
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಇರುವ ಶ್ರೀ ಕೊಟ್ಟಿಯೂರು ಶಿವನ ಆಲಯಕ್ಕೆ ನಟ, ಸಂಸದ ಜಗ್ಗೇಶ್ ಅವರು ಭೇಟಿ ನೀಡಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಆಧ್ಯಾತ್ಮಿಕ ಕ್ಷಣ ಎಂದು ತಿಳಿಸಿದ್ದಾರೆ. ದಕ್ಷಬ್ರಹ್ಮನ ಶಿರಚ್ಛೇದ ಮಾಡಿದ ಶಿವನ ಅಂಶ ವೀರಭದ್ರನ ಐತಿಹಾಸಿಕ ಕ್ಷೇತ್ರ ಎಂಬ ದೃಢನಂಬಿಕೆ ಇರುವುದಾಗಿ ಅವರು ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ವರ್ಷಕ್ಕೆ 28 ದಿನಗಳು ಮಾತ್ರ ಪೂಜಾ ಕಾರ್ಯ ನಡೆಯುತ್ತದೆ. ಹಿಂದೆ ಕಾಡಿನ ಸುತ್ತಮುತ್ತ ವಾಸಮಾಡುತ್ತಿದ್ದ ಜನರ ಆರಾಧನ ಕ್ಷೇತ್ರವಾಗಿತ್ತು...ಇಂದು ಶಬರಿಮಲೆ ಅಯ್ಯಪ್ಪನ ಆಲಯದಂತೆ ಪ್ರಸಿದ್ಧಿ ಪಡೆದಿದೆ ಎಂದಿರುವ ನಟ ತಮ್ಮ ಆತ್ಮೀಯ ಮಿತ್ರ ಕೇರಳ ರಾಜ್ಯದ (DIG) ಪೋಲಿಸ್ ಆಧಿಕಾರಿ ಯತೀಶ್ ಚಂದ್ರ ರವರು ನನ್ನ ಬರಮಾಡಿಕೊಂಡು ದರ್ಶನಕ್ಕೆ ಸಹಕಾರಿಯಾದರು ಎಂದು ತಿಳಿಸಿದ್ದಾರೆ.
ಹಾಗಿದ್ದರೆ ಏನಿದು ದೇಗುಲ? ಯಾವುದಕ್ಕೆ ಇದು ಪ್ರಸಿದ್ಧಿ ಪಡೆದಿದೆ ಎನ್ನುವುದನ್ನು ಒಮ್ಮೆ ನೋಡೋಣ. ಇದು ಒಂದು ಪ್ರಸಿದ್ಧ ಶಿವನ ದೇವಾಲಯವಾಗಿದ್ದು, ವರ್ಷದಲ್ಲಿ ಕೆಲವು ದಿನಗಳ ಕಾಲ ಮಾತ್ರ ತೆರೆದಿರುತ್ತದೆ. ಇದನ್ನು ದಕ್ಷಿಣ ಕಾಶಿ ಎಂದು ಕೂಡ ಕರೆಯಲಾಗುತ್ತದೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿನ ವೈಶಾಖ ಮಹೋತ್ಸವ. ಈ ಸಮಯದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಮೂಲತಃ ಮುಕ್ಕಣ್ಣ ಶಿವನ ಆಲಯ. ಜೊತೆಗೆ ಇಲ್ಲಿ ಶಿವನ ಜೊತೆಗೆ ಆತನ ಪತ್ನಿ, ಪಾರ್ವತಿಯ ಮತ್ತೊಂದು ಅವತಾರ ಎಂದು ನಂಬಲಾಗುವ ಸತಿದೇವಿ ಅಥವಾ ದಾಕ್ಷಾಯಣಿದೇವಿ ಮತ್ತು ಬ್ರಹ್ಮ ಹಾಗೂ ವಿಷ್ಣುವನ್ನೂ ಇಲ್ಲಿ ಆರಾಧಿಸಲಾಗುತ್ತದೆ. ಆದ್ರೆ ಪ್ರಮುಖವಾಗಿ ಇಲ್ಲಿ ಶಿವನೇ ಆರಾಧ್ಯ ದೈವ.
ಇದರ ವಿಶೇಷತೆ ಏನೆಂದರೆ, ಇದಕ್ಕೆ ಕಟ್ಟಡ ಅಂತೇನಿಲ್ಲ. ಆದರೆ, ಪ್ರತಿ ವರ್ಷ ವೈಶಾಖದ ಸಮಯದಲ್ಲಿ ಮಾಸ ಈ ದೇವಸ್ಥಾನ 28 ದಿನಗಳ ಕಾಲ ಭಕ್ತರಿಗೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ಎಲ್ಲಾ ದಿನಗಳಲ್ಲಿ ಇಲ್ಲಿಗೆ ಯಾರಿಗೂ ಪ್ರವೇಶವಿಲ್ಲ. ಆ ಸಂದರ್ಭ ಇಲ್ಲಿ ಗಿಡಗಂಟಿಗಳು ಬೆಳೆಯುತ್ತವೆ. ಮತ್ತೆ ಮುಂದಿನ ವರ್ಷ ವೈಶಾಖ ಮಾಸ ಬಂದಾಗ ಇಲ್ಲಿಗೆ ಆಗಮಿಸುವ ಕೇರಳದ ಕೆಲವು ಸಮುದಾಯದ ಜನರು ಇಲ್ಲಿ ಎಲ್ಲವನ್ನೂ ಸ್ವಚ್ಛಮಾಡಿ ತೆಂಗಿನ ಗರಿಗಳ ತಾತ್ಕಾಲಿಕ ದೇವಸ್ಥಾನ ನಿರ್ಮಿಸುತ್ತಾರೆ. ಈ ದೇವಸ್ಥಾನದ ಒಳಗಡೆ ದೀಪ ಹಚ್ಚುತ್ತಾರೆ. ಅಲ್ಲೊಂದು ಉದ್ಭವ ಶಿವಲಿಂಗ ಇದೆ. ಹರಕೆ ಹೊರುವವರು ಈ ಶೇಡ್ ಮಾದರಿಯ ದೇವಸ್ಥಾನದ ಒಳಗೆ ಹೋಗಿ ಬೆಳ್ಳಿಕೊಡ ಸಮರ್ಪಣೆ ಮತ್ತು ಸ್ವರ್ಣ ಕೊಡೆ ಸಮರ್ಪಣೆ ಮಾಡಿ ಬರುತ್ತಾರೆ.
ಬೆಳಗ್ಗೆ 5 ಗಂಟೆಯಿಂದ ಈ ದೇವಸ್ಥಾನ ರಾತ್ರಿ 10 ಗಂಟೆಯವರೆಗೂ ತೆರೆದಿರುತ್ತದೆ. ದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಆಗಮಿಸ್ತಾರೆ. ಒಟ್ಟು 28 ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದ್ರೂ ಕೂಡ ಎಲ್ಲಿಯೂ ಗಜಿ ಬಿಜಿ, ಅವ್ಯವಸ್ಥೆ ಇಲ್ಲ. ಆಯಾಸ ಇಲ್ಲ. ಎಲ್ಲವೂ ಸುಸೂತ್ರವಾಗಿಯೇ ನೆರವೇರುತ್ತದೆ. ಈ ಕೊಟ್ಟಿಯೂರು ಕ್ಷೇತ್ರ ಮತ್ತೊಂದು ವಿಶೇಷತೆ ಅಂದ್ರೆ ಇಲ್ಲಿ ದಿನಕ್ಕೆ ಎರಡು ಶೀವೇಲಿ ಆಚರಣೆ ನಡೆಯುತ್ತದೆ. ಅಂದರೆ ಎರಡು ಆನೆಗಳನ್ನ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಇದು ಶಿವ ಮತ್ತು ಪಾರ್ವತಿಯ ಸ್ವರೂಪ ಎಂದೇ ಭಕ್ತರು ನಂಬಲಾಗಿದೆ. ಹೀಗೆ ಕೊಟ್ಟಿಯೂರ ಶ್ರೀ ಕ್ಷೇತ್ರ ಹತ್ತು ಹಲವು ವಿಶಿಷ್ಟ ಆಚರಣೆಗಳ ತವರೂರಾಗಿದೆ.