"ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ" ಬಬಲಾದಿ ಮಠದ ಬೆಂಕಿ ಭವಿಷ್ಯ, ಮುತ್ಯಾನಿಂದ ಕಷ್ಟಕಾಲದ ಎಚ್ಚರಿಕೆ!

Published : Feb 19, 2026, 04:12 PM IST
Babaladi kalajnana prediction

ಸಾರಾಂಶ

ವಿಜಯಪುರದ ಬಬಲಾದಿ ಮಠದ ಈ ವರ್ಷದ ಬೆಂಕಿ ಭವಿಷ್ಯ ಪ್ರಕಟವಾಗಿದ್ದು, "ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ" ಎಂಬ ಎಚ್ಚರಿಕೆ ನೀಡಿದೆ. ಈ ಪರಾಭವನಾಮ ಸಂವತ್ಸರದ ಭವಿಷ್ಯವು ರಾಜಕೀಯ ತಿರುವು, ಪ್ರಕೃತಿ ವಿಕೋಪಗಳ ಜೊತೆಗೆ ರೈತರಿಗೆ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ.

ವಿಜಯಪುರ: ಕಾಲಜ್ಞಾನ ಮತ್ತು ಬೆಂಕಿ ಭವಿಷ್ಯಕ್ಕೆ ಹೆಸರಾಗಿರುವ ಬಬಲಾದಿ ಮಠದಲ್ಲಿ ಈ ವರ್ಷದ ಬೆಂಕಿ ಭವಿಷ್ಯ ಹೊರಬಿದ್ದಿದೆ. ಪ್ರತಿವರ್ಷ ಮಹಾಶಿವರಾತ್ರಿಯ ಮೂರನೇ ದಿನ ನುಡಿಯಲಾಗುವ ಈ ಬೆಂಕಿ ಭವಿಷ್ಯಕ್ಕೆ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ವಿಶೇಷ ಮಹತ್ವವಿದ್ದು, ಈ ಬಾರಿ ನುಡಿದ ಭವಿಷ್ಯವೂ ಭಕ್ತರಲ್ಲಿ ಕುತೂಹಲ ಮೂಡಿಸಿದೆ. "ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ" ಎಂದು ಬಬಲಾದಿ ಮಠದ ಕಾಲಜ್ಞಾನ ಎಚ್ಚರಿಕೆ ನೀಡಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯಲ್ಲಿರುವ ಸದಾಶಿವ ಮುತ್ಯಾರ ಮಠದಲ್ಲಿ, ಮಠದ ಪರಂಪರೆಯಂತೆ ಈ ವರ್ಷದ ಕಾಲಜ್ಞಾನ ಭವಿಷ್ಯವನ್ನು ನುಡಿಯಲಾಗಿದೆ. ಸಿದ್ದು ಮುತ್ಯಾ (ಶ್ರೀ ಸಿದ್ರಾಮಪ್ಪ ಹೋಳಿಮಠ) ಅವರು ಶ್ರೀಶಕೆ 1948, ಪರಾಭವನಾಮ ಸಂವತ್ಸರದ ಭವಿಷ್ಯವನ್ನು ಪ್ರಕಟಿಸಿದ್ದಾರೆ.

ಶುಭ–ಅಶುಭ ಫಲಗಳು ಸಮ

ಈ ವರ್ಷ ಶುಭ ಹಾಗೂ ಅಶುಭ ಫಲಗಳು ಸಮವಾಗಿರುತ್ತವೆ ಎಂದು ಭವಿಷ್ಯ ನುಡಿಯಲಾಗಿದೆ. ಜನರ ಜೀವನದಲ್ಲಿ ಕೆಲವು ಸುಧಾರಣೆಗಳು ಕಂಡುಬಂದರೂ, ಅಲ್ಲಲ್ಲಿ ಸಮಸ್ಯೆಗಳು ಎದುರಾಗಲಿವೆ ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಆರೋಗ್ಯ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರಕೃತಿ ವಿಕೋಪಗಳ ಎಚ್ಚರಿಕೆ

ಬಬಲಾದಿ ಮಠದ ಭವಿಷ್ಯದಲ್ಲಿ ಈ ವರ್ಷ ಅಗ್ನಿ ಅನಾಹುತಗಳು, ಅತಿಗಾಳಿ, ಕೆಂಡಮಂಡಲದಂತಹ ಪರಿಸ್ಥಿತಿ, ಹಾಗೂ ಕಾಡುಪ್ರಾಣಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆಗಳ ಬಗ್ಗೆ ಉಲ್ಲೇಖಿಸಲಾಗಿದೆ. “ಅತಿ ದೊಡ್ಡ ದುಃಖದ ಸುದ್ದಿ ಬಂದೀತಣ್ಣ” ಎಂದು ಸಿದ್ದು ಮುತ್ಯಾ ಅವರು ನುಡಿದಿದ್ದು, ಇದು ದೊಡ್ಡ ಮಟ್ಟದ ದುಃಖ ಅಥವಾ ಆಘಾತಕಾರಿ ಘಟನೆಗೆ ಸೂಚನೆ ಎನ್ನಲಾಗುತ್ತಿದೆ. ಇನ್ನು ಉತ್ತರ ಭಾರತದಲ್ಲಿ ಅತಿವೃಷ್ಟಿ, ವಿಶ್ವದ ಕೆಲವೆಡೆ ಭೂಕುಸಿತ, ಹಾಗೂ ನೈಸರ್ಗಿಕ ವಿಕೋಪಗಳ ಪ್ರಮಾಣ ಹೆಚ್ಚಾಗುವ ಬಗ್ಗೆ ಭವಿಷ್ಯ ನುಡಿಯಲಾಗಿದೆ. ಆದರೂ, ಉತ್ತಮ ಮಳೆಯ ಸಾಧ್ಯತೆ ಇರುವುದರಿಂದ ರೈತರಿಗೆ ಹೆಚ್ಚು ಒಳಿತಾಗಲಿದೆ ಎಂದು ಭವಿಷ್ಯ ತಿಳಿಸಿದೆ.

ರಾಜಕೀಯ ಹಾಗೂ ದೇಶದ ಭದ್ರತೆ ಕುರಿತು ಭವಿಷ್ಯ

"ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು" ಮೂಡುತ್ತವೆ. ದೇಶದ ಗಡಿಗಳಲ್ಲಿ ಆತಂಕದ ವಾತಾವರಣ, ಯುದ್ಧ ಭೀತಿ. ನೈಸರ್ಗಿಕ ವಿಕೋಪಗಳ ಹಾವಳಿ ಹೆಚ್ಚಿತು ತಿಳಿಯಿರಣ್ಣ.‌ ಉತ್ತಮ ಮಳೆ, ನೈಸರ್ಗಿಕ ವಿಕೋಪ ಭೂಕುಸಿತ ಎಂದ ಸಿದ್ದು ಮುತ್ಯಾ.

ಮಳೆ, ಪ್ರವಾಹ ಮತ್ತು ಆರ್ಥಿಕ ಸ್ಥಿತಿ

ಈ ವರ್ಷ ಉತ್ತಮ ಮಳೆ ಆಗುವ ಸಾಧ್ಯತೆ ಇದ್ದರೂ, ಕೆಲವೆಡೆ ಭಾರೀ ಮಳೆಯಿಂದ ಪ್ರವಾಹ ಉಂಟಾಗಬಹುದು ಎಂದು ಭವಿಷ್ಯ ಹೇಳುತ್ತದೆ. ಆದರೆ, ಪ್ರವಾಹ ಬಂದರೂ ಭಾರೀ ನಷ್ಟದ ಭಯ ಇಲ್ಲ ಎಂಬ ಭರವಸೆಯ ಮಾತು ಕೂಡ ನುಡಿಯಲಾಗಿದೆ. ಮುಂಗಾರು ಮಳೆ 7 ಆಣೆ, ಹಿಂಗಾರು ಮಳೆ 9 ಆಣೆ ಆಗಲಿದೆ ಎಂದು ಹೇಳಿದ್ದಾರೆ. ಆರ್ಥಿಕವಾಗಿ ಈ ವರ್ಷ ಸ್ಥಿರ ಬೆಳವಣಿಗೆ ಕಂಡುಬರುವ ಸಾಧ್ಯತೆ ಇದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗಲಿದೆ ಎಂದು ಭವಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಜನರ ಆರೋಗ್ಯದಲ್ಲಿಯೂ ಸುಧಾರಣೆ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಶತಮಾನಗಳ ಕಾಲಜ್ಞಾನ ಪರಂಪರೆ

ಬಬಲಾದಿ ಮಠವು ಕಾಲಜ್ಞಾನಕ್ಕೆ ಅಪಾರ ಖ್ಯಾತಿ ಪಡೆದ ಮಠವಾಗಿದೆ. ಸುಮಾರು 400–500 ವರ್ಷಗಳ ಹಿಂದೆ ಸದಾಶಿವ ಅಜ್ಜ ನುಡಿದ ಭವಿಷ್ಯಗಳನ್ನು, ಅವರ ಶಿಷ್ಯರಾದ ಚಿಕ್ಕಯ್ಯಪ್ಪ ಮುತ್ಯಾ ಬರವಣಿಗೆಯಾಗಿ ದಾಖಲಿಸಿದ್ದರೆಂದು ಪರಂಪರೆ ಹೇಳುತ್ತದೆ. ಪ್ರತಿವರ್ಷ ಇಲ್ಲಿ ನುಡಿಯುವ ರಾಜಕೀಯ, ಯುದ್ಧ, ಬರಗಾಲ, ಪ್ರವಾಹದ ಭವಿಷ್ಯಗಳು ಸತ್ಯವಾಗಿವೆ ಎಂಬ ನಂಬಿಕೆ ಭಕ್ತರಲ್ಲಿ ಗಾಢವಾಗಿದೆ. “ಬಬಲಾದಿ ಮಠದ ಭವಿಷ್ಯ ಎಂದಿಗೂ ಸುಳ್ಳಾಗುವುದಿಲ್ಲ” ಎಂಬ ಪ್ರತೀತಿಯೊಂದಿಗೆ, ಈ ವರ್ಷದ ಬೆಂಕಿ ಭವಿಷ್ಯವನ್ನು ಭಕ್ತರು ಶ್ರದ್ಧೆಯಿಂದ ಸ್ವೀಕರಿಸುತ್ತಿದ್ದಾರೆ.

PREV
Read more Articles on
click me!

Recommended Stories

22 ದಿನಗಳವರೆಗೆ ನೆಪ್ಚೂನ್ ಅಸ್ತಮ, ಈ 3 ರಾಶಿಗೆ ಇದ್ದಕ್ಕಿದ್ದಂತೆ ಹಣ, ಲಾಭ
ಭಾಗ್ಯವಂತರು.. ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಳು ಅತ್ತೆ ಮನೆಯಲ್ಲಿ ಎಲ್ಲರ ಅಚ್ಚುಮೆಚ್ಚು!