ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವು ಜನರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ವಿಶ್ವಕರ್ಮ ಸಮಾಜದ ಕಾರ್ಯಕ್ರಮದಲ್ಲಿ ವಂಚಿತರು ಪ್ರತಿಭಟನೆ ನಡೆಸಿ, ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆಯಿತು.
ಬೆಂಗಳೂರು (ಜೂ. 20): ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಹಲವು ಜನರಿಗೆ ಸರ್ಕಾರಿ ಕೆಲಸ ಕೊಡಿಸೋದಾಗಿ 10 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚನೆ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ನಾಯಕರು, ರಾಜ್ಯ ಸರ್ಕಾರದ ಸಿಎಂ, ಡಿಸಿಎಂ ಜೊತೆಗೆ ಅತ್ಯಾಪ್ತರಂತೆ ಪೋಸ್ ಕೊಟ್ಟು ನಿಂತುಕೊಂಡವರು ಭಾರೀ ಹಗರಣದಲ್ಲಿ ಸಿಕ್ಕಿಬೀಳುತ್ತಿದ್ದಾರೆ. ಇದೀಗ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಹಲವು ಜನರಿಗೆ ಸರ್ಕಾರಿ ಕೆಲಸ ಕೊಡಿಸೋದಾಗಿ 10 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚನೆ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ನನಗೆ ಸಿಎಂ, ಡಿಸಿಎಂ ಆಪ್ತಳಂತಿರುವ ವಸಂತ ಮುರುಳಿ ಕರ್ಮಕಾಂಡ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿಯೇ ಬಟಾ ಬಯಲಾಗಿದೆ. ಹಣ ಕೊಟ್ಟವರು ಜುಟ್ಟು ಹಿಡಿದು ಹೊಡೆಯಲು ಬಂದಿದ್ದು, ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಇದರಿಂದ ಸರ್ಕಾರಕ್ಕೂ ಇರಿಸು-ಮುರಿಸು ಉಂಟಾಗಿದೆ.
ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ವಿಶ್ವಕರ್ಮ ಸಮಾಜದ ಕಾರ್ಯಕ್ರಮದ ವೇಳೆ ಭಾರೀ ಗಲಾಟೆ ನಡೆದಿದೆ. ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷೆ ಎಂದು ಗುರುತಿಸಲ್ಪಟ್ಟ ವಸಂತ ಮುರಳಿ ವಿರುದ್ಧ ಹಲವರು ಗಂಭೀರ ಆರೋಪ ಹೊರಿಸಿದ್ದಾರೆ. ಬೆಂಗಳೂರು ನಗರದ ಟೌನ್‌ಹಾಲ್‌ನಲ್ಲಿ ವಿಶ್ವಕರ್ಮ ಸಮುದಾಯದ ಸಮಾವೇಶ ನಡೆಯುತ್ತಿದ್ದ ವೇಳೆ, ಸರಣಿ ವಂಚನೆಗೊಳಗಾದ ಹಲವಾರು ಮಹಿಳೆಯರು ಹಾಗೂ ಯುವಕರು ವೇದಿಕೆಗೆ ಮುತ್ತಿಗೆ ಹಾಕಿ ವಸಂತ ಮುರಳಿ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲಿ ಗಲಾಟೆ ಉಂಟಾಗಿ ಕೆಲವರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಟ ನಡೆಸಿದ ಘಟನೆ ಕೂಡ ನಡೆಯಿತು.
ಒಂದೂವರೆ ವರ್ಷದಿಂದ ಕಾದಿದ್ದ ಮಹಿಳೆಯರ ಆಕ್ರೋಶ:
ಗಂಗಮ್ಮ ಎಂಬ ಮಹಿಳೆಯು ನೀಡಿದ ದೂರಿನ ಪ್ರಕಾರ, 'ವಸಂತ ಮುರಳಿ ಹಾಗೂ ನಿಖಿತಾ ರೆಡ್ಡಿ ಅವರು ಸರ್ಕಾರಿ ಉದ್ಯೋಗ ಹಾಗೂ ಲೋನ್ ವ್ಯವಸ್ಥೆ ಮಾಡಿಸುವ ಭರವಸೆಯಿಂದ ₹18 ಲಕ್ಷ ಹಣವನ್ನು RTGS ಮೂಲಕ ನಮ್ಮ ಯಜಮಾನ ನಾಗರಾಜು ಅವರ ಖಾತೆಯಿಂದ ವರ್ಗಾಯಿಸಿ ಪಡೆದಿದ್ದಾರೆ. ನಾವು ಹಲವು ಬಾರಿ ಅವರನ್ನು ಸಂಪರ್ಕಿಸಿದ್ದರೂ ಯಾವುದೇ ಸ್ಪಷ್ಟ ಉತ್ತರವಿಲ್ಲ ಎಂದು ಆರೋಪ ಮಾಡಿದ್ದಾರೆ. ಇನ್ನು ವಂಚಿತ ಮಹಿಳೆಯರು ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರಿಂದ ಸಹ ಅನ್ಯಾಯವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. 'ದೂರು ಪಡೆಯದೆ, ‘ಇಲ್ಲಿಂದ ಹೋಗಿ, ಬೇರೆ ಯಾವ ಠಾಣೆಗೆ ಹೋಗಬೇಡಿ’ ಎಂದು ಹೇಳಿದ್ದಾರೆಂದು ಗಂಗಮ್ಮ ಆರೋಪಿಸಿದ್ದಾರೆ.
ಧನಲಕ್ಷ್ಮಿ ಎಂಬ ಇನ್ನೊಬ್ಬ ಮಹಿಳೆ ಹೇಳಿದಂತೆ, 'ಹೆಚ್ಚಿನ ಮಟ್ಟದ ಸಂಬಂಧಗಳಿವೆ, ಸಚಿವರ ಪರಿಚಯವಿದೆ ಎಂದು ಹೇಳಿ ನಂಬಿಕೆ ಕೆರಳಿಸಿದರು. ನನ್ನ ಜಾತಿಗೆ ನಿಂದನೆ ಮಾಡಿ, ಕೀಳು ಜಾತಿಯೆಂದು ಅವಮಾನಿಸಿದರು. ಕೆಲವರು ನನ್ನ ಮೇಲೆ ಕೈಹಾಕಿದ್ದರು, ಲಗ್ಗರೆ ರಘು, ಜವಾರಿ ದೀಪಾ ಎನ್ನುವವರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ವಂಚಿತರಿಂದ ಕಾರ್ಯಕ್ರಮದ ಮುತ್ತಿಗೆ ಪ್ರಯತ್ನ:
ವಸಂತ ಮುರಳಿ ಅವರು 'ಸಿಎಂ, ಮಿನಿಸ್ಟರ್ ನನಗೆ ಪರಿಚಯವಿದ್ದಾರೆ' ಎಂಬ ಮಾತುಗಳಿಂದ ನಂಬಿಕೆ ಹುಟ್ಟಿಸಿ, ಸರ್ಕಾರದ ಉದ್ಯೋಗ ಕೊಡಿಸುವ ಭರವಸೆಯಿಂದ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಗಂಭೀರವಾಗಿವೆ. ಒಂದು ವರ್ಷದ ಹೆಚ್ಚು ಸಮಯ ಕಳೆದರೂ ಉದ್ಯೋಗ ಅಥವಾ ಹಣ ಮರಳಿ ಸಿಗದ ಕಾರಣ ವಂಚಿತರು ಟೌನ್‌ಹಾಲ್ ಸಮಾವೇಶಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆ ನಡೆಯುತ್ತಿದೆ. ನಿಖಿತಾ ರೆಡ್ಡಿ, ಲಗ್ಗರೆ ರಘು, ಜವಾರಿ ದೀಪಾ ಸೇರಿದಂತೆ ಹಲವು ಮಂದಿ ಹೆಸರುಗಳು ಎತ್ತಲ್ಪಟ್ಟಿದ್ದು, ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕೆಂದು ವಂಚಿತರು ಆಗ್ರಹಿಸಿದ್ದಾರೆ.