Asianet Suvarna News Asianet Suvarna News

ಅಮೆರಿಕಾಕ್ಕೆ ಬಿದ್ದ ಬಣ್ಣದ ಕನಸು ಬೈಡೆನ್!

ರಾಜಕೀಯ ನಾಯಕನೊಬ್ಬ ಅಧಿಕಾರಕ್ಕೇರುವ ಮುನ್ನ ನೀಡಿದ ಭರವಸೆಗಳು, ಇಟ್ಟುಕೊಂಡು ನಿಲವುಗಳನ್ನು ಅಧಿಕಾರಕ್ಕೇರಿದ ಬಳಿಕ, ರಾಷ್ಟ್ರದ ಹಿತಾಸಕ್ತಿಯ ನಿಟ್ಟಿನಲ್ಲಿ ಬದಲಾವಣೆ ಆಗುವುದು ಸಾಮಾನ್ಯ ಮತ್ತು ಅನಿವಾರ್ಯ. ಇದು ಬೈಡನ್ ವಿಷಯದಲ್ಲೂ ಆಗುವುದು ಖಚಿತ. ಆದರೆ ಇಂಥ ನಿಲುವು ಭಾರತದ ಪರವಾಗಿ ಇರುವಂತೆ ನೋಡಿಕೊಳ್ಳಬೇಕಾದುದು ಭಾರತದ ರಾಜತಾಂತ್ರಿಕ ಕೌಶಲ್ಯವನ್ನು ಅವಲಂಬಿಸಿದೆ.

Subramanya pens down victory of american election Joe biden vcs
Author
Bangalore, First Published Nov 8, 2020, 9:36 AM IST

ಜಿ ಸುಬ್ರಹ್ಮಣ್ಯ

ಮುಂಜಾನೆ ಕನಸು ಸತ್ಯವಾಗಿದ್ದೋ? ದುಃಸ್ವಪ್ನ ಅಂತ್ಯವೋ ಖಚಿತವಿಲ್ಲ. ಅಂತೂ ಬಾದರಾಯಣ ಸಂಬಂಧದಲ್ಲಿ ರಾಜಕೀಯಕ್ಕೆ ಬಂದು ಅಮೆರಿಕದ ಅಧ್ಯಕ್ಷ ಗಾದಿಯೇರಿದ್ದ ಟ್ರಂಪಾಯಣ ಮುಗಿಯುವ ಸುದ್ದಿ ಹೊರಬಿದ್ದಿದೆ. ಅವಕಾಶಗಳ ತವರೂರಿಗೆ ಮತ್ತೆ ಅದರದ್ದೇ ಹಿರಿಮೆ ಹೊದಿಸುವ ಹೊಸ ಕನಸು ಚಿಗುರಿದೆ. ಈ ಕೆಲಸಕ್ಕೆ ಜೋ ಬೈಡೆನ್‌ ಎಂಬ ವಯೋವೃದ್ಧ ನಾಯಕನ ಆಗಮನಕ್ಕೆ ವೇದಿಕೆ ಸಿದ್ಧವಾಗಿದೆ. ವಿಶೇಷವೆಂದರೆ ಇಂಥದ್ದೊಂದು ಕೆಲಸಕ್ಕೆ ವಯೋವೃದ್ಧನಿಗೆ ಸಾರಥಿಯಾಗಿರುವುದು ಭಾರತದಲ್ಲಿ ಅರಳಿದ ಕಮಲಾ.

Subramanya pens down victory of american election Joe biden vcs

"

ನೋಡಿ. ಅದೆಷ್ಟುವಿಚಿತ್ರ. ಡೊನಾಲ್ಡ್‌ ಟ್ರಂಪ್‌ ಎಂಬ ಹುಂಬನಿಗೆ ಉದ್ಯಮದಲ್ಲಿ ರಾಜಕೀಯ ಮಾಡಿದ ಅಪಾರ ಅನುಭವಿತ್ತು ಬಿಟ್ಟರೆ, ರಾಜಕೀಯ ಉದ್ಯಮದಲ್ಲಿ ಲವಲೇಶದ ಜ್ಞಾನವೂ ಇರಲಿಲ್ಲ. ಆದರೂ ಹಣಬಲದಲ್ಲಿ ಆತ 2016ರಲ್ಲಿ ಅಮೆರಿಕದ ಅಧ್ಯಕ್ಷನಾಗಿದ್ದ. ಅಮೆರಿಕದಲ್ಲಿ ಅಧ್ಯಕ್ಷರು ಯಾರೇ ಆದರೂ, ಆತ ಹೇಗೇ ಇದ್ದರೂ, ಸಶಕ್ತ ಪ್ರಜಾಪ್ರಭುತ್ವ ವ್ಯವಸ್ಥೆ ಆತನಿಗೆ ಊರುಗೋಲಾಗಿ ಸರಿ ದಾರಿಯಲ್ಲೇ ಕರೆದೊಯ್ಯುವ ವ್ಯವಸ್ಥೆ ಮಾಡೇ ಮಾಡುತ್ತದೆ. ಆದರೆ ಈತನೊಬ್ಬನಿದ್ದಾನೆ ನೋಡಿ ಟ್ರಂಪ್‌, ತನ್ನವರಲ್ಲೇ ನಡುಕ ಹುಟ್ಟಿಸಿಬಿಟ್ಟಿದ್ದ. ಯಾವುದೇ ವಿಷಯದಲ್ಲೂ ಯಾರ ಮಾತೂ ಕೇಳಲ್ಲ. ತಾನಾಡಿದ್ದೇ ವೇದವಾಕ್ಯ ಎನ್ನುತ್ತಿದ್ದ. ಹೋಗಲಿ ಆಡಿದ್ದಾದರು ಸತ್ಯವಾಗಿದ್ದರೆ ಒಪ್ಪಬಹುದಿತ್ತು. ಎಲ್ಲವೂ ಸುಳ್ಳು. ಮಾತಿನ ಮೇಲೆ ಹಿಡಿತವೇ ಇರುತ್ತಿರಲಿಲ್ಲ. ಕಳೆದ 4 ವರ್ಷಗಳಲ್ಲಿ ಇತರೆ ಅಧ್ಯಕ್ಷರಂತೆ ಯುದ್ಧೋತ್ಸಾಹ ತೋರಲಿಲ್ಲ ಎನ್ನುವುದನ್ನು ಬಿಟ್ಟರೆ ಮತ್ತೆಲ್ಲವೂ ಆತನದ್ದು ವೈಫಲ್ಯಗಳ ಸರಮಾಲೆ. ಈತನನ್ನು ಅಧಿಕಾರದ ಮೆಟ್ಟಿಲೇರಿಸಿದ ಸ್ನೇಹಿತರೇ ಕೊನೆಗೆ ತಾವು ಮಾಡಿದ ತಪ್ಪಿಗೆ ದಿನಕಳೆದಂತೆ ದೂರವಾಗುತ್ತಾ ಹೋಗಿದ್ದು, ಈತನ ಆಡಳಿತ ರೀತಿಗೆ ಸಾಕ್ಷಿಯಾಗಿತ್ತು.

ಬೈಡನ್‌ ಗೆದ್ದರೆ ಭಾರತದ ಜೊತೆ ಉತ್ತಮ ಸಂಬಂಧ? 

ವಿಶ್ವಶಾಂತಿ, ವಿದೇಶಾಂಗ ನೀತಿ, ಪರಿಸರ ಸಂರಕ್ಷಣೆಗೆ ತೋರಿದ ಬದ್ಧತೆ, ದೇಶದಲ್ಲಿ ಪುಟಿದೇಳುತ್ತಿದ್ದ ಜನಾಂಗೀಯ ದ್ವೇಷವನ್ನು ಸರಿದಾರಿಗೆ ತರುವಲ್ಲಿ ಈ ಹಿಂದಿನ 10 ವರ್ಷದಲ್ಲಿ ಬರಾಕ್‌ ಒಬಾಮಾ ತೋರಿದ ಅಷ್ಟೂಪರಿಶ್ರಮವನ್ನು ಒಂದೇ ಏಟಿಗೆ ಹೊಡೆದು ಹಾಕಿದ ಕುಖ್ಯಾತಿಯೂ ಇಬ್ಬರು ಹೆಂಡಿರ, 5 ಮಕ್ಕಳ ತಂದೆ ಟ್ರಂಪ್‌ಗೆ ಒಲಿದಿತ್ತು.

Subramanya pens down victory of american election Joe biden vcs

ಬರೀ ಉದ್ಯಮ ಪ್ರೀತಿ, ಜನಾಂಗೀಯ ದ್ವೇಷದ ಮಾತುಗಳು, ವ್ಯಾಪಾರ ವಿಷಯದಲ್ಲಿ ಎಲ್ಲಾ ದೇಶಗಳೊಂದಿಗೆ ಕ್ಯಾತೆ, ಪರಿಸರ ವಿರೋಧಿ ನೀತಿಗಳು, ಮೇಲಾಗಿ ಎಲ್ಲದರಲ್ಲೂ ಉಡಾಫೆ. ಅದರಲ್ಲೂ ಕೊರೋನಾ ಸೋಂಕು ವಿಷಯದಲ್ಲಂತೂ ಇದು ಇಡೀ ವಿಶ್ವದ ಗಮನಕ್ಕೆ ಬಂದಿತ್ತು. ‘ಅಮೆರಿಕ ಮೊದಲು’ ಎಂಬ ಘೋಷಣೆ, ಘೋಷಣೆ ವಿಷಯದಲ್ಲಿ ಒಂದಷ್ಟುಸಣ್ಣಪುಟ್ಟಕೆಲಸ ಬಿಟ್ಟರೆ ಹುಡುಕಿದರೂ ಒಂದು ದೊಡ್ಡ ಸಾಧನೆ ಬೆನ್ನಿಗಂಟಲಿಲ್ಲ.

ಇದೆಲ್ಲದರ ಫಲವೆಂಬಂತೆ ಕಳೆದ 4 ವರ್ಷದಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ, ಆರ್ಥಿಕತೆ ಪೂರ್ಣ ನೆಲಕಚ್ಚಿದೆ. ದಶಕಗಳ ಕಾಲ ಹೊಂದಿದ್ದ ವಿಶ್ವದ ಶಕ್ತಿಕೇಂದ್ರ ಎಂಬ ದೊಡ್ಡ ಹಿರಿಮೆಗೆ ದೊಡ್ಡ ಪೆಟ್ಟು ಬಿದ್ದಿದೆ. ಇಂಥ ಹೊತ್ತಿನಲ್ಲೇ ಎದುರಾದ ಚುನಾವಣೆ, ಟ್ರಂಪ್‌ರನ್ನು ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ಆದೇಶಿಸಿದೆ. ಅವರದ್ದೇನಿದ್ದರೂ ಇನ್ನು 2 ತಿಂಗಳ ದರ್ಬಾರ್‌.

ಹಳೆಯ ಆಪ್ತ ಮಿತ್ರ ಬೈಡೆನ್ ಮುನ್ನಡೆ: ಪಾಕಿಸ್ತಾನಕ್ಕೆ ಸಂತಸ! 

ಹಿಂದಿನ ಸಮೀಕ್ಷೆಯೊಂದರಲ್ಲಿ ಟ್ರಂಪ್‌ರನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ ಅಸಮರ್ಥ, ಅವಿವೇಕಿ, ಜನಾಂಗೀಯ ನಿಂದಕ, ಅಹಂಕಾರಿ, ಅಜ್ಞಾನಿ, ಆತ್ಮರತಿ, ಶಕ್ತಿಶಾಲಿ ಎಂದಿದ್ದರು ಜನ. ಅಂತೂ, ಜಾಜ್‌ರ್‍ ವಾಷಿಂಗ್ಟನ್‌, ಅಬ್ರಹಾಂ ಲಿಂಕನ್‌, ಬೆಂಜಮಿನ್‌ ಫ್ರಾಂಕ್ಲಿನ್‌ರಂಥ ಮೇರುವ್ಯಕ್ತಿತ್ವದ ಆಡಳಿತಕ್ಕೆ ಸಾಕ್ಷಿಯಾದ ದೇಶದಲ್ಲಿ ಟ್ರಂಪ್‌ರ ಹುಂಬನೂ ಒಮ್ಮೆ ಅಧ್ಯಕ್ಷನಾಗಿದ್ದ ಎಂಬುದಷ್ಟೇ ಬಹುಶಃ ಭವಿಷ್ಯದಲ್ಲಿ ಅಮೆರಿಕ ಇತಿಹಾಸವನ್ನು ಹುಡುಕಿದವರಿಗೆ ಸಿಗಬಹುದಾದ ಮಾಹಿತಿ.

ಜೋ ಬೈಡೆನ್‌

ಅಮೆರಿಕದ ನೂತನ ಅಧ್ಯಕ್ಷ ಹುದ್ದೆ ಏರುವ ಅಧಿಕಾರ ಪಡೆದ ಜೋ ಬೈಡೆನ್‌ (77) ಹುಟ್ಟಿದ್ದು ಸ್ಕರಾಂಟನ್‌ ಪಾ ದಲ್ಲಿ. ಆದರೆ ಬಾಲ್ಯ, ರಾಜಕೀಯವೆಲ್ಲಾ ಡೆಲಾವರ್‌ನಲ್ಲೇ. 6 ಬಾರಿ ಸಂಸತ್‌ಗೆ ಆಯ್ಕೆಯಾದ ಇತಿಹಾಸ ಹೊಂದಿರುವ ಬೈಡೆನ್‌ 30 ವರ್ಷಗಳ ಹಿಂದೆಯೇ ಅಧ್ಯಕ್ಷ ಹುದ್ದೆ ಏರುವ ಮೊದಲ ಯತ್ನ ಮಾಡಿದ್ದರು. ಅಂದು ವಿಫಲರಾಗಿದ್ದ ಬೈಡೆನ್‌ ನಂತರ 2009ರಿಂದ 2017ರವರೆಗೆ ಬರಾಕ್‌ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದಾಗ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ ಮತ್ತೆ ಒಬಾಮಾ ಆಡಳಿತದ ವೈಭವ ಮರುಕಳಿಸುವ ಭರವಸೆ ನೀಡುತ್ತಾ ಬಂದಿದ್ದು.

Subramanya pens down victory of american election Joe biden vcs

ಸವಾಲುಗಳ ಬೆಟ್ಟ

2021ರ ಜ.20ರಂದು ದೇಶದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಸವಾಲಿನ ಬೆಟ್ಟವನ್ನೇ ಏರುವ ಅನಿವಾರ್ಯತೆ ಬೈಡೆನ್‌ಗಿರಲಿದೆ. ಮೊಟ್ಟಮೊದಲಿಗೆ ಕೊರೋನಾ ಬಿಕ್ಕಟ್ಟಿನಿಂದ ದೇಶವನ್ನು ಕಾಪಾಡುವುದು, ನೆಲಕಚ್ಚಿದ ಆರ್ಥಿಕತೆಗೆ ಚೇತರಿಕೆ, ವಿದೇಶಾಂಗ ಸಂಬಂಧ ಸುಧಾರಣೆ, ರಷ್ಯಾ ಸೇರಿದಂತೆ ಯುರೋಪ್‌ ದೇಶಗಳೊಂದಿಗೆ ಹದಗೆಟ್ಟಸಂಬಂಧ ಸುಧಾರಣೆ, ಜಾಗತಿಕ ಪರಿಸರ ಸಂರಕ್ಷಣೆಯಲ್ಲಿ ತನ್ನ ಬಾಧ್ಯತೆಯನ್ನು ನಿಭಾಯಿಸುವುದು ಹೀಗೆ ಸಾಲು ಸಾಲು ಸವಾಲುಗಳು ನೂತನ ಅಧ್ಯಕ್ಷರನ್ನು ಬಹುವಾಗಿ ಕಾಡಲಿದೆ. ಕೊರೋನಾದಿಂದ ಜಾಗತಿಕ ಆರ್ಥಿಕತೆ ಕುಸಿದಿರುವಾಗ, ಚೀನಾ ಸೇರಿದಂತೆ ಹಲವು ದೇಶಗಳು ಮಿಲಿಟರಿ ಮತ್ತು ಆರ್ಥಿಕತೆಯಲ್ಲಿ ಅಮೆರಿಕದ ಪಾರಮ್ಯಕ್ಕೆ ಸಡ್ಡು ಹೊಡೆಯುತ್ತಿರುವಾಗ ಅದನ್ನು ನೂತನ ಅಧ್ಯಕ್ಷರಾಗಿ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲದ ವಿಷಯ.

ಟ್ರಂಪ್ ‌ವಿರುದ್ಧ ಭರ್ಜರಿ ಗೆಲುವು, ಅಮೆರಿಕ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ

ಆದ್ಯತಾ ವಲಯ

ಮೂಲಸೌಕರ್ಯ, ಚೈಲ್ಡ್‌ ಕೇರ್‌, ಎಲ್ಲರಿಗೂ ಆರೋಗ್ಯ ವಿಮೆಯ ಒಬಾಮಾ ಕೇರ್‌, ಸ್ವಚ್ಛ ಇಂಧನ, ಜನಾಂಗೀಯ ದ್ವೇಷದ ಕ್ರಮಗಳಿಗೆ ಬ್ರೇಕ್‌, ಉತ್ಪಾದನೆ ಮತ್ತು ನಾವೀನತ್ಯಾ ವಲಯಗಳಲ್ಲಿ ಭಾರೀ ಹೂಡಿಕೆ, ಉದ್ಯಮಗಳಿಗೆ ಪ್ಯಾಕೇಜ್‌, ಅಲ್ಪಸಂಖ್ಯಾತರಿಗೆ ಅಗ್ಗದ ಸಾಲ, ಜಾಗತಿಕ ಹವಾಮಾನ ತಡೆಗೆ ನೆರವು, ವಲಸಿಗರ ಸಮಸ್ಯೆ ಇತ್ಯರ್ಥ, ಇತರೆ ದೇಶಗಳೊಂದಿಗೆ ವ್ಯಾಪಾರ, ರಾಜತಾಂತ್ರಿಕ ಸಂಬಂಧ ಸುಧಾರಣೆ ಹೊಸ ಸರ್ಕಾರದ ಆದ್ಯತಾ ವಲಯವಾಗಿರಲಿದೆ.

Subramanya pens down victory of american election Joe biden vcs

ಭಾರತ ಮತ್ತು ಬೈಡೆನ್‌

ಅಮೆರಿಕಕ್ಕೆ ಅಧ್ಯಕ್ಷರು ಯಾರೇ ಆದರೂ ವಿದೇಶಗಳೊಂದಿಗೆ ಅವರ ಸಂಬಂಧ ಆ ದೇಶದ ಜೊತೆಗಿನ ಆರ್ಥಿಕ ವ್ಯವಹಾರದ ಪ್ರಮಾಣವನ್ನೇ ಹೆಚ್ಚಾಗಿ ಅವಲಂಬಿಸುತ್ತಿರುತ್ತದೆ. ಇದಕ್ಕೆ ಭಾರತವೂ ಹೊಸತಲ್ಲ. ಅಮೆರಿಕದ ಪಾಲಿಗೆ ಭಾರತ ಆರ್ಥಿಕ ಮತ್ತು ಬೌದ್ಧಿಕ ಸಂಪತ್ತಿನ ಖಜಾನೆ. ಅದರಲ್ಲೂ ಭಾರತ ತನ್ನ ರಕ್ಷಣಾ ಬಲವನ್ನು ಹೆಚ್ಚಿಸಿಕೊಳ್ಳಲು ನೋಡುತ್ತಿರುವ ಹಿನ್ನೆಲೆಯಲ್ಲಿ ಇತರೆ ದೇಶಗಳಂತೆ ಅಮೆರಿಕ ಕೂಡಾ ಭಾರತದ ಜೊತೆಗಿನ ತನ್ನ ಸ್ನೇಹ ಮತ್ತಷ್ಟುಗಟ್ಟಿಗೊಳಿಸಲು ಮುಂದಾಗುತ್ತಲೇ ಇದೆ. ಬರಾಕ್‌ ಒಬಾಮಾ, ಡೊನಾಲ್ಡ್‌ ಟ್ರಂಪ್‌ರಿಂದ ಆರಂಭವಾದ ಈ ಸಂಬಂಧ ಸುಧಾರಣೆ ಹಾದಿ ಬೈಡೆನ್‌ ಅವಧಿಯಲ್ಲೂ ಮುಂದುವರೆಯುವ ಸಾಧ್ಯತೆ ನಿಚ್ಚಳ. ಜೊತೆಗೆ ಬೈಡೆನ್‌ ಜೊತೆಗೆ ಈ ಬಾರಿ ಉಪಾಧ್ಯಕ್ಷರಾಗಿ ಸ್ವತಃ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರೇ ಇರುವ ಕಾರಣ, ಸಂಬಂಧ ಇನ್ನಷ್ಟುಗಟ್ಟಿಗೊಳ್ಳುವ ನಿರೀಕ್ಷೆ ಇದೆ.

ಅಮೆರಿಕ ನೂತನ ಅಧ್ಯಕ್ಷ ಬೈಡೆನ್‌ಗೆ ಮೋದಿ ಶುಭಾಶಯ, ಹೇಳೇ ಬಿಟ್ರು ಈ ಮಾತು!

ಒಬಾಮಾ ಅವಧಿಯಲ್ಲಿ ಸಹಿಹಾಕಲಾದ ಭಾರತ- ಅಮೆರಿಕ ಪರಮಾಣು ಒಪ್ಪಂದ ಜಾರಿಯಾಗಲು ಉಪಾಧ್ಯಕ್ಷರಾಗಿದ್ದ ತಾವು ಕಾರಣ ಎಂದು ಈ ಹಿಂದೆಯೇ ಬೈಡೆನ್‌ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ನೂತನ ಕಾರ್ಯಭಾರತದಲ್ಲಿ ಭಾರತ ಆದ್ಯತೆಯ ಪಾಲುದಾರನಾಗಿರಲಿದೆ ಎಂದು ಈಗಾಗಲೇ ಭರವಸೆ ನೀಡಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೂ ಮಂಡ್ಯ ಮೂಲದ ವಿವೇಕ್‌ ಮೂರ್ತಿ ಸೇರಿದಂತೆ ಹಲವು ಭಾರತೀಯರೇ ಬೈಡೆನ್‌ನ ರಣತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೆಲ್ಲವೂ ಭವಿಷ್ಯದಲ್ಲಿ ನೂತನ ಅಧ್ಯಕ್ಷರು ಭಾರತದ ಪರ ಒಲವು ಹೊಂದಿರುವ ದಿಕ್ಕಿನಲ್ಲಿರಬಹುದು ಎಂದು ಭರವಸೆ ಇಡಲು ಇರುವ ಒಂದಷ್ಟುಕಾರಣಗಳು.

ಇನ್ನು ಐಟಿ ವಲಯದಲ್ಲಿನ ಲಕ್ಷಾಂತರ ಉದ್ಯೋಗಗಳನ್ನು ದೇಶಿ ಯುವ ಸಮುದಾಯಕ್ಕೆ ಉಳಿಸಲು ಹಾಲಿ ಅಧ್ಯಕ್ಷ ಟ್ರಂಪ್‌ ಎಚ್‌ 1ಬಿ ವೀಸಾ ನಿಯಮಕ್ಕೆ ಸಾಕಷ್ಟುತಿದ್ದುಪಡಿ ಮಾಡಿದ್ದಾರೆ. ಇದು ಲಕ್ಷಾಂತರ ಭಾರತೀಯ ಕನಸುಗಳಿಗೆ ಪೆಟ್ಟು ನೀಡುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಈ ವಿಷಯದಲ್ಲಿ ಬೈಡೆನ್‌ ನಿಲುವು ಕುತೂಹಲ ಮೂಡಿಸಿದೆ.

ಸೋಲು ಖಚಿತವಾಗ್ತಿದ್ದಂತೆ ಗಾಲ್ಫ್‌ ಸ್ಟಿಕ್ ಹಿಡಿದು ಗ್ರೌಂಡ್‌ನತ್ತ ಟ್ರಂಪ್

ಇನ್ನು ಹಿಂದಿನಿಂದಲೂ ಸ್ವಲ್ಪ ಪಾಕಿಸ್ತಾನ ಪರ ಒಲವುಳ್ಳ ವ್ಯಕ್ತಿ ಎಂಬ ಆಪಾದನೆ ಬೈಡೆನ್‌ ಮೇಲೆ ಇದ್ದೇ ಇದೆ. ಇದೇ ಕಾರಣಕ್ಕಾಗಿಯೇ ಬಹಳ ಹಿಂದೆಯೇ ಪಾಕ್‌ ಸರ್ಕಾರ ಬೈಡೆನ್‌ಗೆ ತನ್ನ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಹಿಲಾಲ್‌ ಎ ಪಾಕಿಸ್ತಾನ್‌ ನೀಡಿ ಗೌರವಿಸಿತ್ತು ಎಂಬುದನ್ನು ಮರೆಯಲಾಗದು. ಜೊತೆಗೆ ತಮ್ಮ ಚುನಾವಣಾ ಪ್ರಚಾರ ಭಾಷಣದ ವೇಳೆ ಮುಸ್ಲಿಂ ಸಮುದಾಯವನ್ನು ಒಲೈಸುವ ಸಲುವಾಗಿ ಕಾಶ್ಮೀರಕ್ಕೆ ಸ್ವಾಯತ್ತೆ ನೀಡಿದ ಭಾರತ ಸರ್ಕಾರದ ನಿರ್ಧಾರ ಮತ್ತು ಸಿಎಎ ನೀತಿಯನ್ನು ಬೈಡೆನ್‌ ಬಲವಾಗಿ ಪ್ರಶ್ನಿಸಿದ್ದರು.

ಆದರೆ ರಾಜಕೀಯ ನಾಯಕನೊಬ್ಬ ಅಧಿಕಾರಕ್ಕೇರುವ ಮುನ್ನ ನೀಡಿದ ಭರವಸೆಗಳು, ಇಟ್ಟುಕೊಂಡ ನಿಲವುಗಳನ್ನು ಅಧಿಕಾರಕ್ಕೇರಿದ ಬಳಿಕ, ರಾಷ್ಟ್ರದ ಹಿತಾಸಕ್ತಿಯ ನಿಟ್ಟಿನಲ್ಲಿ ಬದಲಾವಣೆ ಆಗುವುದು ಸಾಮಾನ್ಯ ಮತ್ತು ಅನಿವಾರ್ಯ. ಇದು ಬೈಡೆನ್‌ ವಿಷಯದಲ್ಲೂ ಆಗುವುದು ಖಚಿತ. ಆದರೆ ಇಂಥ ನಿಲವು ಭಾರತದ ಪರವಾಗಿ ಇರುವಂತೆ ನೋಡಿಕೊಳ್ಳಬೇಕಾದುದು ಭಾರತದ ರಾಜತಾಂತ್ರಿಕ ಕೌಶಲ್ಯವನ್ನು ಅವಲಂಬಿಸಿದೆ.

Follow Us:
Download App:
  • android
  • ios