ಶಿಕಾರಿಪುರ (ನ.25) : ಬಹುಜನ ಹಿತ, ಲೋಕಕಲ್ಯಾಣದ ಭಾವನೆಯಿಂದ ಮಾಡಿದ ಪ್ರತಿಯೊಂದು ಕಾರ್ಯವು ತಪಸ್ಸು ಎನಿಸುತ್ತದೆ. ಶಿವಯೋಗಾಶ್ರಮ ಐತಿಹಾಸಿಕ ತಪೋಕ್ಷೇತ್ರ ಇಲ್ಲಿನ ಸಂಕಲ್ಪ ಸಿದ್ಧಿ ಆಗುತ್ತದೆ ಎಂದು ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ‍್ಯ ಸ್ವಾಮೀಜಿ ನುಡಿದರು. ತಾಲೂಕಿನ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಗುರುವಾರ ತಾಲೂಕು ವೀರಶೈವ ಮಹಾಸಭಾ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ನಂತರದಲ್ಲಿ ನಡೆದ ಧರ್ಮಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವದಿಸಿದರು.
ನಾವು ಮಾಡಿದ ಊಟ ರಕ್ತವಾಗುತ್ತದೆ, ಒಳ್ಳೆ ಮಾತು, ನಮ್ಮ ಬುದ್ಧಿ ಶುದ್ಧವಾಗುತ್ತದೆ. ನೀರು, ಅನ್ನ, ಒಳ್ಳೆಯ ಮಾತು ಈ ಮೂರು ರತ್ನಗಳಿದ್ದಂತೆ. ಅವುಗಳಿಂದ ಮನುಷ್ಯನಿಗೆ ತೃಪ್ತಿ ಆಗುತ್ತದೆ. ಊಟಕ್ಕೆ ಎಷ್ಟುಮಹತ್ವ ನೀಡುತ್ತೇವೆಯೋ, ಅಷ್ಟೆಮಹತ್ವವನ್ನು ಒಳ್ಳೆಯ ಮಾತು, ವಿಚಾರ ಆಲಿಸಲು ಮೀಸಲಿಡಬೇಕು. ಅಂತಹ ಅವಕಾಶ ಸಿಕ್ಕಾಗ ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು.
Daily Horoscope: ಮಿಥುನಕ್ಕೆ ವ್ಯಾಪಾರದಲ್ಲಿ ಅಡಚಣೆ, ಮಕರಕ್ಕೆ ಹಣಕಾಸಿನ ಸಮಸ್ಯೆ
ಎರಡು ನದಿ ಸೇರುವ ಸಂಗಮ ಸ್ಥಾನ ತೀರ್ಥಕ್ಷೇತ್ರ ಆಗುತ್ತದೆ. ಅಲ್ಲೊಂದು ಶಕ್ತಿ ಇರುತ್ತದೆ. ಈ ದಿಸೆಯಲ್ಲಿ ಶಿವಯೋಗಾಶ್ರಮ ಜಾಗೃತ ಕ್ಷೇತ್ರವಾಗಿದೆ. ಇಲ್ಲಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ನಾಡಿನ ಅಭ್ಯುದಯಕ್ಕಾಗಿ ಗುರು-ವಿರಕ್ತ ಪರಂಪರೆ ಸೇರಿಸುವ ಅವರ ಸಂಕಲ್ಪ ಸಿದ್ಧಿ ಆಗಲಿದೆ. ನದಿಗಳು ಕೂಡಿದ ನಂತರ ಬೇರೆ ಆಗಲು ಸಾಧ್ಯವಿಲ್ಲ. ಅದೇ ರೀತಿ ವೀರಶೈವ ಪರಂಪರೆಯ ಎರಡು ವಿಭಿನ್ನ ಗುರು-ವಿರಕ್ತ ಸಂಪ್ರದಾಯ ಸೇರಿ ಆಯೋಜಿಸಿದ ಕಾರ್ಯಕ್ರಮ ನಾಡಿನ ಎಲ್ಲೆಡೆ ಪಸರಿಸಲಿ. ನಮಗಾಗಿ ಏನಾದರೂ ಬೇಡುವುದಕ್ಕಿಂತ ಜಗತ್ತಿನ ಎಲ್ಲರಿಗೂ ಮಂಗಲವಾಗಲಿ ಎನ್ನುವ ಪ್ರಾರ್ಥನೆ ಶ್ರೇಷ್ಠವಾದದ್ದು. ಅದರಂತೆ ಎಲ್ಲರೂ ಪರಹಿತ ಬಯಸಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಹೇಳಿದರು.
ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಹುಟ್ಟು- ಸಾವಿನ ನಡುವೆ ನಾವು ಹೇಗೆ ಬದುಕುತ್ತೇವೆ ಎನ್ನುವುದು ಮಹತ್ವದ್ದು. ಪವಾಡ ಪುರುಷರ ಪಾದಸ್ಪರ್ಶ ಶಿವಯೋಗಾಶ್ರಮದಲ್ಲಿ ಆಗಿದೆ. ಸಾಧು, ಸಂತರು ತಮ್ಮ ಜೀವನಪೂರ್ತಿ ನಾಡಿಗಾಗಿ ಅನುಷ್ಠಾನ, ತಪಸ್ಸಿನ ಫಲವಾಗಿ ದೇಶ ಇಂದು ವಿಶ್ವದಲ್ಲೆ ವಿಭಿನ್ನವಾಗಿ ನಿಲ್ಲುತ್ತದೆ. ಆಧುನಿಕತೆಯ ಈ ದಿನಗಳಲ್ಲಿ ಮೌಲ್ಯಗಳ ಅಧಃಪತನ ಆಗುತ್ತಿದೆ. ಅದನ್ನು ಸರಿ ಮಾಡುವ ಕೆಲಸ ಸವಾಲಾಗಿ ಸ್ವೀಕರಿಸಬೇಕಾಗಿದೆ. ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಆಗಬೇಕಿದೆ. ಅದಕ್ಕೆ ಎಲ್ಲರೂ ಮನೆಯಲ್ಲಿ ಗಮನ ನೀಡಬೇಕು ಎಂದು ಹೇಳಿದರು.
ಸಭೆ ಆರಂಭದಲ್ಲಿ ಜಗದ್ಗುರುಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನದಿ ದಂಡೆಯಲ್ಲಿ ಇಷ್ಟಲಿಂಗ ಮಹಾಪೂಜೆ, ರುದ್ರಾಕ್ಷಿ ವಿತರಣೆ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಸಂಸದ ರಾಘವೇಂದ್ರ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.
ಕನಸಿನಲ್ಲಿ ಕೋತಿ: ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ?
ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಈರೇಶ್, ಕಾಂಚನಾ ಕುಮಾರ್, ಕುಮಾರಸ್ವಾಮಿ, ಸಚ್ಚಿದಾನಂದ ಮಠದ್, ರುದ್ರಮುನಿ, ಸುಧೀರ ಮತ್ತಿತರರು ಇದ್ದರು.