
ಹುಟ್ಟುಹಬ್ಬ ಆಚರಣೆ ಮಾಡುವುದು ನಮಗೆ ಬ್ರಿಟಿಷರು ಕೊಟ್ಟಿರುವ ಬಳುವಳಿ. ಅದರಲ್ಲಿಯೂ ಕೇಕ್ ಕತ್ತರಿಸುವುದು ಭಾರತದ ಸಂಪ್ರದಾಯವೇ ಅಲ್ಲ. ಆದರೂ ಕೇಕ್ ಇಲ್ಲದ ಹುಟ್ಟುಹಬ್ಬ ಈಗಂತೂ ಇಲ್ಲವೇ ಇಲ್ಲ. ಕೇಕ್ ತಿನ್ನುವುದಕ್ಕಷ್ಟೇ ಅಲ್ಲ, ಈಗೀಗ ಅದಕ್ಕಿಂತ ಹೆಚ್ಚಾಗಿ ಮುಖಕ್ಕೆ ಹಚ್ಚಿ, ಒಬ್ಬರ ಮೇಲೊಬ್ಬರು ಎಸೆದು, ಮನೆತುಂಬಾ ಕೇಕಿನಿಂದಲೇ ಗಲೀಜು ಮಾಡಿ ಹಣಪೂರ್ತಿ ವೇಸ್ಟ್ ಮಾಡುವುದು ಎಂದರೆ ಬಹುತೇಕರಿಗೆ ಇನ್ನಿಲ್ಲದ ಖುಷಿ. ಕೇಕ್ ಹೆಚ್ಚಿಗೆ ವೇಸ್ಟ್ ಮಾಡಿದಷ್ಟು ತಮ್ಮ ಅಂತಸ್ತು ಏರುತ್ತದೆ ಎನ್ನುವ ಮನೋಭಾವ. ತಮ್ಮ ಶ್ರೀಮಂತಿಕೆಯನ್ನು ತೋರಿಸಲು ಇದಕ್ಕಿಂತ ಮಾರ್ಗ ಇನ್ನೊಂದಿಲ್ಲ ಎಂದು ಶ್ರೀಮಂತರು ಅಂದುಕೊಂಡರೆ, ಅವರನ್ನೇ ಫಾಲೋ ಮಾಡುವ ಮಧ್ಯಮ ವರ್ಗದವರೂ ಕೇಕ್ ಅನ್ನು ವೇಸ್ಟ್ ಮಾಡಿ ಹುಟ್ಟುಹಬ್ಬವನ್ನು ಸಂಭ್ರಮಿಸುವುದು ಇದೆ.
ಅದಿರಲಿ ಬಿಡಿ. ಹುಟ್ಟುಹಬ್ಬ ಹೇಗೆ ಆಚರಿಸಬೇಕು ಎನ್ನುವುದು ಅವರವರಿಗೆ ಬಿಟ್ಟ ವಿಷಯ. ಮನೆಮಂದಿಯಂತೆಯೇ ಕೆಲವರು ತಮ್ಮ ನೆಚ್ಚಿನ ಸಾಕು ಪ್ರಾಣಿಗಳು ಬರ್ತ್‌ಡೇ ಕೂಡ ಮಾಡುವುದು ಇದೆ. ಆದರೆ ಇಲ್ಲಿ ಹೇಳಹೊರಟಿರುವುದು ಅಂಥ ಹುಟ್ಟುಹಬ್ಬ ಅಲ್ಲವೇ ಅಲ್ಲ. ಇದು ದೇವರ ಹುಟ್ಟುಹಬ್ಬದ ವಿಷಯ. ಹಾಗೆಂದು ತಿಥಿ ನಕ್ಷತ್ರಗಳನ್ನು ನೋಡಿ, ಆಯಾ ದೇವರ ಹಬ್ಬಗಳನ್ನು ಪ್ರತಿವರ್ಷ ಆಚರಿಸುವುದು ಕೂಡ ದೇವರ ಹುಟ್ಟುಹಬ್ಬದ ಆಚರಣೆ ಎನ್ನುವುದು ಸತ್ಯವಾದರೂ, ಇಲ್ಲಿ ಹೇಳುತ್ತಿರುವುದು ಕೇಕ್ ಕತ್ತರಿಸಿ ಶನಿ ದೇವರಿಗೆ ಬರ್ತ್‌ಡೇ ಮಾಡಿರುವುದು! ಹೌದು. ಹ್ಯಾಪಿ ಬರ್ತ್‌ಡೇ ಶನೈಶ್ಚರ ಎನ್ನುತ್ತಲೇ ಕೇಕ್ ಕತ್ತರಿಸಿ ಶನಿದೇವರಿಗೆ ಹುಟ್ಟುಹಬ್ಬ ಆಚರಿಸಲಾಗಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪತ್ರಕರ್ತರಾಗಿರುವ ರಮೇಶ್ ದೊಡ್ಡಪುರ ಅವರು ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಅದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಬೆಂಗಳೂರಿನ ಓಕಳಿಪುರಂ ಮುಂದೆ ಬಿಸ್ಕೆಟ್ ಫ್ಯಾಕ್ಟರಿ ಹತ್ತಿರ ಶನೈಶ್ಚರ ದೇವಸ್ಥಾನದಲ್ಲಿ ಇಂಥದ್ದೊಂದು ದೃಶ್ಯ ಕಂಡಿರುವುದಾಗಿ ಅವರು ಹೇಳಿದ್ದಾರೆ. ಈ ದೇವಸ್ಥಾನದಲ್ಲಿ ಭರ್ಜರಿ ಅಲಂಕಾರ, ಪಟಾಕಿ ಶಬ್ದ. ವರ್ಲ್ಡ್ ಫೇಮಸ್ ಬರ್ತ್‌ಡೆ ಸಾಂಗ್ 'ಹ್ಯಾಪಿ ಬರ್ತ್‌ಡೇ ಟು ಯು ಜೀ, ಕೇಕ್ ಶೇಕ್ ಹೋ ತೊ ಫಿರ್ ಬುಲಾವೊ ಜೀ, ಐಸೇ ಹೀ ಬುಢೇ ಹೋತೇ ರಹೋಗೇ ತೋ, ಹಮ್ ಕೋ ಉಸ್ಸೇ ಕ್ಯಾ ಮತ್ಲಬ್ ಬತಾವೋ ಜಿ... ಹಾಡು ಬರ್ತಿತ್ತು. ಮದ್ಯಮಧ್ಯದಲ್ಲಿ ಹ್ಯಾಪಿ ಬರ್ತ್‌ಡೇ &&₹%₹% ಅಂತ ಏನೋ ಹೇಳ್ತಾ ಇದ್ರು. ಸ್ಪೀಕರ್ ಆಕಡೆ ತಿರುಗಿದ್ದರಿಂದ ಸರಿಯಾಗಿ ಕೇಳುತ್ತಿರಲಿಲ್ಲ. ಯಾವುದೋ ಮಗುವಿನ ಹುಟ್ಟುಹಬ್ಬವನ್ನು ದೇವಸ್ಥಾನದಲ್ಲಿ ಮಾಡುತ್ತಾ ಇರಬಹುದು ಎಂದುಕೊಂಡೆ ಎನ್ನುತ್ತಲೇ ಅವರು ಅಲ್ಲಿ ನಡೆದಿರುವ ಘಟನೆಯ ಬಗ್ಗೆ ಹೇಳಿದ್ದಾರೆ.
ಹಾಗೇ ದೇವಸ್ಥಾನ ಪಾಸ್ ಆಗಿ ಮುಂದೆ ಬಂದಾಗ ಸ್ಪೀಕರ್ ನನ್ನ ಕಡೆ ಇದ್ದಿದ್ದರಿಂದ ಸರಿಯಾಗಿ ಕೇಳಿಸಿತು. ಹ್ಯಾಪಿ ಬರ್ತ್‌ಡೇ ಶನೈಶ್ಚರ ಸ್ವಾಮೀಗೆ, ಹ್ಯಾಪಿ ಬರ್ತ್‌ಡೇ ಶನೈಶ್ಚರ ಸ್ವಾಮೀಗೆ, ಹ್ಯಾಪಿ ಬರ್ತ್‌ಡೇ ಶನೈಶ್ಚರ ಸ್ವಾಮೀಗೆ, ಹ್ಯಾಪಿ ಬರ್ತ್‌ಡೇ ಶನೈಶ್ಚರ ಸ್ವಾಮೀಗೆ.... ಭರ್ಜರಿ ಬರ್ತ್‌ಡೇ ಸೆಲೆಬ್ರೇಷನ್ ಮಾಡುತ್ತಿದ್ದರು. ಎಲ್ಲರೂ ಸೇರಿ ಕೇಕ್ ಕತ್ತರಿಸಿ ಶನೈಶ್ಚರನ ಬಾಯಿಗೂ ಸ್ವಲ್ಪ ಮುಟ್ಟಿಸಿದರು. ಆಮೇಲೆ ಗೊತ್ತಾಗಿದ್ದು, ಇವತ್ತು ಶನಿ ಜಯಂತಿ ಅಂತ. ಒಂದೇ ಬೇಜಾರು ಅಂದರೆ ರಾತ್ರಿ ಆಗಿದ್ದರಿಂದ ಶನಿದೇವರ ಬರ್ತ್‌ಡೇಗೆ ಅವರ ಅಪ್ಪ ಸೂರ್ಯ ಬಂದಿರಲಿಲ್ಲ. ಅಮಾವಾಸ್ಯೆ ಆದ್ದರಿಂದ ಮಾವ ಚಂದ್ರನೂ ಬಂದಿರಲಿಲ್ಲ. ತಾಯಿ ಛಾಯಾ ಆದರೂ ಬಂದಿದ್ದಳಲ್ಲ ಅನ್ನೋದೊಂದೇ ಸಮಾಧಾನ ಎಂದು ತಮಾಷೆಯಾಗಿಯೂ ಹೇಳಿಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಹಿಂದೂ ದೇವರಿಗೂ ಕ್ರೈಸ್ತರ ಪದ್ಧತಿ ಬೇಕಿತ್ತಾ ಎಂದು ಹಲವರು ಕೇಳುತ್ತಿದ್ದಾರೆ.