ಐಪಿಎಲ್ ತಂಡಗಳ ವಿಜಯೋತ್ಸವಕ್ಕೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಘಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಭದ್ರತೆ ಮತ್ತು ಸುರಕ್ಷತೆಗಾಗಿ ಹಲವು ಹಂತದ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ.

ಮುಂಬೈ/ಬೆಂಗಳೂರು (ಜೂ.22): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ತಂಡಗಳ ವಿಜಯೋತ್ಸವಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತದ ದುರಂತದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನುಮುಂದೆ ಯಾವುದೇ ಐಪಿಎಲ್ ತಂಡಗಳು ಆತುರದಲ್ಲಿ ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಹೇಳುತ್ತಾ, ಕೆಲವು ಮಾರ್ಗಸೂಚಿಗಳನ್ನು ತಿಳಿಸಿದೆ.

ಯಾವುದೇ ಐಪಿಎಲ್ ತಂಡಗಳು ಟ್ರೋಫಿ ಜಯಿಸಿದ ನಂತರ ಸಂಬಂಧಪಟ್ಟ ತವರು ರಾಜ್ಯದಲ್ಲಿ ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಬಿಸಿಸಿಐನಿಂದ ಮೊದಲೇ ಅನುಮತಿ ಪಡೆಯಬೇಕು. ಸುರಕ್ಷತೆಗಾಗಿ ಹಲವು ಹಂತದ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಬಿಸಿಸಿಐನಿಂದ ಲಿಖಿತ ಅನುಮತಿ ಪಡೆದ ನಂತರವೇ ಆಚರಣೆಗೆ ಅವಕಾಶ ನೀಡಲಾಗುತ್ತದೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಭಾರತದಲ್ಲಿ 2008ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿ 18 ವರ್ಷಗಳು ಕಳೆದಿವೆ. ಇದೀಗ 18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ 2025ನೇ ಸಾಲಿನ ಟ್ರೋಫಿ ಗೆದ್ದಿತ್ತು. ಆದರೆ, ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಗೆದ್ದ, ಮರುದಿನವೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವಿಜಯೋತ್ಸವ ಮೆರವಣಿಗೆ ಮಾಡಲು ಸ್ಥಳೀಯ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ನಡೆದ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಈ ವೇಳೆ ಜನರ ನಿಯಂತ್ರಣ ಮಾಡಲು ಸಾಧ್ಯವಾಗದೇ ಕಾಲ್ತುಳಿತ ಉಂಟಾಗಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆರಂಭದಲ್ಲಿ ಎಲ್ಲರಿಗೂ ಉಚಿತ ಪ್ರವೇಶವೆಂದು ಹೇಳಿದ್ದ ಕೆಎಸ್‌ಸಿಎ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶ ಎಂದು ಹೇಳಿತು. ಆದರೆ, ಈ ವೇಳೆಗಾಗಲೇ ಆರ್‌ಸಿಬಿ ಅಭಿಮಾನಿಗಳ ಜನಸಂದಣಿಯ ನಿಯಂತ್ರಣ ತಪ್ಪಿತ್ತು. ಈ ವೇಳೆ ಚುಇನ್ನಸ್ವಾಮಿ ಕ್ರೀಡಾಂಗಣದ ಗೇಟ್ ಅನ್ನು ತಳ್ಳಿ ಅಭಿಮಾನಿಗಳು ಒಳನುಗ್ಗಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದ್ದು, 11 ಅಭಿಮಾನಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಯಾವುದೇ ಸಿದ್ಧತೆ ಇಲ್ಲದೆ ಆರ್‌ಸಿಬಿ ಆತುರದಲ್ಲಿ ವಿಜಯೋತ್ಸವ ಆಯೋಜಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು.

ಬೆಂಗಳೂರು ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಲಾಗಿತ್ತು. ಹೆಚ್ಚುವರಿ ಆಯುಕ್ತರು, ಉಪ ಆಯುಕ್ತರು ಮತ್ತು ಎಸಿಪಿ ಕೂಡ ಅಮಾನತುಗೊಂಡಿದ್ದರು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿತ್ತು. ಪೊಲೀಸ್ ಅಧಿಕಾರಿಗಳ ಜೊತೆಗೆ ಆರ್‌ಸಿಬಿ, ಕರ್ನಾಟಕ ಕ್ರಿಕೆಟ್ ಸಂಸ್ಥೆ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಡಿಎನ್‌ಎ ಕಂಪನಿಯ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಈ ದುರಂತ ಆರ್‌ಸಿಬಿಯ ಗೆಲುವಿನ ಸಂಭ್ರಮಕ್ಕೆ ಮಸಿ ಬಳಿಯಿತು. ಇದರ ಬೆನ್ನಲ್ಲಿಯೇ ಐಪಿಎಲ್ ವಿಜೇತ ತಂಡಗಳ ಸಂಭ್ರಮಾಚರಣೆಗೆ ಕಠಿಣ ಮಾರ್ಗಸೂಚಿ ರೂಪಿಸಲಾಗಿದೆ.

ಬಿಸಿಸಿಐ ಮಾರ್ಗಸೂಚಿಗಳೇನು?

  1. ಐಪಿಎಲ್ ವಿಜೇತ ತಂಡಗಳ ಸಂಭ್ರಮಾಚರಣೆಗೆ ಬಿಸಿಸಿಐ ಅನುಮತಿ ಕಡ್ಡಾಯ.
  2. ವಿಜಯೋತ್ಸವ ಕಾರ್ಯಕ್ರಮಕ್ಕೆ ಭದ್ರತೆ, ಸುರಕ್ಷತೆಯ 3 ಹಂತಗಳನ್ನು ಪಾಲಿಸಬೇಕು.
  3. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಬಿಸಿಸಿಐನಿಂದ ಲಿಖಿತ ಅನುಮತಿ ಪಡೆಯಬೇಕು.
  4. ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು.