ಭಾರತದ ಡ್ರೈವಿಂಗ್ ಲೈಸೆನ್ಸ್ ಇನ್ನೊಂದು ದೇಶಕ್ಕೆ ಹೋದಾಗ ಅನುಪಯುಕ್ತ ಅನಗತ್ಯ ಕಾರ್ಡ್ ಅಷ್ಟೇ. ಅಲ್ಲಿಯ ಡಿಎಲ್ ಪಡೆಯಲು ಅಲ್ಲಿಯದೇ ಹಲವು ಟೆಸ್ಟ್‌ಗಳನ್ನು ಪಾಸಾಗಬೇಕು. ಆದರೆ, ವಿದೇಶದಲ್ಲೂ ಕೆಲವೊಂದು ದೇಶಗಳಲ್ಲಿ ಭಾರತೀಯ ಡಿಎಲ್ ಹಿಡಿದೇ ವಾಹನ ಓಡಿಸಲು ಅನುಮತಿ ಇದೆ. ಯಾವುದಪ್ಪಾ ಈ ದೇಶಗಳು?
ಇಲ್ಲಿ ಆರಾಮಾಗಿ ಕಾರು, ಬೈಕು ಓಡಿಸಿಕೊಂಡು ಬೇಕೆಂದಲ್ಲಿಗೆ ಬೇಕಾದ ಸಮಯಕ್ಕೆ ಹೋಗುತ್ತಿದ್ದವರಿಗೆ ವಿದೇಶಕ್ಕೆ ಹೋದಾಗ ಎಲ್ಲದಕ್ಕೂ ಸಾರ್ವಜನಿಕ ವಾಹನಗಳಿಗೆ ಅವಲಂಬಿಸಬೇಕು ಎಂದರೆ ಕೈ ಕಾಲು ಕಟ್ಟಿ ಹಾಕಿದಂತಾಗುತ್ತದೆ. ಅಲ್ಲಿ ಸಾರ್ವಜನಿಕ ವಾಹನ ವ್ಯವಸ್ಥೆ ಚೆನ್ನಾಗಿಯೇ ಇರಬಹುದು. ಆದರೆ, ಯಾವುದೋ ತಾಣ ಚೆಂದ ಕಂಡಿತೆಂದು ನಿಲ್ಲಿಸಿ ಮನಸೋ ಇಚ್ಛೆ ಅದರ ಸೌಂದರ್ಯ ಸವಿಯಲಾಗುವುದಿಲ್ಲವಲ್ಲ. ಅದೇ ನಮ್ಮದೇ ವಾಹನವಿದ್ದರೆ, ಬೇಕೆಂದಲ್ಲಿ ಸ್ಟಾಪ್ ಕೊಟ್ಟು ಬೇಕಾದ್ದನ್ನು ನೋಡಬಹುದು.
ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಾಗ ಆ ದೇಶವನ್ನು ಸಾಧ್ಯವಾದಷ್ಟು ಸುತ್ತುವ ಅವಕಾಶ ಸಿಗುವುದು ನಮ್ಮದೇ ವಾಹನವಿದ್ದಾಗ. ಇಲ್ಲವೇ ಬಾಡಿಗೆಗೆ ವಾಹನ ಪಡೆದರೂ ಅದನ್ನಲ್ಲಿ ನಾವು ಓಡಿಸುವ ಅವಕಾಶ ಸಿಕ್ಕಾಗ. ಹೀಗೆ ಓಡಿಸಬೇಕೆಂದರೆ ಡಿಎಲ್ ಬೇಕು. ಅಲ್ಪಾವಧಿಗೆ ಹೋದಾಗ ಅಲ್ಲಿನ ಡಿಎಲ್ ಮಾಡಿಸುತ್ತಾ ಕೂರುವುದು ಸಾಧ್ಯವಿಲ್ಲ. ಧೀರ್ಘಾವಧಿಗೆ ಹೋದರೂ ವಿದೇಶಗಳಲ್ಲಿ ಡಿಎಲ್ ಪಡೆಯುವುದು ಭಾರತದಷ್ಟು ಸುಲಭವಲ್ಲ. ಅದಕ್ಕೆ ಹತ್ತು ಹಲವಾರು ಕಟ್ಟಳೆಗಳಿರುತ್ತವೆ. ಆದರೆ, ಕೆಲ ದೇಶಗಳಲ್ಲಿ ಈ ಚಿಂತೆಯಿಲ್ಲದೆ, ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹಿಡಿದೇ ವಾಹನ ಸವಾರಿ ಮಾಡಬಹುದು. ಅಂಥ ದೇಶಗಳ್ಯಾವುವು ನೋಡೋಣ.
undefined
ಪೋನ್ ಬಳಕೆ: ಏನೆಲ್ಲಾ ಮಾಡಿದ್ರೆ ನಿಯಮ ಉಲ್ಲಂಘನೆ? ತಿಳಿದುಕೊಳ್ಳಿ ರೂಲ್ಸ್!
ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ಉತ್ತರ ಗಡಿಭಾಗವೊಂದನ್ನು ಬಿಟ್ಟು ಆರಾಮಾಗಿ ಭಾರತೀಯ ಡಿಎಲ್ ಇಟ್ಟುಕೊಂಡು ಕಾರನ್ನು ಬೇಕೆಂದಲ್ಲಿ ಓಡಿಸಬಹುದು. ಆದರೆ, ನಿಮ್ಮ ಲೈಸೆನ್ಸ್‌ನಲ್ಲಿ ಇರುವ ವರ್ಗದ ವಾಹನಗಳನ್ನು ಮಾತ್ರ ಓಡಿಸಬೇಕು.
ಜರ್ಮನಿ
ನೀವು ಜರ್ಮನಿಗೆ ಸ್ವಲ್ಪ ದಿನಗಳ ಕಾಲ ಸುತ್ತಿ ಬರಲು ಹೊರಟಿದ್ದರೆ ನಿಮ್ಮ ಲೈಸೆನ್ಸನ್ನು ಜರ್ಮನ್ ಅಧಿಕಾರಿಗಳು ಅನುಮತಿಸುತ್ತಾರೆ. ಕಾರು, ಬೈಕು ಯಾವುದೇ ಇರಲಿ, ಇಲ್ಲಿಗೆ ಅಂತಾರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್ ಪಡೆಯುವ ಅಗತ್ಯವಿಲ್ಲ. ಆದರೆ, ಸ್ಥಳೀಯ ಅಧಿಕಾರಿಗಳಿಗೆ ಅರ್ಥ ಮಾಡಿಸಲು ನಿಮ್ಮ ಡ್ರೈವಿಂಗ್ ಲೈಸೆನ್ಸ್ನ ಜರ್ಮನ್ ಟ್ರಾನ್ಸ್‌ಲೇಶನ್ ವರ್ಶನ್ನನ್ನು ಯಾವುದೇ ಸಂಬಂಧಿಸಿದ ಜರ್ಮನ್ ಕಚೇರಿಗಳಲ್ಲಿ ಪಡೆಯಬಹುದು.
ನ್ಯೂಜಿಲ್ಯಾಡ್
ಇಂಗ್ಲಿಷ್‌ನಲ್ಲಿ ಫ್ರಿಂಟ್ ಆಗಿರುವ ಚಾಲನಾ ಪರವಾನಗಿ ಇದ್ದರೆ ಸಾಕು ಕಿವಿಗಳ ನಾಡಾದ ನ್ಯೂಜಿಲ್ಯಾಂಡ್‌ನಲ್ಲಿ 12 ತಿಂಗಳ ಕಾಲ ಯೋಚನೆಯಿಲ್ಲದೆ ವಾಹನ ಓಡಿಸಬಹುದು. ಒಂದು ವೇಳೆ ಲೈಸೆನ್ಸ್ ಇಂಗ್ಲಿಷ್‌ನಲ್ಲಿಲ್ಲವಾದರೆ, ಅಧಿಕೃತ ಅನುವಾದಕರ ಸಹಾಯದಿಂದ ಇಂಗ್ಲಿಷ್‌ಗೆ ಅನುವಾದಿಸಿದ ಡಿಎಲ್‌ಗೆ ನ್ಯೂಜಿಲ್ಯಾಂಡ್ ಸಾರಿಗೆ ಏಜೆನ್ಸಿಯಿಂದ ಸ್ಟಾಂಪ್ ಹಾಕಿಸಿಟ್ಟುಕೊಂಡರೂ ಆಯಿತು.
ಗ್ರೇಟ್ ಬ್ರಿಟನ್
ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಹಾಗೂ ವೇಲ್ಸ್ - ಈ ತ್ರಿಮೂರ್ತಿ ರಾಷ್ಟ್ರಗಳಲ್ಲಿ ಭಾರತೀಯ ಚಾಲನಾ ಪರವಾನಗಿ ಇಟ್ಟುಕೊಂಡು ಸುಮಾರು 1 ವರ್ಷದ ಕಾಲ ಆರಾಮಾಗಿ ವಾಹನ ಓಡಿಸಬಹುದು. ಒಂದು ಸಮಸ್ಯೆಯೆಂದರೆ ನಿಮ್ಮ ಲೈಸೆನ್ಸ್‌ನಲ್ಲಿ ಹೇಳಿದ ವಾಹನಗಳ ಹೊರತಾಗಿ ಉಳಿದವನ್ನು ಓಡಿಸುವಂತಿಲ್ಲ.
ಸ್ವಿಟ್ಜರ್‌ಲ್ಯಾಂಡ್
ಭಾರತೀಯ ಡಿಎಲ್ ಇದ್ದರೆ ಸಾಕು, ಸ್ವಿಟ್ಜರ್‌ಲ್ಯಾಂಡ್‌ನ ಮನಮೋಹಕ ಸೌಂದರ್ಯವನ್ನು ವರ್ಷದ ಕಾಲ ನಿಮ್ಮ ಕಾರಿನಲ್ಲೇ ಓಡಾಡಿ ಮನ ದಣಿಯುವಷ್ಟು ಸವಿಯಬಹುದು.
ಇನ್ಮುಂದೆ ಪೊಲೀಸರಿಗೆ ‘ಡಿಜಿ ಲಾಕರ್’ ದಾಖಲೆ ತೋರಿಸಿದರೆ ಸಾಕು!
ದಕ್ಷಿಣ ಆಫ್ರಿಕಾ
ನಿಮ್ಮ ಡಿಎಲ್ ಇಂಗ್ಲಿಷ್‌ನಲ್ಲಿದ್ದರೆ, ಅದರಲ್ಲಿ ನಿಮ್ಮ ಫೋಟೋ ಹಾಗೂ ಸಹಿಯಿದ್ದರೆ ಯೋಚನೆಯೇ ಬೇಡ, ಆರಾಮಾಗಿ ದಕ್ಷಿಣ ಆಫ್ರಿಕಾದ ಉದ್ದಗಲಕ್ಕೂ ವಾಹನವನ್ನು ನೀವೇ ಓಡಿಸಿಕೊಂಡು ಕಂಫರ್ಟ್ ಆಗಿ ಸುತ್ತಬಹುದು. ಆದರೆ, ಕಾರನ್ನು ಬಾಡಿಗೆ ಪಡೆಯಬೇಕಾದರೆ ರೆಂಟಲ್ ಕಂಪನಿಗಳು ಐಡಿಪಿ(ಅಂತಾರಾಷ್ಟ್ರೀಯ ಚಾಲನಾ ಅನುಮತಿ) ಕೇಳುತ್ತವೆ. ಇದಕ್ಕಾಗಿ ಐಡಿಪಿಗೆ ಅನುಮತಿ ಪಡೆಯಬೇಕಾಗುತ್ತದೆ.
ಸ್ವೀಡನ್
ಸ್ವೀಡನ್‌ಗೆ ಹೋಗುತ್ತಿದ್ದೀರಾದರೆ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ವೀಡಿಶ್, ಡ್ಯಾನಿಷ್ ಹಾಗೂ ನಾರ್ವೇಯನ್ ಭಾಷೆಗಳಲ್ಲಿ ಯಾವುದೇ ಭಾಷೆಯಲ್ಲಿ ಪ್ರಿಂಟ್ ಆಗಿರುವ ಡಿಎಲ್ ಇದ್ದರೂ ಸಾಕು. ನಿಮ್ಮ ಬಳಿ ಇರುವ ಡಿಎಲ್ ಈ ಯಾವ ಭಾಷೆಯಲ್ಲಿಯೂ ಇಲ್ಲವಾದರೆ ಒಂದು ಅನುವಾದಿತ ಕಾಪಿ ರೆಡಿ ಮಾಡಿಟ್ಟುಕೊಳ್ಳಿ. ಜೊತೆಗೆ ನಿಮ್ಮ ಫೋಟೋ ಇರುವ ಅಧಿಕೃತ ಐಡಿ ಕಾರ್ಡೊಂದು ಇರಲಿ.
ಸಿಂಗಾಪುರ್
ಅಲ್ಪಾವಧಿಗೆ ಸಿಂಗಾಪುರಕ್ಕೆ ಹೋಗುತ್ತಿದ್ದೀರಾದರೆ, ಅದಕ್ಕಾಗಿ ಪ್ರತ್ಯೇಕವಾಗಿ ಡಿಎಲ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಆದರೂ ಭಾರತದ ಅಧಿಕೃತ ಸಂಸ್ಥೆಯಿಂದ ಒಂದು ಐಡಿಪಿ ಪಡೆದಿಟ್ಟುಕೊಳ್ಳುವ ಎಚ್ಚರಿಕೆ ವಹಿಸುವುದು ಉತ್ತಮ. ನಿಮ್ಮ ಚಾಲನಾ ಪರವಾನಗಿ ಇಂಗ್ಲಿಷ್‌ನಲ್ಲಿರುವುದು ಅಗತ್ಯ.
ಹಾಂಗ್‍ಕಾಂಗ್
ಹಾಂಗ್‌ಕಾಂಗ್ ನೆಲದಲ್ಲಿ ವಿದೇಶಿಯರು ತಮ್ಮ ದೇಶದ ಲೈಸೆನ್ಸ್ ಇಟ್ಟುಕೊಂಡು 12 ತಿಂಗಳ ಕಾಲ ವಾಹನ ಓಡಿಸಬಹುದು.
ಯುಎಸ್ಎ
ಯುಎಸ್ಎಯಲ್ಲಿ ನಿಮ್ಮ ಡಿಎಲ್ ಕೆಲಸಕ್ಕೆ ಬರುತ್ತದೆ. ಆದರೆ, ಕೆಲವೊಂದು ಸ್ಟೇಟ್‌ಗಳು ಮಾತ್ರ ಐಡಿಪಿ ಹಾಗೂ ಲೈಸೆನ್ಸ್ ಎರಡನ್ನೂ ಕೇಳುತ್ತವೆ. ಐಡಿಪಿ ಪಡೆಯಲು ನಿಮ್ಮ ಆರ್‌ಟಿಒ ಸಂಪರ್ಕಿಸಿ.