
ಯಾರಿಗೂ ಗೊತ್ತೇ ಇರದ, ಯಾವುದೋ ಮೂಲೆಯಲ್ಲಿ ಇರುವ ಒಬ್ಬರು ದಿನ ಬೆಳಗಾಗುವುದರೊಳಗೆ ಫೇಮಸ್ ಆಗಿಬಿಡುತ್ತಾರೆ. ಇವರ್ಯಾರು ಎಂದು ಗೂಗಲ್ ತಿಣುಕಾಡಿದ್ರೂ ಒಂದು ಅಕ್ಷರವೂ ಸಿಗಲ್ಲ. ಆದರೂ ಫೇಮಸ್ ಆಗಿ ಆಗಿ ಅವರ ಹೆಸರಿನ ಒಂದಕ್ಷರ ಟೈಪಿಸುವುದರೊಳಗೇ ಇಡೀ ಜಾತಕ ಬರುವಷ್ಟರ ಮಟ್ಟಿಗೆ ಫೇಮಸ್ ಆಗಿ ಬಿಡುತ್ತಾರೆ. ಸೋಷಿಷಯಲ್ ಮೀಡಿಯಾದಲ್ಲಿ ಅವರದ್ದೇ ಹವಾ. ಇನ್ನು ತಾವು ಫೇಮಸ್ ಆಗಬೇಕು ಎಂದು ಹಗಲೂ ರಾತ್ರಿ ನಿದ್ದೆಗೆಟ್ಟು, ಕಷ್ಟಪಟ್ಟು ಅಧ್ಯಯನ ಮಾಡಿ, ಜಗತ್ತೆಲ್ಲಾ ಸುತ್ತಾಡಿ ವಿಡಿಯೋ ಮಾಡಿದ್ರೂ ಹತ್ತಾರು views ತರುವುದಕ್ಕೆ ಕಷ್ಟಪಡುವ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಇದ್ದಾರೆ. ಜಪ್ಪಯ್ಯ ಎಂದರು ಅವು ಹಾಕುವ ಒಳ್ಳೆಯ ಪೋಸ್ಟ್ಗಳನ್ನು ನೋಡುವವರೇ ಇರುವುದಿಲ್ಲ. ಅದಕ್ಕೆ ಕೆಲವರು ಅಡ್ಡದಾರಿ ಹಿಡಿದು (ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳು) ದೇಹ ಪ್ರದರ್ಶನದ ವಿಡಿಯೋ ಮಾಡಿ ಹರಿಬಿಡುವುದೂ ಇದೆ. ಹೀಗೆ ಮಾಡಿದ್ರೂ ಎಲ್ಲರ ವಿಡಿಯೋ ಕ್ಲಿಕ್ಸ್ ತರುವುದಿಲ್ಲ.
ಇವೆಲ್ಲ ಸರ್ಕಸ್ ನಡುವೆ, ಏನೂ ಮಾಡದೆಯೂ ಸುಮ್ಮನೆ ತಮ್ಮ ಪಾಡಿಗೆ ತಾವು ಇದ್ದರೂ ರಾತ್ರೋ ರಾತ್ರಿ ಸ್ಟಾರ್ ಆಗೋದು ಹೇಗೆ ಎನ್ನುವುದೇ ಹಲವರಿಗೆ ಯಕ್ಷ ಪ್ರಶ್ನೆಯಾಗುತ್ತದೆ. ಇದಾಗಲೇ ಈ ರೀತಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ, ರಿಯಾಲಿಟಿ ಷೋಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡು, ವಿವಿಧ ಫಂಕ್ಷನ್ಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡು, ಮತ್ತೆ ಕೆಲವರು ಸಿನಿಮಾಗಳಲ್ಲಿ ನಟಿಸುವವರೆಗೂ ಹೋಗುವವರಿದ್ದಾರೆ. ಕುಂಭಮೇಳದ ಮೋನಾಲಿಸಾ ಇತ್ತೀಚಿನ ತಾಜಾ ಉದಾಹರಣೆ. ಇಲ್ಲಿಯವರೆಗೆ ಈ ರೀತಿ ರಾತ್ರೋರಾತ್ರಿ ಫೇಮಸ್ ಆದವರ ಪ್ರಸಿದ್ಧಿ ಅಲ್ಪಕಾಲದ್ದು ಎನ್ನುವುದು ನಿಜವಾದರೂ, ಹೀಗೆ ಆಗಲು ಅವರ ಗ್ರಹಗತಿ ಹೇಗಿರುತ್ತೆ? ನಿಮ್ಮ ಜಾತಕದಲ್ಲಿ ಹೇಗಿದ್ದರೆ ಈ ರೀತಿ ಫೇಮಸ್ ಆಗಬಹುದು ಎನ್ನೋದನ್ನು ಇಲ್ಲಿ ತಿಳಿಸಲಾಗಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಂಡ್ಯದ ಯುವತಿ ನಿತ್ಯಶ್ರೀ ಅವರ ಹಾಡಿರೋ ಹೂವಿನ ಬಾಣದಂತೆ... (Hoovina Baanadante) ಹಾಡು ಸಕತ್ ಸೌಂಡ್ ಮಾಡುತ್ತಿದೆ. ಚಿತ್ರ ತಾರೆಯರಿಂದ ಹಿಡಿದು ಕಿರುತೆರೆ ಕಲಾವಿದರೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯ ರೂಪದಲ್ಲಿಯೂ ಹಾಡಿ, ಈ ಹಾಡಿರುವ ಯುವತಿಯನ್ನು ಟ್ರೋಲ್ ಮಾಡುತ್ತಲೇ ವ್ಯೂವ್ಸ್ ಹೆಚ್ಚಿಸಿಕೊಳ್ಳಲು ನೋಡುತ್ತಿದ್ದಾರೆ. ಅಷ್ಟಕ್ಕೂ ತಮಾಷೆಗಾಗಿ ತನ್ನ ಸ್ನೇಹಿತೆಯರ ಎದುರು ನಿತ್ಯಶ್ರೀ ಹೀಗೆ ಹಾಡಿದ್ದು, ಇಷ್ಟೊಂದು ಫೇಮಸ್ ಆಗುತ್ತದೆ ಎಂದು ಗೊತ್ತೇ ಇರಲಿಲ್ಲ. ಯಾಕೆ ಈ ಹಾಡು ಇಷ್ಟು ಟ್ರೆಂಡ್ ಆಯಿತೋ ತಿಳಿಯುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ ರಾತ್ರೋರಾತ್ರಿ ಆಕೆ ಫೇಮಸ್ ಆಗಿದ್ದಾರೆ. ಈಕೆಗೆ ಈಗ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೂ ಅತಿಥಿಯಾಗಿ ಆಹ್ವಾನಿಸುತ್ತಿದ್ದಾರೆ.
ಇನ್ನು ಜ್ಯೋತಿಷದ ವಿಷಯಕ್ಕೆ ಬರುವುದಾದರೆ, ಇದಕ್ಕೆಲ್ಲಾ ಕಾರಣ ರಾಹು. ರಾಹು ಎಂದರೆ ಸಾಮಾನ್ಯವಾಗಿ ಕೆಟ್ಟದ್ದಕ್ಕೆ ಉಪಯೋಗಿಸುವುದು ಇದೆ. ಆದರೆ ರಾಹು ಗ್ರಹವು ಅಸಾಧಾರಣ ಮತ್ತು ತಕ್ಷಣದ ಯಶಸ್ಸಿಗೆ, ವಿಶೇಷವಾಗಿ ಸಾಮಾಜಿಕ ಮಾಧ್ಯಮ, ವಿಶಿಷ್ಟ ಪ್ರತಿಭೆಗಳು ಅಥವಾ ಆಕಸ್ಮಿಕ ಘಟನೆಗಳ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿಯನ್ನು ನೀಡಬಲ್ಲ ಪ್ರಭಾವಿ ಗ್ರಹವಾಗಿದೆ. ಜಾತಕದಲ್ಲಿ ರಾಹುವಿನ ಸ್ಥಾನ ಉತ್ತಮವಾಗಿದ್ದರೆ, ಒಬ್ಬ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಬಹುದು ಮತ್ತು ಆಕಸ್ಮಿಕವಾಗಿ ಕೋಟ್ಯಧೀಶರಾಗಬಹುದು. ನಮ್ಮ ಜೀವನದಲ್ಲಿ ಗ್ರಹಗಳ ಚಲನೆ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ರಾಹು ಗ್ರಹ ತನ್ನ ಉಚ್ಚ ಸ್ಥಾನಕ್ಕೆ ಬಂದಾಗ ಈ ರೀತಿಯ ಯಶಸ್ಸು ಸಿಗುತ್ತದೆ ಎನ್ನುತ್ತದೆ ಜ್ಯೋತಿಷ ಶಾಸ್ತ್ರ.
ಆದರೆ ಮೊದಲೇ ಹೇಳಿದ ಹಾಗೆ ಈ ಯಶಸ್ಸಿಗೆ ಅಲ್ಪ ಆಯಸ್ಸು ಅಷ್ಟೇ. ರಾಹುವಿನ ಪ್ರಭಾವವು ಯಾವಾಗಲೂ ಮಂಗಳಕರವಾಗಿರುವುದಿಲ್ಲ ಮತ್ತು ಸರಿಯಾದ ರೀತಿಯಲ್ಲಿ ನಿರ್ವಹಿಸದಿದ್ದರೆ ಅನಿರೀಕ್ಷಿತ ಸಂಕಷ್ಟಗಳನ್ನು ತರಬಹುದು. ಆದರೆ, ವೈರಲ್ ಆಗುವ ವಿಷಯಗಳು, ವಿವಾದಗಳು ಅಥವಾ ಆಕಸ್ಮಿಕ ಪ್ರಚಾರದಿಂದ ವ್ಯಕ್ತಿಗಳು ತಕ್ಷಣವೇ ಪ್ರಸಿದ್ಧರಾಗವುದಕ್ಕೆ ಈ ರಾಹುವೇ ಕಾರಣವಾಗಿದ್ದಾನೆ. ರಾಹುವಿನ ಪ್ರಬಲ ನಿಯೋಜನೆಯು ವ್ಯಕ್ತಿಯಲ್ಲಿ ವಿಶಿಷ್ಟ ಅಥವಾ ಸಾಹಸಮಯ ಪ್ರತಿಭೆಗಳನ್ನು ಹೊರಗೆಡಹುತ್ತದೆ. ಇದರಿಂದ ಅವರು ತಮ್ಮ ವೃತ್ತಿಯಲ್ಲಿ ವಿಶೇಷ ಸ್ಥಾನವನ್ನೂ ಪಡೆಯಬಹುದು ಎನ್ನುತ್ತದೆ ಜ್ಯೋತಿಷ ಶಾಸ್ತ್ರ. ರಾಹುವಿನ ಶುಭ ಪ್ರಭಾವದಿಂದ, ಭಿಕ್ಷುಕರು ಕೂಡ ಕೋಟ್ಯಾಧೀಶರಾಗಿದ್ದಾರೆ. ಇದು ಆಕಸ್ಮಿಕ ಸಂಪಾದನೆ ಮತ್ತು ಅಸಾಧಾರಣ ಯಶಸ್ಸನ್ನು ಸೂಚಿಸುತ್ತದೆ. 11ನೇ ಮನೆಯಲ್ಲಿ ಗುರು ಮತ್ತು ರಾಹುವಿನ ಸಂಯೋಗವು ವ್ಯಕ್ತಿಯನ್ನು ಅಪಾರ ಶ್ರೀಮಂತರನ್ನಾಗಿ ಮಾಡುತ್ತದೆ ಮತ್ತು ಆರ್ಥಿಕ ವಿಸ್ತರಣೆಯನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ: ಈ ಹುಡುಗಿ ನೋಡಿ ಮಲೇಷ್ಯಾದ ಆ ದಿನಗಳು ನೆನಪಾದ್ವು... ಹೂವಿನ ಬಾಣದ ಹುಡುಗಿಗೆ ನಟ ಚೇತನ್ ರಿಯಾಕ್ಷನ್
ರಾಹುವು ಜಾತಕದ 1, 3, 5, 10 ಅಥವಾ 11ನೇ ಮನೆಯಲ್ಲಿ ಅಥವಾ ಶುಭ ಗ್ರಹಗಳೊಂದಿಗೆ ಸಂಯೋಗ ಹೊಂದಿದ್ದರೆ, ಅದು ಸಮೃದ್ಧಿ, ಸಂಪತ್ತು ಮತ್ತು ಖ್ಯಾತಿಯನ್ನು ತರಬಹುದು. ಇದೇ ವೇಳೆ ರಾಹುವು ಅನಿರೀಕ್ಷಿತ ಮತ್ತು ನಾಟಕೀಯ ಬದಲಾವಣೆಗಳಿಗೆ ಸಂಬಂಧಿಸಿದೆ. ಇದು ಅನಿರೀಕ್ಷಿತವಾಗಿ ಜೀವನವನ್ನು ತಲೆಕೆಳಗಾಗಿಸಬಹುದು ಕೂಡ. ಜಾತಕದಲ್ಲಿ ರಾಹು ದುರ್ಬಲವಾಗಿದ್ದರೆ ಅಥವಾ ಅಶುಭ ಸ್ಥಾನದಲ್ಲಿದ್ದರೆ, ಅದು ಆರ್ಥಿಕ ನಷ್ಟ, ಮಾನಸಿಕ ಅಸ್ಥಿರತೆ, ಜೈಲುವಾಸ ಅಥವಾ ಇತರ ಗಂಭೀರ ಸಮಸ್ಯೆಗಳನ್ನು ತರಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಹುವು ಅತ್ಯಂತ ಪ್ರಭಾವಿ ಗ್ರಹವಾಗಿದ್ದು, ಇದು ವ್ಯಕ್ತಿಯನ್ನು ರಾತ್ರೋರಾತ್ರಿ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಬಹುದು ಅಥವಾ ತೀವ್ರವಾದ ಕುಸಿತಕ್ಕೆ ತಳ್ಳಬಹುದು. ಆದ್ದರಿಂದ, ರಾಹುವಿನ ಶಕ್ತಿಯನ್ನು ಸರಿಯಾಗಿ ನಿರ್ವಹಿಸುವುದು ಅತ್ಯಗತ್ಯ.