ಎಲ್ಲರಲ್ಲಿಯೂ ದೇವರನ್ನು ಕಾಣುವವ ನೈಜ ಧರ್ಮೀಯ: ವಿವೇಕಾನಂದ

First Published Jul 4, 2018, 2:04 PM IST
Highlights

'ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ...' ಎಂಬ ಗಾದೆಯಿದೆ. ಮನುಷ್ಯ ಬಾಯಲ್ಲಿ ಹೇಳುವುದೊಂದು, ನಡೆದುಕೊಳ್ಳುವುದು ಮತ್ತೊಂದು ರೀತಿಯಾದರೆ ಯಾವುದೇ ಅರ್ಥವೂ ಇರುವುದಿಲ್ಲ. ತಾನು ಏನು ಹೇಳುತ್ತಾನೋ, ಅಂತೆಯೇ ಬದುಕಿದರೆ ಅದು ಧರ್ಮವಾಗುತ್ತದೆ... ಶ್ರೀ ಸ್ವಾಮಿ ವಿವೇಕಾನಂದ ಅವರ ನಿಲುವೂ ಆಗಿತ್ತು. ಅವರ ಪುಣ್ಯ ತಿಥಿ ಅಂಗವಾಗಿ ಧರ್ಮದ ಬಗ್ಗೆ ಸ್ವಾಮಿ ಸಾರಿದ ಕೆಲವು ಸಂದೇಶಗಳು ತುಣುಕು ಇಲ್ಲಿವೆ..

'ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..' ಎಂದು ಸತ್ತಂತೆ ಮಲಗಿದ್ದವರನ್ನು ಎಚ್ಚರಿಸಿದ ಸ್ವಾಮಿ ವಿವೇಕಾನಂದ ಅವರು ಸದಾ ಕಾಲಕ್ಕೂ ಸಲ್ಲುವವರು. ಮನದ ಸೋಂಬೇರಿತನವನ್ನು ಬಡಿದೆಚ್ಚರಿಸುವ ಅವರ ನುಡಿಮುತ್ತುಗಳು ಸದಾ ಕಾಲಕ್ಕೂ ಸ್ಫೂರ್ತಿ ನೀಡವಂಥದ್ದು. ಜುಲೈ 4ಕ್ಕೆ ನಮ್ಮ ದೇಶದ ಈ ಮಹಾನುಭವ ಕೊನೆಯುಸಿರೆಳೆದು 114 ವರ್ಷಗಳು ಸಂದಿವೆ.  ದೇಶದ ಅತ್ಯಂತ ಪ್ರಭಾವಿ ಅಧ್ಯಾತ್ಮಿಕ ಚಿಂತಕರಾಗಿದ್ದ ವಿವೇಕಾನಂದ ಅವರು ತಮ್ಮ ಭಾಷಣದ ಮೂಲಕ ಧಾರ್ಮಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾದವರು. ವೇದಾಂತದ ತತ್ವಗಳ ಮೂಲಕ ದೌರ್ಜನ್ಯಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದರು.

ನರೇಂದ್ರ ನಾಥ್ ದತ್ತಾ ಎಂಬ ಹೆಸರಿನ ಸ್ವಾಮಿ ವಿವೇಕಾನಂದ ಜನವರಿ 12, 1963ರಂದು ಕೋಲ್ಕತ್ತಾದಲ್ಲ ಜನಿಸಿದವರು. ಪಾಶ್ಚಾತ್ಯ ತತ್ವಜ್ಞಾನ ಮತ್ತು ಇತಿಹಾಸದಲ್ಲಿ ಅಪಾರ ಆಸಕ್ತಿ ಇದ್ದ ವಿವೇಕಾನಂದ ಅವರಿಗೆ ದೇವರ ಅಸ್ತಿತ್ವದ ಬಗ್ಗೆಯೇ ಅಪನಂಬಿಕೆ ಇತ್ತು. ಯಾವಾಗ ಶ್ರೀ ರಾಮಕೃಷ್ಣ ಪರಮಹಂಸ ಅವರನ್ನು ಭೇಟಿಯಾದರೋ  ಆಗ ನರೇಂದ್ರ ಎಂಬ ಯುವಕನಿಗೆ ದೇವರ ಮೇಲಿದ್ದ ನಂಬಿಕೆಯೇ ಬದಲಾಯಿತು.

1887ರಲ್ಲಿ ಲೌಕಿಕ ಸುಖಗಳನ್ನು ತ್ಯಜಿಸಿದ ನರೇಂದ್ರ ಮತ್ತವರ ಶಿಷ್ಯರು ಸನ್ಯಾಸ ಸ್ವೀಕರಿಸಿದರು. ಆಗ ದೇಶಾದ್ಯಂತ ಸಂಚರಿಸಿದ ಅವರು ಎಲ್ಲೆಡೆ ತಾಂಡವ ಆಡುತ್ತಿರುವ ಬಡತನವನ್ನು ನೋಡಿ ಬಹಳ ನೊಂದರು. ಆಗ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನಿರ್ಧರಿಸಿ, ಈ ಬಗ್ಗೆ ಅರಿವು ಮೂಡಿಸಲು ಮುಂದಾದರು. ಜನರ ನಂಬಿಕೆ ಹಾಗೂ ನೈತಿಕತೆಯನ್ನು ಬಲ ಬಡಿಸಲು ಅಧ್ಯಾತ್ಮ ಜ್ಞಾನವನ್ನು ಹೆಚ್ಚಿಸಿದರು.

ತಮ್ಮ ಚಿಂತನೆಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ವಿವೇಕಾನಂದ ಅವರು ಅಮೆರಿಕದ ಚಿಕಾಗೋನಲ್ಲಿ 1893ರಲ್ಲಿ ನಡೆದ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡರು. ಸಾರ್ವತ್ರಿಕ ಸ್ವೀಕಾರ, ಸಹಿಷ್ಣುತೆ ಮತ್ತು ಧಾರ್ಮಿಕತೆ ಮುಂತಾದ ವಿಷಯಗಳನ್ನೂ ಪ್ರಸ್ತಾಪಿಸಿ, ಇಡೀ ವಿಶ್ವವನ್ನೇ ತಮ್ಮ ಮಾತುಗಳಿಂದ ಬೆಕ್ಕಸ ಬೆರಗಾಗಿಸಿದರು. 

ವಿವೇಕಾನಂದ ಅವರ ಪುಣ್ಯ ತಿಥಿಯಂದು ಧರ್ಮದ ಬಗ್ಗೇ ವಿಶ್ವಕ್ಕೇ ನೀಡಿದ ಕೆಲವು ಮಹಾನ್ ಸಂದೇಶಗಳ ತುಣುಕು...

- ಪುಸ್ತಕಗಳು ಧರ್ಮವನ್ನು ಸೃಷ್ಟಿಸುವುದಿಲ್ಲ. ಆದರೆ, ಧರ್ಮ ಪುಸ್ತಕವನ್ನು ಸೃಷ್ಟಿಸುತ್ತದೆ. ಇದನ್ನು ಸದಾ ನೆನಪಿನಲ್ಲಿಡಬೇಕು.
- ಮೊದಲು ತುತ್ತು, ನಂತರ ಧರ್ಮ.
- ಯಾರು ಪುರುಷ-ಮಹಿಳೆಯಲ್ಲಿಯೂ ದೇವರನ್ನು ಕಾಣಲು ಆರಂಭಿಸುತ್ತಾನೋ, ಆಗ ಅವನು ಧರ್ಮೀಯ ಎನಿಸಿಕೊಳ್ಳುತ್ತಾನೆ.
- ಯಾರೂ ಧರ್ಮೀಯರಾಗಿ ಹುಟ್ಟುವುದಿಲ್ಲ. ಆದರೆ, ಧರ್ಮದಲ್ಲಿ ಜನಿಸುತ್ತಾರಷ್ಟೆ.
- ಯಾರೇ ಇಬ್ಬರೂ ಒಂದೇ ಧರ್ಮದವರಾಗಿರುವುದಿಲ್ಲ.
- ಒಂದೇ ಧರ್ಮ ಎಲ್ಲರಿಗೂ ಹೊಂದಿಕೆಯೂ ಆಗುವುದಿಲ್ಲ.
- ಧರ್ಮ ಎನ್ನುವುದು ಕೆಲವರಿಗೆ ಅಗತ್ಯವಾಗಿರಬಹುದು ಮತ್ತು ಅಪಾರ ಮಾನವ ಧರ್ಮಕ್ಕೆ ಇದೊಂದು ಐಷಾರಾಮಿ ವಿಷಯ.
- ಧರ್ಮ ಎನ್ನುವುದು ಯಾವುದೇ ಪುಸ್ತಕದಲ್ಲಿಯಾಗಲಿ ಅಥವಾ ತತ್ವ-ಸಿದ್ಧಾಂತಗಳಲ್ಲಾಗಲಿ ಇರುವುದಿಲ್ಲ. ಯಾವುದೇ ಪ್ರತಿಪಾದನೆಯಲ್ಲಿಯೂ ಇರುವುದಿಲ್ಲ. ಯಾವ ರೀತಿ ಇದ್ದೀರೋ, ಯಾವ ರೀತಿ ಆಗ ಬಯಸುವಿರೋ ಅದರಲ್ಲಿ ಧರ್ಮ ಅಡಗಿರುತ್ತದೆ.
- ನೀವೇ ಅತ್ಯುನ್ನತ ದೇವಸ್ಥಾನ; ನಿಮ್ಮನ್ನು ಯಾವುದೇ ದೇವಸ್ಥಾನ, ಚಿತ್ರ ಅಥವಾ ಬೈಬಲ್‌ಗಿಂತಲೂ ಹೆಚ್ಚು ಆರಾಧಿಸುತ್ತೇನೆ.
- ಧರ್ಮ ಹೊರಗಿನಿಂದ ಬರುವುದಿಲ್ಲ, ಆದರೆ, ನಮ್ಮೊಳಗೆ ಇರುತ್ತದೆ.
 

click me!