ರಾಜ್ಯದಲ್ಲಿ ಫಾಸ್ಟ್ಯಾಗ್ ಅಳವಡಿಕೆಯ ಗಡುವು ಮುಂದು ಹೋಗುತ್ತಲಿದ್ದರೂ ಈ ಬಗ್ಗೆ ವಾಹನ ಸವಾರರು ಮಾತ್ರ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇನ್ನೂ 50ರಷ್ಟು ವಾಹನ ಸವಾರರು ಅಳವಡಿಸಿಕೊಂಡಿಲ್ಲ.
ಬೆಂಗಳೂರು (ಡಿ.15): ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸುವ ಗಡುವನ್ನು ಎರಡನೇ ಬಾರಿಗೆ ಮುಂದೂಡಿದ್ದರೂ ಸಾರ್ವಜನಿಕರು ಮಾತ್ರ ಫಾಸ್ಟ್ಯಾಗ್ ಅಳವಡಿಕೆಗೆ ಇನ್ನೂ ಉತ್ಸಾಹ ತೋರಿಲ್ಲ. ಹೀಗಾಗಿಯೇ ರಾಜ್ಯದಲ್ಲಿ ಇನ್ನೂ ಶೇ.50ರಷ್ಟುವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ.
ಈ ನಡುವೆ, ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ವಾಹನಗಳಿಗೆ ಟೋಲ್ ಬೂತ್‌ಗಳ ಶೇ.25ರಷ್ಟುದ್ವಾರಗಳಲ್ಲಿ ಮಾತ್ರ ಪ್ರವೇಶಿಸಲು ಈಗ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ವಾಹನಗಳ ಸಂಖ್ಯೆ ಹೆಚ್ಚಿದ್ದರೂ ದ್ವಾರಗಳ ಮಿತಿ ವಿಧಿಸಿರುವುದರಿಂದ ಡಿ.15ರಿಂದಲೇ ಟೋಲ್‌ಗೇಟ್‌ಗಳಲ್ಲಿ ಭಾರಿ ಗೊಂದಲ ನಿರ್ಮಾಣವಾಗುವ ಸಂಭವವಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧಿಕಾರಿಗಳೇ ಹೇಳುವ ಪ್ರಕಾರ, ಇನ್ನೂ ಅರ್ಧಕ್ಕರ್ಧ ಅರ್ಥಾತ್ ಶೇ.50ರಷ್ಟುವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ. ಈ ವಾಹನಗಳು ಎಷ್ಟೇ ಸಮಯ ಆದರೂ ತಮಗೆ ಸೀಮಿತವಾದ ಶೇ.25ರಷ್ಟುದ್ವಾರಗಳಲ್ಲಿ ಮಾತ್ರ ಸಂಚಾರಿಸಬೇಕು. ಫಾಸ್ಟ್ಯಾಗ್ ಉಳ್ಳ ವಾಹನಗಳಿಗೆ ನಿಗದಿಯಾದ ದ್ವಾರದಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನಗಳು ಸಂಚರಿಸಲು ಪ್ರಯತ್ನಿಸಿದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ಈ ದ್ವಾರಗಳಲ್ಲಿ ವಾಹನಗಳು ಸಾಲುಗಟ್ಟಿನಿಲ್ಲಬೇಕಾಗಿ ಬರಲಿದೆ.
ಫಾಸ್ಟ್ಯಾಗ್ ಅಳವಡಿಕೆ ಮುಂದೂಡಿಕೆ : ಸವಾರರು ನಿರಾಳ!...
ಅಲ್ಲದೆ, ಫಾಸ್ಟ್ಯಾಗ್ ಇರುವ ವಾಹನಗಳಿಗೆ ಶೇ.75ರಷ್ಟುದ್ವಾರಗಳಲ್ಲಿ ಅವಕಾಶ ನೀಡಿದರೂ, ಈಗಾಗಲೇ ಅವುಗಳಲ್ಲಿ ಆರಂಭಿಕ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಕೆಲವೆಡೆ ಫಾಸ್ಟ್ಯಾಗ್‌ನ ಬಾರ್‌ಕೋಡ್ ಸ್ಕಾ್ಯನ್ ಆಗುತ್ತಿಲ್ಲ. ಈ ಸಮಸ್ಯೆ ಸರಿಪಡಿಸಲು ಇನ್ನೂ ಕೆಲ ದಿನಗಳು ಬೇಕಾಗುತ್ತದೆ ಎಂದು ಅಧಿಕಾರಿಗಳೇ ಹೇಳುತ್ತಾರೆ. ಇದರಿಂದ ಆ ದ್ವಾರಗಳಲ್ಲೂ ವಾಹನಗಳು ಟೋಲ್ ದಾಟುವುದು ತಡವಾಗುತ್ತಿದ್ದು, ವಾಹನಗಳ ಸಾಲು ನಿಲ್ಲುವ ಸ್ಥಿತಿ ಇದೆ ಎಂದು ವಾಹನ ಸವಾರರು ಹೇಳುತ್ತಿದ್ದಾರೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಎಲ್ಲವನ್ನೂ ನಿಭಾಯಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದರ ಹೊರತಾಗಿಯೂ ಸಮಸ್ಯೆಯಾದರೆ ತಾತ್ಕಾಲಿಕವಾಗಿ ಏನಾದರೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ.
10 ದ್ವಾರವಿದ್ದರೆ 7 ದ್ವಾರಕ್ಕೆ ಫಾಸ್ಟ್ಯಾಗ್: ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಡಿ.15ರ ವರೆಗೆ ಗಡುವು ನೀಡಲಾಗಿತ್ತಾದರೂ, ಕೇಂದ್ರ ಸರ್ಕಾರ ಇದಕ್ಕೆ ಜ.15ರ ವರೆಗೆ ತಾತ್ಕಾಲಿಕ ವಿನಾಯಿತಿ ನೀಡಿದೆ. ಟೋಲ್ ಪ್ಲಾಜಾಗಳಲ್ಲಿನ ಶೇ.75ರಷ್ಟುದ್ವಾರಗಳಲ್ಲಿ (ಫಾಸ್ಟ್ಯಾಗ್ ತಂತ್ರಜ್ಞಾನ ಅಳವಡಿಸಿರುವ) ಫಾಸ್ಟ್ಯಾಗ್ ಅಳವಡಿಸಿಕೊಂಡಿರುವ ವಾಹನಗಳಿಗೆ ಹಾಗೂ ಉಳಿದ ಶೇ.25ರಷ್ಟುದ್ವಾರಗಳಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಸೂಚಿಸಿದೆ. ಅಂದರೆ ಒಂದು ಟೋಲ್ ಪ್ಲಾಜಾದಲ್ಲಿ 10 ದ್ವಾರಗಳಿದ್ದರೆ ಅದರಲ್ಲಿ ಏಳು ದ್ವಾರಗಳು ಫಾಸ್ಟ್ಯಾಗ್ ಅಳವಡಿಸಿಕೊಂಡಿರುವ ವಾಹನಗಳ ಸಂಚಾರಕ್ಕೆ ಲಭ್ಯವಿರುತ್ತವೆ. ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ವಾಹನಗಳ ಸಂಚಾರಕ್ಕೆ ಉಳಿದ ಮೂರು ದ್ವಾರಗಳು ಮಾತ್ರ ಲಭ್ಯವಿರುತ್ತವೆ ಎಂದು ಎನ್‌ಎಚ್‌ಎಐ ಉಪ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಅಧಿಕಾರಿ ಲಿಂಗೇಗೌಡ ಮಾಹಿತಿ ನೀಡಿದ್ದಾರೆ.
ಆದರೆ, ರಾಜ್ಯದಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿಕೊಳ್ಳುವಿಕೆ ನಿಧಾನವಾಗಿರುವುದರಿಂದ ಇನ್ನೂ ಕೂಡ ಶೇ.50ರಷ್ಟುವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ. ಹಾಗಾಗಿ ಎನ್‌ಎಚ್‌ಎಐನ ಶೇ.75- ಶೇ.25 ದ್ವಾರಗಳ ಹಂಚಿಕೆ ಗೊಂದಲ ಸೃಷ್ಟಿಸಲಿದೆ ಎನ್ನಲಾಗುತ್ತಿದೆ. ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನಗಳ ಸಾಲು ಹೆಚ್ಚಲಿದ್ದು, ಇದರಿಂದ ಇತರೆ ವಾಹನಗಳಿಗೂ ತೊಂದರೆಯಾಗಬಹುದು. ಅಲ್ಲದೆ, ಹೊಸ ವ್ಯವಸ್ಥೆಗೆ ಟೋಲ್ ಪ್ಲಾಜಾಗಳೂ ಕೂಡ ಸಂಪೂರ್ಣ ಸಿದ್ಧವಾಗಿಲ್ಲ. ರಾಜ್ಯದ 39 ಟೋಲ್ ಪ್ಲಾಜಾಗಳಲ್ಲಿ ಶೇ.75ರಷ್ಟುದ್ವಾರಗಳಲ್ಲಿ ಫಾಸ್ಟ್ಯಾಗ್ ತಂತ್ರಜ್ಞಾನ ಅವಳಡಿಕೆಯಾಗಿದೆ. ಆದರೆ, ಹೊಸದಾಗಿ ಈ ತಂತ್ರಜ್ಞಾನ ಅಳವಡಿಸಿರುವುದರಿಂದ ಕೆಲವೆಡೆ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಇದರಿಂದ ಫಾಸ್ಟ್ಯಾಗ್ ಇದ್ದರೂ ಬಾರ್‌ಕೋಡ್ ಸ್ಕಾ್ಯನ್ ಆಗುವಿಕೆಯಲ್ಲಿ ವಿಳಂಬವಾಗುತ್ತಿದ್ದು, ಸ್ಕಾ್ಯನ್ ಆಗುವವರೆಗೂ ವಾಹನಗಳು ನಿಂತಲ್ಲೇ ನಿಲ್ಲಬೇಕಾಗಿದೆ. ಇದರಿಂದ ಫಾಸ್ಟ್ಯಾಗ್ ಇರುವ ವಾಹನಗಳೂ ಸರಾಗವಾಗಿ ಟೋಲ್ ದಾಟಲು ವಿಳಂಬವಾಗಲಿದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಫಾಸ್ಟ್ಯಾಗ್ ಇಲ್ಲದವರು ಸೂಚಿತ ದ್ವಾರದಲ್ಲಿ ಹೋಗದಿದ್ದರೆ ದಂಡ: ಫಾಸ್ಟ್ಯಾಗ್ ಇಲ್ಲದ ವಾಹನಗಳು ಎಷ್ಟೇ ಹೊತ್ತಾದರೂ ತಮಗೆ ನಿಗದಿಪಡಿಸಿದ ಸೀಮಿತ (ಶೇ.25) ದ್ವಾರಗಳಲ್ಲಷ್ಟೇ ಸಂಚರಿಸಬೇಕು. ಒಂದು ವೇಳೆ ಫಾಸ್ಟ್ಯಾಗ್ ಇಲ್ಲದ ಯಾವುದೇ ವಾಹನಗಳು ಫಾಸ್ಟ್ಯಾಗ್ ತಂತ್ರಜ್ಞಾನ ಅಳವಡಿಸಿರುವ ದ್ವಾರದಲ್ಲಿ ಹಾದುಹೋಗಲು ಯತ್ನಿಸಿದರೆ ದಂಡ ಬೀಳಲಿದೆ. ನಿಯಮದಂತೆ ನಿಗದಿತ ಟೋಲ್ ದರಕ್ಕಿಂತ ದುಪ್ಪಟ್ಟು ದರ ವಿಧಿಸಲಾಗುತ್ತದೆ ಎಂದು ಎನ್‌ಎಚ್‌ಎಐನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆದರೆ, ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ನಿಗದಿಯಾದ ದ್ವಾರಗಳಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಂಡಿರುವ ವಾಹನಗಳು ಸಂಚರಿಸಲು ಅವಕಾಶ ಇರುತ್ತದೆ. ಒಂದೆರಡು ಟೋಲ್ ಪ್ಲಾಜಾಗಳ ಕೆಲವು ದ್ವಾರಗಳನ್ನು ಬಿಟ್ಟರೆ ಬಹುತೇಕ ಎಲ್ಲೆಡೆ ಫಾಸ್ಟ್ಯಾಗ್ ಬಾರ್‌ಕೋಡ್ ಸ್ಕಾ್ಯನ್ ಮಾಡುವ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿ ಜಾರಿ ಮೂಲಕ ವಾಹನಗಳು ಸಾಲುಗಟ್ಟಿನಿಲ್ಲುವುದನ್ನು ತಪ್ಪಿಸಲು ಜಾರಿಗೊಳಿಸಿದ ಈ ಫಾಸ್ಟ್ಯಾಗ್ ಯೋಜನೆ ಸಂಪೂರ್ಣ ಸರಾಗವಾಗಲು ಇನ್ನೂ ಕೆಲವು ದಿನ ಬೇಕಾಗುತ್ತದೆ.