ಇರಾನ್ ಇಸ್ರೇಲ್ ಯುದ್ಧದ ನಡುವೆ ಅಮೆರಿಕ ಪ್ರವೇಶದಿಂದ ಕೆರಳಿದ ಇರಾನ್ ಇದೀಗ ಹೊರ್ಮುಜ್ ಜಲಸಂಧಿ ಮುಚ್ಚಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ನವದೆಹಲಿ (ಜೂ.23) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಹಲವರ ಆತಂಕ ಹೆಚ್ಚಿಸಿದೆ. ಇರಾನ್ ಮೇಲೆ ಅಮೆರಿಕ ಕೂಡ ದಾಳಿ ಮಾಡಿರುವ ಕಾರಣ ಇದೀಗ ವಿಶ್ವ ಮಹಾಯುದ್ಧದ ಕಾರ್ಮೋಡ ಕವಿಯುತ್ತಿದೆ. ಇತ್ತ ಇರಾನ್ ತನ್ನೆಲ್ಲಾ ಶಕ್ತಿ ಬಳಸಿ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸುತ್ತಿದೆ.ಅಮೆರಿಕಗೂ ಎಚ್ಚರಿಕೆ ನೀಡಿದೆ. ಅಮೆರಿಕವನ್ನು ಬೆಂಬಲಿಸುತ್ತಿರುವ ಕೆಲ ಯೂರೋಪ್ ದೇಶಗಳಿಗೂ ಪಾಠ ಕಲಿಸಲು ಇದೀಗ ಇರಾನ್ ಹೊರ್ಮುಜ್ ಜಲಸಂಧಿ ಮುಚ್ಚಲು ನಿರ್ಧರಿಸಿದೆ. ತೈಲ ಸಾಗಾಟ ಸೇರಿದಂತೆ ಪ್ರಮುಖ ವಸ್ತುಗಳ ಸಾಗಣೆಗೆಯ ಈ ಜಲಸಂಧಿ ಮೂಲಕವೇ ಭಾರತವೂ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ನಿರ್ಧಾರ ಹೊರಬೀಳುತ್ತಿದ್ದಂತೆ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ದಾಖಲೆಯ ಏರಿಕೆ ಕಂಡಿದೆ. ಸೋಮವಾರ (ಜೂ.23) ಏಷ್ಯಾ ಮಾರುಕಟ್ಟೆಯಲ್ಲಿ ಕಳೆದ 5 ತಿಂಗಳಲ್ಲೇ ದಾಖಲೆಯ ಏರಿಕೆ ಕಂಡಿದೆ.

ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ

ಇರಾನ್ ಹೊರ್ಮುಜ್ ಜಲಸಂಧಿ ಮಚ್ಚುವ ನಿರ್ಧಾರ, ಯುದ್ಧದ ಆತಂಕದಿಂದ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 2 ರಷ್ಟು ಏರಿಕೆಯಾಗಿದೆ. ಜನವರಿಯಿಂದ ಇಲ್ಲೀವರೆಗೆ ಏರಿಕೆಯಾದ ಗರಿಷ್ಠ ಬೆಲೆಯಾಗಿದೆ. ಇದೀಗ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 79.12 ಯುಎಸ್ ಡಾಲರ್ ಆಗಿದ್ದರೆ , ಅಮೆರಿಕದಲ್ಲಿ ತೈಲ ಬೆಲೆ ಶೇಕಡಾ 2.8ರಷ್ಟು ಏರಿಕೆ ಕಾಣುವ ಮೂಲಕ 75.98 ಯುಎಸ್ ಡಾಲರ್‌ನಷ್ಟಾಗಿದೆ.

ಭಾರತದಲ್ಲಿ ಇಂದನ ಬೆಲೆ ಸ್ಥಿರ

ಹೊರ್ಮುಜ್ ಜಲಸಂಧಿ ಮುಚ್ಚಿದರೂ ಭಾರತದಲ್ಲಿ ಇಂಧನ ಬೆಲೆ ಸ್ಥಿರವಾಗಿರಲು ಎಲ್ಲಾ ಪ್ರಯತ್ನ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ. ಮೋದಿ ಸರ್ಕಾರವು ಕಳೆದ ಹಲವಾರು ವರ್ಷಗಳಿಂದ ಪೂರೈಕೆಯ ಸ್ಥಿರತೆಯನ್ನು ಮಾತ್ರವಲ್ಲದೆ ಕೈಗೆಟುಕುವ ಬೆಲೆಯನ್ನೂ ಖಚಿತಪಡಿಸಿದೆ. ನಾವು ಅದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಪುರಿ ಎಎನ್‌ಐಗೆ ತಿಳಿಸಿದರು. ಸೋಮವಾರ ಮಾರುಕಟ್ಟೆಗಳು ತೆರೆದ ನಂತರ ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ಪರಿಣಾಮಗಳನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಆದಾಗ್ಯೂ, ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ತೈಲ ಲಭ್ಯವಿದೆ ಎಂದು ಅವರು ಹೇಳಿದರು.

ಬೆಲೆ ಅಂಶದ ಬಗ್ಗೆ ಊಹಿಸುವುದು ತುಂಬಾ ಕಷ್ಟ. ದೀರ್ಘಕಾಲದವರೆಗೆ ತೈಲ ಬೆಲೆ 65 ರಿಂದ 70 (USD ಪ್ರತಿ ಬ್ಯಾರೆಲ್) ನಡುವೆ ಇತ್ತು. ನಂತರ ಅದು 70 ಮತ್ತು 75 ರ ನಡುವೆ ಇತ್ತು. ಇಂದು ಭಾನುವಾರ. ನಾಳೆ ಮಾರುಕಟ್ಟೆಗಳು ತೆರೆದಾಗ, ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ಪರಿಣಾಮಗಳನ್ನು ಪರಿಗಣಿಸಲಾಗುವುದು. ಆದರೆ ನಾನು ದೀರ್ಘಕಾಲದಿಂದ ಹೇಳುತ್ತಿರುವಂತೆ, ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ತೈಲ ಲಭ್ಯವಿದೆ” ಎಂದು ಪುರಿ ಹೇಳಿದರು. “ಜಾಗತಿಕ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಪಶ್ಚಿಮ ಗೋಳಾರ್ಧದಿಂದ ಹೆಚ್ಚು ಹೆಚ್ಚು ತೈಲ ಬರುತ್ತಿದೆ. ಸಾಂಪ್ರದಾಯಿಕ ಪೂರೈಕೆದಾರರು ಸಹ ಪೂರೈಕೆಯನ್ನು ಉಳಿಸಿಕೊಳ್ಳಲು ಆಸಕ್ತಿ ಹೊಂದಿರುತ್ತಾರೆ ಏಕೆಂದರೆ ಅವರಿಗೂ ಆದಾಯ ಬೇಕು. ಆದ್ದರಿಂದ ಮಾರುಕಟ್ಟೆ ಅದನ್ನು ಪರಿಗಣಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಅವರು ಹೇಳಿದರು.

ಜಾಗತಿಕ ಪೂರೈಕೆ ಅಪಾಯ ಹೆಚ್ಚು

ಪರಮಾಣು ಸ್ಥಾಪನೆಗಳ ಮೇಲೆ US ವೈಮಾನಿಕ ದಾಳಿಯ ನಂತರ, ಇರಾನ್ ವಿಶ್ವದ ಅತ್ಯಂತ ಕಾರ್ಯತಂತ್ರದ ಪ್ರಮುಖ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬಗ್ಗೆ ಚಿಂತನೆ ನಡೆಸುತ್ತಿದೆ. ಟೆಹ್ರಾನ್‌ನ ಯಾವುದೇ ದಿಗ್ಬಂಧನವು ಯುರೋಪ್‌ಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಯೂರೋನ್ಯೂಸ್ ಭಾನುವಾರ ವರದಿ ಮಾಡಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದು “ಪರಿಗಣನೆಯಲ್ಲಿದೆ, ಮತ್ತು ಇರಾನ್ ದೃಢಸಂಕಲ್ಪದಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಸರ್ದಾರ್ ಎಸ್ಮಾಯಿಲ್ ಕೊವ್ಸರಿ ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ಯೂರೋನ್ಯೂಸ್ ವರದಿ ಮಾಡಿದೆ.