ಅಮೆರಿಕನ್ ಕಲಾವಿದನ ಕೈಚಳಕ; ಕಲಾಕೃತಿಗಳಲ್ಲಿ ದೇವಕಳೆ ಕಂಡು ಭಾರತೀಯರಿಗೆ ಪುಳಕ

By Ravi Janekal  |  First Published Nov 6, 2022, 5:19 PM IST

ಹೆಸರು ದೃಢವ್ರತ ಗೋರಿಕ್, ಹುಟ್ಟೂರು ಅಮೇರಿಕ. ಆದರೆ ಭಾರತೀಯ ಸಂಸ್ಕೃತಿಯ ಮೇಲಿನ ಇವರ ತುಡಿತ ಈ ಕಲಾವಿದನನ್ನು ಉಡುಪಿಯವರೆಗೆ ಕರೆತಂದಿದೆ. ಹಿಂದೂ ಪರಂಪರೆಯಲ್ಲಿ ಆರಾಧಿಸಲ್ಪಡುವ ವಿವಿಧ ದೇವ ದೇವತೆಗಳನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು, ಪ್ರತಿಮಾ ಲಕ್ಷಣ ಸಹಿತ ಚಿತ್ರ ಬಿಡಿಸಿ ದೃಢ ವ್ರತ ಗೋರಿಕ್ ಗಮನ ಸೆಳೆದಿದ್ದಾರೆ.


ವರದಿ-ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ನ..6) : ಭಾರತೀಯ ಸಂಸ್ಕೃತಿಯ ಬಗ್ಗೆ ಹೊರದೇಶಗಳಲ್ಲಿ ಅಪಾರ ಪ್ರೀತಿ ಕಂಡುಬರುತ್ತಿದೆ. ಭಾರತೀಯ ಕಲಾ ಪ್ರಕಾರಗಳ ಬಗ್ಗೆ ವಿದೇಶಿಗರು ಆಕರ್ಷಿತರಾಗುವುದು ಹೊಸತೇನಲ್ಲ. ಆದರೆ ಕೇವಲ ಆಕರ್ಷಣೆಗೆ ಸೀಮಿತವಾಗಿರದೆ, ಕಲಾಪ್ರಕಾರವನ್ನು ಭಾರತೀಯರೇ ಹುಬ್ಬೇರಿಸುವಂತೆ ಪ್ರಸ್ತುತಪಡಿಸಿ ಅಮೆರಿಕ ಮೂಲದ ಕಲಾವಿದರೊಬ್ಬರು ಗಮನಸೆಳೆದಿದ್ದಾರೆ. ಅಪೂರ್ವ ಪ್ರತಿಮಾ ಲಕ್ಷಣಗಳುಳ್ಳ ಭಾರತೀಯ ದೇವತೆಗಳ ಚಿತ್ರವನ್ನು ಸುಂದರವಾಗಿ ರಚಿಸಿ ಗಮನ ಸೆಳೆಯುತ್ತಿದ್ದಾರೆ.

Tap to resize

Latest Videos

undefined

ಯೋಗ ನಿದ್ರೆ ಮುಗಿಸಿ ರಥ ಬೀದಿಗೆ ಬಂದ ಕೃಷ್ಣ; ಸ್ವಾಗತಿಸಲು ಲಕ್ಷ ದೀಪೋತ್ಸವ

ಹೆಸರು ದೃಢವ್ರತ ಗೋರಿಕ್, ಹುಟ್ಟೂರು ಅಮೇರಿಕ. ಆದರೆ ಭಾರತೀಯ ಸಂಸ್ಕೃತಿಯ ಮೇಲಿನ ಇವರ ತುಡಿತ ಈ ಕಲಾವಿದನನ್ನು ಉಡುಪಿಯವರೆಗೆ ಕರೆತಂದಿದೆ. ಅಮೆರಿಕದ ಫ್ಲೋರಿಡಾ ವೆಸ್ಟ್ ವರ್ಜೀನಿಯ ದಲ್ಲಿ ಹುಟ್ಟಿ ಭಾರತೀಯ ಪರಂಪರೆಯ ಬಗ್ಗೆ ಇವರು ಆಕರ್ಷಿತಗೊಂಡು 15 ವರ್ಷಗಳ ಹಿಂದೆ ಭಾರತಕ್ಕೆ ಬಂದರು. ದಕ್ಷಿಣ ಭಾರತದ ವಿವಿಧ ಕಡೆಗಳಲ್ಲಿ ಓಡಾಡಿ, ಬಳಿಕ ಮಹಾಬಲಿಪುರಂನಲ್ಲಿ ನೆಲೆ ನಿಂತು ಗುರುಕುಲ ಪದ್ಧತಿಯಲ್ಲಿ ಶಿಲ್ಪ ಶಾಸ್ತ್ರ ಹಾಗೂ ಲೋಹ ಶಾಸ್ತ್ರದ ಅಭ್ಯಾಸ ನಡೆಸಿದರು. ಐದು ವರ್ಷಗಳ ಪರಿಶ್ರಮದ ಅಧ್ಯಯನದ ಬಳಿಕ, ಭಾರತೀಯ ಕಲೆಗಳು ಇವರಿಗೆ ಲೀಲಾಜಾಲವಾಗಿ ಒದಗಿ ಬಂತು.

ದೃಢ ವ್ರತ ಗೊರಿಕ್ ಅವರು ಬಿಡಿಸಿರುವ ಅಪರೂಪದ ಕಲಾ ಕೃತಿಗಳು ಉಡುಪಿಯಲ್ಲಿ ಪ್ರದರ್ಶನ ಗೊಳ್ಳುತ್ತಿದೆ. ಕಲಾಪೋಷಕ ಡಾ .ಕಿರಣ್ ಆಚಾರ್ಯ ಅವರ ನಿರ್ವಹಣೆಯ ಅದಿತಿ ಗ್ಯಾಲರಿಯಲ್ಲಿ ಸೂಕ್ಷ್ಮ ಕಲಾಪ್ರಜ್ಞೆಯುಳ್ಳ ಚಿತ್ರಗಳು ನೋಡುಗರನ್ನು ಸೆಳೆಯುತ್ತಿದೆ. 

ಹಿಂದೂ ಪರಂಪರೆಯಲ್ಲಿ ಆರಾಧಿಸಲ್ಪಡುವ ವಿವಿಧ ದೇವ ದೇವತೆಗಳನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು, ಪ್ರತಿಮಾ ಲಕ್ಷಣ ಸಹಿತ ಚಿತ್ರ ಬಿಡಿಸಿ ದೃಢ ವ್ರತ ಗೋರಿಕ್ ಗಮನ ಸೆಳೆದಿದ್ದಾರೆ. ಭಾರತೀಯ ಕಲಾವಿದರಿಗೂ ಸುಲಭವಾಗಿ ಒಲಿಯದ, ಅಪರೂಪದ ನೈಪುಣ್ಯತೆ ಇವರಲ್ಲಿದೆ. ಅದಿತಿ ಗ್ಯಾಲರಿಯ ಕಲಾತ್ಮಕ ವಾತಾವರಣದಲ್ಲಿ ಮೂರು ದಿನಗಳ ಕಾಲ ಇವರ ಸುಂದರ ರಚನೆಗಳ ಪ್ರದರ್ಶನ ನಡೆಯುತ್ತಿದೆ.

ದೃಢ ವ್ರತ ಗಂಧರ್ವಿಕಾ ಲವ್ ಸ್ಟೋರಿ

ಈ ಅದ್ಭುತ ಕಲಾವಿದನ ಕೈಚಳಕಕ್ಕೆ ನಿಜವಾದ ಸ್ಪೂರ್ತಿ ಅವರ ಪತ್ನಿ ಕೊಲ್ಲೂರು ಮೂಲದ ಗಂಧರ್ವಿಕಾ. ಗೋರಿಕ್ ಅವರ ಕಲಾ ಪ್ರತಿಭೆಗೆ ಮನಸೋತ ಕೊಲ್ಲೂರಿನ ಗಂದರ್ವಿಕಾ  ಇವರನ್ನು ಮದುವೆಯಾದರು. ಸದ್ಯ ಈ ದಂಪತಿಗಳು ಉಡುಪಿಯಲ್ಲಿ ನೆಲೆಯೂರಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಗೋರಿಕ್,  ಆಕಸ್ಮಿಕವಾಗಿ ಗಂಧರ್ವಿಕಾ ರನ್ನು ಭೇಟಿಯಾದರು. ತಾವು ರಚಿಸಿರುವ ಕಲಾಕೃತಿಗಳನ್ನು ಮೊದಲ ಬಾರಿ ಅವರಿಗೆ ತೋರಿಸಿದರು. ಮೊದಲ ನೋಟದಲ್ಲೇ ಪರಸ್ಪರ ಇಬ್ಬರು ಮೆಚ್ಚಿಕೊಂಡರು. ಮನಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಗಂಧರ್ವಿಕಾ ಪತಿಯನ್ನು ಅರ್ಥೈಸಿಕೊಂಡು ಕಲಾಪೋಷಣೆ ಮಾಡುತ್ತಿದ್ದಾರೆ.

ಇವರಿಬ್ಬರ ಪ್ರೀತಿಯ ಮಗ ದೇವೇಶನಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೊತೆಗೆ ಸಂಸ್ಕೃತ ಹಾಗೂ ಆಧುನಿಕ ಕಲೆಯನ್ನು ಪರಿಚಯಿಸಬೇಕೆಂಬ ಕನಸು ಹೊತ್ತಿದ್ದಾರೆ ಈ ದಂಪತಿಗಳು. ಕೊಲ್ಲೂರಿನ ಅವಿಭಕ್ತ ಕುಟುಂಬದಲ್ಲಿ ಇವರು ಸುಮಾರು 12 ಗೋವುಗಳ ಸಾಕಣೆ ಮಾಡುತ್ತಾ ಗೋಶಾಲೆ ನಡೆಸುತ್ತಿದ್ದಾರೆ. ಕೊಡಚಾದ್ರಿಯ ಮಾರ್ಗದಲ್ಲಿ ಇವರ ಸ್ಥಳವಿದ್ದು ಕೃಷಿ ನಡೆಸುತ್ತಿದ್ದಾರೆ. ಈಗಾಗಲೇ ದೃಢವ್ರತ ಅವರ ಚಿತ್ರಕಲೆಗಳ ಪ್ರದರ್ಶನ ಚೀನಾ, ಥೈಲ್ಯಾಂಡ್, ದೆಹಲಿ, ಅಮೇರಿಕಾ, ಸ್ಪೈನ್ ದೇಶಗಳಲ್ಲಿ ನಡೆದಿದೆ.

ಉಡುಪಿಯಲ್ಲಿ ಒಂದು ಸ್ವಂತ ಆರ್ಟ್ ಸ್ಟುಡಿಯೋ ನಡೆಸುವ ಬಯಕೆ ಈ ದಂಪತಿಗಳಿಗಿದೆ. ತನ್ನ ಪತಿಯ ಕಲಾ ಪ್ರೇಮಕ್ಕೆ ಗಂಧರ್ವಿಕಾ ಬೆನ್ನೆಲುಬಾಗಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಅತಿ ಹೆಚ್ಚು ಇಷ್ಟಪಡುವ ಇವರ ಕುಟುಂಬ ತತ್ವಶಾಸ್ತ್ರದ ಬಗೆಗೂ ವಿಶೇಷ ಒಲವು ಹೊಂದಿದೆ.

ಅದಿತಿ ಗ್ಯಾಲರಿಯಲ್ಲಿ ದೃಢವೃತ -ದಿವ್ಯಕಲಾ ಅನಾವರಣ 

ಉಡುಪಿ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ಅಮೇರಿಕಾ ಸಂಜಾತ ದೃಢವೃತ ಗೋರಿಕ್ ಅವರ  'ದಿವ್ಯಕಲಾ' ಕಲಾ ಪ್ರದರ್ಶನ ಅನಾವರಣಗೊಂಡಿತು. ಮಣಿಪಾಲ ಕಸ್ತೂರಿಬಾ ಆಸ್ಪತ್ರೆಯ ಡೀನ್ ಡಾ. ಶರತ್ ರಾವ್ ಉದ್ಘಾಟಿಸಿದರು. 

ಕಡಗೋಲು ಕೃಷ್ಣನಿಗೆ ಪಕ್ಷಿ ಕೂಗುವ ಹೊತ್ತಲ್ಲಿ ಪಶ್ಚಿಮ ಜಾಗರಣ ಪೂಜೆ

ಆಹಾರ ಎನ್ನುವ ಶಬ್ದ ಕೇವಲ ಜಠರಾಗ್ನಿಯನ್ನು ತಣಿಸಿದರೆ ಸಾಲದು . ನಾವು ನೋಡುವ ಪ್ರತಿ ದೃಶ್ಯವೂ ಆಹಾರವಾಗಬೇಕು. ಇದರಿಂದ ಮಾನವನ ಆಧ್ಯಾತ್ಮಿಕ ಪ್ರಗತಿಯೂ ಸಾಧ್ಯವಾಗುತ್ತದೆ. ಎಂದು ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮೀಜಿ ತಮ್ಮ ಆಶೀರ್ವವಚನದಲ್ಲಿ ತಿಳಿಸಿದರು  ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥರಾದ ಡಾ . ಕಿರಣ್ ಆಚಾರ್ಯ ಉಪಸ್ಥಿತರಿದ್ದರು. ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ ವಂದಿಸಿದರು.

click me!