ಶ್ರೀರಾಮನ ಯಜ್ಞಕ್ಕೆ ರಾವಣನೇ ಪುರೋಹಿತನಾದ ಕಥೆ!

Published : Jan 03, 2026, 07:59 AM IST
ramayana story

ಸಾರಾಂಶ

ಲಂಕಾಯುದ್ಧದ ಗೆಲುವಿಗಾಗಿ ಶ್ರೀರಾಮನು ಯಜ್ಞ ಮಾಡಲು ನಿರ್ಧರಿಸಿದಾಗ, ಶತ್ರುವಾದ ರಾವಣನೇ ಪುರೋಹಿತನಾಗಿ ಬಂದು ಆ ಯಜ್ಞವನ್ನು ನಡೆಸಿಕೊಟ್ಟ ಎಂಬ ಜನಪ್ರಿಯ ಕಥೆಯಿದೆ. ಈ ಕಥೆ ನಿಜಕ್ಕೂ ವಾಲ್ಮೀಕಿ ರಾಮಾಯಣದಲ್ಲಿ ಇದೆಯಾ? ಇದರ ನಿಜವಾದ ಅರ್ಥವೇನು?

ಕೆಲವು ವಿಚಿತ್ರ ಕತೆಗಳಿರುತ್ತವೆ. ಅವು ಮೇಲ್ನೋಟಕ್ಕೆ ರಾಮಾಯಣ- ಮಹಾಭಾರತದಲ್ಲಿ ಇರುವ ಕತೆಯಂತೆ ಕಾಣಿಸುತ್ತದೆ. ಅದೇ ಪಾತ್ರಗಳು, ಅದೇ ಕತೆಯೊಳಗಿನ ಕತೆಗಳು. ಆದರೆ ಅವು ಮೂಲ ಕೃತಿಯಲ್ಲಿ ಕಾಣಿಸುವುದಿಲ್ಲ, ಆದರೆ ಜನರ ನಡುವೆ ಜನಪ್ರಿಯವಾಗಿರುತ್ತವೆ. ಲಂಕೆಯಲ್ಲಿ ಸೀತೆಯನ್ನು ಮರಳಿ ಪಡೆಯಲು ಬಂದ ಶ್ರೀರಾಮ ರಾವಣನೊಂದಿಗೆ ಯುದ್ಧ ಆರಂಭಿಸುವ ಮೊದಲು ರಾವಣನನ್ನೇ ಕರೆಸಿ ಅವನಿಂದ ಯಜ್ಞ ಮಾಡಿಸಿದ ಎಂಬ ಕತೆ ಜನಪ್ರಿಯವಾಗಿದೆ. ಇದು ನಿಜವೇ? ಇದರ ಅರ್ಥವೇನು?

ನಿಜಕ್ಕೂ ಈ ಕತೆ ವಾಲ್ಮೀಕಿ ಬರೆದ ಮೂಲ ರಾಮಾಯಣದಲ್ಲಿ ಇಲ್ಲ. ಈ ಕತೆ ಇರುವುದು ಹೀಗೆ- ಲಂಕಾಯುದ್ಧದಲ್ಲಿ ವಿಜಯ ಪಡೆಯಲು, ಲಂಕೆಗೆ ತೆರಳಲು ಸೇತುವೆ ಕಟ್ಟಲು ಪ್ರಾರ್ಥಿಸಲು, ಶ್ರೀರಾಮನು ಕಡಲ ತೀರವಾದ ರಾಮೇಶ್ವರದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಯಜ್ಞ ಮಾಡಲು ನಿರ್ಧರಿಸಿದನು. ಆಗ ಈ ಸಮಾರಂಭವನ್ನು ನಡೆಸಿಕೊಡಲು ಒಬ್ಬ ಉನ್ನತ ವಿದ್ವಾಂಸ, ಯಾಜ್ಞಿಕ ಬ್ರಾಹ್ಮಣ, ಜ್ಯೋತಿಜ್ಞನ ಅಗತ್ಯ ಬಿತ್ತು. ಹತ್ತಿರದಲ್ಲಿ ಯಾರಿದ್ದಾರೆ ಎಂಬ ಪ್ರಶ್ನೆ ಮೂಡಿತು.

ಆಗ ವಿಭೀಷಣ ಹೇಳುತ್ತಾನೆ- “ರಾವಣ ಮಹಾ ಋಷಿ ಕಶ್ಯಪರ ಪುತ್ರ ವಿಶ್ರವಸುವಿನ ಮಗ. ಮಹಾನ್ ಬ್ರಾಹ್ಮಣ, ಜ್ಯೋತಿಷ್ಯಜ್ಞ, ವಿದ್ವಾಂಸ, ಶಿವ ಭಕ್ತ ಕೂಡ. ಶುಭ ಮುಹೂರ್ತವಿಡಲು ಅವನಿಗಿಂತ ಹೆಚ್ಚು ತಿಳಿದವರು ಯಾರೂ ಇಲ್ಲಿಲ್ಲ. ಅವನನ್ನು ಕರೆಸಬಹುದು.” ಹಾಗೆ ರಾವಣನನ್ನು ಕರೆಯಲು ಲಕ್ಷ್ಮಣನನ್ನು ಕಳಿಸಲಾಯಿತು. ಲಕ್ಷ್ಮಣನಿಂದ ಆಮಂತ್ರಣ ಪಡೆದ ರಾವಣನಿಗೆ, ಆ ಆಮಂತ್ರಣ ಸ್ವೀಕರಿಸಿ ಯಜ್ಞ ನಡೆಸಿಕೊಡಲೇಬೇಕಾದ ಯಾಜ್ಞಿಕ ಕರ್ತವ್ಯ ಕಟ್ಟುಬಿತ್ತು. ನೀತಿ ಸಂಹಿತೆಗೆ ಬದ್ಧನಾಗಿ ರಾವಣನು ಆಹ್ವಾನವನ್ನು ಸ್ವೀಕರಿಸಿದನು.

ಸೀತೆಯನ್ನೂ ಕರೆದುಕೊಂಡು ಬಂದ!

ಯಜ್ಞ ಆಚರಿಸುವಾಗ ಯಜಮಾನ ಅಥವಾ ವಿವಾಹಿತ ಪುರುಷ ತನ್ನ ಹೆಂಡತಿ ಇಲ್ಲದೆ ಯಜ್ಞವನ್ನು ಮಾಡಲು ಸಾಧ್ಯವಿಲ್ಲ. ಸೀತೆ ರಾವಣನ ಸೆರೆಯಲ್ಲಿದ್ದಳು. ರಾಮನ ಪಕ್ಕದಲ್ಲಿ ಅವನ ಹೆಂಡತಿ ಇರಲಿಲ್ಲ. ಆದರೆ ಯಜ್ಞಕ್ಕೆ ರಾಮನಿಗೆ ಪಕ್ಕದಲ್ಲಿ ಸೀತೆ ಬೇಕಲ್ಲ! ಯಜ್ಞಾಚರಣೆಯ ಪಾವಿತ್ರ್ಯವನ್ನು ಎತ್ತಿಹಿಡಿದು, ರಾವಣನು ಸೀತೆಯನ್ನು ತನ್ನ ಪುಷ್ಪಕ ವಿಮಾನದಲ್ಲಿ ಯಜ್ಞ ಸ್ಥಳಕ್ಕೆ ಕರೆತಂದ. ಸಮಾರಂಭಕ್ಕಾಗಿ ಅವಳು ರಾಮನ ಪಕ್ಕದಲ್ಲಿ ಕುಳಿತಳು.

ಯಜ್ಞ ಪೂರ್ಣಗೊಂಡ ನಂತರ ರಾಮ ಮತ್ತು ಸೀತೆ ಯಾಜ್ಞಿಕ ರಾವಣನ ಆಶೀರ್ವಾದ ಪಡೆಯಲು ಅವನಿಗೆ ನಮಸ್ಕರಿಸಿದರು. ರಾವಣನು ರಾಮನಿಗೆ "ವಿಜಯೀ ಭವ" (ನೀನು ವಿಜಯಶಾಲಿಯಾಗಲಿ) ಎಂದು ಆಶೀರ್ವದಿಸಿದ. ಅಂದರೆ ತನ್ನ ಸ್ವಂತ ಶತ್ರುವಿಗೆ ಯಶಸ್ಸಾಗುವಂತೆ ಆಶೀರ್ವದಿಸಿದ. ಯಜ್ಞ ಮುಗಿದ ಬಳಿಕ ಸೀತೆ ರಾವಣನ ಸಹಿತ ಲಂಕೆಗೆ ಹಿಂತಿರುಗಿದಳು.

ಈ ಕತೆಯೇನೋ ಜನಪ್ರಿಯವಾಗಿದೆ. ಆದರೆ ವಾಲ್ಮೀಕಿ ರಾಮಾಯಣದಲ್ಲಿ ಇದು ಇಲ್ಲ. ಬೇರೆ ಯಾವುದೇ ರಾಮಾಯಣದಲ್ಲೂ ಕಂಡುಬರುವುದಿಲ್ಲ. ಆದರೆ ಇದು ಹೇಗೆ ಹುಟ್ಟಿತು? ಬಹುಶಃ ರಾವಣನು ಬ್ರಾಹ್ಮಣ, ಕ್ಷತ್ರಿಯರು ಯುದ್ಧದಂಥ ಮಹಾಕಾರ್ಯದಲ್ಲಿ ಯಶಸ್ಸನ್ನು ಪಡೆಯಲು ಬ್ರಾಹ್ಮಣರನ್ನು ಅವಲಂಬಿಸಿ ಯಜ್ಞಯಾಗಾದಿಗಳನ್ನು ಮಾಡಿದರೆ ಮಾತ್ರ ಅವರಿಗೆ ಯಶಸ್ಸು ಎಂಬ ನಂಬಿಕೆಯನ್ನು ವ್ಯಾಪಕಗೊಳಿಸಲು ಈ ಕತೆ ಹುಟ್ಟಿಕೊಂಡಿರಬಹುದು. ಹಾಗೆಯೇ, ಯಾರಾದರೂ ಯಜ್ಞದಂಥ ಪವಿತ್ರ ಕಾರ್ಯ ಮಾಡಲು ಕೇಳಿಕೊಂಡಾಗ, ನಿನ್ನ ವೈರಿಯೇ ಆಗಿದ್ದರೂ ಆ ಕಾರ್ಯವನ್ನು ಅವನಿಗಾಗಿ ನಿಸ್ವಾರ್ಥಿಯಾಗಿ ಮಾಡಿಕೊಡಬೇಕು ಎಂದು ಬ್ರಾಹ್ಮಣರ ಕರ್ತವ್ಯಪ್ರಜ್ಞೆಯನ್ನು ಎಚ್ಚರಿಸಲೂ ಈ ಕತೆ ಹುಟ್ಟಿಕೊಂಡಿರಬಹುದು.

ಜ್ಞಾನಕ್ಕೆ ಶತ್ರು–ಮಿತ್ರ ಎಂಬ ಭೇದವಿಲ್ಲ. ರಾವಣನು ದುಷ್ಟನಾದರೂ ಅವನ ಜ್ಞಾನವನ್ನು ರಾಮನು ಗೌರವಿಸಿದ. ಜ್ಞಾನ ಯಾವ ಕಡೆ ಇದ್ದರೂ ಅದನ್ನು ಗೌರವಿಸಬೇಕು ಎನ್ನುವುದು ರಾಮನ ಗುಣ. ಧರ್ಮವು ಅಹಂಕಾರಕ್ಕಿಂತ ದೊಡ್ಡದು. ರಾವಣನ ಶಕ್ತಿ, ಬಲ, ಜ್ಞಾನ ಎಲ್ಲವೂ ಇದ್ದರೂ ಅವನ ಅಹಂಕಾರವೇ ಅವನ ಪತನಕ್ಕೆ ಕಾರಣವಾಯಿತು.ರಾಮನು ಮಾತ್ರ ಧರ್ಮಕ್ಕೆ ತಲೆಬಾಗುವವನು. ಶತ್ರುವನ್ನೂ ಗುರುವಾಗಿ ನೋಡುವ ಮನೋಭಾವ, ಯುದ್ಧದ ಮೊದಲು ಶತ್ರುವಿನ ಜ್ಞಾನವನ್ನು ಒಪ್ಪಿಕೊಳ್ಳುವ ವಿನಯ – ಇದು ರಾಮನ ಮಹತ್ತ್ವವನ್ನು ತೋರಿಸುತ್ತದೆ ಎಂದೆಲ್ಲ ಇದರ ಸಂದೇಶವನ್ನು ಅರ್ಥೈಸಬಹುದು.

 

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಜನವರಿ 30ರ ಒಳಗೆ ಸಿಎಂ ಖುರ್ಚಿ ಯಾರ ಪಾಲಾಗಲಿದೆ? ಖ್ಯಾತ ಜ್ಯೋತಿಷಿ ದ್ವಾರಕನಾಥ್‌ ಭವಿಷ್ಯವೇನು?