ನಾಳೆ ಭೀಮನ ಅಮವಾಸ್ಯೆಗೆ ಗ್ರಹಣದ ಕಾರ್ಮೋಡ: ಹಬ್ಬಕ್ಕೆ ಸೂಕ್ತ ಮುಹೂರ್ತ ಯಾವುದು? ಆಚರಣೆ ಹೇಗೆ

Published : Aug 11, 2026, 03:14 PM IST
Bheemana Amavasye and Eclipse

ಸಾರಾಂಶ

ಆಗಸ್ಟ್ 12 ರಂದು ಬರುವ ಭೀಮನ ಅಮವಾಸ್ಯೆಯು ಸೂರ್ಯಗ್ರಹಣದೊಂದಿಗೆ ಸೇರಿಕೊಂಡಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ, ಪತಿಯ ದೀರ್ಘಾಯುಷ್ಯಕ್ಕಾಗಿ ಮಾಡುವ ಜ್ಯೋತಿರ್ಭೀಮೇಶ್ವರ ವ್ರತವನ್ನು ಯಾವುದೇ ಗೊಂದಲವಿಲ್ಲದೆ ಆಚರಿಸಬಹುದು. ಈ ದಿನದ ಪೂಜಾ ವಿಧಾನ ಮತ್ತು ಪೂರ್ವಜರ ಆರಾಧನೆಯ ಬಗ್ಗೆ ಲೇಖನವು ವಿವರಿಸುತ್ತದೆ.

ನಾಳೆ ಅರ್ಥಾತ್​ ಆಗಸ್ಟ್​ 12 ಭೀಮನ ಅಮವಾಸ್ಯೆ. ಇದು ಹಿಂದೂಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಕರ್ನಾಟಕದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದ್ದು, ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಶಿವನನ್ನು ಹಾಗೂ ಭೀಮನನ್ನು ಪೂಜಿಸುತ್ತಾರೆ. ತುಳುನಾಡು ಭಾಗದಲ್ಲಿ ಇದನ್ನು 'ಆಟಿ ಅಮಾವಾಸ್ಯೆ' ಎಂದೂ ಕರೆಯುತ್ತಾರೆ. ಆದರೆ ನಾಳೆ ಸೂರ್ಯ ಗ್ರಹಣವೂ ಹೌದು. ಆದ್ದರಿಂದ ಭೀಮನ ಅಮವಾಸ್ಯೆಗೆ ಗ್ರಹಣದ ಕಾರ್ಮೋಡ ಬಡಿದಿದ್ದು, ಪತಿಯ ಪೂಜೆಗೆ ಮುಹೂರ್ತ ಯಾವುದು ಎನ್ನುವ ಬಗ್ಗೆ ಸಾಕಷ್ಟು ಮಂದಿಯಲ್ಲಿ ಗೊಂದಲ ಸೃಷ್ಟಿಯಾಗಿದೆ.

ಗ್ರಹಣದ ಅವಧಿ

ಮೊದಲಿಗೆ ಸೂರ್ಯ ಗ್ರಹಣದ ಅವಧಿಯನ್ನು ನೋಡೋಣ:

ಗ್ರಹಣ ಆರಂಭ: ಆಗಸ್ಟ್​ 12ರ ರಾತ್ರಿ 9:4 ರಿಂದ

ಗ್ರಹಣ ಮುಕ್ತಾಯ: ಆಗಸ್ಟ್‌ 13ರ ಮುಂಜಾನೆ 4:25 ರವರೆಗೆ

ಭೀಮನ ಅಮವಾಸ್ಯೆಗೆ ಪೂಜೆಗೆ ಮುಹೂರ್ತ ಏನು?

ಅಷ್ಟಕ್ಕೂ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಯಾವುದೇ ಸೂತಕದ ಕಾಲವಿರುವುದಿಲ್ಲ. ಆದ್ದರಿಂದ ಭಯವಿಲ್ಲದೆ ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ವ್ರತವನ್ನು ನಿರ್ಭೀತಿಯಿಂದ ಆಚರಿಸಬಹುದಾಗಿದೆ. ಆದ್ದರಿಂದ, ಅಮವಾಸ್ಯೆಯಂದು ಭಯ ಅಥವಾ ಗೊಂದಲಕ್ಕಿಂತ ಹೆಚ್ಚಾಗಿ ಸ್ನಾನ, ದಾನ ಮತ್ತು ಪೂಜೆಯನ್ನು ಸಾಮಾನ್ಯವಾಗಿ ಮಾಡಬಹುದು. ವಿದೇಶದಲ್ಲಿ ವಾಸಿಸುವವರು ತಮ್ಮ ನಗರವನ್ನು ಆಧರಿಸಿ ಗ್ರಹಣ ಮತ್ತು ಸೂತಕದ ಸಮಯವನ್ನು ಪರಿಶೀಲಿಸಬೇಕು.

ಆಚರಣೆ ಮಾಡುವುದು ಹೇಗೆ?

ಭೀಮನ ಅಮಾವಾಸ್ಯೆಯಂದು ಮಹಿಳೆಯರು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮನೆಯ ದೇವರ ಕೋಣೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲವರು ಉಪವಾಸ ಅಥವಾ ವ್ರತ ಆಚರಿಸಿ, ದೀಪ ಬೆಳಗಿಸಿ ದೇವರ ಆರಾಧನೆ ಮಾಡುತ್ತಾರೆ. ಪತಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವುದು ಈ ಆಚರಣೆಯ ಪ್ರಮುಖ ಭಾಗವಾಗಿದೆ.

ಅಮವಾಸ್ಯೆಯಂದು ಪೂರ್ವಜರಿಗೆ ನೀರನ್ನು ಅರ್ಪಿಸುವ ಸಂಪ್ರದಾಯವಿದೆ. ಬೆಳಿಗ್ಗೆ ಸ್ನಾನ ಮಾಡಿದ ನಂತರ, ದಕ್ಷಿಣಕ್ಕೆ ಮುಖ ಮಾಡಿ ಕಪ್ಪು ಎಳ್ಳನ್ನು ಶುದ್ಧ ನೀರಿನಲ್ಲಿ ಬೆರೆಸಿ ನಿಮ್ಮ ಪೂರ್ವಜರನ್ನು ಸ್ಮರಿಸುತ್ತಾ ಅರ್ಪಿಸಿ. ನಿಮ್ಮ ಕುಟುಂಬದಲ್ಲಿ ನಿಮಗೆ ತಿಳಿದಿರುವ ಪೂರ್ವಜರ ಹೆಸರುಗಳನ್ನು ಮಾನಸಿಕವಾಗಿ ನೆನಪಿಸಿಕೊಳ್ಳಿ. ನಿಮಗೆ ಅವರ ಹೆಸರುಗಳು ನೆನಪಿಲ್ಲದಿದ್ದರೂ ಸಹ, ನಿಮ್ಮ ಎಲ್ಲಾ ಪೂರ್ವಜರಿಗೆ ನೀವು ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು. ಬಳಿಕ, ಭಿಕ್ಷುಕರಿಗೆ ಊಟ ಹಾಕಿ ಅಥವಾ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಿಟ್ಟು, ಅಕ್ಕಿ, ಬೇಳೆ, ಬಟ್ಟೆ ಅಥವಾ ದಕ್ಷಿಣೆಯನ್ನು ಅಗತ್ಯ ಇದ್ದವರಿಗೆ ದಾನ ಮಾಡಿ. ಪೂರ್ವಜರ ಹೆಸರಿನಲ್ಲಿ ಮಾಡುವ ದಾನಗಳು ಕುಟುಂಬಕ್ಕೆ ಶಾಂತಿ ಮತ್ತು ತೃಪ್ತಿಯನ್ನು ತರುತ್ತವೆ ಎನ್ನಲಾಗಿದೆ.

PREV
Read more Articles on
click me!

Recommended Stories

ಮೊಬೈಲ್ ನಲ್ಲಿ ಸೂರ್ಯಗ್ರಹಣ ನೋಡಿದ್ರೆ ತೊಂದರೆ ಏನಾಗುತ್ತೆ? ಈ ಟೈಂನಲ್ಲಿ ಗರ್ಭಿಣಿಯರು ಏನು ಮಾಡ್ಬೇಕು?
ನಾಳೆ ಭೀಮನ ಅಮಾವಾಸ್ಯೆ ದಿನವೇ ಸೂರ್ಯಗ್ರಹಣ, ಮುಂದಿನ 90 ದಿನಗಳು ಈ 4 ರಾಶಿಚಕ್ರ ಚಿಹ್ನೆಗಳಿಗೆ ಶುಭ