
ಅಮೆರಿಕದ ಪ್ರಸಿದ್ಧ ರಾಪರ್ ಕಾನಿ ವೆಸ್ಟ್ (Ye) ಅವರು ಹಿಂದೂಗಳ ಪವಿತ್ರ ಸ್ವಸ್ತಿಕ ಚಿಹ್ನೆಯನ್ನು ಹಿಟ್ಲರ್‌ನ ಜನಾಂಗಹತ್ಯೆಯ ನಾಜಿ ಸಂಕೇತದೊಂದಿಗೆ ಹೋಲಿಸಿದ್ದಾರೆ. ಈ ಹೇಳಿಕೆಗೆ ಉತ್ತರ ಅಮೆರಿಕಾದ ಹಿಂದೂ ಹಕ್ಕುಗಳ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆ “ಅವಮಾನಕಾರಿ, ಇತಿಹಾಸಕ್ಕೆ ವಿರುದ್ಧ” ಎಂದಿದೆ. ವಿವಾದ ಉಂಟಾಗಿದ್ದು ಹೀಗೆ- ಕಾನಿ ವೆಸ್ಟ್ ಅವರು ತಮ್ಮ ಈ ಹಿಂದಿನ ಯಹೂದಿ ವಿರೋಧಿ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದರು. ಆ ಸಂದರ್ಭದಲ್ಲಿ “ಅತ್ಯಂತ ವಿನಾಶಕಾರಿ ಸಂಕೇತದ ಕಡೆಗೆ ನಾನು ಆಕರ್ಷಿತನಾದೆ” ಎಂದು ಸ್ವಸ್ತಿಕವನ್ನು ಉಲ್ಲೇಖಿಸಿದ್ದರು.
ಸ್ವಸ್ತಿಕ ಚಿಹ್ನೆಯ ಬಗ್ಗೆ ಹಲವು ಪಾಶ್ಯಾತ್ಯರಲ್ಲಿ ಇಂಥದೊಂದು ತಪ್ಪು ಕಲ್ಪನೆ ಇದೆ. ಸ್ವಸ್ತಿಕವು ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಪವಿತ್ರ ಹಾಗೂ ಶುಭ ಸಂಕೇತ. ಸಾವಿರಾರು ವರ್ಷಗಳಿಂದ ಸ್ವಸ್ತಿಕವು ಧಾರ್ಮಿಕ ಪರಂಪರೆಗಳಲ್ಲಿ ಶುಭ, ಸಮೃದ್ಧಿ ಮತ್ತು ಕಲ್ಯಾಣದ ಸಂಕೇತ. ಜಗತ್ತಿನಾದ್ಯಂತ ಸುಮಾರು ಇನ್ನೂರು ಕೋಟಿ ಜನ ಇದನ್ನು ಪವಿತ್ರವೆಂದು ಭಾವಿಸುತ್ತಾರೆ. ಯಹೂದಿಗಳ ಹತ್ಯೆಯ ಸಂದರ್ಭದಲ್ಲಿ ಹಿಟ್ಲರ್ ನೇತೃತ್ವದಲ್ಲಿ ಜರ್ಮನ್ನರು ಬಳಸಿದ್ದ ಚಿಹ್ನೆ ಸ್ವಸ್ತಿಕವಲ್ಲ. ಅಡೋಲ್ಫ್ ಹಿಟ್ಲರ್ ತನ್ನ ಚಿಹ್ನೆಯನ್ನು “ಸ್ವಸ್ತಿಕ” ಎಂದು ಕರೆಯಲೇ ಇಲ್ಲ. ನಾಜಿಗಳು ಬಳಸಿದ ಚಿಹ್ನೆಯನ್ನು ಹಾಕೆನ್‌ಕ್ರಾಯ್ಸ್ (Hakenkreuz) ಅಂದರೆ “ಹುಕ್ ಕ್ರಾಸ್” ಎಂದು ಕರೆಯಲಾಗುತ್ತಿತ್ತು.
ಸ್ವಸ್ತಿಕ ಮತ್ತು ನಾಜಿ ಸಂಕೇತಗಳ ನಡುವಿನ ಗೊಂದಲಕ್ಕೆ ಇತಿಹಾಸದಲ್ಲೇ ಬೇರುಗಳಿವೆ. 20ನೇ ಶತಮಾನದ ಆರಂಭದಲ್ಲಿ, ಇಂಗ್ಲಿಷ್ ಮಾಧ್ಯಮಗಳು ನಾಜಿ ಚಿಹ್ನೆ “ಹಾಕೆನ್‌ಕ್ರಾಯ್ಸ್” ಅನ್ನು ಸರಳವಾಗಿ “ಸ್ವಸ್ತಿಕ” ಎಂದು ಅನುವಾದಿಸತೊಡಗಿದವು. ಎರಡನೇ ಮಹಾಯುದ್ಧದ ನಂತರ ಈ ತಪ್ಪು ಪದಪ್ರಯೋಗವೇ ರೂಢಿಯಾಗಿ ಬಿಟ್ಟಿತು.
ಆದರೆ ವಾಸ್ತವದಲ್ಲಿ, ಸ್ವಸ್ತಿಕವು ನಾಜಿಗಳಿಗಿಂತ ಸಾವಿರಾರು ವರ್ಷಗಳ ಹಿಂದಿನದು. ಇದು ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಶುಭ, ನಿರಂತರತೆ ಮತ್ತು ಜೀವನದ ಚಕ್ರವನ್ನು ಸೂಚಿಸುವ ಸಂಕೇತವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಉತ್ತರ ಅಮೆರಿಕಾದ ಹಲವು ಶಾಸನಸಭೆಗಳು ನಾಜಿ ಹಾಕೆನ್‌ಕ್ರಾಯ್ಸ್ ಮತ್ತು ಧಾರ್ಮಿಕ ಸ್ವಸ್ತಿಕ ನಡುವಿನ ವ್ಯತ್ಯಾಸವನ್ನು ಅಧಿಕೃತವಾಗಿ ಗುರುತಿಸಿವೆ.
ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ, ಸ್ವಸ್ತಿಕ ಸಂಕೇತವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ನಾವು ಈ ಚಿಹ್ನೆಯನ್ನು ಕಾಣಬಹುದು. ಈ ಸ್ವಸ್ತಿಕ ಚಿಹ್ನೆಯನ್ನು ಗಣೇಶನ ರೂಪ ಎಂದು ಹೇಳಲಾಗುತ್ತದೆ. ಈ ಶುಭ ಚಿಹ್ನೆಯು ಆರ್ಯರಿಂದ ಹುಟ್ಟಿಕೊಂಡಿತು. ಜ್ಯೋತಿಷ್ಯ ಮತ್ತು ಹಿಂದೂ ಧರ್ಮದಲ್ಲೂ ಸ್ವಸ್ತಿಕ ಚಿಹ್ನೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಹೆಚ್ಚಾಗಿ ಸ್ವಸ್ತಿಕ ಚಿಹ್ನೆಯನ್ನು ಮನೆಯ ದೇವರ ಕೋಣೆಯಲ್ಲಿ ನೋಡಬಹುದು. ದೇವರ ಕೋಣೆಯಲ್ಲಿ ಸ್ವಸ್ತಿಕ ಚಿಹ್ನೆ ಹಾಕುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ದೇವರ ಕೋಣೆಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿ ಹಾಗೇ ಇಡಬಾರದು. ಬದಲಾಗಿ ದೇವರ ಕೋಣೆಯಲ್ಲಿ ಬಿಡಿಸಿದ ಸ್ವಸ್ತಿಕ ಚಿಹ್ನೆಯ ಮೇಲೆ ದೇವರ ವಿಗ್ರಹವನ್ನು ಸ್ಥಾಪಿಸಬೇಕು. ಮತ್ತು ಆ ವಿಗ್ರಹವನ್ನು ಪ್ರತಿದಿನ ಪೂಜಿಸಬೇಕು. ಇದರಿಂದ ಆ ಮನೆಯಲ್ಲಿ ಎಂದಿಗೂ ಶಾಂತಿ, ಸಂತೋಷ, ನೆಮ್ಮದಿ ಮತ್ತು ಸಮೃದ್ಧಿಗೆ ಕೊರತೆಯಿರುವುದಿಲ್ಲ.
ಮನೆಯ ಮುಖ್ಯ ಹೊಸ್ತಿಲಿನಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕುವ ಮೂಲಕ ಮನೆಯ ಹೊಸ್ತಿಲನ್ನು ಪೂಜಿಸಲಾಗುತ್ತದೆ. ಹೊಸ್ತಿಲಿನ ಮೇಲೆ ಸ್ವಸ್ತಿಕ ಹಾಕುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ವಾಸಿಸುತ್ತಾಳೆ ಎನ್ನುವ ನಂಬಿಕೆಯಿದೆ. ನಿಮ್ಮ ಹಣವನ್ನು ನೀವು ಇಟ್ಟುಕೊಳ್ಳುವ ವಾರ್ಡ್ರೋಬ್, ತಿಜೋರಿ ಅಥವಾ ಹಣವನ್ನು ಇಟ್ಟುಕೊಳ್ಳುವ ಯಾವುದೇ ಸ್ಥಳದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಮಾಡಬೇಕು. ಇದು ಸಮೃದ್ಧಿಯನ್ನು ತರುವುದು ಮಾತ್ರವಲ್ಲ, ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.
ಅಂಗಳದ ಮಧ್ಯದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕುವುದರ ಮೂಲಕ ಶುಭ ಫಲಿತಾಂಶಗಳನ್ನು ಸಹ ಪಡೆಯಬಹುದು ಎಂದು ಹೇಳಲಾಗುತ್ತದೆ. ಇದರಿಂದ ಪೂರ್ವಜರ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಇದರಿಂದ ಆ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುತ್ತದೆ. ಹಾಗೂ ಮನೆಯಲ್ಲಿನ ಋಣಾತ್ಮಕ ಶಕ್ತಿಗಳು ದೂರಾಗುತ್ತದೆ. ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಸ್ತಿಕ ಚಿಹ್ನೆಗಳನ್ನು ಹಾಕಬೇಕು. ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಮನೆಯಲ್ಲಿ ವಾಸ್ತು ದೋಷಗಳನ್ನು ತೊಡೆದುಹಾಕುತ್ತದೆ. ಮುಖ್ಯವಾಗಿ ಸ್ವಸ್ತಿಕವನ್ನು ಸಿಂಧೂರದಿಂದ ಹಾಕಿದರೆ ಶುಭದಾಯಕ.