ಸಂಬಂಧಗಳ ವಿಷಯಕ್ಕೆ ಬಂದರೆ ನಿಮ್ಮ ರಾಶಿ, ನಕ್ಷತ್ರಗಳು ಲವ್ ಲೈಫ್ ಕುರಿತು ಹಲವಷ್ಟನ್ನು ಹೇಳಬಲ್ಲವು.
ಪ್ರೀತಿಯಲ್ಲಿ ಬೀಳುವುದು ಹಾಗೂ ಪ್ರೀತಿಯಿಂದ ಹೊರ ಬೀಳುವುದು- ಎರಡೂ ಜೀವನಪರ್ಯಂತ ಮರೆಯಲಾಗದ ಅನುಭವಗಳೇ. ಆ ಎಮೋಶನ್‌ಗಳ ಆಳಅಗಲವನ್ನು ಬಾಯಿ ಮಾತಲ್ಲಿ ವಿವರಿಸಲು ಸಾಧ್ಯವಿಲ್ಲ. ಬೇರಾವುದೇ ಫೀಲಿಂಗ್ ಕೂಡಾ ಅದನ್ನು ರಿಪ್ಲೇಸ್ ಮಾಡಲಾರದು. ಆದರೆ, ಕೆಲವರು ಸಿಂಗಲ್ ಆಗಿರಲು ನಿರ್ಧರಿಸಬಹುದು. ಈ ಕೆಲವರ ಹೊರತಾಗಿ ಬಹುತೇಕರು ಇತರೆ ಕಾರಣಗಳಿಂದ ಅನಿವಾರ್ಯವಾಗಿ ಪ್ರೀತಿಯಿಂದ ದೂರವುಳಿಯುತ್ತಾರೆ. ಇದರಲ್ಲಿ ರಾಶಿನಕ್ಷತ್ರಗಳ ಪಾಲೂ ಇರುತ್ತದೆ. ನೀವು ಪ್ರೀತಿಯಲ್ಲಿ ಬೀಳಲು ಹೆದರುವುದಕ್ಕೆ, ಪ್ರೇಮಿಯಿಂದ ದೂರರವಾಗಲು ಬಯಸುವುದರ ಹಿಂದೆಯೂ ಈ ಜಾತಕ ಜಗತ್ತಿನ ಕೈವಾಡವಿರಬಹುದು. ನಿಮ್ಮ ರಾಶಿ ಪ್ರಕಾರ, ನಿಮ್ಮನ್ನು ಪ್ರೀತಿಯಿಂದ ದೂರವಿಡುತ್ತಿರುವುದೇನು ನೋಡೋಣ.
ಮೇಷ
ನಿಮ್ಮ ಸ್ವಭಾವವೇ ಹಾಗೆ, ಬಹಳ ಬೇಗ ಪ್ರೀತಿಯಲ್ಲಿ ಬೀಳುತ್ತೀರಿ, ಅಷ್ಟೇ ಬೇಗ ಹೊರಗೂ ಬರುತ್ತೀರಿ. ಇದರಿಂದ ಕೆಲವೊಮ್ಮೆ ನೋವನ್ನನುಭವಿಸುತ್ತೀರಿ. ಹಿಂದೆ ನೀವು ತೆಗೆದುಕೊಂಡ ತಪ್ಪು ನಿರ್ಧಾರಗಳು ಈಗ ಮತ್ತೆ ಪ್ರೀತಿಗೆ ಬೀಳಬೇಕೆಂದರೆ ಎರಡೆರಡು ಬಾರಿ ಯೋಚಿಸುವಂತೆ ಮಾಡುತ್ತವೆ. ನೀವು ಪ್ರೀತಿಯನ್ನು ಎಷ್ಟು ಬಯಸುತ್ತೀರೋ, ಅತಿಯಾಗಿ ಹಚ್ಚಿಕೊಳ್ಳುವುದರ ಕುರಿತು, ಕಮಿಟ್‌ಮೆಂಟ್ ಹೆಚ್ಚು ಕಾಲ ಉಳಿಯದಿದ್ದರೆ ಎಂಬ ಭಯವನ್ನೂ ಅಷ್ಟೇ ಅನುಭವಿಸುತ್ತೀರಿ.
undefined
ವೃಷಭ
ನೀವೊಂಥರ ಹಟಮಾರಿ ಎತ್ತು. ನಿಮಗೆ ಬದಲಾವಣೆ ಬೇಡ. ನಿಮ್ಮ ಕಂಫರ್ಟ್ ಝೋನ್ ಬಿಟ್ಟು ಬರಲು ಬಯಸುವುದಿಲ್ಲ. ಪ್ರೀತಿಗೆ ಬೀಳಲು ಆಸೆ, ಆದರೆ, ಮತ್ತೊಬ್ಬರು ಜೀವನದಲ್ಲಿ ಬರುತ್ತಿದ್ದಂತೆ ಅದರಿಂದ ಬದುಕಿನಲ್ಲಿ ಹಲವಷ್ಟನ್ನು ಬದಲಿಸಿಕೊಳ್ಳಬೇಕಾದ ಅಗತ್ಯದ ಯೋಚನೆಯೇ ನಿಮ್ಮನ್ನು ತಡೆಯುತ್ತದೆ. ಪ್ರೀತಿಗೆ ಬಿದ್ದರೆ ನಿಮ್ಮ ಲೈಫ್‌ಸ್ಟೈಲ್ ಬದಲಿಸಿಕೊಳ್ಳಬೇಕಾಗುತ್ತದೆ ಎಂಬುದು ನಿಮ್ಮ ಭಯ.
ಮಿಥುನ
ನಿಮ್ಮ ಮನಸ್ಸು ಸದಾ ಒಂದರಿಂದ ಮತ್ತೊಂದರತ್ತ ಹಾರುತ್ತಲೇ ಇರುತ್ತದೆ. ಕುತೂಹಲ ಹೆಚ್ಚಿರುವ ನೀವು ಸದಾ ಹೊಸತನ್ನು ಹುಡುಕುವುದರಲ್ಲಿರುತ್ತೀರಿ. ಸಂಬಂಧದ ವಿಷಯಕ್ಕೆ ಬಂದಾಗಲೂ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗುವ ಯೋಚನೆ ನಿಮ್ಮನ್ನು ಕಂಗೆಡಿಸುತ್ತದೆ. ನಿಮ್ಮ ಆಯ್ಕೆಗಳು ಓಪನ್ ಇರಬೇಕು ಎಂದು ಬಯಸುವವರು ನೀವು.
ಕಟಕ
ಇವರು ನಿಜವಾದ ರಸಿಕರು. ನೀವು ಪ್ರೀತಿಸುವವರೊಂದಿಗೆ ಹೇಗೆ ಕಮಿಟ್ ಆಗಬೇಕು, ಹೇಗೆ ಪ್ರೀತಿ ಹೇಳಿಕೊಳ್ಳಬೇಕು ಎಲ್ಲವೂ ನಿಮಗೆ ಗೊತ್ತು. ಆದರೆ, ಹೀಗೆ ನಿಮ್ಮ ಪ್ರೀತಿಯನ್ನು ಧಾರೆಯೆರೆದು ಕೊಟ್ಟು ಅನುಭವಿಸಿದ ಹಳೆಯ ನೋವುಗಳು ಮಾಯುತ್ತಿಲ್ಲ. ಪ್ರೀತಿ ಬೇಕೆಂದರೂ, ಮತ್ತೆ ನೋವಾಗುವ ಭಯ ನಿಮ್ಮದು.
ಸಿಂಹ
ನಿಮಗೆ ಪ್ರೀತಿಯಲ್ಲಿರುವುದೂ ಇಷ್ಟ, ನಿಮ್ಮೆಲ್ಲ ಪ್ರೀತಿಯನ್ನು ಸಂಗಾತಿಗೆ ತಲುಪಿಸುವುದೂ ಇಷ್ಟ. ಆದರೆ, ಕಳೆದುಕೊಳ್ಳುವ ಭಯವೊಂದು ಸದಾ ನಿಮ್ಮೊಂದಿಗಿದ್ದು ಹೆದರಿಸುತ್ತದೆ. ಪ್ರೀತಿಯನ್ನು ಮೊಗೆದು ಮೊಗೆದು ಕೊಡುವ ನಿಮಗೆ ಅದೇ ಮಟ್ಟದಲ್ಲಿ ಪ್ರೀತಿ ಮರಳಿ ಸಿಗುವುದಿಲ್ಲ ಎಂಬ ಚಿಂತೆಯೂ ಬಾಧಿಸುತ್ತದೆ.
ಕನ್ಯಾ
ಜೀವನದಲ್ಲಿ ಎಲ್ಲವೂ ಪಕ್ಕಾ ಪರ್ಫೆಕ್ಟ್ ಆಗಿರಬೇಕೆಂದು ಬಯಸುವವರು ನೀವು. ಯಾವುದೂ ನಿಮ್ಮ ಕಣ್ಣು ತಪ್ಪಿಸಿ ಹೋಗಲು ಸಾಧ್ಯವಿಲ್ಲ. ನಿರೀಕ್ಷೆ ಹುಸಿಯಾಗುವುದು ನಿಮಗೆಂದಿಗೂ ಇಷ್ಟವಾಗಲ್ಲ. ಸಂಬಂಧದಲ್ಲಿಯೂ ಹಾಗೆಯೇ, ಎಲ್ಲವೂ ಪರ್ಫೆಕ್ಟ್ ಆಗರಬೇಕೆಂದುಕೊಳ್ಳುತ್ತೀರಿ, ಹಾಗಿರುವುದು ಸಾಧ್ಯವಿಲ್ಲವಾದ್ದರಿಂದ ನಿಮಗೆ ನಿರಾಶೆಯಾಗುವುದೇ ಹೆಚ್ಚು. ಹಾಗಾಗಿ, ನಿಮ್ಮ ನಿರೀಕ್ಷೆಗಳಿಗೆ ಮ್ಯಾಚ್ ಮಾಡುವವರು ಸಿಗುವುದು ಕಷ್ಟವಾದ್ದರಿಂದ ಪ್ರೀತಿಯಲ್ಲಿ ಬೀಳುವುದು ನಿಮಗೆ ಕಷ್ಟವಾಗುತ್ತದೆ.
ತುಲಾ
ನಿಮಗೆ ಪ್ರೀತಿಯಲ್ಲಿರುವುದು ಇಷ್ಟ. ನೀವು ಕಮಿಟ್ ಆಗಲು ಅಥವಾ ಪ್ರಾಮಿಸ್ ಮಾಡಲು ಹೆದರುವವರಲ್ಲ. ಆದರೆ, ನಿಜವಾದ ಪ್ರೀತಿ ಸಿಗದಿರುವ ಯೋಚನೆ ನಿಮ್ಮನ್ನು ಕಂಗೆಡಿಸುತ್ತದೆ. ಹಾಗಾಗಿ, ಸರಿಯಾಗಿ ನಿರ್ಧರಿಸಲಾಗದ ನಿಮ್ಮ ಮನಸ್ಥಿತಿಯಲ್ಲೇ ತಪ್ಪಾದ ಸಂಬಂಧ ಕಟ್ಟಿಕೊಂಡು ನೋವನುಭವಿಸುತ್ತೀರಿ.
ವೃಶ್ಚಿಕ
ನಿಮ್ಮದು ಸ್ವಭಾವತಃ ಅನುಮಾನದ ಗುಣವಾಗಿರುವುದರಿಂದ ಪ್ರೀತಿಯ ವಿಷಯದಲ್ಲೂ ಮುಂದೆ ಹೋಗಲಾರಿರಿ. ಪ್ರೀತಿಯನ್ನೇನೂ ಸಿಕ್ಕಾಪಟ್ಟೆ ಬಯಸುತ್ತೀರಿ, ಆದರೆ ನಿಮ್ಮ ಅನುಮಾನದ ಗುಣ ನಿಮಗೆ ನೆಮ್ಮದಿಯಾಗಿ ನಿದ್ರೆ ಮಾಡಲು ಬಿಡದು. ಮೋಸಕ್ಕೊಳಗಾಗುವ ಭಯದಿಂದ ಪ್ರೀತಿಯಲ್ಲಿ ಬೀಳಲು ಹೆದರುತ್ತೀರಿ.
ಧನು
ಸಾಹಸ ನಿಮ್ಮ ರಕ್ತದಲ್ಲೇ ಇದೆ. ಪ್ರೀತಿಯೇನೋ ಬೇಕು, ಆದರೆ, ಅದರೊಂದಿಗೆ ಬರುವ ಜವಾಬ್ದಾರಿಗಳು ಬೇಡ ಎನ್ನುವವರು ನೀವು. ಹಾಗಾಗಿ, ಪ್ರೀತಿಗೆ ಬೀಳುವುದನ್ನು ಮುಂದೂಡುತ್ತಾ ಹೋಗುತ್ತೀರಿ.
ಮಕರ
ನೀವು ಹಾಗೂ ನಿಮ್ಮ ಪ್ರೀತಿಯ ಹುಡುಕಾಟದ ನಡುವೆ ಬರುವುದು ನಿಮ್ಮ ಪ್ರಾಕ್ಟಿಕಲ್ ಯೋಚನೆಗಳು ಹಾಗೂ ಬದುಕು. ಪ್ರೀತಿ ನಿಮ್ಮನ್ನು ಎಷ್ಟೇ ಆಕರ್ಷಿಸಿದರೂ ಯಾವುದನ್ನೂ ಊಹಿಸಲಾಗದ, ಇದು ಹೀಗೆಯೇ ಇರುತ್ತದೆ ಎನ್ನಲಾಗದ ಪ್ರೀತಿಯ ರೀತಿಯ ಬಗ್ಗೆಯೂ ನಿಮಗೆ ಅರಿವಿದೆ. ಹಾಗಾಗಿ, ನಿಮ್ಮನ್ನು ನೀವೇ ಪ್ರೀತಿಗೆ ಬೀಳುವುದರಿಂದ ಹಿಂದೆ ಎಳೆಯುತ್ತೀರಿ.
ಕುಂಭ
ನಿಮ್ಮ ಸ್ವಾತಂತ್ರ್ಯಪ್ರೀತಿ ಹಾಗೂ ಸಿಂಗಲ್ ಆಗಿರುವ ಸ್ವಾರಸ್ಯದ ಅರಿವು ಎರಡೂ ನಿಮ್ಮನ್ನು ಪ್ರೀತಿಗೆ ಬೀಳದಂತೆ ತಡೆಯುತ್ತವೆ. ಪ್ರೀತಿ ಬೇಕು ನಿಜ, ಆದರೆ ಅದಕ್ಕಾಗಿ ನಿಮ್ಮ ಸ್ವಾತಂತ್ರ್ಯವನ್ನು ಬಿಟ್ಟುಕೊಡಲು ನೀವು ಸರ್ವತಾ ಸಿದ್ಧರಿಲ್ಲ. ಸಂಬಂಧಕ್ಕೆ ಬಿದ್ದ ಮೇಲೆ ಹೀಗೆ ಸಂಪೂರ್ಣ ಸ್ವಾತಂತ್ರ್ಯವೆನ್ನುವುದು ಮರೀಚಿಕೆಯೇ. ಅದೇ ಭಯಕ್ಕೆ ಹೊಸ ಸಂಬಂಧವೊಂದರ ಒಳಗೆ ಕಾಲಿಡಲು ಹಿಂಜರಿಯುತ್ತೀರಿ.
ಮೀನ
ನಿಮ್ಮದು ಕೊಡುವ ಗುಣ. ಎಲ್ಲವನ್ನೂ ಕೊಟ್ಟು, ಬದಲಿಗೆ ಏನನ್ನೂ ನಿರೀಕ್ಷಿಸದವರು ನೀವು. ನಿಮ್ಮ ಈ ಗುಣದಿಂದಲೇ ಆಗಾಗ ಕೆಲವರು ನಿಮ್ಮ ಅಡ್ವಾಂಟೇಜ್ ತೆಗೆದುಕೊಳ್ಳುತ್ತಾರೆ. ಇದರಿಂದ ನೋವು ಅನುಭವಿಸುತ್ತಾ ಕೂರುತ್ತೀರಿ. ಸಂಬಂಧದಲ್ಲಿಯೂ ಈ ಹಿಂದೆ ನಿಮ್ಮಿಂದ ಎಲ್ಲವನ್ನೂ ಪಡೆದು ನಿಮಗೇನೂ ಕೊಡದ ಅನುಭವ ನಿಮಗಿದೆ. ಅದೇ ಕಾರಣಕ್ಕೆ ಮತ್ತೆ ಪ್ರೀತಿಯಲ್ಲಿ ಬೀಳದಂತೆ ಮನಸ್ಸು ಎಚ್ಚರಿಸುತ್ತಿದೆ.