Asianet Suvarna News Asianet Suvarna News

ಮೌನದ ಸಮುದ್ರ: ಇರ್ಫಾನ್‌ ಖಾನ್‌ ಬಗ್ಗೆ ಜಯಂತ್ ಕಾಯ್ಕಿಣಿ ಮಾತು!

ಇರ್ಫಾನ್‌ ಖಾನ್‌ ಉತ್ಕಟ ನಟನೆಯ ಪರಂಪರೆಯನ್ನು ಮುಂದುವರಿಸಿದ ನಟ. ಕತೆಯೇ ಸರ್ವಸ್ವ ಎಂದು ನಂಬಿದ ಇರ್ಫಾನ್‌ ಹಾಲಿವುಡ್‌ ಸಿನನಿಮಾ ಆದರೂ ಪಾತ್ರ ಇಲ್ಲದೇ ಹೋದರೆ ನಟಿಸಲಾರೆ ಅನ್ನುತ್ತಿದ್ದರು. ಕಡಿಮೆ ದುಡ್ಡು ಅಂದಾಕ್ಷಣ ಸಣ್ಣ ಸಿನಿಮಾ ಮಾಡ್ತಿದ್ದೀವಿ ಅಂತೇನಲ್ಲ. ನಾವು ಕತೆ ಹಳುತ್ತಿರುತ್ತೇವೆ. ಅದನ್ನು ಸಮರ್ಥವಾಗಿಯೇ ಹೇಳಬಹುದು ಎಂದು ಸಾಬೀತು ಮಾಡಿದವರು.

Remembrance for veteran late actor Irrfan Khan by Jayanth Kaikini
Author
Bangalore, First Published May 3, 2020, 8:37 AM IST

- ಜಯಂತ ಕಾಯ್ಕಿಣಿ

ಕೇವಲ ಮನೋರಂಜನೆಯೊಂದೇ ಮುಖ್ಯ ಧಾರೆಯ ಚಿತ್ರೋದ್ಯಮದ ಉದ್ದೇಶವಲ್ಲ, ಶರವೇಗದಲ್ಲಿ ಬದಲಾಗುತ್ತಿರುವ ಬಾಳುವೆಯ ಹೊಸ ತುರ್ತಿನ ಅಗತ್ಯಗಳಿಗೆ, ಭಾವವಿನ್ಯಾಸಗಳಿಗೆ, ಅವ್ಯಕ್ತಗಳಿಗೆ ಆಕಾರವನ್ನು ಕೊಡುವ ಹೊಣೆಯೂ ಅದಕ್ಕಿದೆ - ಎಂಬುದನ್ನು ನೆಚ್ಚಿಕೊಂಡ ಒಂದು ಹೊಸ ರೆಸ್ಟ್‌ಲೆಸ್‌ ಪೀಳಿಗೆಯ ಚಿತ್ರಗಳಿಗೊಂದು ಸ್ಥೈರ್ಯವಾಗಿ ನಿಂತ ಮೇರು ಕಲಾವಿದ, ವ್ಯಕ್ತಿ ಇರ್ಫಾನ್‌ ಖಾನ್‌. ಈತ ಕಳೆದ 20 ವರ್ಷಗಳಲ್ಲಿ 101 ಚಿತ್ರಗಳಲ್ಲಿ ನಟಿಸಿದ್ದಾನೆ. 20 ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಈತ ನಿರ್ವಹಿಸಿದ ಪ್ರತೀ ಪಾತ್ರವೂ ನಮ್ಮ ಮನಸ್ಸಲ್ಲಿ ಖಾಯಂ ಉಳಿದುಬಿಡುತ್ತದೆ ಅವನ ಕಂಗಳ ಆ ಪ್ರಭಾವೀ ನೋಟದೊಂದಿಗೆ.

ಎಂಥವರನ್ನೂ ಭಾವುಕರನ್ನಾಗಿಸುತ್ತದೆ ಇರ್ಫಾನ್ ಖಾನ್ ಪತ್ನಿ ಹೃದಯಸ್ಪರ್ಶಿ ಪತ್ರ!

ಮೂರು ಬಗೆಯ ಕಲಾವಿದರು ಇರ್ತಾರೆ. ಮೊದಲನೆಯವರು ಚಿತ್ರ ರಸಿಕರ ಕಲಾವಿದರು, ಇವರನ್ನು ಆಡಿಯನ್ಸ್‌ ಆ್ಯಕ್ಟರ್‌ ಎನ್ನೋಣ. ಇನ್ನೊಂದು ಬಗೆ, ಕಲಾವಿದರ ಕಲಾವಿದರು.. ಆ್ಯಕ್ಟರ್ಸ್‌ ಆ್ಯಕ್ಟರ್‌. ಅಂದರೆ ಉಳಿದ ಆ್ಯಕ್ಟರ್‌ಗಳೂ ಅವರ ಅಭಿನಯ ನೋಡಿ ಒಳಗೊಳಗೇ ಮೆಚ್ಚಿಕೊಳ್ತಾರೆ, ಅಚ್ಚರಿ ಪಡುತ್ತಾರೆ, ಅನುಕರಿಸುತ್ತಾರೆ. ಮೂರನೆಯವರು ಡೈರೆಕ್ಟರ್ಸ್‌ ಆ್ಯಕ್ಟರ್‌. ಅಂದರೆ ಅವರು ನಿರ್ದೇಶಕರ ಕನಸಿನ ಕಲಾವಿದರು. ನಿರ್ದೇಶಕರ ಹವಣಿಕೆಯನ್ನು ಸಂವೇದನಾಶೀಲವಾಗಿ ಗ್ರಹಿಸಿ ಅದನ್ನು ತಮ್ಮ ಪ್ರತಿಭೆಯಿಂದ ಇನ್ನೂ ಎತ್ತರಕ್ಕೆ ಒಯ್ಯುವವರು. ನಿರ್ದೇಶಕರು ಅಂಥವರಿಗಾಗಿಯೇ ಹುಡುಕುತ್ತಿರುತ್ತಾರೆ. ಅಂಥಾ ಹುಡುಕಾಟದಲ್ಲಿ ಸತ್ಯಜಿತ್‌ ರೇ ಅವರಿಗೆ ಸಿಕ್ಕಿದ್ದು ಸೌಮಿತ್ರ ಚಟರ್ಜಿ. ರೇ ಅವರ ಹೆಚ್ಚಿನ ಚಿತ್ರಗಳಲ್ಲಿ ಅವರು ಇದ್ದಾರೆ. ಅಂದರೆ ಸೌಮಿತ್ರ ಚಟರ್ಜಿ ಸಿಗದಿದ್ರೆ ಸತ್ಯಜಿತ್‌ ರೇ ಏನ್ಮಾಡ್ತಿದ್ರಪ್ಪಾ ಅಂತ ನಮಗೆ ಅನಿಸಬೇಕು.. ಹಾಗೆ . ಗುಲ್ಝಾರ್‌ಗೆ ಸಂಜೀವಕುಮಾರ್‌, ಹೃಷಿಕೇಶ ಮುಖರ್ಜಿಗೆ ಜಯಾ ಬಾಧುರಿ, ಬಸು ಚಟರ್ಜಿಗೆ ಅಮೋಲ್‌ ಪಾಲೇಕರ್‌, ಬೆನೆಗಲ್‌ಗೆ ನಾಸಿರುದ್ದೀನ್‌ ಶಾ, ಸ್ಮಿತಾ ಪಾಟೀಲ್‌, ಅನುರಾಗ ಕಾಷ್ಯಪ್‌ಗೆ ನವಾಝುದ್ದೀನ ಸಿದ್ಧಿಕಿ ಸಿಕ್ಕ ಹಾಗೆ.. ಹೆಚ್ಚಿನವರಿಗೆ ವರದಂತೆ ಒದಗಿ ಬಂದವನು ಇರ್ಫಾನ್‌ ಖಾನ್‌. ಈತನ ‘ಲಂಚ್‌ಬಾಕ್ಸ್‌’, ‘ಪಾನ್‌ ಸಿಂಗ್‌ ತೋಮಾರ್‌’, ‘ಹಿಂದಿ ಮೀಡಿಯಂ’ ರೀತಿಯ ಚಿತ್ರಗಳನ್ನು ಕಮರ್ಷಿಯಲ್ಲೋ ಅಥವಾ ಹೊಸ ಅಲೆಯ ಚಿತ್ರವೋ ಅಂತ ವಿಭಾಗಿಸಲಾಗುವುದಿಲ್ಲ. ಎಲ್ಲರನ್ನೂ ಎಲ್ಲ ಅರ್ಥದಲ್ಲೂ ತಲುಪಿದ ಅತ್ಯುತ್ತಮ ಚಿತ್ರಗಳು ಅನ್ನಬಹುದು.

Remembrance for veteran late actor Irrfan Khan by Jayanth Kaikini

ಇರ್ಫಾನ್‌ ಅಭಿನಯದ ಮೊದಲ ಸಿನೆಮಾ ಮೀರಾ ನಾಯರ್‌ ಅವರ ‘ಸಲಾಂ ಬಾಂಬೆ’. ನಮ್ಮೆಲ್ಲರ ನೋಟವನ್ನು ತಿದ್ದಿದ ಚಿತ್ರ ಇದು. ಅದರಲ್ಲೊಂದು ಸಣ್ಣ ಪಾತ್ರದಲ್ಲಿ ಬರುತ್ತಾನೆ ಇರ್ಫಾನ್‌. ಬೂಟ್‌ ಪಾಲಿಶ್‌ ಮಾಡುವ ಎಳೆಯನ ಪಾತ್ರವದು. ಇರ್ಫಾನ್‌ ಥಿಯೇಟರ್‌ ಹಿನ್ನೆಲೆಯಿಂದ ಬಂದವನು. ದೆಹಲಿಯ ನ್ಯಾಶನಲ್‌ ಸ್ಕೂಲ್‌ ಆಫ್‌ ಡ್ರಾಮಾದ ವಿದ್ಯಾರ್ಥಿ. ಅಲ್ಲಿ ಹಿರಿಯ ರಂಗ ದಿಗ್ಗಜರಿಂದ ನಟನೆಯ ಪಾಠ ಹೇಳಿಸಿಕೊಂಡವನು. ರಂಗ ನಿರ್ದೇಶಕ ಪ್ರಸನ್ನ ಅವರ ಗರಡಿಯಲ್ಲೂ ಪಳಗಿದವನು. ಸಲಾಂ ಬಾಂಬೆಯಲ್ಲಿ ಆ ಚಿಕ್ಕ ಪಾತ್ರ ಮಾಡುವಾಗ ಆತನ ತಲೆಯಲ್ಲಿದ್ದದ್ದು ಮೀರಾ ನಾಯರ್‌ ಅವರಂಥಾ ಮಹತ್ವದ ನಿರ್ದೇಶಕಿ, ಒಳ್ಳೆಯ ಕತೆ ಇರುವ ಉತ್ತಮ ಚಿತ್ರ, ಅದರಲ್ಲಿ ತನಗೆ ಪಾತ್ರ ಸಿಕ್ಕಿದೆ, ತಾನು ಮಾಡ್ಬೇಕು ಅನ್ನೋದಷ್ಟೇ. ಅದರ ಹೊರತಾಗಿ ತಾನು ಹೀರೋ ಆಗ್ಬೇಕು, ಮರ ಸುತ್ತಬೇಕು ಅಂತೆಲ್ಲ ಅಲ್ಲ. ಹೊಸತರ ಹಸಿವಿರುವ ಕಲಾವಿದರಿಗೆ ಐಡೆಂಟಿಟಿ ಅಥವಾ ಇಮೇಜ್‌ನ ಗೊಡವೆ ಇರೋದಿಲ್ಲ. ಅವರು ಪಾತ್ರವಾಗಿ ಬಿಡುತ್ತಾರೆ. ಪಾತ್ರ ಅವರಾಗೋದಿಲ್ಲ!

ಇರ್ಫಾನ್ ಖಾನ್, ರಿಷಿ ಕಪೂರ್‌ ನಿಧನ: ಮೇರುನಟರ ಅಗಲಿಕೆಗೆ ಆರೆಸ್ಸೆಸ್ ಸಂತಾಪ

ಇರ್ಫಾನ್‌ ಅಭಿನಯದ ಚಿತ್ರಗಳನ್ನು ಆರಂಭದಿಂದಲೂ ನೋಡಿದರೆ ‘ಏಕ್‌ ಡಾಕ್ಟರ್‌ ಕಿ ಮೌತ್‌’, ‘ಕರಾಮತಿ ಕೋಟ್‌’, ‘ಫುಟ್‌ಪಾತ್‌’, ‘ದ ಗೋಲ್‌’, ‘ದ ನೇಮ್‌ ಸೇಕ್‌’ ‘ಸಾಹೆಬ್‌ ಬೀವಿ ಔರ್‌ ಗ್ಯಾಂಗ್‌ಸ್ಟರ್‌’, ‘ಲೈಫ್‌ ಇನ್‌ ಮೆಟ್ರೋ’ ..ಹೀಗೆ ಎಲ್ಲವೂ ..ಕಳೆದ ಇಪ್ಪತ್ತು ವರ್ಷಗಳಲ್ಲಿ ಬಂದ ಹೊಸ ಬಗೆಯ ಚಿತ್ರಗಳೇ. ಆಮೇಲೆ ಅಂತರಾಷ್ಟ್ರೀಯ ಸಿನಿಮಾ ‘ಲೈಫ್‌ ಆಫ್‌ ಪೈ’, ಮತ್ತು ‘ದಿ ಅಮೇಜಿಂಗ್‌ ಸ್ಪೈಡರ್‌ ಮ್ಯಾನ್‌’ನ ಪಾತ್ರಗಳು ಈತನ ಪ್ರತಿಭೆ ಏನು ಅನ್ನೋದನ್ನು ಜಗತ್ತಿಗೆ ತೋರಿಸಿದವು. ಇರ್ಫಾನ್‌ ಅಭಿನಯದ ‘ಸ್ಲಮ್‌ ಡಾಗ್‌ ಮಿಲಿಯನೇರ್‌’ ವಿಶ್ವ ವಿಖ್ಯಾತವಾಯ್ತು.

ಇರ್ಫಾನ್‌ ಒಬ್ಬ ರೆಸ್ಟ್‌ಲೆಸ್‌ ವ್ಯಕ್ತಿ. ಭಿನ್ನವಾದ ಪಾತ್ರ ಮತ್ಯಾವುದು ಸಿಗಬಹುದು ಅಂತ ಹುಡುಕುತ್ತಲೇ ಇದ್ದ. ವಿಶಾಲ್‌ ಭಾರದ್ವಾಜ್‌ ಎಂಬ ರೆಸ್ಟ್‌ಲೆಸ್‌ ನಿರ್ದೇಶಕ ಈತನನ್ನು ಹಿಡಿದೇ ಬಿಟ್ಟ. ಆತನ ಮಹಾತ್ವಾಕಾಂಕ್ಷಿ ‘ಮಕಬೂಲ್‌’ (ಮ್ಯಾಕಬೆಥ್‌ ) , ‘ಹೈದರ್‌’ (ಹ್ಯಾಮ್ಲೆಟ್‌) ನಂಥಾ ಸಿನಿಮಾಗಳ ಗುರುತ್ವ ಕೇಂದ್ರವೇ ಇರ್ಫಾನ್‌ ಪ್ರತಿಭೆಯ ಉತ್ಕಟ ಹಾಜರಿಯಲ್ಲಿತ್ತು. ‘ಲಂಚ್‌ ಬಾಕ್ಸ್‌’,‘ಪೀಕು’,‘ದಿನ ನೇಮ್‌ ಸೇಕ್‌’,‘ಹಿಂದಿ ಮೀಡಿಯಂ’ ಇವೆಲ್ಲಾ ಎಲ್ಲರ ಮನೆಮಾತಾದ ವೈವಿಧ್ಯಪೂರ್ಣ ಚಿತ್ರಗಳು.

ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!

ನಟನಾಗಿ ಇವರನ್ನು ನೋಡಿದಾಗ ವಿಶೇಷ ಅನಿಸೋದು ಇವರ ಅಭಿನಯದಲ್ಲಿರುವ ತೀವ್ರತೆ. ಏಕಕಾಲಕ್ಕೆ ಅದು ಅಷ್ಟೇ ಸರಳವಾದದ್ದು, ತುಂಬ ಸ್ವಾಭಾವಿಕವಾದದ್ದು. ಈಚಿನ ವರ್ಷಗಳಲ್ಲಿ ಸಿನೆಹೋಕನನ್ನು ಆವರಿಸಿರುವ ಇರಾನಿ ಚಿತ್ರಗಳನ್ನು ಗಮನಿಸಿ. ಅವುಗಳನ್ನೆಲ್ಲ ಯಾರೋ ಒಬ್ಬ ನಿರ್ದೇಶನ ಮಾಡಿ, ಯಾರೋ ಒಬ್ಬ ಡೈಲಾಗ್‌ ಬರೆದು, ಮತ್ಯಾರೋ ಒಬ್ಬ ಅಭಿನಯಿಸಿದ್ದಾನೆ.. ಅಂತ ಅನಿಸೋದೇ ಇಲ್ಲ. ಅದೊಂದು ನಡೆಯುತ್ತಿರುವ ಬಾಳುವೆ.. ನಾವು ಅದೃಶ್ಯರಾಗಿ ಅದರಲ್ಲಿ ಪಾಲ್ಗೊಂಡು ನೋಡುತ್ತಿದ್ದೇವೆ ಅನಿಸಿಬಿಡುತ್ತದೆ. ಈ ಬಗೆಯ ಅತ್ಯಂತ ಜೀವಂತ ಸ್ವಾಭಾವಿಕತೆಯನ್ನು ಇರಾನಿ ಚಿತ್ರಗಳು ಜಗತ್ತಿಗೆ ತೋರಿಸಿದವು. ಆ ಥರದ ಒಂದು ಗುಣ ಇರ್ಫಾನ್‌ ಅವರದ್ದು. ಅವರು ನಟಿಸುತ್ತಿದ್ದಾರೆ ಅಂತ ಅನಿಸೋದೇ ಇಲ್ಲ.

Remembrance for veteran late actor Irrfan Khan by Jayanth Kaikini

ಪ್ರತಿ ಪಾತ್ರಕ್ಕೂ ಒಬ್ಬ ನಟ ತಯಾರಿ ಮಾಡ್ತಾನೆ, ಅವನು ಕೂರುವ, ನಡೆಯುವ ಭಂಗಿ, ಅವನು ಮಾತಾಡುವ ವ್ಯವಹರಿಸುವ ರೀತಿ ಎಲ್ಲದರ ಬಗೆಗೂ ತಯಾರಿ ಇರುತ್ತದೆ. ಆದರೆ ಪ್ರತೀ ಪಾತ್ರಕ್ಕೂ ಅದರದ್ದೇ ಆದ ಒಂದು ಆಂತರಿಕ ಮೌನ ಇರುತ್ತದೆ. ಪ್ರತೀ ವ್ಯಕ್ತಿಯೊಳಗಿನ ಆ ಮನೋ ಮೌನವೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿರುತ್ತದೆ. ಮತ್ತು ಪ್ರತಿ ವ್ಯಕ್ತಿಯ ಆಂತರಿಕ ಮೌನವೂ ಭಿನ್ನವಾಗಿರುತ್ತದೆ..ಇರ್ಫಾನ್‌ ವ್ಯಕ್ತಿಯ ಆ ಒಳಗಿನ ಮೌನದ ಬಗ್ಗೆ, ಆ ಪಾತ್ರದ ಒಳಗಿನ ಮೌನದ ಬಗ್ಗೆ ಜಿಜ್ಞಾಸೆ ನಡೆಸುತ್ತಾರೆ, ಅದನ್ನು ಗ್ರಹಿಸುತ್ತಾರೆ. ಮಾತು ಬಿಡಿ, ಡೈಲಾಗ್‌ಶೀಟ್‌ ಕೊಟ್ಟರೆ ಹೇಳಿಬಿಡಬಹುದು, ಆದರೆ ಪ್ರತಿ ಜೀವದ ಅವ್ಯಕ್ತ ಒಂದಿರುತ್ತದಲ್ಲ, ಹೇಳಲು ಬಂದರೂ ಹೇಳಲಾಗದ್ದು ಮತ್ತು ಹೇಳಲೇ ಬಾರದ್ದು .. ಅದನ್ನು ಅನುಭವಿಸಿಕೊಂಡು ಆತ ಪಾತ್ರವನ್ನು ಮಾಡುವುದರಿಂದ ಅದು ನಮ್ಮನ್ನು ಕಾಡುತ್ತದೆ. ಒಂದು ತೀವ್ರ ಭಾವಾವೇಶದ, ಗಲಾಟೆ, ದೊಂಬಿಯಂಥಾ ಸನ್ನಿವೇಶದಲ್ಲೂ ಆತ ಅಭಿವ್ಯಕ್ತಿಸುವ ಒಂದು ಆಂತರಿಕ ಮೌನ ..ಅವನ ಪಾತ್ರಗಳ ಕಣ್ಣು, ಚಲನೆ, ಆ ತೀವ್ರತೆಯ ನೋಟ ಅಳಿಸಲಾಗದ್ದು. ಅದು ಒಳನೋಟದಿಂದ ಹೊಮ್ಮಿದ್ದು! ನಮ್ಮನ್ನು ಮಂತ್ರಮುಗ್ಧಗೊಳಿಸುವಂಥದ್ದು.

ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!

‘ಪಾನ್‌ ಸಿಂಗ್‌ ತೋಮಾರ್‌’ - ರಾಷ್ಟ್ರೀಯ ಚಾಂಪಿಯನ್‌ ಆದ ಕಡು ಬಡ ಓಟಗಾರನೊಬ್ಬ, ಅಸೂಕ್ಷ್ಮ, ಭ್ರಷ್ಠ ವ್ಯವಸ್ಥೆಯ ಪರಿಣಾಮದಿಂದಾಗಿ ಡಕಾಯಿತನಾಗುವ ಕಥೆ . ಅದರಲ್ಲಿ ಏನೇನೂ ಸೌಲಭ್ಯಗಳಿಲ್ಲದ ಆತ ಹಸಿದ ಹೊಟ್ಟೆಯಲ್ಲಿ ಕಾಲಿಗೆ ಭಾರವಾದ ಕಲ್ಲು ಕಟ್ಟಿಕೊಂಡು ಏರಿನ ಜಾಗದಲ್ಲಿ ಜೀವ ಪಣಕ್ಕಿಟ್ಟು ಓಟದ ತಾಲೀಮು ಮಾಡುವ ಸನ್ನಿವೇಶ ಇದೆ. ಅದು, ಇರ್ಫಾನ್‌ 1986ರಿಂದ 2000 ತನಕ , ಸಣ್ಣ ಪಾತ್ರಗಳಿಗಾಗಿ, ಉಳಿವಿಗಾಗಿ, ಕೌಶಲವನ್ನು ಕಾಯ್ದುಕೊಳ್ಳಲು.. ತಾಳ್ಮೆ ಯಿಂದ ಮೌನದಿಂದ ನಡೆಸಿದ ಸುದೀರ್ಘ ಹೋರಾಟದ ರೂಪಕವಾಗಿದೆ. ಬಹುಷ: ಅವರ ಮೌನಕ್ಕೆ ಆ ಕಸುವು ಮತ್ತು ಅಲುಗು ಬಂದಿದ್ದೇ ಎದೆಗುಂದದ ಆ ಹೋರಾಟದ ವನವಾಸದ 14 ವರುಷಗಳಲ್ಲಿ.

Remembrance for veteran late actor Irrfan Khan by Jayanth Kaikini

ಇರ್ಫಾನ್‌ ಇಲ್ಲ ಅಂದರೆ ನಂಬುವುದು ಕಷ್ಟ. ಅವರನ್ನು ಬೇಕೆಂದಾಗ ನೋಡಬಹುದಲ್ಲ ಚಿತ್ರಗಳಲ್ಲಿ.. ಆ ರೀತಿಯಲ್ಲಿ ನಾವು ಅವರಿಗೆ ಎಷ್ಟುಉಪಕೃತರಾಗಿರಬೇಕು.. ಪಾತ್ರಗಳ ಮೂಲಕ ಕಥನಗಳ ಮೂಲಕ ನಮ್ಮನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಲು ಆತ ಸದಾ ತಯಾರ್‌. ಕಲೆ ಹೀಗೆ ಮರಣವನ್ನು ಗೆಲ್ಲುವುದೇ ಒಂದು ಹೃದಯಂಗಮವಾದ ಸಂಗತಿ.

ಗೆಳೆಯನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದ ಇರ್ಫಾನ್!

ಒಳ್ಳೆಯ ಮೇಕಪ್‌ ಅಂದರೆ ಮೇಕಪ್‌ ಕಾಣಬಾರದು, ಒಂದು ವೇಳೆ ಮುಖದಲ್ಲಿ ಮೇಕಪ್‌ ಕಂಡರೆ ಅದು ಒಳ್ಳೆಯ ಮೇಕಪ್‌ ಅಂತ ಅನಿಸಿಕೊಳ್ಳುವುದಿಲ್ಲ. ಚೆನ್ನಾಗಿರುವ ಮೇಕಪ್‌ ಯಾವುದು ಅಂದರೆ ಮೇಕಪ್ಪೇ ಮಾಡಿಲ್ಲಪ್ಪಾ ಅಂತ ಅನಿಸುವಂಥದ್ದು. ಒಳ್ಳೆಯ ಪ್ರತಿಭೆ, ಒಳ್ಳೆಯ ನಟನೆ ಆ ಥರ. ಮೌನದ ಸಮುದ್ರದಂತಿರುವ ಇರ್ಫಾನ್‌ ಖಾನ್‌ ಅಂಥಾ ನಟ. ಆತನಿಗೆ ನಮಸ್ಕಾರ.

Follow Us:
Download App:
  • android
  • ios