ರಷ್ಯಾದ ಈ ಕ್ಷಿಪಣಿ ಎದುರಿಸಲು ಪರದಾಡ್ತಿದೆ ಉಕ್ರೇನ್ ವಾಯು ರಕ್ಷಣಾ ಪಡೆ: ಪುಟಿನ್‌ ಮೇಲುಗೈ ಸಾಧಿಸೋಕೆ ಇದೇ ಕಾರಣ..!

ಮಾಸ್ಕೋ ಮೂಲದ, ರಕ್ಷಣಾ ತಜ್ಞರೊಬ್ಬರ ಪ್ರಕಾರ, ಸಾಮಾನ್ಯವಾಗಿ ರಷ್ಯನ್ ಬ್ರಹ್ಮೋಸ್ ಎಂದು ಕರೆಯಲಾಗುವ ಪಿ-800 ಓನಿಕ್ಸ್ ಕ್ಷಿಪಣಿಗಳು ಪ್ರಸ್ತುತ ಉಕ್ರೇನ್ ವಾಯು ರಕ್ಷಣಾ ವ್ಯವಸ್ಥೆಗಳ ವಿರುದ್ಧ ಬಹುದೊಡ್ಡ ಮೇಲುಗೈ ಸಾಧಿಸಿವೆ.

ukraine air defense force is struggling to stop p 800 onyx russian brahmos missiles ash

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪಿ-800 ಓನಿಕ್ಸ್ ಕ್ಷಿಪಣಿಗಳು ಅತ್ಯಂತ ಕೆಳಮಟ್ಟದಲ್ಲಿ, ಅಂದರೆ ಸಮುದ್ರ ಮಟ್ಟದಿಂದ ಕೇವಲ 10-15 ಮೀಟರ್‌ಗಳಷ್ಟು ಎತ್ತರದಲ್ಲಿ ಹಾರಾಟ ನಡೆಸಬಲ್ಲವು. ಹೈಪರ್‌ಸಾನಿಕ್ ವೇಗದಲ್ಲಿ, ಅಂದರೆ ಗಂಟೆಗೆ 3,000 ಕಿಲೋಮೀಟರ್‌ಗಳ ವೇಗದಲ್ಲಿ ಹಾರಾಟ ನಡೆಸುತ್ತದೆ. ಈ ಸಾಮರ್ಥ್ಯಗಳ ಕಾರಣದಿಂದ, ಉಕ್ರೇನ್ ಹೊಂದಿರುವ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಈ ಕ್ಷಿಪಣಿಗಳನ್ನು ಸಮರ್ಥವಾಗಿ ಪತ್ತೆಹಚ್ಚುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾಸ್ಕೋ ಮೂಲದ, ರಕ್ಷಣಾ ತಜ್ಞರೊಬ್ಬರ ಪ್ರಕಾರ, ಸಾಮಾನ್ಯವಾಗಿ ರಷ್ಯನ್ ಬ್ರಹ್ಮೋಸ್ ಎಂದು ಕರೆಯಲಾಗುವ ಪಿ-800 ಓನಿಕ್ಸ್ ಕ್ಷಿಪಣಿಗಳು ಪ್ರಸ್ತುತ ಉಕ್ರೇನ್ ವಾಯು ರಕ್ಷಣಾ ವ್ಯವಸ್ಥೆಗಳ ವಿರುದ್ಧ ಬಹುದೊಡ್ಡ ಮೇಲುಗೈ ಸಾಧಿಸಿವೆ.

ಮಿಲಿಟರಿ ಇತಿಹಾಸಕಾರರು ಮತ್ತು ಏರ್ ಡಿಫೆನ್ಸ್ ಫೋರ್ಸಸ್ ವಸ್ತು ಸಂಗ್ರಹಾಲಯದ (ಎಡಿಎಫ್) ನಿರ್ದೇಶಕರಾಗಿರುವ ಯೂರಿ ಕ್ನುಟೋವ್ ಅವರು ಇತ್ತೀಚೆಗೆ ಪಿ-800 ಓನಿಕ್ಸ್ ಕ್ಷಿಪಣಿಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇದೇ ಸಂದರ್ಭದಲ್ಲಿ, ಮಾಸ್ಕೋ ಸಹ ಈ ಕ್ಷಿಪಣಿಗಳನ್ನು ಬಳಕೆಗೆ ತಂದು, ಕ್ರಿಮಿಯಾದಲ್ಲಿನ ಬ್ಯಾಸ್ಟಿಯನ್ ಕರಾವಳಿ ಕ್ಷಿಪಣಿ ವ್ಯವಸ್ಥೆಗಳ ಮೂಲಕ ಉಕ್ರೇನ್ ಕರಾವಳಿ ನಗರವಾದ ಒಡೆಸ್ಸಾವನ್ನು ಗುರಿಯಾಗಿಸಿಕೊಂಡು ನಿಖರ ದಾಳಿಗಳನ್ನು ಸಂಘಟಿಸಿತು. ಬ್ಯಾಸ್ಟಿಯನ್ ಕರಾವಳಿ ಕ್ಷಿಪಣಿ ವ್ಯವಸ್ಥೆ ಎಂದರೆ ಕರಾವಳಿ ರಕ್ಷಣೆಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿರುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು ಕರಾವಳಿ ತೀರದಾದ್ಯಂತ ಅಳವಡಿಸಲಾಗಿರುವ ಮಿಸೈಲ್ ಲಾಂಚರ್‌ಗಳನ್ನು ಹೊಂದಿದ್ದು, ಸಮುದ್ರದಿಂದ ಬರಬಹುದಾದ ಯಾವುದೇ ಅಪಾಯವನ್ನು ಎದುರಿಸಲು ಸಿದ್ಧವಾಗಿರುತ್ತದೆ.

ಇದನ್ನು ಓದಿ: Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ಉಕ್ರೇನಿನ ಬೃಹತ್ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಸಂಗ್ರಹ

ರಷ್ಯಾ, ಉಕ್ರೇನ್, ಟರ್ಕಿ ಮತ್ತು ವಿಶ್ವಸಂಸ್ಥೆಗಳ ಮಧ್ಯೆ ಬ್ಲ್ಯಾಕ್ ಸೀ ಗ್ರೇನ್ ಇನಿಷಿಯೇಟಿವ್ ಎಂಬ ಒಪ್ಪಂದ ನೆರವೇರಿತ್ತು. ಇದು ಉಕ್ರೇನಿನ ಬಂದರುಗಳಿಂದ ಧಾನ್ಯಗಳು ಮತ್ತು ಆಹಾರ ವಸ್ತುಗಳ ಸುರಕ್ಷಿತ ಸಾಗಾಣಿಕೆಗೆ ವಿಶ್ವಸಂಸ್ಥೆಗೆ ಅನುಮತಿ ನೀಡಿತ್ತು. ಆದರೆ ಈ ಒಪ್ಪಂದವನ್ನು ರಷ್ಯಾ, ಜುಲೈ 18, 2023ರಂದು ಮುರಿಯಿತು. ರಷ್ಯಾ ಉಕ್ರೇನಿನ ಪ್ರಮುಖ ಬಂದರು ನಗರವಾದ ಒಡೆಸ್ಸಾದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿತು. ಈ ದಾಳಿಗಳು ಒಡೆಸ್ಸಾದಲ್ಲಿ ಉಕ್ರೇನ್ ಸರ್ಕಾರ ಸಂಗ್ರಹಿಸಿ ಇಡುತ್ತಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿಕೊಂಡಿತ್ತು. ಈ ದಾಳಿಗಳು ಒಡೆಸ್ಸಾದ ಬಂದರು ಮತ್ತು ಮೂಲಭೂತ ಸೌಕರ್ಯಗಳ ಮೇಲೆ ಭಾರೀ ನಾಶ ಎಸಗಿದ್ದವು.

ಬ್ಲ್ಯಾಕ್ ಸೀ ಗ್ರೇನ್ ಅಗ್ರಿಮೆಂಟ್ ಜಾಗತಿಕ ಆಹಾರ ಭದ್ರತೆಗೆ ಒಂದು ಅತಿಮುಖ್ಯ ಒಪ್ಪಂದವಾಗಿತ್ತು. ಉಕ್ರೇನ್ ಆಹಾರ ಧಾನ್ಯಗಳ ಪ್ರಮುಖ ರಫ್ತುದಾರ ರಾಷ್ಟ್ರವಾಗಿದ್ದು, ಅದರ ಬಂದರುಗಳಿಗೆ ಒಡ್ಡಿದ ತಡೆ ಜಾಗತಿಕವಾಗಿ ಆಹಾರ ಧಾನ್ಯಗಳು ಮತ್ತು ಗೋಧಿಯ ಅಭಾವ ಉಂಟಾಗುವಂತೆ ಮಾಡಿತು. ರಷ್ಯಾ ಈ ಒಪ್ಪಂದವನ್ನು ಧಿಕ್ಕರಿಸಿರುವುದು ಜಾಗತಿಕ ಆಹಾರ ಭದ್ರತೆಗೆ ಅತಿದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

ಒಡೆಸ್ಸಾದ ಮೇಲೆ ನಡೆಸಿರುವ ಕ್ಷಿಪಣಿ ದಾಳಿಗಳು ರಷ್ಯಾ ಉಕ್ರೇನ್ ನಡುವಿನ ಯುದ್ಧವನ್ನು ಇನ್ನಷ್ಟು ತೀಕ್ಷ್ಣಗೊಳಿಸಿವೆ. ಈ ದಾಳಿಗಳು ಜಾಗತಿಕ ವ್ಯಾಪಾರಕ್ಕೆ ಕಪ್ಪು ಸಮುದ್ರದ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿವೆ. ತೈಲ, ಅನಿಲ ಮತ್ತು ಆಹಾರ ಧಾನ್ಯಗಳ ಸಾಗಾಟಕ್ಕೆ ಕಪ್ಪು ಸಮುದ್ರ ಪ್ರಧಾನ ಮಾರ್ಗವಾಗಿದೆ. ಆದರೆ ಉಕ್ರೇನ್ ಯುದ್ಧ ಕಪ್ಪು ಸಮುದ್ರದಲ್ಲಿ ಹಡಗು ಸಂಚಾರವನ್ನು ಸ್ಥಗಿತಗೊಳಿಸಿ, ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಉಂಟುಮಾಡಿದೆ.

2022ರ ಅಕ್ಟೋಬರ್ 10ರಂದು ರಷ್ಯನ್ ಸೇನೆ ಕ್ರಿಮಿಯಾದ ಸೇತುವೆಯ ಮೇಲಿನ ಉಗ್ರಗಾಮಿ ದಾಳಿಗೆ ಪ್ರತಿಯಾಗಿ ಉಕ್ರೇನಿನ ಮೂಲಭೂತ ವ್ಯವಸ್ಥೆಗಳ ಮೇಲೆ ದಾಳಿ ನಡೆಸಲು ಆರಂಭಿಸಿತು. ಕ್ರಿಮಿಯಾದ ಸೇತುವೆಯ ಮೇಲಿನ ದಾಳಿಯನ್ನು ಉಕ್ರೇನ್ ಸರ್ಕಾರದ ಗುಪ್ತಚರ ಇಲಾಖೆಗಳು ನಡೆಸಿದವು ಎನ್ನಲಾಗಿದೆ. ರಷ್ಯಾದ ರಕ್ಷಣಾ ಸಚಿವಾಲಯದ ಮಾಹಿತಿಯ ಪ್ರಕಾರ, ರಷ್ಯಾ ತನ್ನ ಪ್ರತಿದಾಳಿಯಲ್ಲಿ ಉಕ್ರೇನಿನಾದ್ಯಂತ ಶಕ್ತಿ ಸಂಪನ್ಮೂಲ, ವಿದ್ಯುತ್, ರಕ್ಷಣೆ, ಮಿಲಿಟರಿ ಕಮಾಂಡ್ ಮತ್ತು ಸಂವಹನ ವ್ಯವಸ್ಥೆಗಳ ಮೇಲೆ ಆಕ್ರಮಣ ನಡೆಸಿದೆ.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

ಉಕ್ರೇನಿನ ವಾಯುಪಡೆಯೂ ಜುಲೈ 19-20ರಂದು ರಷ್ಯಾ ಒಡೆಸ್ಸಾ ಮೇಲೆ ದಾಳಿ ನಡೆಸಿದ ಬಳಿಕ ಪಿ-800 ಓನಿಕ್ಸ್ ಕ್ಷಿಪಣಿಯ ಪರಿಣಾಮಗಳನ್ನು ಒಪ್ಪಿಕೊಂಡಿದೆ. ತನ್ನ ಹೇಳಿಕೆಯಲ್ಲಿ, ಉಕ್ರೇನ್ ವಾಯುಪಡೆ ತನಗೆ ಒಡೆಸ್ಸಾ ನಗರದ ಮೇಲೆ ಪ್ರಯೋಗಿಸಲ್ಪಟ್ಟ ಈ ಮಾದರಿಯ ಒಂದೇ ಒಂದು ಕ್ಷಿಪಣಿಯನ್ನು ಪತ್ತೆ ಹಚ್ಚಲಾಗಲಿ, ಹೊಡೆದುರುಳಿಸಲಾಗಲಿ ಸಾಧ್ಯವಾಗಲಿಲ್ಲ ಎಂದಿದೆ.

ಕ್ಷಿಪಣಿ ಹೊಡೆದುರುಳಿಸುವಲ್ಲಿ ವೈಫಲ್ಯ ಒಪ್ಪಿಕೊಂಡ ಕೀವ್

ಇದಾದ ಬಳಿಕ, ಉಕ್ರೇನ್ ವಾಯುಪಡೆಯ ವಕ್ತಾರರಾದ ಯೂರಿ ಇಗ್ನಾಟ್ ಅವರು ಪಿ-800 ಓನಿಕ್ಸ್ ಕ್ಷಿಪಣಿಗಳ ಎದುರು ತಮ್ಮ ರಕ್ಷಣಾ ವ್ಯವಸ್ಥೆ ಅಸಮರ್ಥವಾಗಿದೆ ಎಂದು ಒಪ್ಪಿಕೊಂಡರು. "ಪಿ-800 ಓನಿಕ್ಸ್ ಕ್ಷಿಪಣಿಗಳು ಪ್ರತಿ ಗಂಟೆಗೆ 3,000 ಕಿಲೋಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಚಲಿಸುವುದರಿಂದ, ಉಕ್ರೇನ್ ಬಳಿ ಪ್ರಸ್ತುತ ಅದನ್ನು ಹೊಡೆದುರುಳಿಸುವ ವ್ಯವಸ್ಥೆಗಳಿಲ್ಲ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

ಕ್ನುಟೋವ್ ಅವರು ಉಕ್ರೇನ್ ಮತ್ತು ಇತರ ಪಾಶ್ಚಾತ್ಯ ವಾಯು ರಕ್ಷಣಾ ವ್ಯವಸ್ಥೆಗಳು ಪಿ-800 ಓನಿಕ್ಸ್ ಕ್ಷಿಪಣಿಗಳನ್ನು ಗುರುತಿಸಲು ಯಾಕೆ ಕಷ್ಟಪಡುತ್ತಿವೆ ಎಂದು ವಿವರಿಸಿದ್ದಾರೆ. ಪಿ-800 ಓನಿಕ್ಸ್ ಕ್ಷಿಪಣಿಗಳನ್ನು ನೌಕೆಗಳಿಂದ ಅಥವಾ ಯುದ್ಧ ವಿಮಾನಗಳಿಂದ ಪ್ರಯೋಗಿಸಬಹುದಾಗಿದೆ. ಇವುಗಳು ಭೂಮಿ ಮತ್ತು ಸಾಗರ ಎರಡರಲ್ಲೂ ಗುರಿಗಳನ್ನು ನಾಶಪಡಿಸಬಲ್ಲವು. ಪಿ-800 ಓನಿಕ್ಸ್ ಕ್ಷಿಪಣಿಗಳನ್ನು ಮೊದಲ ಬಾರಿಗೆ ನೆಲದ ಮೇಲಿನ ಗುರಿಗಳನ್ನು ನಾಶಪಡಿಸಲು ಸಿರಿಯಾದಲ್ಲಿ ಪ್ರಯೋಗಿಸಲಾಗಿತ್ತು. ಅಲ್ಲಿ ಈ ಕ್ಷಿಪಣಿಗಳು ಅತ್ಯಂತ ಯಶಸ್ವಿಯಾಗಿದ್ದವು.

ಪಿ-800 ಓನಿಕ್ಸ್ ಕ್ಷಿಪಣಿಗಳನ್ನು ತಡೆಯುವುದು ಯಾಕೆ ಅಷ್ಟೊಂದು ಕಷ್ಟಕರ?

ಓನಿಕ್ಸ್ ಕ್ಷಿಪಣಿಗಳು ವಿಶೇಷ ಗ್ಯಾಸ್ ಡೈನಾಮಿಕ್ ರಡ್ಡರ್‌ಗಳನ್ನು ಹೊಂದಿದ್ದರಿಂದ ಅತ್ಯಂತ ಕುಶಲವಾಗಿ ಚಲಿಸಬಲ್ಲವು. ಗ್ಯಾಸ್ ಡೈನಾಮಿಕ್ ರಡ್ಡರ್‌ಗಳು ವಿಶೇಷ ವಸ್ತುಗಳಾಗಿದ್ದು, ಅವುಗಳು ಓನಿಕ್ಸ್ ಕ್ಷಿಪಣಿಗಳನ್ನು ಹಾರಾಟದ ವೇಳೆಯಲ್ಲಿ, ಅತ್ಯಂತ ನಿಖರವಾಗಿ ಪಥ ಬದಲಾಯಿಸುವಂತೆ ಮಾಡುತ್ತವೆ. ಆರಂಭದಲ್ಲಿ, ಓನಿಕ್ಸ್ ಕ್ಷಿಪಣಿಗಳು ಹೆಚ್ಚಿನ ವ್ಯಾಪ್ತಿ ಹೊಂದುವ ಸಲುವಾಗಿ 14 ಕಿಲೋಮೀಟರ್‌ಗಳಷ್ಟು ಎತ್ತರ ಸಾಗಬಲ್ಲವು. ಆದರೆ, ಗುರಿ ಹತ್ತಿರಾದಂತೆ ಈ ಕ್ಷಿಪಣಿಗಳು ಅತ್ಯಂತ ಕೆಳಮಟ್ಟದಲ್ಲಿ, ಅಂದರೆ, ಕೇವಲ 10-15 ಮೀಟರ್‌ಗಳಷ್ಟು ಎತ್ತರದಲ್ಲಿ ಸಾಗುತ್ತವೆ. ಇವುಗಳು ಈ ರೀತಿ ಕೆಳಮಟ್ಟದಲ್ಲಿ ಸಾಗುವುದರಿಂದ ಶತ್ರುಗಳ ರೇಡಾರ್ ಮತ್ತು ಮಿಸೈಲ್ ಗೈಡೆನ್ಸ್ ವ್ಯವಸ್ಥೆಗಳಿಗೆ ಇವುಗಳನ್ನು ಗುರುತಿಸಿ, ಪ್ರತಿದಾಳಿ ನಡೆಸುವುದು ಕಷ್ಟವಾಗುತ್ತದೆ.

ಇದನ್ನೂ ಓದಿ: ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

ಕ್ನುಟೋವ್ ಅವರು ಈ ಕ್ಷಿಪಣಿ ಅತ್ಯಂತ ವೇಗವಾಗಿದ್ದು, ಮ್ಯಾಕ್ 3 ವೇಗದಲ್ಲಿ ಚಲಿಸುತ್ತದೆ ಎಂದಿದ್ದು, ಇದರ ಪರಿಣಾಮವಾಗಿ ಕೀವ್‌ನ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅವರು ಉಕ್ರೇನ್ ಅವಲಂಬಿತವಾಗಿರುವ ವಾಯು ರಕ್ಷಣಾ ವ್ಯವಸ್ಥೆಗಳಾದ ನಾಸಾಮ್ಸ್ (NASAMS) ಅಥವಾ ಪ್ಯಾಟ್ರಿಯಟ್ ವ್ಯವಸ್ಥೆಗಳು ಮಿಸೈಲ್ ಗೈಡೆನ್ಸ್ ವ್ಯವಸ್ಥೆಗೆ ಮಾಹಿತಿ ಕಳುಹಿಸುವ 'ಕ್ಯಾಪ್ಚರ್ ಸಿಸ್ಟಮ್' ಅನ್ನು ಹೊಂದಿವೆ.

ಈ 'ಕ್ಯಾಪ್ಚರ್ ಸಿಸ್ಟಮ್' ಎನ್ನುವುದು ವಾಯು ರಕ್ಷಣಾ ವ್ಯವಸ್ಥೆಗಳು ಗುರಿಯನ್ನು ಗುರುತಿಸಿ, ಅದನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯಾಗಿದೆ. ಇದು ಕ್ಷಿಪಣಿಯ ಮೇಲೆ ನಿಖರವಾಗಿ ದಾಳಿ ನಡೆಸಲು ಮಿಸೈಲ್ ಗೈಡೆನ್ಸ್ ಸ್ಟೇಷನ್‌ಗೆ ಮಹತ್ವದ ಮಾಹಿತಿ ಒದಗಿಸುತ್ತದೆ. ರೇಡಾರ್ ಮಾಹಿತಿಗಳನ್ನು ಪಡೆದ ಬಳಿಕ, ಮಿಸೈಲ್ ಗೈಡೆನ್ಸ್ ಸ್ಟೇಷನ್ ಸ್ವಯಂಚಾಲಿತವಾಗಿ ಗುರಿಯನ್ನು ಲಾಕ್ ಮಾಡಿಕೊಂಡು, ಮಾನವ ಹಸ್ತಕ್ಷೇಪದ ಅಗತ್ಯವಿಲ್ಲದೆ ಅದರ ಚಲನೆಯನ್ನು ಹಿಂಬಾಲಿಸುತ್ತದೆ. ಬಳಿಕ, ಕ್ಷಿಪಣಿ ಉಡಾವಣಾ ಸಮಯವನ್ನು ತಿಳಿದು, ಅದು ಗುರಿಯನ್ನು ಯಾವ ಸಮಯದಲ್ಲಿ ತಲುಪುತ್ತದೆ ಎಂದು ಲೆಕ್ಕಾಚಾರ ಮಾಡಿ, ಅದರ ಮೇಲೆ ದಾಳಿ ನಡೆಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

ಪಿ-800 ಓನಿಕ್ಸ್ ಕ್ಷಿಪಣಿ ಇಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಯನ್ನು ಒಳಗೊಂಡಿದ್ದು, ಅದರಲ್ಲಿ ಜಾಮಿಂಗ್ ಸಾಮರ್ಥ್ಯವೂ ಸೇರಿದೆ. ಇದು ಟ್ರ್ಯಾಕಿಂಗ್ ಸ್ಟೇಷನ್‌ಗಳಿಗೆ ಅಡ್ಡಿಯುಂಟುಮಾಡಿ, ಅವುಗಳ ಹಾದಿ ತಪ್ಪಿಸಬಲ್ಲದು. ಈ ಕಾರಣದಿಂದ, ವೊಲೊಡಿಮಿರ್ ಜೆಲೆನ್ಸ್‌ಕಿ ಅವರ ಉಕ್ರೇನ್ ಪಡೆಗಳಿಗೆ ಈ ಕ್ಷಿಪಣಿಗಳ ಗೈಡೆನ್ಸ್ ಸಿಸ್ಟಮ್ ಅನ್ನು ಭೇದಿಸಲು ಸಾಧ್ಯವಾಗುತ್ತಿಲ್ಲ.

ಪಿ-800 ಓನಿಕ್ಸ್ ಮತ್ತು ಬ್ರಹ್ಮೋಸ್ ಕ್ಷಿಪಣಿಗಳ ನಡುವಿನ ಸಾಮ್ಯತೆಗಳು

ಕ್ನುಟೋವ್ ಅವರು ಬ್ರಹ್ಮೋಸ್ ಮತ್ತು ಪಿ-800 ಓನಿಕ್ಸ್ ಕ್ಷಿಪಣಿಗಳ ನಡುವಿನ ಸಾಮ್ಯತೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪಿ-800 ಓನಿಕ್ಸ್ ಮತ್ತು ಬ್ರಹ್ಮೋಸ್ ಎರಡು ಕ್ಷಿಪಣಿಗಳೂ ಸಮರ್ಥ ಕ್ಷಿಪಣಿಗಳಾಗಿದ್ದು, ಅವುಗಳನ್ನು ಹೊಡೆದುರುಳಿಸುವುದು ಕಷ್ಟಕರವಾಗಿದೆ. ನೂತನ ಬ್ರಹ್ಮೋಸ್ ಕ್ಷಿಪಣಿ ಹೈಪರ್‌ಸಾನಿಕ್ ವೇಗವನ್ನು ಪಡೆದುಕೊಂಡಿರುವುದರಿಂದ, ಅದನ್ನು ಹೊಡೆದುರುಳಿಸುವುದು ಸವಾಲಿನ ವಿಚಾರವಾಗಿದೆ. ಭಾರತವೂ ರಷ್ಯಾಗೆ ಬೇಕಾದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಒದಗಿಸುವುದಾಗಿ ತಿಳಿಸಿತ್ತು. ಆದರೆ ಬ್ರಹ್ಮೋಸ್ ಒಂದು ಆ್ಯಂಟಿ ಶಿಪ್ ಕ್ಷಿಪಣಿಯಾಗಿದ್ದು, ಉಕ್ರೇನ್ ನೌಕಾಪಡೆ ಈಗಾಗಲೇ ನಾಶವಾಗಿರುವುದರಿಂದ, ರಷ್ಯಾಗೆ ಈಗಿನ ಪರಿಸ್ಥಿತಿಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಅವಶ್ಯಕತೆ ಇಲ್ಲ ಎನ್ನುವುದು ಕ್ನುಟೋವ್ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ಕ್ನುಟೋವ್ ಅವರು ರಷ್ಯಾ ಶತ್ರುಗಳ ಭೂಮಿಯ ಮೇಲಿರುವ ನೆಲೆಗಳ ಮೇಲೆ ದಾಳಿ ನಡೆಸಲು ಪಿ-800 ಓನಿಕ್ಸ್ ಕ್ಷಿಪಣಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಉಕ್ರೇನಿನ ಕ್ರಮಗಳ ಕಾರಣದಿಂದ ರಷ್ಯಾ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷಿಪಣಿಗಳನ್ನು ಪ್ರಯೋಗಿಸಲು ಸಾಧ್ಯವಿಲ್ಲ. ಆಹಾರ ಧಾನ್ಯ ಒಪ್ಪಂದದ ಹೆಸರಿನಲ್ಲಿ ಉಕ್ರೇನ್ ಈಗಾಗಲೇ ಒಡೆಸ್ಸಾ ನಗರದಲ್ಲಿನ ಸಂಗ್ರಹಾಗಾರಗಳಲ್ಲಿ ಸಾಕಷ್ಟು ಆಯುಧಗಳನ್ನು ಕಲೆಹಾಕಿದೆ. ಅಲ್ಲಿ ಈಗಾಗಲೇ ಉಕ್ರೇನ್ ಸೈನಿಕರಿಗೆ ವೈಯಕ್ತಿಕ ತರಬೇತಿಯನ್ನೂ ನೀಡಿದ್ದು, ರಷ್ಯಾಗೆ ಅಪಾರವಾಗಿ ಕ್ಷಿಪಣಿ ಬಳಸಲು ಕಷ್ಟವಾಗುತ್ತದೆ.

ಆದರೆ ಈಗ ಒಪ್ಪಂದ ನಷ್ಟವಾಗಿರುವ ಕಾರಣದಿಂದ, ಕೀವ್‌ಗೆ ಏನನ್ನಾದರೂ ಒಡೆಸ್ಸಾದಿಂದ ತೆಗೆಯಲು, ಅಥವಾ ಆ ಪ್ರದೇಶದಲ್ಲಿ ಹೊಸ ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಲು ಅವಕಾಶವಾಗುತ್ತಿಲ್ಲ. ಇದರ ಪರಿಣಾಮವಾಗಿ, ರಷ್ಯಾ ಈಗ ಈ ಮಿಲಿಟರಿ ನೆಲೆಗಳನ್ನು ತನ್ನ ಸಂಭಾವ್ಯ ಗುರಿಗಳನ್ನಾಗಿ ಪರಿಗಣಿಸಿ ಕ್ಷಿಪಣಿ ದಾಳಿ ನಡೆಸುತ್ತಿದೆ.

ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

Latest Videos
Follow Us:
Download App:
  • android
  • ios