
'ಹನುಮಾನ್ ಅಂಶ್' (Hanuman Ansh) ಚಲನಚಿತ್ರ ತೆರೆಕಂಡ ಬಳಿಕ ವಿಶ್ವಪ್ರಸಿದ್ಧ ಸಂತ, ಉತ್ತರಾಖಂಡದ ಕೈಂಚಿ ಧಾಮದ ಪೂಜ್ಯ ನೀಮ್ ಕರೋಲಿ ಬಾಬಾ (Neem Karoli Baba) ಅವರ ಜೀವನದ ಕುರಿತು ತಿಳಿದುಕೊಳ್ಳಲು ಲಕ್ಷಾಂತರ ಜನರಲ್ಲಿ ತೀವ್ರ ಕುತೂಹಲ ಮೂಡಿದೆ. ನೀಮ್ ಕರೋಲಿ ಬಾಬಾ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಭಕ್ತಿಯ ಆಕೃತಿಯೊಂದು ಮೂಡುತ್ತದೆ. ಕೇವಲ ಭಾರತದಲ್ಲಷ್ಟೇ ಅಲ್ಲದೆ, ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಪ್ರಖ್ಯಾತ ಉದ್ಯಮಿಗಳು ಹಾಗೂ ದಿಗ್ಗಜರು ಅವರ ಭಕ್ತರಾಗಿದ್ದಾರೆ.
ಆದರೆ, ಅವರ ಆಧ್ಯಾತ್ಮಿಕ ಶ್ರೇಷ್ಠತೆಯ ಹಿಂದೆ ಹಲವರಿಗೆ ತಿಳಿಯದ ಮತ್ತೊಂದು ಸಂಸಾರಿಕ ಬದುಕಿನ ಪುಟವಿದೆ! ಬಾಬಾ ಅವರಿಗೆ ಮದುವೆಯಾಗಿತ್ತೇ? ಅವರ ಪತ್ನಿಯ ಹೆಸರೇನು? ಅವರು ಸಂನ್ಯಾಸಿಯಾದ ಮೇಲೆ ಅವರ ಕುಟುಂಬ ಹಾಗೂ ಸಂಸಾರದ ಕಥೆ ಏನಾಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನೀಮ್ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮಣ್ ದಾಸ್ ಶರ್ಮಾ. ಅವರು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್‌ಪುರ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ಅವರಿಗೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಗಳಲ್ಲಿ ಅಪಾರ ಆಸಕ್ತಿಯಿತ್ತು. ಆ ಕಾಲದ ಸಂಪ್ರದಾಯದಂತೆ ಅವರಿಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ, ಅಂದರೆ ಸುಮಾರು 11ರಿಂದ 12 ವರ್ಷದವರಾಗಿದ್ದಾಗಲೇ ಬಾಲ್ಯವಿವಾಹ ಮಾಡಿಸಲಾಯಿತು. ಮುಂದೆ ಅವರು ಆಧ್ಯಾತ್ಮದ ಹಾದಿ ಹಿಡಿದು ಸಂನ್ಯಾಸ ಸ್ವೀಕರಿಸಿದರೂ, ತಮಗೆ ಮದುವೆಯಾಗಿದ್ದ ವಿಷಯವನ್ನು ಅವರು ಎಂದಿಗೂ ಮುಚ್ಚಿಡಲಿಲ್ಲ.
ನೀಮ್ ಕರೋಲಿ ಬಾಬಾ ಅವರ ಪತ್ನಿಯ ಹೆಸರು ರಾಮ್ ಬೇಟಿ ದೇವಿ (Ram Beti Devi). ಉತ್ತರ ಪ್ರದೇಶದ ವೈದಿಕ ಬ್ರಾಹ್ಮಣ ಕುಟುಂಬದವರಾದ ರಾಮ್ ಬೇಟಿ ದೇವಿ ಅವರು ಮದುವೆಯ ನಂತರ ಅಕ್ಬರ್‌ಪುರ ಗ್ರಾಮಕ್ಕೆ ಬಂದರು. ಜಗತ್ತಿನಾದ್ಯಂತ ನೀಮ್ ಕರೋಲಿ ಬಾಬಾ ಅವರ ಅಧ್ಯಾತ್ಮ ಹಾಗೂ ಮಹಿಮೆಯ ಚರ್ಚೆಗಳು ನಡೆಯುತ್ತಿದ್ದರೂ, ಅವರ ಪತ್ನಿ ರಾಮ್ ಬೇಟಿ ದೇವಿ ಮಾತ್ರ ಪ್ರಚಾರದ ಬೆಳಕಿನಿಂದ ಸಂಪೂರ್ಣ ದೂರವೇ ಉಳಿದಿದ್ದರು. ಅವರು ಎಂದಿಗೂ ಬಾಬಾ ಅವರ ಆಶ್ರಮದ ಆಡಳಿತ ಅಥವಾ ನಿರ್ವಹಣೆಯಲ್ಲಿ ಭಾಗಿಯಾಗಲಿಲ್ಲ. ಗ್ರಾಮಸ್ಥರ ಪ್ರಕಾರ, ರಾಮ್ ಬೇಟಿ ದೇವಿ ಅವರು ಅತ್ಯಂತ ಸರಳ, ಸಾತ್ವಿಕ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.
ಮದುವೆಯಾದ ಕೆಲವು ವರ್ಷಗಳ ನಂತರ ಲಕ್ಷ್ಮಣ್ ದಾಸ್ ಶರ್ಮಾ ಅವರು ಗೃಹಸ್ಥಾಶ್ರಮ ತೊರೆದು ಸಂನ್ಯಾಸ ಸ್ವೀಕರಿಸಿದರು. ದೇಶಾದ್ಯಂತ ಸಂಚರಿಸಿ ಸುದೀರ್ಘ ಆಧ್ಯಾತ್ಮಿಕ ಯಾತ್ರೆ ಕೈಗೊಂಡರು. ಈ ಅವಧಿಯಲ್ಲಿ ಅವರು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟು, ಅಂತಿಮವಾಗಿ 'ನೀಮ್ ಕರೋಲಿ ಬಾಬಾ' ಎಂದೇ ಜಗದ್ವಿಖ್ಯಾತರಾದರು.
ಬಾಬಾ ಅವರು ಆಧ್ಯಾತ್ಮದ ಹಾದಿ ಹಿಡಿದು ಮನೆ ತೊರೆದಾಗ, ಪತ್ನಿ ರಾಮ್ ಬೇಟಿ ದೇವಿ ಅವರು ಇಡೀ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತರು. ಕೃಷಿ ಭೂಮಿಯಲ್ಲಿ ಸ್ವತಃ ಕಷ್ಟಪಟ್ಟು ದುಡಿದು, ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ತಮ್ಮ ಮಕ್ಕಳನ್ನು ಬೆಳೆಸಿ ಆಳಾಗಿ ಮಾಡಿದರು. ಅವರ ಜೀವನವು ಒಬ್ಬ ಪ್ರಸಿದ್ಧ ಸಂತರ ಪತ್ನಿಯ ವೈಭೋಗದ ಬದುಕಾಗಿರಲಿಲ್ಲ, ಬದಲಿಗೆ ಸಾಮಾನ್ಯ ಗ್ರಾಮೀಣ ಮಹಿಳೆಯ ಅತ್ಯಂತ ಶ್ರಮದಾಯಕ ಹಾಗೂ ತ್ಯಾಗಮಯ ಬದುಕಾಗಿತ್ತು.
ಬಾಬಾ ಅವರು ತಾವು ಹುಟ್ಟಿದ ಅಕ್ಬರ್‌ಪುರ ಗ್ರಾಮಕ್ಕೆ ಎಂದಾದರೂ ಹಿಂತಿರುಗುತ್ತಿದ್ದರೇ? ತಮ್ಮ ಪತ್ನಿ ಹಾಗೂ ಮಕ್ಕಳನ್ನು ಭೇಟಿಯಾಗುತ್ತಿದ್ದರೇ? ಎಂಬ ಕುತೂಹಲ ಹಲವರಲ್ಲಿದೆ. ಹೌದು, ನೀಮ್ ಕರೋಲಿ ಬಾಬಾ ಅವರು ಆಗಾಗ್ಗೆ ತಮ್ಮ ಮೂಲ ಗ್ರಾಮವಾದ ಅಕ್ಬರ್‌ಪುರಕ್ಕೆ ಭೇಟಿ ನೀಡುತ್ತಿದ್ದರು ಮತ್ತು ತಮ್ಮ ಕುಟುಂಬದವರನ್ನು ಕ್ಷೇಮ ವಿಚಾರಿಸುತ್ತಿದ್ದರು. ಆದರೆ, ಅವರ ಸಿಂಹಪಾಲು ಸಮಯವು ಸದಾ ಸಾಧನೆ, ತಪಸ್ಸು, ಧಾರ್ಮಿಕ ಯಾತ್ರೆಗಳು ಹಾಗೂ ಭಕ್ತರಿಗೆ ಜ್ಞಾನ ಬೋಧನೆಯಲ್ಲೇ ಕಳೆಯುತ್ತಿತ್ತು.