
ಬೆಂಗಳೂರು(ಅ.25): ದೀಪಾವಳಿ ನಡುವೆಯೇ ಇಂದು(ಮಂಗಳವಾರ) ಸಂಭವಿಸಲಿರುವ ಖಗ್ರಾಸ ಸೂರ್ಯ ಗ್ರಹಣದ ವೇಳೆ ನಗರದ ಪ್ರಮುಖ ದೇಗುಲಗಳ ಬಾಗಿಲು ಮುಚ್ಚಿರುತ್ತವೆ. ಸಂಜೆ ಬಳಿಕ ಭಕ್ತಾದಿಗಳಿಗೆ ದರ್ಶನ ಕಲ್ಪಿಸಲಿವೆ. ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಬೆಳಗ್ಗೆ ಪೂಜೆ ನಡೆದ ಬಳಿಕ ಮುಚ್ಚಲಿವೆ. ನಗರದ ದೊಡ್ಡ ಬಸವನಗುಡಿ ದೇವಾಲಯ, ದೊಡ್ಡ ಗಣೇಶ ದೇವಾಲಯ, ಶಿವ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ, ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ, ಬನಶಂಕರಿ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇಗುಲ ಸೇರಿ ಎಲ್ಲ ಮಂದಿರಗಳು ಗ್ರಹಣದ ವೇಳೆ ಮುಚ್ಚಿರಲಿವೆ. ಎರಡು ಗಂಟೆ ಸಂಭವಿಸಲಿರುವ ಗ್ರಹಣದ ಬಳಿಕ ದೇವಾಲಯ ಪ್ರವೇಶಕ್ಕೆ ಅವಕಾಶ ಇರಲಿದೆ. ಬಳಿಕ ವಿಶೇಷ ಅಭಿಷೇಕ ಪೂಜಾ ಕೈಂಕರ್ಯಗಳು ನಡೆಯಲಿವೆ.
ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ ಅಮಾವಾಸ್ಯೆ ಪೂಜೆ ನಡೆಯಲಿದೆ. ಬಳಿಕ 10 ಕ್ಕೆ ದೇವಸ್ಥಾನದ ಬಾಗಿಲನ್ನು ಮುಚ್ಚಲಿದ್ದೇವೆ. ಅನ್ನ ಪ್ರಸಾದ ಸೇರಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಗ್ರಹಣದ ಬಳಿಕ ಸಂಜೆ 7ಕ್ಕೆ ದೇವಸ್ಥಾನ ತೆರೆದು ಪುಣ್ಯಾಹ ವಿಧಿ ನೆರವೇರಿಸಲಾಗುವುದು. ಅಮ್ಮನವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಲಿದ್ದೇವೆ ಎಂದು ಚಂದ್ರು ಮೋಹನ್ ತಿಳಿಸಿದರು.
ಹಬ್ಬದ ದಿನವೇ ಖಂಡಗ್ರಾಸ ಸೂರ್ಯಗ್ರಹಣ: 27 ವರ್ಷಗಳ ಬಳಿಕ ಇದೆಂಥಾ ವಿಚಿತ್ರ?!
ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 6 ಕ್ಕೆ ಕ್ಷೀರಾಭಿಷೇಕ ನೆರವೇರಿಸಲಾಗುವುದು. ಬಳಿಕ 8ಕ್ಕೆ ಬಂದ್ ಮಾಡಲಿದ್ದೇವೆ. ಗ್ರಹಣ ಬಿಟ್ಟಬಳಿಕ ದೇವಸ್ಥಾನ ತೊಳೆದು ಪೂಜೆ ನಡೆಸಲಿದ್ದೇವೆ. ಸಂಜೆ 7.30ರಿಂದ
9 ರವರೆಗೆ ಭಕ್ತಾದಿಗಳಿಗೆ ದರ್ಶನದ ಅವಕಾಶವಿರಲಿದೆ ಎಂದು ಮುಖ್ಯಸ್ಥರು ತಿಳಿಸಿದರು.
ಸಂಜೆ 5.12ರಿಂದ ಗ್ರಹಣ ಸ್ಪರ್ಶವಾಗಲಿದ್ದು, 5.48 ಮಧ್ಯ ಕಾಲ. 6 ಗಂಟೆ 3 ನಿಮಿಷ ಮೋಕ್ಷ ಕಾಲವಾಗಿದೆ. ಗ್ರಹಣದ ಮಧ್ಯಕಾಲದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ. ಗ್ರಹಣದ ಬಳಿಕ ಎಂದಿನಂತೆ ಅಭಿಷೇಕ, ಸಂಜೆ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂದು ವಿನಾಯಕ ನಗರ ತೈಲ ಶನೇಶ್ವರ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಮೋಹನ ಶಾಸ್ತ್ರಿ ತಿಳಿಸಿದರು.
ಬಲಿಪಾಡ್ಯಮಿ ಗೋ ಪೂಜೆ ಸಿದ್ಧತೆ
ಇನ್ನು ಬುಧವಾರ ಬಲಿಪಾಡ್ಯಮಿಯಂದು ಎಲ್ಲ ದೇವಸ್ಥಾನಗಳು ಎಂದಿನಂತೆ ತೆರೆಯಲಿದ್ದು, ವಿಶೇಷ ಧಾರ್ಮಿಕ ಪೂಜೆಗಳು ನಡೆಯಲಿವೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಇಲಾಖೆಯ ಸೂಚನೆಯಂತೆ ಗೋ ಪೂಜೆ ನಡೆಯಲಿದೆ. ಸಂಜೆ 5.30ರಿಂದ 6ಗಂಟೆವರೆಗಿನ ಗೋಧೂಳಿ ಲಗ್ನದಲ್ಲಿ ಗೋ ಪೂಜೆ ನೆರವೇರಲಿದೆ. ಗೋವುಗಳನ್ನು ದೇವಸ್ಥಾನಕ್ಕೆ ಕರೆತಂದು ಸ್ನಾನ ಮಾಡಿಸಿ ಅರಿಶಿನ, ಕುಂಕುಮ ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಬಾಳೆ ಹಣ್ಣು ಸಿಹಿ ತಿನಿಸು ಮತ್ತಿತರ ಗೋಗ್ರಾಸವನ್ನು ನೀಡಿ ಪೂಜಿಸುವ ಕಾರ್ಯಕ್ರಮವಿದೆ.