
ರಾಮಾಯಣ (Ramayana) ದಲ್ಲಿ, ಸೀತಾದೇವಿಯನ್ನು ಅಪಹರಿಸಿದ ರಾವಣನನ್ನು ಘನಘೋರ ಯುದ್ಧದಲ್ಲಿ ಶ್ರೀರಾಮ ಕೊಂದುಹಾಕಿದ. ನಂತರ ಸೀತೆಯನ್ನು ಅಶೋಕವನದಿಂದ ಬರಿಸಿದ. ಆದರೆ ಆಕೆಯನ್ನು ಮೊದಲಿಗೆ ಸ್ವೀಕರಿಸಲಿಲ್ಲ. ಆಕೆಯನ್ನು ಸ್ವೀಕರಿಸಲು ಅನುಮಾನಿಸಿದ. ಇದರಿಂದ ನೊಂದ ಸೀತೆ ಅಗ್ನಿಯನ್ನು ಸ್ಥಾಪಿಸಿ ಅದರಲ್ಲಿ ಹಾರಿದಳು. ಅಗ್ನಿದೇವನು ಆಕೆಯನ್ನು ಸುಡದೆ, ಆಕೆ ಪವಿತ್ರಳೆಂದು ಸಾರಿದನು. ಇದು ಕಥೆ. ಈ ಕಥೆಯ ಬಗ್ಗೆ ತುಂಬಾ ಆಕ್ಷೇಪಗಳು, ಸ್ತ್ರೀವಾದಿಗಳ ಸಿಟ್ಟು ಹಾಗೂ ಆಕ್ರೋಶಗಳು ಇವೆ. ಇಂಥ ಮನೋಭಾವ ತೋರಿಸಿದ್ದಕ್ಕಾಗಿ ರಾಮನನ್ನು ಬಹಳ ಮಂದಿ ಆಕ್ಷೇಪಿಸುತ್ತಾರೆ. ಅದೆಲ್ಲ ಹಾಗಿರಲಿ. ಈಗ, ಈ ಘಟನೆಯಲ್ಲಿ ಹಾಗೆ ನಡೆದುಕೊಂಡ ಶ್ರೀರಾಮನ ವರ್ತನೆಯ ಹಿಂದೆ ಒಂದು ನಿಗೂಢ ಕಾರಣವಿತ್ತು ಎಂದು ಹೇಳುವ ಕತೆಯೊಂದಿದೆ. ಅದನ್ನು ನೋಡೋಣ.
ಆ ಕತೆಯ ಪ್ರಕಾರ, ರಾವಣ ಅಪಹರಿಸಿದ್ದು ನಿಜವಾದ ಸೀತೆಯನ್ನಲ್ಲ. ಬದಲಾಗಿ ಮಾಯಾ ಸೀತೆಯನ್ನು. ರಾಮನು ಮಾಯಾಮೃಗವನ್ನು ಹುಡುಕುತ್ತ ಆಚೆ ಹೋದ ಬಳಿಕ, ನಿಜವಾದ ಸೀತೆಯು ಮರೆಯಾಗಿ ಅಲ್ಲಿ ಮಾಯಾ ಸೀತೆಯು ಪ್ರತಿಷ್ಠಾಪನೆಯಾದಳು. ಮುಂದೆ ಸೀತೆಯನ್ನು ರಾವಣನು ಕದ್ದೊಯ್ಯುತ್ತಾನೆ ಎಂದು ಗೊತ್ತಿದ್ದ ದೇವತೆಗಳು ಈ ಕೃತ್ರಿಮವನ್ನು ಉಂಟುಮಾಡಿದ್ದರು. ರಾವಣನು ಕದ್ದು ಒಯ್ದದ್ದು ಈ ಮಾಯಾಸೀತೆಯನ್ನೇ. ಹೀಗಾಗಿ ಸೀತೆಯು ಅಪವಿತ್ರವಾಗುವ ಪ್ರಶ್ನೆಯೇ ಬರಲಿಲ್ಲ. ಹಾಗಿದ್ದರೆ ನಿಜವಾದ ಸೀತೆ ಎಲ್ಲಿದ್ದಳು? ಆಕೆ ಬೆಂಕಿಯ ದೇವತೆ ಅಗ್ನಿಯಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಳು. ಅಗ್ನಿಯು ಆಕೆಯನ್ನು ಪಾರ್ವತಿಯಲ್ಲಿಗೆ ಕರೆದೊಯ್ದಿದ್ದ.
ರಾಮನಿಗೆ ಇದೆಲ್ಲ ತಿಳಿದಿತ್ತು. ಲಂಕೆಯ ಯುದ್ಧ ಸಮಾಪ್ತಿಯಾದ ಬಳಿಕ ಆತ ನಿಜವಾದ ಸೀತೆಯನ್ನು ಪಡೆಯಬೇಕಿತ್ತು- ಹೊರತು ಮಾಯಾಸೀತೆಯನ್ನಲ್ಲ. ಹೀಗಾಗಿ ಅತ ಸೀತೆಯನ್ನು ಶಂಕಿಸಿದ. ಆಗ ಮಾಯಾಸೀತೆಯು ಅಗ್ನಿಪ್ರವೇಶದ ನೆವದಿಂದ ಬೆಂಕಿಯೊಳಗೆ ಹೋದಳು. ಅಗ್ನಿದೇವರು ನಿಜವಾದ ಸೀತೆಯನ್ನು ಕರೆದುತಂದು ರಾಮನಿಗೆ ನೀಡಿದ. ಹೀಗೆ ನಾಟಕದೊಳಗೊಂದು ನಾಟಕ ಎಂಬಂತೆ, ಸೀತೆಯ ವಿನಿಮಯ ನಡೆಯಿತು.
ಮುಂದೆ ಸೀತೆಯು ಭೂಮಿಯೊಳಗೆ ಐಕ್ಯಳಾದದ್ದರ ಹಿಂದೆಯೂ ಒಂದು ಕಥೆ ಇದೆ. ಯಾಕೆಂದರೆ ಆಕೆ ಬಂದದ್ದೂ ಭೂಮಿಯಿಂದಲೇ. ಮಿಥಿಲೆಗೆ ರಾಜನಾಗಿದ್ದ ಜನಕ ಯಜ್ಞಕಾರ್ಯಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾಗ, ಆತನ ನೇಗಿಲ ಮೊನೆಗೆ ಒಂದು ಚಿನ್ನದ ತೊಟ್ಟಿಲು ತಾಕಿತು. ಅದೇನೆಂದು ಎತ್ತಿ ನೋಡಿದಾಗ, ಮುದ್ದಾದ ಹೆಣ್ಣು ಮಗಳು ನಗುತ್ತಿದ್ದಳು. ಆಕೆಯನ್ನು ಜನಕ ಸಾಕಿದ. ಸಂಸ್ಕೃತದಲ್ಲಿ ನೇಗಿಲ ಗೆರೆಗೆ ಸಿತ ಎಂದು ಹೆಸರು. ಹೀಗೆ ಆಕೆ ಸೀತೆ ಆದಳು. ಮಿಥಿಲೆಯ ರಾಜಕುಮಾರಿಯಾದ್ದರಿಂದ ಮೈಥಿಲಿಯಾದಳು. ಭೂಮಿಯಲ್ಲಿ ಕಂಡುಬಂದವಳಾದುದರಿಂದ ಭೂಮಿಪುತ್ರಿ, ಭೂಜಾತೆಯಾದಳು. ಈಕೆಯ ತಂದೆ ಜನಕ ಮಹಾರಾಜ, ಆಧ್ಯಾತ್ಮಜೀವಿಯಾಗಿದ್ದು, ದೇಹವೇ ಇಲ್ಲದೆ ಆತ್ಮದ ಮೂಲಕ ಸಂಚರಿಸಬಲ್ಲವನಾಗಿದ್ದ. ಹೀಗಾಗಿ ಅವನಿಗೆ ವಿದೇಹ ಎಂಬ ಹೆಸರಿತ್ತು. ವಿದೇಹನ ಮಗಳು ವೈದೇಹಿಯೂ ಆದಳು. ಹೀಗೆ ಭೂಮಿಯಿಂದ ಬಂದವಳು ಭೂಮಿಗೇ ಸಂದಳು.
ಇನ್ನೊಂದು ಕತೆಯ ಪ್ರಕಾರ, ಒಮ್ಮೆ ಜನಕ ಮಹಾರಾಜ, ಆಗಸದಲ್ಲಿ ಸಂಚರಿಸುತ್ತಿದ್ದ ಮೇನಕೆಯನ್ನು ನೋಡಿ ಮೋಹಿತನಾಗಿ, ನಿನ್ನಲ್ಲಿ ನನಗೊಂದು ಮಗು ಬೇಕು ಎಂದು ಕೇಳಿದ. ಮೇನಕೆ ತಥಾಸ್ತು ಎಂದಳು. ಬಳಿಕ ಜನಕನಿಗೆ ಯಜ್ಞಕ್ಕಾಗಿ ಹೊಲ ಉಳುತ್ತಿದ್ದಾಗ ಈ ಮಗು ಸಿಕ್ಕಿತು. ತಕ್ಷಣವೇ ಮೇನಕೆ ಪ್ರತ್ಯಕ್ಷಳಾಗಿ, ಇದೇ ನೀನು ಬಯಸಿದ್ದ ಮಗು ಎಂದಳು. ಸೀತೆ ರಾಮಾಯಣದಿಂದ ಪ್ರಾರಂಭವಾಗುವ ಪಾತ್ರವಲ್ಲ. ಅವಳ ಬೇರುಗಳು ವೇದಗಳಲ್ಲಿವೆ. ಋಗ್ವೇದದಲ್ಲಿ, ಸೀತೆಯನ್ನು ಫಲವತ್ತತೆಯ ದೇವತೆ ಎನ್ನಲಾಗಿದೆ. ಪುರಾಣಗಳಲ್ಲಿ, ಅವಳನ್ನು ಬೇರೆ ಯಾರೂ ಅಲ್ಲ, ವಿಷ್ಣುವಿನ ಪತ್ನಿ ಲಕ್ಷ್ಮಿ ಎಂದು ಅರ್ಥೈಸಲಾಗುತ್ತದೆ, ಭಗವಂತ ಭೂಮಿಗೆ ಇಳಿದಾಗಲೆಲ್ಲಾ ಅವಳು ಜೊತೆಗೆ ಜನಿಸುತ್ತಾಳೆ.