ಮನೆಯಲ್ಲೇ ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವವರಿಗೆ ಇಲ್ಲೊಂದು ಒಳ್ಳೆ ಪ್ಲಾನ್ ಇದೆ. ಕಡಿಮೆ ಖರ್ಚಿನಲ್ಲಿ, ಸಣ್ಣ ಜಾಗದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ ನೀವು ಹಣ ಸಂಪಾದನೆ ಮಾಡ್ಬಹುದು. 

ಡಿಮೆ ಸಮಯದಲ್ಲಿ ಹಣ ಮಾಡ್ಬೇಕು, ಹೆಚ್ಚು ಹೂಡಿಕೆ (Investment) ಇರ್ಬಾರದು, ಹೆಚ್ಚು ಲಾಭ ಬೇಕು ಎನ್ನುವವರಿಗೆ ಸದ್ಯ ನಗರಗಳಲ್ಲಿ ಅದ್ಭುತ ಅವಕಾಶ ಇದೆ. ಈ ಬ್ಯುಸಿನೆಸ್ ಸಾಕಷ್ಟು ಪ್ಲಸ್ ಪಾಯಿಂಟ್ ಹೊಂದಿದೆ. ಇಲ್ಲಿ ಬ್ಯುಸಿನೆಸ್ ಮಾಡೋಕೆ ದೊಡ್ಡ ಜಾಗ ಬೇಕಾಗಿಲ್ಲ. ನಿಮ್ಮ ಮನೆ ಬಾಲ್ಕನಿ ಅಥವಾ ಟೆರೆಸ್ ಜಾಗವನ್ನೇ ನೀವು ಉಪಯೋಗಿಸಿಕೊಳ್ಬಹುದು. ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. 21 ದಿನಗಳಲ್ಲಿ ನಿಮ್ಮ ಬೆಳೆ ಕೈಗೆ ಬಂದಿರುತ್ತೆ. ನಗರ ಪ್ರದೇಶಗಳಲ್ಲಿ ಬಿಸಿ ದೋಸೆಯಂತೆ ಇದು ಮಾರಾಟವಾಗ್ತಿದೆ. ಈ ಬ್ಯುಸಿನೆಸ್ ಶುರು ಮಾಡೋಕೆ ನೀವು ಪದವಿ ಪಡೆದಿರಬೇಕು, ಒಳ್ಳೆ ಕೋರ್ಸ್ ಮಾಡಿರಬೇಕು, ಹೆಚ್ಚು ಟೈಂ ನೀಡ್ಬೇಕು ಎನ್ನುವ ಟೆನ್ಷನ್ ಕೂಡ ಇಲ್ಲ.

ಈಗ ಜನರು ತಮ್ಮ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ನೈಸರ್ಗಿಕವಾಗಿ ಬೆಳೆದ ಹಣ್ಣು, ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ನೀವು ತರಕಾರಿ, ಹಣ್ಣಿಗೆ ಕಾಯ್ಬೇಕಾಗಿಲ್ಲ. ಗಿಡ ಮೊಳಕೆಯೊಡೆದು ಐದಾರು ದಿನದಲ್ಲೇ ಅದನ್ನು ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಬಹುದು. ಪ್ರತಿ ದಿನ 9 ರಿಂದ 6ರವರೆಗೆ ಕೆಲ್ಸ ಮಾಡಿ ಬೇಸತ್ತ ಅನೇಕ ಜನರು ಈಗ ಈ ಬ್ಯುಸಿನೆಸ್ ಗೆ ಜಂಪ್ ಆಗ್ತಿದ್ದಾರೆ. ವಿಪ್ರೋದಂತಹ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡ್ತಿದ್ದವರು ಕೂಡ ಈ ಬ್ಯುಸಿನೆಸ್ ಗೆ ಧುಮುಕಿದ್ದಾರೆ. ಅಷ್ಟಕ್ಕೂ ಭಾರತದಲ್ಲಿ ಉತ್ತಮ ಮಾರುಕಟ್ಟೆ ಸೃಷ್ಟಿ ಮಾಡ್ತಿರೋ ಈ ಬ್ಯುಸಿನೆಸ್ ಯಾವ್ದು ಎಂಬ ಮಾಹಿತಿ ಇಲ್ಲಿದೆ.

ಮೈಕ್ರೋಗ್ರೀನ್ ಬ್ಯುಸಿನೆಸ್ (Microgreen Business) : ಯಾವುದೇ ಬೀಜ ಮೊಳಕೆ ಒಡೆದು ಎರಡು ಎಲೆ ಕಾಣಿಸಿಕೊಳ್ತಿದ್ದರೆ ಅದನ್ನು ಮೈಕ್ರೋಗ್ರೀನ್ ಅಂತ ಕರೆಯಲಾಗುತ್ತೆ. ರೆಸ್ಟೋರೆಂಟ್ ಗಳಲ್ಲಿ ಸಲಾಡ್ ಮೇಲೆ ಉದುರಿಸಿರೋ ಎಲೆಗಳೇ ಈ ಮೈಕ್ರೋಗ್ರೀನ್ ಗಳು. ಪ್ರತಿಯೊಂದು ಸಸ್ಯದ ಮೈಕ್ರೋಗ್ರೀನ್ಗಳನ್ನು ತಿನ್ನಲು ಸಾಧ್ಯವಿಲ್ಲ. ಸಾಮಾನ್ಯವಾಗಿ, ಮೂಲಂಗಿ, ಸಾಸಿವೆ, ಹೆಸರುಕಾಳು, ಪಾಲಕ್, ಲೆಟಿಸ್, ಮೆಂತ್ಯ, ಬ್ರೊಕೊಲಿ, ಎಲೆಕೋಸು, ಕ್ಯಾರೆಟ್, ಬಟಾಣಿ, ಬೀಟ್ರೂಟ್, ಗೋಧಿ, ಕಾರ್ನ್, ತುಳಸಿ, ಕಡಲೆ, ಟರ್ನಿಪ್ನಂತಹ ಸಸಿಗಳ ಮೈಕ್ರೋಗ್ರೀನ್ಗಳನ್ನು ತಿನ್ನಬಹುದು. ದೊಡ್ಡ ಪ್ರಮಾಣದಲ್ಲಿ ಇದನ್ನು ತಿನ್ನೋದಿಲ್ಲ. ಇದನ್ನು ಸಲಾಡ್ ಅಥವಾ ಆಹಾರಕ್ಕೆ ಅಲಂಕರ ಮಾಡಲು ಬಳಸ್ತಾರೆ. ಈ ಸಣ್ಣ ಬೆಳೆ ಭಾರತದಲ್ಲಿ ದೊಡ್ಡ ಹಣ ಸಂಪಾದನೆ ಮಾಡ್ತಿದೆ. ಮೈಕ್ರೋಗ್ರೀನ್ ಸಣ್ಣ, ವೇಗವಾಗಿ ಬೆಳೆಯುವ ಸಸ್ಯಗಳಾಗಿವೆ. ಬೀಜ ಮೊಳಕೆಯೊಡೆದ ಕೆಲವೇ ದಿನಗಳಲ್ಲಿ ಇವು ಮಾರಾಟಕ್ಕೆ ಸಿದ್ಧವಾಗುತ್ತವೆ. ನಿಮ್ಮ ಅಡುಗೆಮನೆ ಅಥವಾ ಬಾಲ್ಕನಿಯ ಸಣ್ಣ ಜಾಗದಲ್ಲಿ ಇದನ್ನು ಬೆಳೆಯಬಹುದು.

ಯಾಕೆ ಇಷ್ಟೊಂದು ಬೇಡಿಕೆ? : ಮೈಕ್ರೋಗ್ರೀನ್ಗಳನ್ನು ಸೂಪರ್ಫುಡ್ ವರ್ಗಕ್ಕೆ ಸೇರಿಸಲಾಗಿಲ್ಲ. ಕಡಿಮೆ ಪ್ರಮಾಣವು ಸಾಕಷ್ಟು ಪೋಷಣೆ ನೀಡುತ್ತದೆ. ಒಬ್ಬ ವ್ಯಕ್ತಿ ಪ್ರತಿದಿನ ಕೇವಲ 50 ಗ್ರಾಂ ಮೈಕ್ರೋಗ್ರೀನ್ಗಳನ್ನು ಸೇವಿಸಿದರೆ, ಅವನ ಎಲ್ಲಾ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಬಹುದು. 100 ಗ್ರಾಂ ಮೂಲಂಗಿ ಹಾಗೂ 100 ಗ್ರಾಂ ಮೂಲಂಗಿ ಮೈಕ್ರೋಗ್ರೀನ್ ನಲ್ಲಿ, ಮೂಲಂಗಿಗಿಂತ ಮೈಕ್ರೋಗ್ರೀನ್ಗಳಿಂದ 40 ಪಟ್ಟು ಹೆಚ್ಚಿನ ಪೋಷಕಾಂಶ ನಿಮಗೆ ಸಿಗುತ್ತದೆ.

ತಿಂಗಳಿಗೆ ಎಷ್ಟು ಆದಾಯ? : ಮೈಕ್ರೋಗ್ರೀನ್ ಬೆಳೆಯನ್ನು ನೀವು ಬೀಜ ಹಾಕಿದ ಎರಡು ವಾರಕ್ಕೆ ಇದನ್ನು ಮಾರಾಟ ಮಾಡಬಹುದು. 100 ಗ್ರಾಂ ಮೈಕ್ರೋಗ್ರೀನ್ ಬೆಲೆ 200 ರಿಂದ 400 ರೂಪಾಯಿ ಇದೆ. ಹೊಟೇಲ್, ರೆಸ್ಟೋರೆಂಟ್ , ಕೆಫೆ ಹಾಗೂ ಆರೋಗ್ಯರ ಆಹಾರ ಮಾರಾಟ ಕೇಂದ್ರಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚಿದೆ. ಗುಣಮಟ್ಟದ ಬೀಜವನ್ನು ಬಳಸಿದ್ರೆ ನಿಮ್ಮ ಬೆಳೆಗೆ ಬೇಡಿಕೆ ಹೆಚ್ಚು. ಇದಕ್ಕೆ ಹೆಚ್ಚು ಸೂರ್ಯನ ಶಾಖದ ಅವಶ್ಯಕತೆ ಇಲ್ಲ. ಸೂರ್ಯನ ಬೆಳಕು ಬರುವ ಜಾಗದಲ್ಲಿ ಇಡಬೇಕು. ಉತ್ತಮ ನೀರಿನ ಜೊತೆ ಶುದ್ಧತೆಯನ್ನು ಕಾಪಾಡಿಕೊಂಡು 15 ಸಾವಿರ ಹೂಡಿಕೆ ಮಾಡಿದ್ರೆ ತಿಂಗಳಿಗೆ 30 ರಿಂದ 50 ಸಾವಿರ ರೂಪಾಯಿ ಹಣ ಸಂಪಾದನೆ ಮಾಡ್ಬಹುದು.