ85 ನೀತಿಯೇನಾದರೂ ಅನುಷ್ಠಾನಕ್ಕೆ ಬಂದರೆ ಕಾರುಗಳಿಗಿನ್ನು ಶೇ.85ರಷ್ಟು ಎಥೆನಾಲ್ ಮತ್ತು ಶೇ.15ರಷ್ಟು ಪೆಟ್ರೋಲ್ ಬಳಸಲು ಅನುಮತಿ ಸಿಗಲಿದೆ.
ಈ ಕುರಿತು ಸರ್ಕಾರ ಶೀಘ್ರದಲ್ಲೇ ಕರಡು ನೀತಿ ಪ್ರಕಟಿಸಲಿದೆ. ಈಗಾಗಲೇ ಈ ಕುರಿತ ಪ್ರಾಥಮಿಕ ಪರೀಕ್ಷೆಯೂ ಪೂರ್ಣಗೊಂಡಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಇ85 ಇಂಧನಕ್ಕಾಗಿ ವಾಹನಗಳ ಎಂಜಿನ್‌ನಲ್ಲಿ ಕೆಲ ಮಾರ್ಪಾಡು ಅತ್ಯಗತ್ಯ. ಸದ್ಯ ಬಳಕೆಯಲ್ಲಿರುವ ಎಂಜಿನ್ ಅನ್ನು ಪೆಟ್ರೋಲ್ ಬಳಕೆಗಷ್ಟೇ ನಿರ್ಮಿಸಲಾಗಿದೆ. ಇಂಥ ಕಾರುಗಳಿಗೆ ಶೇ.85ರಷ್ಟು ಎಥೆನಾಲ್ ಬಳಸಿದರೆ ಎಂಜಿನ್‌ಗೆ ಹಾನಿಯಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ವಾಹನಗಳ ಎಂಜಿನ್‌ಗಳಲ್ಲಿ ಅಗತ್ಯ ಬದಲಾವಣೆಗೆ ತೀರ್ಮಾನಿಸಲಾಗಿದೆ. ಸದ್ಯ ಏ.1ರಿಂದ ಇ20 ಪೆಟ್ರೋಲ್ ಮಾರಾಟ ಮಾಡುವುದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡ್ಡಾಯ ಮಾಡಲಾಗಿದೆ.
ಪರಿಸರಕ್ಕೆ ಕಡಿಮೆ ಹಾನಿ:
ಎಥೆನಾಲ್ ಅನ್ನು ಸಾಮಾನ್ಯವಾಗಿ ಕಬ್ಬು, ಜೋಳ, ಧಾನ್ಯಗಳಿಂದ ಉತ್ಪಾದಿಸಲಾಗುತ್ತದೆ. ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್‌ನಿಂದ ಪರಿಸರಕ್ಕೂ ಆಗುವ ಹಾನಿ ಕಡಿಮೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಥೆನಾಲ್-ಪೆಟ್ರೋಲ್ ಮಿಶ್ರಿತ ಇಂಧನದ ಕಾರಿನಲ್ಲಿ ಓಡಾಡುತ್ತಿದ್ದಾರೆ. ಟೊಯೊಟಾ ಕಾರು ಶೇ.100ರಷ್ಟು ಎಥೆನಾಲ್‌ನಿಂದಲೇ ಓಡಲು ಸಾಧ್ಯ ಇದೆ ಎಂದೂ ತೋರಿಸಿಕೊಟ್ಟಿದೆ.
ದೇಶದಲ್ಲಿ ಹೆಚ್ಚುವರಿ ಎಥೆನಾಲ್ ಲಭ್ಯವಿರುವ ಹಿನ್ನೆಲೆಯಲ್ಲಿ ಇ85 ಇಂಧನ ನೀತಿ ಜಾರಿಗೆ ತರುವುದು ಸುಲಭವಾಗಲಿದೆ ಎನ್ನಲಾಗಿದೆ. ಇದರಿಂದ ತೈಲ ಆಮದಿಗಾಗಿ ಮಾಡುತ್ತಿರುವ ವೆಚ್ಚ ಇಳಿಕೆಯಾಗಲಿದೆ ಮತ್ತು ಪರಿಸರಕ್ಕೆ ಆಗುವ ಹಾನಿಯನ್ನೂ ಕಡಿಮೆ ಮಾಡಬಹುದಾಗಿದೆ ಎಂಬುದು ಸರ್ಕಾರದ ಲೆಕ್ಕಾಚಾರ.