
ದೀಪಾವಳಿಯ ಈ ಮೂರು ದಿನಗಳಲ್ಲಿ ಎಲ್ಲ ಕಡೆ ಲಕ್ಷ್ಮಿ ಪೂಜೆ (Lakshmi Puja)ನಡೆಯುತ್ತದೆ. ಬೆಳಕಿನ ಹಬ್ಬ ಸಂಪತ್ತಿನ ಅಧಿದೇವತೆಯ ಹಬ್ಬವೂ ಆಗಿದೆ. ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗಿ ಸಿರಿವಂತಿಕೆ ಕೂಡ ಬರುತ್ತದೆ ಎಂಬುದು ಎಲ್ಲರ ನಂಬಿಕೆ. ಇಂಥ ಲಕ್ಷ್ಮಿದೇವಿ ಎರಡೂ ಕೈಗಳಲ್ಲಿ ಕಮಲದ ಹೂಗಳನ್ನು ಹಿಡಿದಿದ್ದಾಳೆ. ಕಮಲದ ಮೇಲೆ ಕೂತಿರುತ್ತಾಳೆ. ಆಕೆಯ ವಾಹನ ಗೂಬೆ. ಏನಿದೆಲ್ಲದರ ಅರ್ಥ?
ಪ್ರತಿಯೊಬ್ಬ ದೇವರಿಗೂ ಒಂದಲ್ಲ ಒಂದು ಪ್ರಾಣಿಯನ್ನು ದೇವತೆಯನ್ನಾಗಿ ಚಿತ್ರಿಸಲಾಗಿದೆ. ಹಾಗೇ ಲಕ್ಷ್ಮದೇವಿಗೆ ವಾಹನ ಗೂಬೆ. ಗೂಬೆಯೇ ಯಾಕೆ ಈಕೆಯ ವಾಹನ ಗೊತ್ತೆ? ಗೂಬೆ ಕತ್ತಲಲ್ಲಿ ಇರುತ್ತದೆ. ಹಗಲಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕತ್ತಲಲ್ಲೇ ಸಂಚರಿಸುತ್ತದೆ. ಹೀಗಾಗಿ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾವಾಗ, ಹೇಗೆ ಹೋಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಲಕ್ಷ್ಮಿಗೆ ಬೇಕಾದದ್ದು ಇದೇ ವಾಹನ. ಈಕೆ ಕೂಡ ಹಾಗೆಯೇ. ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಾಳೋ ಗೊತ್ತೇ ಆಗುವುದಿಲ್ಲ. ಲಕ್ಷ್ಮಿ ಅನಿರೀಕ್ಷಿತೆ. ಇಂದು ಇದ್ದಲ್ಲಿ ನಾಳೆ ಇರುತ್ತಾಳೆ ಎನ್ನಲಾಗುವುದಿಲ್ಲ. ಹೀಗಾಗಿ ಲಕ್ಷ್ಮಿಗೆ ಗೂಬೆ ವಾಹನ. ಜೊತೆಗೆ, ಗೂಬೆಯ ದೊಡ್ಡ ಉರುಟಾದ ಕಣ್ಣುಗಳು, ಚಿನ್ನದ ಉರುಟಾದ ನಾಣ್ಯಗಳನ್ನು ನೆನಪಿಸುತ್ತದಲ್ಲವೇ?
ಲಕ್ಷ್ಮಿ ಕಮಲದ ಹೂವಿನ ಮೇಲೆ ಆಸೀನಳಾಗಿರುವ ದೇವತೆ, ಕಮಲ ನೀರಿನಲ್ಲೇ ಬೆಳೆಯುತ್ತದೆಯಾದರೂ ನೀರು ಅದಕ್ಕೆ ಅಂಟಿಕೊಳ್ಳುವುದಿಲ್ಲ, ಕಮಲದ ಹೂವಿನ ಮೇಲೆ ನೀರು ಹಾಕಿದರೂ ಅದು ಜಾರಿ ಹೋಗುತ್ತದೆ. ಹೇಗೆ ಕಮಲದ ಮೇಲೆ ನೀರು ಅಂತಿಕೊಳ್ಳುವುದಿಲ್ಲವೋ, ಐಹಿಕ ಪ್ರಪಂಚದಲ್ಲಿರುವ ನಾವೂ ಸಹ ಐಹಿಕ ಐಶ್ವರ್ಯದಲ್ಲಿ ಅಗತ್ಯಕ್ಕಿಂತ ಅತಿ ಹೆಚ್ಚು ವ್ಯಾಮೊಹ ಹೊಂದಿರಬಾರದು ಎಂಬುದನ್ನು ಕಮಲದ ಮೇಲೆ ಆಸೀನಳಾಗಿರುವ ಲಕ್ಷ್ಮಿಯ ಸಂದೇಶವಾಗಿದೆ ಎಂದು ಹೇಳುತ್ತಾರೆ.
ಲಕ್ಷ್ಮಿಯ ನಾಲ್ಕು ಕೈಗಳೂ, ಧರ್ಮ, ಅರ್ಥ, ಕಾಮ ಮೋಕ್ಷವೆಂಬ ನಾಲ್ಕು ಪುರುಷಾರ್ಥಗಳನ್ನು ಸೂಚಿಸುತ್ತವೆ. ಮುಂದಿರುವ ಎರಡೂ ಕೈಗಳು ಭೌತಿಕ ಪ್ರಪಂಚವನ್ನು ಸೂಚಿಸಿದರೆ, ಹಿಂದಿರುವ ಎರಡು ಕೈಗಳು ಪಾರಮಾರ್ಥಿಕ ಪ್ರಪಂಚವನ್ನು ಸೂಚಿಸುತ್ತವೆ. ಹಾಗೂ ಅನುಕ್ರಮವಾಗಿ ಎರಡೂ ವಿಷಯದಲ್ಲಿ ಪರಿಪೂರ್ಣತೆಯನ್ನು ಪಡೆಯುವುದಕ್ಕೆ ಸಹಕಾರಿಯಾಗಲಿದೆ. ಹಿಂದಿನ ಬಲಭಾಗದ ಕೈಯ್ಯಲ್ಲಿರುವ ಕಮಲ ಧರ್ಮಮಾರ್ಗದಲ್ಲಿ ಕರ್ತವ್ಯಗಳನ್ನು ಮಾಡುವುದನ್ನು ಸೂಚಿಸಿದರೆ, ಎಡ ಭಾಗದ ಕೈಯ್ಯಲ್ಲಿರುವ ಕಮಲ ಮೋಕ್ಷಕ್ಕೆ ದಾರಿ ಎಂಬ ವಿಶ್ಲೇಷಣೆಯೂ ಇದೆ.
ನೀವು ಸಾಮಾನ್ಯವಾಗಿ ಲಕ್ಷ್ಮಿ ದೇವಿಯ ಕೆಲ ಪೋಟೋಗಳಲ್ಲಿ ಚಿನ್ನದ ನಾಣ್ಯಗಳಿರುವ ಮಡಕೆ ನೋಡಿರುತ್ತೀರಿ. ಈ ಬಂಗಾರ ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತವಾಗಿದೆ. ಇದನ್ನ ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಅಥವಾ ಸರಿಯಾದ ರೀತಿಯಲ್ಲಿ ಗೌರವಯುತವಾಗಿ ಇಟ್ಟುಕೊಳ್ಳುವುದರಿಂದ ನಮ್ಮ ಸಂಪತ್ತು ಹೆಚ್ಚಾಗುತ್ತದೆ.
ಆನೆಗಳು ಲಕ್ಷ್ಮಿ ದೇವಿಯ ಮತ್ತೊಂದು ಬಹಳ ಮುಖ್ಯವಾದ ಸಂಕೇತವಾಗಿದೆ. ನಾವು ನೋಡಿರುವ ಅನೇಕ ಫೋಟೋಗಳನ್ನ ಗಮನಿಸಿ, ತಾಯಿ ಬಿಳಿ ಆನೆಗಳ ಮೇಲೆ ಸವಾರಿ ಮಾಡುತ್ತಿರುತ್ತಾಳೆ. ನಂಬಿಕೆಗಳ ಪ್ರಕಾರ ಲಕ್ಷ್ಮಿ ದೇವಿಗೆ ಆನೇಕ ಕನಕಾಭಿಷೇಕವನ್ನು ಮಾಡುತ್ತವೆ ಎನ್ನಲಾಗುತ್ತದೆ. ಹಾಗಾಗಿ ಆನೆಯ ಮೇಲೆ ವಿರಾಜಮಾನಳಾಗಿರುವ ತಾಯಿಯನ್ನ ಪೂಜಿಸಲಾಗುತ್ತದೆ.
ಸ್ವಸ್ತಿಕ: ನಮ್ಮ ಸಂಪ್ರದಾಯದಲ್ಲಿ ಸ್ವಸ್ತಿಕ ಚಿಹ್ನೆಗೆ ಬಹಳ ಪ್ರಾಮುಖ್ಯತೆ ಇದೆ. ಲಕ್ಷ್ಮಿ ಪೂಜೆ ಮಾಡುವಾಗ ಮಾತ್ರವಲ್ಲದೇ ಅನೇಕ ವಿಶೇಷ ಪೂಜೆಗಳನ್ನ ಮಾಡುವಾಗ ಸ್ವಸ್ತಿಕ ಚಿಹ್ನೆಯನ್ನ ಹಾಕುತ್ತವೆ. ಇದನ್ನ ಲಕ್ಷ್ಮಿ ದೇವಿಯ ಪ್ರತಿನಿಧಿ ಎಂದು ಸಹ ಕರೆಯಲಾಗುತ್ತದೆ. ಅಲ್ಲದೇ, ಇದನ್ನ ಮನೆಯ ಗೋಡೆಗಳ ಮೇಲೆ ಮತ್ತು ಪೂಜಾ ಪೀಠದ ಮೇಲೆ ಬರೆಯುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಸಂಪತ್ತು ಸಹ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
ಶ್ರೀ: ನೀವು ಸಾಮಾನ್ಯವಾಗಿ ಗಮನಿಸಿರಬಹುದು ನಾವು ಯಾವುದಾದರೂ ಒಳ್ಳೆಯ ಕೆಲಸಗಳನ್ನ ಮಾಡುವಾಗ ಅಥವಾ ಏನಾದರೂ ಬರೆಯುವಾಗ ಶ್ರೀ ಎಂದು ಬರೆಯುವ ಮೂಲಕ ಆರಂಭ ಮಾಡುತ್ತೇವೆ. ಶ್ರೀ ಎನ್ನುವುದು ಹಿಂದೂ ಧರ್ಮದ ಅತ್ಯಂತ ಪವಿತ್ರ ಸಂಕೇತಗಳಲ್ಲಿ ಒಂದಾಗಿದೆ. ಪುರಾಣಗಳ ಪ್ರಕಾರ, ಲಕ್ಷ್ಮಿ ದೇವಿಯನ್ನು ಶ್ರೀ ಎಂದು ಕರೆಯಲಾಗುತ್ತದೆ. ಇದನ್ನ ಬರೆಯುವುದರಿಂದ ದೇವಿಯ ಆಶಿರ್ವಾದ ಸಿಗುತ್ತದೆ. ಅಲ್ಲದೇ, ಪ್ರತಿದಿನ ಮನೆಯ ಹೊಸ್ತಿಲಲ್ಲಿ ಇದನ್ನ ಬರೆದರೆ ಎಂದಿಗೂ ಹಣಕಾಸಿನ ಸಮಸ್ಯೆ ಆಗುವುದಿಲ್ಲ.