ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅಮೋಘ ಶತಕ ಸಿಡಿಸಿ ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಇದು ಪಂತ್ ಅವರ ಏಳನೇ ಟೆಸ್ಟ್ ಶತಕವಾಗಿದ್ದು, ಇಂಗ್ಲೆಂಡ್ ನಲ್ಲಿ ಮೂರು ಶತಕ ಸಿಡಿಸಿದ ಮೊದಲ ವಿದೇಶಿ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೆಡಿಂಗ್ಲೆ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಬೀಗಿದ್ದಾರೆ. ರಿಷಭ್ ಪಂತ್ ಇದೀಗ ಟೆಸ್ಟ್ ವೃತ್ತಿಜೀವನದ ಏಳನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಭಾರತ ಪರ ಅತಿಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆಗೆ ಎಡಗೈ ಬ್ಯಾಟರ್ ಪಾತ್ರರಾಗಿದ್ದಾರೆ.. ಪಂತ್ ಶತಕದ ನೆರವಿನಿಂದ ಟೀಂ ಇಂಡಿಯಾ, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.
ಹೌದು, ರಿಷಭ್ ಪಂತ್ ಇದೀಗ ಎಂ ಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ವಿಕೆಟ್ ಕೀಪರ್ ಬ್ಯಾಟರ್ ಎಂ ಎಸ್ ಧೋನಿ 6 ಶತಕ ಸಿಡಿಸಿದ್ದರು. ಇದೀಗ ಧೋನಿ ದಾಖಲೆ ಅಳಿಸಿ ಹಾಕಿ ಪಂತ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಶೋಯೆಬ್ ಬಷೀರ್ ಬೌಲಿಂಗ್‌ನಲ್ಲಿ ಮುಗಿಲೆತ್ತರದ ಸಿಕ್ಸರ್ ಸಿಡಿಸುವ ಮೂಲಕ ಪಂತ್ ಹೊಸ ದಾಖಲೆ ಬರೆದಿದ್ದಾರೆ.
3ನೇ ಬಾರಿ ಸಿಕ್ಸರ್ ಮೂಲಕ ಶತಕ ಪೂರೈಸಿದ ಪಂತ್: ರಿಷಭ್ ಪಂತ್ ಇಂಗ್ಲೆಂಡ್ ಎದುರೇ ಮೂರನೇ ಬಾರಿ ಸಿಕ್ಸರ್ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮೊದಲು ಆದಿಲ್ ರಶೀದ್ ಹಾಗೂ ಜೋ ರೂಟ್ ಬೌಲಿಂಗ್‌ನಲ್ಲಿ ರಿಷಭ್ ಪಂತ್ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸಿದ್ದರು.
ಇಂಗ್ಲೆಂಡ್‌ನಲ್ಲಿ ಮೂರು ಶತಕ ಸಿಡಿಸಿದ ಮೊದಲ ವಿದೇಶಿ ಆಟಗಾರ ಪಂತ್: ರಿಷಭ್ ಪಂತ್ ಇಂಗ್ಲೆಂಡ್‌ನಲ್ಲೇ ಮೂರು ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ವಿದೇಶಿ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಪಂತ್ ಲಂಡನ್ ಹಾಗೂ ಬರ್ಮಿಂಗ್‌ಹ್ಯಾಮ್‌ನಲ್ಲಿ ಶತಕ ಸಿಡಿಸಿದ್ದರು.
359 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ದಿಟ್ಟ ಆರಂಭವನ್ನೇ ಪಡೆಯಿತು. ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್ ಎರಡನೇ ದಿನದಾಟದ ಆರಂಭದಿಂದಲೇ ಮೈಚಳಿಬಿಟ್ಟು ಬ್ಯಾಟ್ ಬೀಸಲಾರಂಭಿಸಿತು. ಒಳ್ಳೆಯ ಎಸೆತಗಳಿಗೆ ಗೌರವ ನೀಡುತ್ತಲೇ, ಕೆಟ್ಟ ಎಸೆತಗಳನ್ನು ದಂಡಿಸುವ ರಣತಂತ್ರ ಅಳವಡಿಸಿಕೊಂಡಿರುವ ಈ ಜೋಡಿ ತಂಡದ ಮೊತ್ತವನ್ನು ಅನಾಯಾಸವಾಗಿ ನಾನೂರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಮೊದಲ ದಿನದಾಟದಂತ್ಯಕ್ಕೆ 102 ಎಸೆತಗಳನ್ನು ಎದುರಿಸಿ 65 ರನ್ ಗಳಿಸಿ ಅಜೇಯರಾಗುಳಿದಿದ್ದ ರಿಷಭ್ ಪಂತ್, ಎರಡನೇ ದಿನದಾಟದಲ್ಲೂ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪಂತ್ 146 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.