ನಾನು ಯಶವಂತಪುರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಗೊತ್ತಾಯ್ತಾ? ಹೆಲ್ಮೆಟ್ ಹಾಕಲ್ಲಾರಿ, ಫೈನ್ ಕಟ್ಟಲ್ಲಾರಿ, ನನ್ಗೂ ಗೊತ್ತಿದೆ ರೂಲ್ಸ್ ಎಂದು ಬೆಂಗಳೂರು ಪೊಲೀಸರಿಗೆ ಅವಾಜ್ ಹಾಕಿದ ನವೀನ್ ವಿರುದ್ಧ ದಂಡ ಮಾತ್ರವಲ್ಲ ಎಫ್ಐಆರ್ ಕೂಡ ದಾಖಲಾಗಿದೆ. 

ಬೆಂಗಳೂರು(ಜೂ.23) ಯಾವುದೇ ಕಾರಣಕ್ಕೂ ಹೆಲ್ಮೆಟ್ ಹಾಕಲ್ಲ, ದಂಡವೂ ಕಟ್ಟಲ್ಲ ಎಂದು ಬೆಂಗಳೂರ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಬೆಂಗಳೂರಿಗನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಾನು ಯಶವಂತಪುರ ವಿಧಾಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ನವೀನ್ ಎಂದು ಪೊಲೀಸರ ಬಳಿ ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ಹೆಲ್ಮೆಟ್ ಹಾಕಬೇಕು, ಇಲ್ಲದಿದ್ದರೂ ದಂಡ ಕಟ್ಟಬೇಕು ಎಂದ ಪೊಲೀಸರ ವಿರುದ್ದ ಸುಖಾಸುಮ್ಮನೆ ವಾಗ್ವಾದ ನಡೆಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಇದೀಗ ಪ್ರಕರಣ ಕೂಡ ದಾಖಲಾಗಿದೆ ಎಂದು ವರದಿಯಾಗಿದೆ.

ಟ್ರಾಫಿಕ್ ಪೊಲೀಸರ ತಪಾಸಣೆಯಲ್ಲಿ ಸಿಕ್ಕಿಬಿದ್ದ ನವೀನ್

ಟ್ರಾಫಿಕ್ ಪೊಲೀಸರು ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿದ್ದರು. ಇತ್ತ ನವೀನ್ ತಮ್ಮ ಟಿವಿಎಸ್ ಅಪಾಚೆ ಬಿಳಿ ಬೈಕ್ ಮೂಲಕ ಆಗಮಿಸಿದ್ದಾರೆ. ಹೆಲ್ಮೆಟ್ ಧರಿಸದೇ ಬರುತ್ತಿದ್ದ ನವೀನ್ ನಿಲ್ಲಿಸಿದ ಪೊಲೀಸರು ಹೆಲ್ಮೆಟ್ ಯಾಕೆ ಧರಿಸಿಲ್ಲ? ನಿಯಮ ಉಲ್ಲಂಘಿಸಿದ್ದೀರಿ ಎಂದು ಸೂಚಿಸಿದ್ದಾರೆ. ಇಷ್ಟಕ್ಕೇ ನವೀನ್ ಪಿತ್ತ ನೆತ್ತಿಗೇರಿದೆ. ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ನವೀನ್. ನಾನು ಹೆಲ್ಮೆಟ್ ಹಾಕಲ್ಲ ಎಂದಿದ್ದಾನೆ. ಹಾಗಾದರೆ ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದ್ದಾರೆ. ನಾನು ಹೆಲ್ಮೆಟ್ ಧರಿಸಲ್ಲ, ದಂಡವೂ ಕಟ್ಟಲ್ಲ ಎಂದು ನವೀನ್ ಹೇಳಿದ್ದಾನೆ.

 

Scroll to load tweet…

 

ಎಲ್ಲಿ ಪ್ರೂಫ್ ತೋರ್ಸಿ ಎಂದು ಪೊಲೀಸರಿಗೆ ಅವಾಜ್

ಪೊಲೀಸರು ನಿಲ್ಲಿಸಿದ ಬೆನ್ನಲ್ಲೇ ನವೀನ್ ಗರಂ ಆಗಿದ್ದಾನೆ. ಈ ರೀತಿ ಯಾಕೆ ಮಾತನಾಡುತ್ತಿದ್ದೀರಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಇದಕ್ಕೆ ಹೆಲ್ಮೆಟ್ ಹಾಕಲ್ಲ ನಾನು. ಎಲ್ಲಿ ಪ್ರೂಫ್ ತೋರಿಸಿ ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ. ಎಲ್ಲಾ ಕಡೆಯಲ್ಲಿ ಪೊಲೀಸರು ಗಾಡಿ ತಡೆದು ನಿಲ್ಲಿಸುವಂತಿಲ್ಲ, ನಾನು ಇನ್ಸ್‌ಪೆಕ್ಟರ್ ಜೊತೆ ಮಾತನಾಡಿದ್ದೀನಿ ಎಂದಿದ್ದಾನೆ. ಹೆಲ್ಮೆಟ್ ಹಾಕಿಲ್ಲ, ದಂಡ ಕಟ್ಟಲೇಬೇಕು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಜೊತೆ ವಾಗ್ವಾದಕ್ಕಿಳಿದ ನವೀನ್, ನನಗೂ ಕಾನೂನು ಗೊತ್ತಿದೆ ಎಂದಿದ್ದಾನೆ. ನಿಯಮ ಉಲ್ಲಂಘನೆಯಾಗಿದೆ ಎಂದು ತಿಳಿ ಹೇಳುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಸರಿ ನನಗೆ ನೋಟಿಸ್ ಕೊಡಿ, ನಾನು ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ ಎಂದು ನವೀನ್ ಪ್ರತಿಕ್ರಿಯಿಸಿದ್ದಾನೆ.

ಸೆಕ್ಷನ್ 132ರ ಅಡಿಯಲ್ಲಿ ಪ್ರಕರಣ ದಾಖಲು

ನವೀನ್ ವಿರುದ್ದ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಕಾರಣಕ್ಕೆ ದಂಡ ಹಾಕಿದ್ದಾರೆ. ಇದರ ಜೊತೆಗೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಭಾರತೀಯ ನ್ಯಾಯ ಸಂಹಿತ ಸೆಕ್ಷನ್ 132ರ ಅಡಿಯಲ್ಲಿ ನವೀನ್ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.