ದೇಶದ ಅತಿ ದುಬಾರಿ ವಸತಿ ಪ್ರದೇಶ ಯಾವುದು ಗೊತ್ತಾ? ಇಲ್ಲಿ ಚದರ ಅಡಿಗೆ ಕೊಡೋ ದುಡ್ಡಲ್ಲಿ ಒಂದು ಸಿಂಗಾಪುರ್ ಮಲೇಶಿಯಾ ಪ್ರವಾಸವನ್ನೇ ಮುಗಿಸಬಹುದು. ಯಾವುದಪ್ಪಾ ಆ ಪ್ರದೇಶ? ಏನಂಥ ವಿಶೇಷತೆ ಇದೆ ಅಲ್ಲಿ? ಪ್ರಧಾನಿ ನಿವಾಸದ ಆಸುಪಾಸೇ ಇರಬೇಕು ಎಂದುಕೊಂಡ್ರಾ? ಖಂಡಿತಾ ಅಲ್ಲ,  ಮುಂಬಯಿಯ ಟಾರ್ಡಿಯೋ ಈ ಖ್ಯಾತಿ(?) ಪಡೆದ ಪ್ರದೇಶ.

ಇಲ್ಲಿ ಚದರ ಅಡಿಗೆ ಬರೋಬ್ಬರಿ 56,200 ರೂಪಾಯಿಗಳು. ನಂತರದಲ್ಲಿ ಇಲ್ಲಿನ ವರ್ಲಿ ಹಾಗೂ ಮಹಾಲಕ್ಷ್ಮಿ ಪ್ರದೇಶಗಳಿದ್ದು, ಇಲ್ಲಿ ಕ್ರಮವಾಗಿ ಚದರ ಅಡಿಗೆ 41,500 ಹಾಗೂ 40000 ರೂ.ಗಳಿವೆ. ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ ಬಿಡುಗಡೆ ಮಾಡಿದ ವರದಿಯಲ್ಲಿ ಈ ವಿಷಯ ಹೊರಬಿದ್ದಿದೆ. 

ಮಳೆ, ಮಂಜು, ಹಸಿರು ಮತ್ತು ಜಲಲ ಜಲಧಾರೆ!

ಈ ಲಕ್ಷುರಿ ಪ್ರಾಜೆಕ್ಟ್‌ಗಳ ಹೆಗ್ಗಳಿಕೆಯೆಂದರೆ ಅವುಗಳಲ್ಲಿ ನಿಂತು ನೋಡಿದರೆ ರೇಸ್‌ಕೋರ್ಸ್, ಸಮುದ್ರ ಮುಂತಾದ ಚೆಂದದ ಪರಿಸರ ನೋಡಬಹುದು. ಜೊತೆಗೆ, ಭಾರತದ ಅತಿ ಇಕ್ಕಟ್ಟಿನ ನಗರದಲ್ಲೂ ಕೊರತೆಯಿರದಷ್ಟು ಖಾಸಗಿತನ, ಆರ್ಗ್ಯಾನಿಕ್ ಗಾರ್ಡನ್, ಹರ್ಬ್ ಗಾರ್ಡನ್, ಆರ್ಗ್ಯಾನಿಕ್ ಕೆಫೆ ಸೇರಿದಂತೆ ಬಹುತೇಕ ಎಲ್ಲ ಸೌಲಭ್ಯಗಳು ಇಲ್ಲಿ ಇವೆ. 

ಕಳೆದ ಏಳು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸರಾಸರಿ 1690 ಚದರ ಅಡಿಯ 1100 ಮನೆಗಳು ನಿರ್ಮಾಣವಾಗಿವೆ ಎಂದರೆ ಸಣ್ಣ ವಿಷಯವೇನಲ್ಲ. 

ಎರಡು ಹಾಗೂ ಮೂರನೇ ದುಬಾರಿ ಪ್ರದೇಶಗಳು ಕೂಡಾ ಮುಂಬೈಯಲ್ಲೇ ಇದ್ದು, ಇಲ್ಲಿ 2013ರಂದೀಚೆಗೆ ಸುಮಾರು 9600 ಮನೆಗಳ ನಿರ್ಮಾಣವಾಗಿವೆ. ಅವುಗಳಲ್ಲಿ ಬಹುತೇಕ ಮನೆಗಳು 2 ಹಾಗೂ 3 ಬೆಡ್‌ರೂಂ ಮನೆಗಳು. ಅವುಗಳ ವಿಸ್ತೀರ್ಣ 1690 ಚದರ ಅಡಿಯಿಂದ ಹಿಡಿದು, 3500 ಚದರ ಅಡಿವರೆಗೂ ಇವೆ. 

ಅಬ್ಬಾ! ಅನುಷ್ಕಾ-ವಿರಾಟ್ ಮನೆಗೆ ಇಷ್ಟೊಂದು ರೆಂಟಾ?

ದೆಲ್ಲಿ

ರಾಷ್ಟ್ರ ರಾಜಧಾನಿಯಾದ ದೆಲ್ಲಿಯ ವಿಷಯಕ್ಕೆ ಹೋದರೆ ಅಲ್ಲಿನ ಕರೋಲ್ ಭಾಗ್ ದೇಶದ 6ನೇ ಅತಿ ದುಬಾರಿ ವಸತಿ ಪ್ರದೇಶವಾಗಿದ್ದು, ಇಲ್ಲಿ ಚದರ ಅಡಿಗೆ 13,500 ರೂ.ಗಳಿವೆ. ಗುರ್‌ಗಾವ್‌ನ ಗಾಲ್ಫ್ ಕೋರ್ಸ್ ರೋಡ್ 9ನೇ ಸ್ಥಾನದಲ್ಲಿದ್ದು ಅಲ್ಲಿ ಚದರ ಅಡಿಗೆ 12,500 ರೂ.ಗಳಷ್ಟಿದೆ. ಇವೆರಡು ಪ್ರದೇಶದಲ್ಲಿ 2013ರಿಂದೀಚೆಗೆ 5630 ಲಕ್ಷುರಿ ಮನೆಗಳ ದಾಖಲೆ ನಿರ್ಮಾಣವಾಗಿದೆ. ಕೆಲ ಪ್ರಾಜೆಕ್ಟ್‌ಗಳು ರೂಫ್ ಟಾಪ್ ಕೆಫೆ, ಅದ್ಬುತ ದೃಶ್ಯವೈಭವ ಹೊಂದಿದ್ದರೆ ಮತ್ತೆ ಕೆಲವು ಅಬ್ಸರ್ವೇಟರಿ ಡೆಕ್ಸ್, ರೆಸ್ಟೋರೆಂಟ್ಸ್, ಸ್ಪಾ ಹಾಗೂ ಇತರೆ ಲಕ್ಷುರಿ ವ್ಯವಸ್ಥೆಗಳನ್ನು ಕಲ್ಪಿಸಿವೆ. 

ಬೆಂಗಳೂರು, ಚೆನ್ನೈ, ಹೈದರಾಬಾದ್

ಇನ್ನು ಈ ವಿಷಯದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ನಗರಗಳೆಂದರೆ ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್. ಚೆನ್ನೈನ ನುಂಗಂಬಕ್ಕಂನಲ್ಲಿ ಮನೆಯೊಂದರ ಚದರ ಅಡಿಗೆ 18,000 ರೂ.ಗಳಿದ್ದು ಇದು ದೇಶದ ನಾಲ್ಕನೇ ಅತಿ ದುಬಾರಿ ವಸತಿ ಪ್ರದೇಶ ಎನಿಸಿಕೊಂಡಿದೆ. ಐದನೇ ಸ್ಥಾನ ಪಡೆದ ಹೆಗ್ಗಳಿಕೆ ಚದರ ಅಡಿಗೆ 15,100 ರೂ. ಹೊಂದಿದ ಎಗ್ಮೋರ್‌ದಾದರೆ, ಏಳನೇ ಸ್ಥಾನ ಪಡೆದ ಅಣ್ಣಾ ನಗರದಲ್ಲಿ ಚದರ ಅಡಿಗೆ 13000 ರೂಪಾಯಿಗಳಿವೆ. ಆದರೆ, ಇಲ್ಲಿನ ಮನೆಗಳ ವಿಸ್ತೀರ್ಣ ಮುಂಬೈ ಮಹಾನಗರಪಾಲಿಕೆ ಪ್ರದೇಶಕ್ಕೆ ಹೋಲಿಸಿದರೆ ಶೇ.17ರಷ್ಟು ದೊಡ್ಡದು. ಚೈನ್ನೈನ ಲಕ್ಷುರಿ ಅಪಾರ್ಟ್‌ಮೆಂಟ್‌ಗಳ ಗಾತ್ರ 2,190 ರಿಂದ 2,890 ಚದರ ಅಡಿಗಳಷ್ಟಿದೆ. 

ಬೆಂಗಳೂರು ಹಾಗೂ ಹೈದರಾಬಾದ್‌ನ ಯಾವುದೇ ಪ್ರದೇಶಗಳೂ ಟಾಪ್ 10 ಲಿಸ್ಟಿಗೆ ಸೇರಿಲ್ಲದಿರುವುದು ನಿಟ್ಟುಸಿರು ಬಿಡುವ ಸಂಗತಿ. ಬೆಂಗಳೂರಿನಲ್ಲಿ ಅತಿ ದುಬಾರಿ ಎನಿಸಿಕೊಂಡಿರುವುದು ರಾಜಾಜಿನಗರದ ಲಕ್ಷುರಿ ಪ್ರಾಪರ್ಟಿಗಳು. ಇವು ಚದರ ಅಡಿಗೆ 11,500 ರೂಪಾಯಿ ಬೆಲೆ ಹೊಂದಿವೆ. ನಂತರದ ಸ್ಥಾನದಲ್ಲಿರುವ ಕೋರಮಂಗಲದಲ್ಲಿ ಲಕ್ಷುರಿ ಮನೆಗಳ ಸರಾಸರಿ ಬೆಲೆ ಚದರಕ್ಕೆ 10,600 ರೂಗಳಾದರೆ, ಜಗಜೀವನ್‌ನಗರದಲ್ಲಿ ಈ ಬೆಲೆ 10,000ದಷ್ಟಿದೆ. 

ವಿಶ್ವದ 100 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿ!

ಹೈದರಾಬಾದ್‌ನತ್ತ ತಿರುಗಿದರೆ, ಇಲ್ಲಿನ ಮಾಧಾಪುರದ ಲಕ್ಷುರಿ ಮನೆಗಳು ಸ್ಕ್ವೇರ್ ಫೀಟ್‌ಗೆ 6,500 ರೂ ಇದ್ದರೆ, ನಂತರದ ಸ್ಥಾನಗಳನ್ನು ಪಡೆದಿರುವ ಹೈಟೆಕ್ ಸಿಟಿ ಹಾಗೂ ಗಚಿಬೋಲಿ 6,200 ಹಾಗೂ 5700 ರೂಪಾಯಿಗಳೊಂದಿಗೆ ತಮ್ಮ ಶ್ರೀಮಂತಿಕೆ ಮೆರೆಯುತ್ತಿವೆ. 

ಪುಣೆಯ ಕೋರೆಗಾವ್ ಪಾರ್ಕ್ ಈ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದರೆ, ಕೋಲ್ಕತಾದ ಅಲಿಪೊರೆ 10ನೇ ಸ್ಥಾನದಲ್ಲಿ ಕುಳಿತಿದೆ. ಈ ಎರಡು ಪ್ರದೇಶಗಳಲ್ಲಿ ವಸತಿ ಕಟ್ಟಡವು ಚದರ ಅಡಿಗೆ ಕ್ರಮವಾಗಿ 12,500 ಹಾಗೂ 11,800 ರೂಪಾಯಿಗಳಷ್ಟಿದೆ.