Tirumala Pushpayagam Seva: ಒಂದೇ ದಿನ ಎರಡೆರಡು ಬಾರಿ ತಿರುಮಲ ತಿಮ್ಮಪ್ಪನ ದರ್ಶನ ಪಡೆದುಕೊಳ್ಳಿ; ಹೀಗೆ ಮಾಡಿದರೆ ಸಾಕು!

Published : Aug 08, 2026, 10:45 AM IST
tirumala pushpayagam

ಸಾರಾಂಶ

ತಿರುಮಲ ಶ್ರೀವಾರಿ ವಾರ್ಷಿಕ ಪುಷ್ಪಯಾಗ ಸೇವೆಗೆ ಸಂಬಂಧಿಸಿದ 2026ನೇ ಸಾಲಿನ ಟಿಕೆಟ್ಗಳು ಇದೇ ತಿಂಗಳ 21ರಂದು ಬಿಡುಗಡೆಯಾಗಲಿದೆ. ನವೆಂಬರ್ 16ರಂದು ನಡೆಯಲಿರುವ ಪ್ರತ್ಯೇಕ ಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಎರಡು ಬಾರಿ ಶ್ರೀವಾರಿ ದರ್ಶನ ಸಿಗುವುದು ವಿಶೇಷ ಸಂಗತಿಯಾಗಿದೆ.

ತಿರುಮಲ ಶ್ರೀವೆಂಕಟೇಶ್ವರನ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಶುಭ ಸುದ್ದಿಯನ್ನು ನೀಡಿದೆ. ಈ ವರ್ಷದ ಪುಷ್ಪಯಾಗ ಸೇವಾ ಟಿಕೆಟ್‌ಗಳನ್ನು ಆಗಸ್ಟ್ 21ರ ಬೆಳಗ್ಗೆ 10 ಗಂಟೆಗೆ ಆನ್ಲೈನ್ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಘೋಷಣೆ ಮಾಡಿದೆ. ಪುಷ್ಪಯಾಗ ಸೇವೆ ನವೆಂಬರ್ 16ನೇ ತಾರೀಕು ತಿರುಮಲ ಶ್ರೀವಾರಿ ಆಲಯದಲ್ಲಿ ನಡೆಯಲಿದೆ. ಇದಕ್ಕೆ ಒಂದು ದಿನ ಮುನ್ನ ಅಂದರೆ ನವೆಂಬರ್ 15ರಂದು ಅಂಕುರಾರ್ಪಣ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ವಾರ್ಷಿಕ ಬ್ರಹ್ಮೋತ್ಸವ ಬಳಿಕ ಶ್ರೀವಾರಿ ಜನ್ಮನಕ್ಷತ್ರವಾಗಿರುವ ಶ್ರವಣ ನಕ್ಷತ್ರದ ಸಂದರ್ಭದಲ್ಲಿ ಪುಷ್ಪಯಾಗವನ್ನು ನಿರ್ವಹಿಸುವುದು ಸಂಪ್ರದಾಯವಾಗಿದೆ. ಶಾಸ್ತ್ರೋಸ್ತವವಾಗಿ ನಡೆಯಲಿರುವ ಪುಷ್ಪಯಾಗ ಸೇವೆ ಮೂಲಕ ಪ್ರಕೃತಿ ವೈಪರೀತ್ಯ, ಸಾಂಕ್ರಾಮಿಕ ರೋಗಗಳು ದೂರವಾಗಿ ಸಮಸ್ತ ಜೀವರಾಶಿಗಳ ಶ್ರೇಯಸ್ಸಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಪುಷ್ಪಯಾಗ ಸೇವೆ ಓರ್ವ ಭಕ್ತನಿಗೆ 700 ರೂಪಾಯಿ ಟಿಕೆಟ್ ದರವನ್ನು ಟಿಟಿಡಿ ನಿಗದಿ ಮಾಡಿದೆ. ಒಟ್ಟಾರೆ ಈ ಯಾಗದಲ್ಲಿ ಸುಮಾರು ಸಾವಿರ ಮಂದಿ ಭಕ್ತರಿಗೆ ಭಾಗವಹಿಸಲು ಮಾತ್ರ ಅವಕಾಶ ನೀಡಲಾಗಿದೆ. ಈ ಟಿಕೆಟ್‌ಗಳು ಆನ್‌ಲೈನ್ ನಲ್ಲಿ ಮಾತ್ರ ಲಭ್ಯವಾಗುತ್ತದೆ. ತಿರುಮಲ ಅಥವಾ ತಿರುಪತಿಯಲ್ಲಿ ಆಫ್ ಲೈನ್ನಲ್ಲಿ ಟಿಕೆಟ್ ಗಳ ಮಾರಾಟ ನಡೆಯುವುದಿಲ್ಲ. ಒಂದು ಮೊಬೈಲ್ ಸಂಖ್ಯೆಗೆ ಎರಡು ಟಿಕೆಟ್ ಬುಕ್ ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ದಂಪತಿಗಳು, ಪೋಷಕರು, ಮಕ್ಕಳು, ಸಹೋದರರು ಒಟ್ಟಿಗೆ ಈ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಬಹುದು. 12 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆದರೆ 12 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿ ಭಕ್ತರಿಗೂ ಆಧಾರ್ ಅಥವಾ ಬೇರೆ ಯಾವುದೇ ಗುರುತಿನ ಚೀಟಿ ತಪ್ಪದೇ ಸಲ್ಲಿಸಲು ಸೂಚನೆ ನೀಡಲಾಗಿದೆ.

ಒಂದೇ ದಿನ ಎರಡು ಬಾರಿ ದರ್ಶನ

ಈ ಪುಷ್ಪಯಾಗ ಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಒಂದೇ ದಿನ ಎರಡು ಬಾರಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುವ ವಿಶೇಷ ಅವಕಾಶವಿದೆ. ಬೆಳಗ್ಗೆ ಸೇವೆಗಳಿಗೆ ಹಾಜರಾದ ಸಂದರ್ಭದಲ್ಲಿ ಒಮ್ಮೆ ದರ್ಶನ, ಪುಷ್ಪಯಾಗ ಸೇವೆ ಮುಕ್ತಾಯವಾದ ಬಳಿಕ ಮತ್ತೊಮ್ಮೆ ದರ್ಶನ ಪಡೆದುಕೊಳ್ಳುವ ಅವಕಾಶ ಲಭ್ಯವಾಗಲಿದೆ. ಈ ಎರಡು ದರ್ಶನಗಳು ಕೂಡ ತಿರುಮಲ ದೇಗುಲದ ಜಯ-ವಿಜಯ ದ್ವಾರ ಮೂಲಕ ಪಡೆದುಕೊಳ್ಳಬಹುದಾಗಿದೆ.

ಈ ಪುಷ್ಪಯಾಗದ ಸೇವಾ ಟಿಕೆಟ್ ಬುಕ್ ಮಾಡಿಕೊಳ್ಳುವ ಭಕ್ತರಿಗೆ ಒಂದು ನಿಯಮ ಅನ್ವಯ ಆಗಲಿದ್ದು, ಈ ವರ್ಷ ನವೆಂಬರ್ 16ರ ದಿನಾಂಕಕ್ಕೂ ಮುನ್ನ ಅಂದರೆ 180 ದಿನಗಳ ಒಳಗೆ ಯಾವುದೇ ಆರ್ಜಿತ ಸೇವೆಯಲ್ಲಿ ಭಕ್ತರು ಪಾಲ್ಗೊಂಡಿದ್ದರೆ ಅಂತಹ ಭಕ್ತರಿಗೆ ಈ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಇರೋದಿಲ್ಲ ಎಂದು ಟಿಟಿಡಿ ನಿಯಮ ರೂಪಿಸಿದೆ. ಕಲ್ಯಾಣೋತ್ಸವ, ಉಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕಾರ, ವಸಂತೋತ್ಸವ, ಪವಿತ್ರೋತ್ಸವದಂತಹ ಅರ್ಜಿತ ಸೇವೆಗಳಲ್ಲಿ ಪಾಲ್ಗೊಂಡಿರುವ ಭಕ್ತರಿಗೆ ಇಲ್ಲಿ ಅವಕಾಶ ಇರೋದಿಲ್ಲ.

ಆದರೆ 300 ಟಿಕೆಟ್ ಪಡೆದುಕೊಂಡು ದರ್ಶನ ಪಡೆದುಕೊಂಡವರಿಗೆ, ವರ್ಚುವಲ್ ಸೇವೆಗಳು ಅಥವಾ ಲಕ್ಕಿ ಡಿಪ್ ಮೂಲಕ ವಿವಿಧ ಸೇವೆಗಳಲ್ಲಿ ಪಾಲ್ಗೊಂಡ ಭಕ್ತರಿಗೆ ಈ ನಿಯಮ ಅನ್ವಯ ಆಗೋದಿಲ್ಲ. ಈ 180 ದಿನಗಳ ಅವಧಿ ಟಿಕೆಟ್ ಬುಕ್ ಮಾಡಿಕೊಂಡ ದಿನದಿಂದ ಅನ್ವಯ ಆಗೋದಿಲ್ಲ, ಸೇವೆಯಲ್ಲಿ ಪಾಲ್ಗೊಂಡ ದಿನದಿಂದ ಈ ನಿಯಮ ಅನ್ವಯ ಆಗಲಿದೆ.

ಆಗಸ್ಟ್ 21ರ ಬೆಳಗ್ಗೆ 10 ಗಂಟೆಗೆ ಟಿಕೆಟ್ ಬಿಡುಗಡೆ ಮುನ್ನ ಟಿಟಿಡಿ ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ ನಲ್ಲಿ ಲಾಗ್ ಇನ್ ಆಗಿ ಭಕ್ತರು ಸಿದ್ಧರಾಗಿರಬೇಕು. ಸೀಮಿತ ಸಂಖ್ಯೆಯಲ್ಲಿ ಮಾತ್ರ ಟಿಕೆಟ್ ಗಳು ಲಭ್ಯವಾಗಿದ್ದು, ಟಿಕೆಟ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟಿಕೆಟ್ಗಳು ಮಾರಾಟವಾಗುತ್ತದೆ. ಪುಷ್ಪಯಾಗ ಸೇವೆಯಲ್ಲಿ ವೇದಮಂತ್ರಗಳು, ಸುಗಂಧ ಭರಿತವಾದ ಪುಷ್ಪಗಳೊಂದಿಗೆ ಶ್ರೀವಾರಿಗೆ ನಡೆಯುವ ವಿಶೇಷ ಸೇವೆಯಲ್ಲಿ ಪಾಲ್ಗೊಂಡು ವೀಕ್ಷಿಸುವ ಅವಕಾಶ ಭಕ್ತರಿಗೆ ಲಭ್ಯವಾಗಲಿದೆ. ಒಂದೇ ದಿನ ಎರಡು ಬಾರಿ ಶ್ರೀವಾರಿ ದರ್ಶನ ಪಡೆದುಕೊಳ್ಳುವ ವಿಶೇಷ ಅವಕಾಶವನ್ನು ಭಕ್ತರು ಮಿಸ್ ಮಾಡಿಕೊಳ್ಳದೆ, ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

PREV
Read more Articles on
click me!

Recommended Stories

ದ್ವಿರ್ದ್ವಾದಶ ದೃಷ್ಟಿ ಯೋಗ; 30 ಡಿಗ್ರಿ ಅಂತರದಲ್ಲಿ ಬುಧ-ಮಂಗಳ, 4 ರಾಶಿಗೆ ಅದೃಷ್ಟ
ಆಗಸ್ಟ್ 8 ರ ಜಾತಕ: ಈ 4 ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಅನುಕೂಲಕರವಾಗಿರುತ್ತದೆ, ಆರ್ಥಿಕ ಲಾಭದಿಂದ ಗೌರವ