
ತುಳಸಿ ಎನ್ನುವುದು ಹಿಂದೂಗಳಿಗೆ ಪವಿತ್ರವಾದ ಗಿಡ. ಪರಿಸ್ಥಿತಿ ಹೇಗೆ ಇದ್ದರೂ, ಬಹುತೇಕ ಹಿಂದೂಗಳ ಮನೆಯ ಎದುರು ತುಳಸಿ ಗಿಡ ಇದ್ದೇ ಇರುತ್ತದೆ. ಅದು ಇದ್ದರೇನೇ ಏನೋ ಒಂದು ರೀತಿಯ ನೆಮ್ಮದಿ ಎಂದು ಎನ್ನಿಸುವುದು ಉಂಟು. ಆದರೆ ಕೆಲವರ ಮನೆಯಲ್ಲಿ ಏನೇ ಮಾಡಿದರೂ, ಎಷ್ಟೇ ಗೊಬ್ಬರ ಹಾಕಿದರೂ ತುಳಸಿ ಗಿಡ ಚಿಗುರುವುದೇ ಇಲ್ಲ, ಅದರಲ್ಲಿಯೂ ಕುಂಡಗಳಲ್ಲಿ ನೆಟ್ಟ ತುಳಸಿಗೆ ಈ ಸಮಸ್ಯೆ ಬರುವುದು ಉಂಟು. ಬಿಸಿಲು ಹೆಚ್ಚಾಯಿತೆಂದು ನೆರಳಿನಲ್ಲಿ ಇಟ್ಟರೂ, ನೆರಳು ಹೆಚ್ಚಾಯಿತೆಂದು ಬಿಸಲಲ್ಲಿ ಕುಂಡ ಇಟ್ಟರೂ ಹೂಂ... ಹೂಂ... ತುಳಸಿ ಬರೀ ಒಣಗಿ ಹೋಗುತ್ತದೆ. ಒಳ್ಳೆಯ ಗೊಬ್ಬರ ತಂದು ಹಾಕಿದರೂ ಈ ಸಮಸ್ಯೆ ನೀಗುವುದೇ ಇಲ್ಲ. ಅಷ್ಟಕ್ಕೂ ತುಳಸಿ ಗಿಡದ ಬಗ್ಗೆ ದೈವಿಕ ಭಾವನೆ ಇರುವ ಕಾರಣ, ಈ ಗಿಡ ಒಣಗಿದರೆ ಮನಸ್ಸಿಗೆ ಅದೇನೋ ಕಸಿವಿಸಿ. ಗಿಡ ಒಣಗಿದರೆ ಅಪಶಕುನ ಹಾಗೆ ಹೀಗೆ ಎಂದೆಲ್ಲಾ ಅವರಿವರು ಹೇಳೋದನ್ನು, ಗೂಗಲ್ನಲ್ಲಿ ನೋಡಿರೋದೆಲ್ಲಾ ಮನಸ್ಸಿಗೆ ಬಂದರಂತೂ ತಳಮಳ ಶುರುವಾಗುತ್ತದೆ.
ಇಂಥವರು ಒಮ್ಮೆ ಅಕ್ಕಿ ತೊಳೆದ ನೀರನ್ನು ಉಪಯೋಗಿಸಿ ನೋಡಿ. ಅಷ್ಟಕ್ಕೂ ಪಾಟ್ನಲ್ಲಿ ತುಳಸಿ ಗಿಡ ಹಾಕುವ ಮೊದಲು ಒಂದು ನಾಣ್ಯವನ್ನು ಇಟ್ಟು ಹಾಕಬೇಕು ಎಂದು ಹೇಳಲಾಗುತ್ತದೆ. ಗಿಡಕ್ಕೆ ಉಸಿರಾಡಲು ಪಾಟ್ ಬುಡದಲ್ಲಿ ಅತ್ತಿತ್ತ ರಂಧ್ರಗಳೂ ಇರಬೇಕಾಗುತ್ತದೆ. ಇವೆಲ್ಲಾ ವ್ಯವಸ್ಥೆ ಮಾಡಿದ ಮೇಲೂ ಗಿಡ ಬಾಡುತ್ತಿದ್ದರೆ, ಅದರಲ್ಲಿ ಪ್ರತಿದಿನವೂ ಅಕ್ಕಿ ತೊಳೆದ ನೀರನ್ನು ಹಾಕುತ್ತಾ ಬನ್ನಿ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಿಳಿ ಅಕ್ಕಿಯನ್ನೇ ಬಳಸಲಾಗುತ್ತದೆ. ಅನ್ನ ಮಾಡುವ ಮುನ್ನ ಅಕ್ಕಿಯನ್ನು ತೊಳೆದಾಗ ಅದನ್ನು ತುಳಸಿಯ ಬುಡಕ್ಕೆ ಹಾಕಿ. ಇದು ಗಿಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಸಸ್ಯಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಅಕ್ಕಿ ನೀರಿನಲ್ಲಿರುವ ಪೋಷಕಾಂಶಗಳು ತುಳಸಿ ಗಿಡದ ಆರೋಗ್ಯವನ್ನು ಸುಧಾರಿಸುತ್ತದೆ.
ಅಕ್ಕಿ ನೀರು ತುಳಸಿ ಗಿಡದ ಬೇರುಗಳನ್ನು ಬಲಪಡಿಸುತ್ತದೆ ಮತ್ತು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ತುಳಸಿ ಗಿಡಕ್ಕೆ ಅಕ್ಕಿ ನೀರನ್ನು ಹಾಕುವುದು ಶುಭ ಎಂದೂ ಹೇಳಲಾಗುತ್ತದೆ. ಅಕ್ಕಿ ನೀರಿನಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಹೇರಳವಾಗಿರುತ್ತವೆ, ಇದು ಗಿಡದ ಬೆಳವಣಿಗೆಗೆ ಅವಶ್ಯಕ. ಮತ್ತು ಅಕ್ಕಿ ನೀರಿನಲ್ಲಿರುವ ಪಿಷ್ಟವು ಮಣ್ಣಿನಲ್ಲಿ ಸಹಾಯಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಗಿಡದ ಆರೋಗ್ಯವನ್ನು ಸುಧಾರಿಸುತ್ತದೆ. ಅಕ್ಕಿ ನೀರನ್ನು ನಿಯಮಿತವಾಗಿ ಬಳಸುವುದರಿಂದ ತುಳಸಿ ಗಿಡವು ದಟ್ಟವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತದೆ.
ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಸೂರ್ಯೋದಯಕ್ಕೆ ಮುಂಚೆ ಹಾಕುವುದು ಉತ್ತಮ, ಏಕೆಂದರೆ ಇದು ಲಕ್ಷ್ಮಿ ದೇವಿಗೆ ಪ್ರಿಯವಾದ ಸಮಯವಾಗಿದೆ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ತುಳಸಿ ಗಿಡಕ್ಕೆ ಅಕ್ಕಿ ನೀರನ್ನು ಹಾಕುವಾಗ, ಸೂರ್ಯೋದಯಕ್ಕೆ ಮುಂಚೆ ಹಾಕುವುದು ಉತ್ತಮ. ಭಾನುವಾರ ಮತ್ತು ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಹಾಕುವುದನ್ನು ತಪ್ಪಿಸಬೇಕು ಎನ್ನಲಾಗಿದೆ. ಅಷ್ಟಕ್ಕೂ ಅಕ್ಕಿಯ ನೀರು ತುಳಸಿ ಮಾತ್ರವಲ್ಲದೇ ಬಹುತೇಕ ಎಲ್ಲ ಗಿಡಗಳಿಗೂ ಪ್ರಯೋಜನಕಾರಿಯಾಗಿದೆ.