ಕನ್ನಡದ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಯ ಬಳಿ ಇರುವ ಭಾವಚಿತ್ರವನ್ನು ನರ್ತಿಸುವಂತೆ ಮಾಡಿದ್ದಾನೆ ಈ ಯುವಕ. ಅಪ್ಪು ನೃತ್ಯಕ್ಕೆ ಅಭಿಮಾನಿಗಳು ಕಣ್ಣೀರಾಗಿದ್ದಾರೆ.
ಅರಳುವ ಮುನ್ನವೇ ಬಾಡಿದ ಈ ನಟನ ಬಗ್ಗೆ ಇನ್ನೂ ಅದೆಷ್ಟೋ ಮಂದಿ ಮರೆಯಲಾಗದ ನೆನಪಿನ ಬುತ್ತಿಗಳನ್ನು ಬಿಚ್ಚಿಡುತ್ತಲೇ ಇದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
ಅಪ್ಪು ಅವರ ನೆನಪನ್ನು ಸದಾ ಹಸಿರಾಗಿಸಿ ಇಡಲು ಅವರ ಅಭಿಮಾನಿಗಳು ಪ್ರಯತ್ನ ಪಡುತ್ತಲೇ ಇದ್ದಾರೆ. ಅದರಲ್ಲಿ ಒಂದು ಈ ವೈರಲ್ ವಿಡಿಯೋ. ಇದರಲ್ಲಿ ಅಭಿಮಾನಿಯೊಬ್ಬ ಅಪ್ಪು ಅವರ ಸಮಾಧಿ ಬಳಿ ತೆರಳಿದ್ದು, ಅಲ್ಲಿ ಅಪ್ಪು ಅವರ ಫೋಟೋ ಅನ್ನು ತಂತ್ರಜ್ಞಾನ ಬಳಸಿ ನರ್ತಿಸುವಂತೆ ಮಾಡಿದ್ದಾರೆ. sekammam.m ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಅಭಿಮಾನಿ ಎದುರಿಗೆ ಡಾನ್ಸ್ ಮಾಡುತ್ತಿದ್ದರೆ, ಅವರ ಹಿಂದೆ ಇರುವ ಅಪ್ಪು ಅವರ ಭಾವಚಿತ್ರವೂ ಅದೇ ರೀತಿ ಡಾನ್ಸ್ ಮಾಡುವುದನ್ನು ನೋಡಬಹುದಾಗಿದೆ.
ಇನ್ನು ಪುನೀತ್ ಅವರ ವಿಷಯಕ್ಕೆ ಬರುವುದಾದರೆ, ಅಪ್ಪು ಹೆಸರಿನಲ್ಲಿಯೇ ಅವರ ಜೀವನ ಚರಿತ್ರೆ ಪುಸ್ತಕ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೊರಬರಲಿದೆ. ಇದಾಗಲೇ ಕಳೆದ ಮಾರ್ಚ್ನಲ್ಲಿ ಅಶ್ವಿನಿ ಅವರು, ಈ ಪುಸ್ತಕದ ಕವರ್ ಪೇಜ್ ಅನ್ನು ಕೂಡ ಅಶ್ವಿನಿ ಪುನೀತ್ ಹಾಗೂ ಅವರ ಪುತ್ರಿಯರಾದ ವಂದಿತಾ ಮತ್ತು ಧೃತಿ ಅನಾವರಣಗೊಳಿಸಿದ್ದರು. ಈ ಪುಸ್ತಕದ ಸಂಪೂರ್ಣ ಎಡಿಟಿಂಗ್ ಖುದ್ದು ಅಶ್ವಿನಿ ಅವರೇ ಮಾಡುತ್ತಿದ್ದು, ಲೇಖಕ ಪ್ರಕೃತಿ ಬನವಾಸಿ ಅವರು ಜೀವನಚರಿತ್ರೆಯನ್ನು ಬರೆದಿದ್ದಾರೆ. ಎರಡು ವರ್ಷಗಳ ಶ್ರಮದ ಫಲವಾಗಿ ಶೀಘ್ರದಲ್ಲಿಯೇ ಇದು ಬಿಡುಗಡೆಯಾಗಲಿದೆ. ಈ ಬಗ್ಗೆ ಅಶ್ವಿನಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದರು.
ಇದೀಗ ಮಾಧ್ಯಮವೊಂದಕ್ಕೆ ಈ ಪುಸ್ತಕ ಹಲವು ವಿಷಯಗಳ ಬಗ್ಗೆ ಲೇಖಕ ಪ್ರಕೃತಿ ಬನವಾಸಿ ಮಾತನಾಡಿದ್ದಾರೆ. ಅಪ್ಪು ಅವರ ಜೀವನದ ಹಲವಾರು ವಿಷಯಗಳನ್ನು ಪುಸ್ತಕದಲ್ಲಿ ಅಳವಡಿಸಲಾಗಿದೆ. ಅದರ ಜೊತೆ, ಅವರ ಹಲವು ಫೋಟೋಗಳನ್ನು ಪ್ರಿಂಟ್ ಮಾಡಲಾಗಿದೆ. ಪುನೀತ್ ರಾಜ್ ಅವರಿಗೆ ಅಡುಗೆ ಮಾಡುವುದು ಇಷ್ಟ. ಆ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಲಾಗಿದೆ. ಪುನೀತ್ ಅವರ ಒಡನಾಟ ಇಟ್ಟುಕೊಂಡಿರುವ ಹಲವರ ಅಭಿಪ್ರಾಯಗಳನ್ನು ಇದರಲ್ಲಿ ಕೇಳಲಾಗಿದೆ ಎಂದಿದ್ದಾರೆ ಪ್ರಕೃತಿ ಬನವಾಸಿ. ಇದರಲ್ಲಿ ಹಲವಾರು ಸೆಲೆಬ್ರಿಟಿಗಳನ್ನು ಮಾತನಾಡಿಸಿದ್ದೇವೆ. ಆದರೆ ಅವರನ್ನು ಸೆಲೆಬ್ರಿಟಿ ಪೇಜ್ನಲ್ಲಿ ಹಾಕಲಿಲ್ಲ. ಏಕೆಂದರೆ ಇವರೆಲ್ಲರೂ ಅಪ್ಪು ಅವರ ಸ್ನೇಹಿತರು. ಆದ್ದರಿಂದ ಫ್ರೆಂಡ್ಸ್ ಎಂದೇ ಅಂದುಕೊಂಡಿದ್ದೇವೆ. ಯಶ್, ರಾಧಿಕಾ, ನಾಗಾರ್ಜುನ, ಪ್ರಭುದೇವ, ರಶ್ಮಿಕಾ ಮಂದಣ್ಣ, ರಮ್ಯಾ, ರಕ್ಷಿತಾ, ಪ್ರಿಯಾಮಣಿ ಸೇರಿದಂತೆ ಹಲವರ ಬಗ್ಗೆ ಹೃದಯ ಬಿಚ್ಚಿ ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಪುಷ್ಪ ಚಿತ್ರದಲ್ಲಿ ಸಕತ್ ಬಿಜಿಯಾಗಿದ್ದರೂ ಕರೆ ಮಾಡಿದಾಗ 30 ನಿಮಿಷ ಮಾತನಾಡಿದರು. ಅಷ್ಟರ ಮಟ್ಟಿಗೆ ಪುನೀತ್ ರಾಜ್ ಎಲ್ಲರಿಗೂ ಹತ್ತಿರವಾಗಿದ್ದರು ಎಂದಿದ್ದಾರೆ.