Asianet Suvarna News Asianet Suvarna News

ಚಿಕ್ಕ ಕನಸು ದೊಡ್ಡದಾಗಿ ಯಶಸ್ಸು ಕಾಣುತ್ತದೆಂದು ನಿರೀಕ್ಷಿಸಿರಲಿಲ್ಲ: ನಾಗೇಶ್ ಹೆಬ್ಬೂರ್

ಇತ್ತೀಚೆಗಷ್ಟೆ ಯೂಟ್ಯೂಬ್‌ನಲ್ಲಿ ತೆರೆಕಂಡು ಎಲ್ಲರ ಗಮನ ಸೆಳೆಯುತ್ತಿರುವ ‘ಪಬ್ಲಿಕ್ ಟಾಯ್ಲೆಟ್’ ಚಿತ್ರ. ಈ ಕಿರು ಚಿತ್ರದ ಮೂಲಕ ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿರುವ ನಾಗೇಶ್ ಹೆಬ್ಬೂರ್ ಅವರೊಂದಿಗೆ ಮಾತುಕತೆ.
 

Public toilet kannada film director Nagesh hebbur exclusive interview vcs
Author
Bangalore, First Published Feb 13, 2021, 9:06 AM IST

ನಿಮ್ಮ ಹಿನ್ನೆಲೆ ಏನು?
ನನ್ನ ಪೂರ್ತಿ ಹೆಸರು ನಾಗೇಶ್ ಹೆಬ್ಬೂರ್. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಓದಿದ್ದೇನೆ. ಓದುವಾಗಲೇ ಸಿನಿಮಾಗಳ ಮೇಲೆ ಆಸಕ್ತಿ ಹುಟ್ಟಿ ಚಿತ್ರರಂಗಕ್ಕೆ ಬಂದೆ.

ಏನಾಗುವುದಕ್ಕೆ ಚಿತ್ರಕ್ಕೆ ಬಂದಿದ್ದು?
ನನಗೆ ಕತೆ ಬರೆಯುವ ಆಸಕ್ತಿ ಇತ್ತು. ಕಾಲೇಜು ದಿನಗಳಿಂದಲೂ ಇದ್ದ ಆ ಆಸಕ್ತಿ, ಚಿತ್ರರಂಗದಲ್ಲೂ ಕತೆ ಬರೆದು, ಕತೆಗಾರನಾಗಿ ಗುರುತಿಸಿಕೊಳ್ಳೋಣ ಎಂದು ಬಂದೆ.

ಲಿಪ್‌ಲಾಕ್ ಸಹ ಆ್ಯಕ್ಟಿಂಗ್‌ನ ಭಾಗವೇ: ಸಂಜಿತ್ ಹೆಗ್ಡೆ 

ನಿರ್ದೇಶಕರಾಗಿದ್ದು?

ನನ್ನ ಕತೆಗಳನ್ನು ನಾನೇ ದೃಶ್ಯ ರೂಪಕ್ಕಿಳಿಸಬೇಕು ಎನ್ನುವ ಕಾರಣಕ್ಕೆ. ಜತೆಗೆ ನಾನು ಒಂದೆರಡು ಚಿತ್ರಗಳ ವಿಮರ್ಶೆ ಓದುವಾಗ ‘ಕತೆ ಚೆನ್ನಾಗಿತ್ತು. ಆದರೆ, ನಿರ್ದೇಶಕ ಅದನ್ನು ಸರಿಯಾಗಿ ತೆರೆ ಮೇಲೆ ತಂದಿಲ್ಲ’ ಎಂದು ಬರೆದಿದ್ದರು. ಹೀಗಾಗಿ ನನ್ನ ಕತೆಯನ್ನು ನಾನೇ ಸಿನಿಮಾ ಮಾಡಬೇಕು ಅನಿಸಿ ನಿರ್ದೇಶನ ಆಯ್ಕೆ ಮಾಡಿಕೊಂಡೆ. ಅದರ ಮೊದಲ ಪ್ರಯತ್ನವೇ ‘ಪಬ್ಲಿಕ್ ಟಾಯ್ಲೆಟ್’.

ನಿರ್ದೇಶನಕ್ಕೆ ಬರುವ ಮುನ್ನ ಯಾರ ಬಳಿ ಕೆಲಸ ಮಾಡಿದ್ದೀರಿ?
ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದು ಕೊನೆಗೆ ಹೋಗಿ ಸೇರಿದ್ದು ನಾಗತಿಹಳ್ಳಿ ಚಂದ್ರಶೇಖರ್ ಅವರ ಬಳಿ. ನನಗೆ ಸಿನಿಮಾ ಪಾಠಗಳನ್ನು ಹೇಳಿಕೊಂಡ ಮೊದಲ ಗುರುಗಳು ಇವರೆ. ೬ ವರ್ಷ, ಮೂರು ಸಿನಿಮಾಗಳು, ಸಾಕ್ಷ್ಯ ಚಿತ್ರಗಳು, ಜಾಹೀರಾತುಗಳಿಗೂ ಕೆಲಸ ಮಾಡಿರುವೆ. ನಂತರ ‘ಗ್ರಾಮಾಯಣ’, ‘ಬುದ್ಧಿವಂತ ೨’ ಹಾಗೂ ‘ಇನ್ಸ್‌ಪೆಕ್ಟರ್ ವಿಕ್ರಮ್’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿದ್ದೆ. 10 ವರ್ಷ ಆಯಿತು ಚಿತ್ರರಂಗಕ್ಕೆ ಬಂದು.

ಈ ಚಿತ್ರದ ಯಶಸ್ಸು ನೋಡಲು ನಮ್ಮ ತಂದೆ ಹಾಗೂ ಚಿರು ಇರಬೇಕಿತ್ತು: ಗಂಗಾಧರ್‌ 

ಕಿರುಚಿತ್ರ ಮಾಡಬೇಕು ಅನಿಸಿದ್ದು ಯಾಕೆ?
ನಾನು ನಿರ್ದೇಶಕನಾಗಬೇಕು ಎಂದು ಕತೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ನಾನೇನು ಅಂತ ಪ್ರೂವ್ ಮಾಡಬೇಕಿತ್ತು. ಹಾಗೆ ಸಾಬೀತು ಮಾಡಬೇಕು ಅನಿಸಿದಾಗ ‘ಪಬ್ಲಿಕ್ ಟಾಯ್ಲೆಟ್’ ಚಿತ್ರ ಹುಟ್ಟಿಕೊಂಡಿತು. ನಿಜ ಹೇಳಬೇಕು ಅಂದರೆ ಈ ಚಿಕ್ಕ ಕನಸು ಇಷ್ಟು ದೊಡ್ಡದಾಗಿ ಜನರಿಗೆ ತಲುಪುತ್ತದೆ ಎಂದುಕೊಂಡಿರಲಿಲ್ಲ.

ಈ ಘಟನೆಯನ್ನೇ ಯಾಕೆ ಸಿನಿಮಾ ಮಾಡಬೇಕು ಅನಿಸಿತು?
‘ಯಾಕಣ್ಣ’ ಎನ್ನುವ ಮುಗ್ಧ ಹೆಣ್ಣು ಮಗಳನ್ನು ಟ್ರೋಲ್ ಮಾಡಿದ್ದು ನಮಗೆ ಗೊತ್ತೇ ಇದೆ. ಆಕೆ ಜೀವನವೇ ಹಾಳು ಮಾಡಿದ ಘಟನೆ, ಅದು ನನ್ನ ಜಿಲ್ಲೆಯಲ್ಲಿ ನಡೆದದ್ದು. ಇದು ನನಗೆ ತುಂಬಾ ಕಾಡಿತು. ಎಮೋಷನಲಿ ಕನೆಕ್ಟ್ ಆದೆ. ಸಿನಿಮಾ ಮಾಡಬೇಕು ಅನಿಸಿತು.

ಆಗಸ್ಟ್‌ವರೆಗೂ ಕನ್ನಡ ಸಿನಿಮಾ ಮಾಡಲ್ವಂತೆ ರಶ್ಮಿಕಾ..! ಕಾರಣ..? 

ಈ ಘಟನೆಯನ್ನು ಸಿನಿಮಾ ಮಾಡುವಾಗ ಎದುರಾದ ಪ್ರಶ್ನೆಗಳೇನು?
ಆಕೆಯ ಗೋಳಿನ ಕತೆ ಎಲ್ಲರಿಗೂ ಗೊತ್ತು. ಹೊಸದು ಏನು ಹೇಳಬೇಕು, ಯಾಕೆ ಈ ಸಿನಿಮಾ ಮಾಡಬೇಕು ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿತು. ಆಗ ನನಗೆ ಅನಿಸಿತ್ತು, ಸಿನಿಮಾ ಮಾಡಬೇಕಿರುವುದು ಆಕೆಯ ಮೇಲಲ್ಲ, ಆಕೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವನ ಬಗ್ಗೆ. ಅವನೇ ನನ್ನ ಕತೆಯೇ ಪಿಲ್ಲರ್ ಅಂದುಕೊಂಡೆ. ನಮ್ಮ ನಿರ್ಮಾಪಕರಾದ ಟೀಮ್ ಬಾನವಿ ಕ್ಯಾಪ್ಚರ್ ಹಾಗೂ ಸುಚಿತ್ರ ವೇಣುಗೋಪಾಲ್ ಅವರಿಗೂ ಇಷ್ಟ ಆಯಿತು.

ನಿಮ್ಮ ಕಿರುಚಿತ್ರದ ಬಗ್ಗೆ ಕೇಳಿ ಬಂದ ಮೆಚ್ಚುಗೆ ಮಾತುಗಳೇನು?
ನಾಗತಿಹಳ್ಳಿ ಚಂದ್ರಶೇಖರ್ ನೋಡಿ, ‘ತುಂಬಾ ಚೆನ್ನಾಗಿ ಮಾಡಿದ್ದಿಯಾ. ಇದು ಸಿನಿಮಾ ಆಗೋ ಕತೆ. ಕಿರುಚಿತ್ರ ಮಾಡಿದ್ದಿಯಾ’ ಎಂದು ಖುಷಿಯಿಂದ ಮೆಚ್ಚಿ ಮಾತನಾಡಿದರು. ಜತೆಗೆ ಈಗ ಚಿತ್ರ ನೋಡಿ ಜನ ಮಾತಾಡಿಕೊಳ್ಳುತ್ತಿರುವ ವಿಚಾರಗಳನ್ನು ನೋಡಿ ನನ್ನ ಉದ್ದೇಶ ಈಡೇರಿದೆ ಅನಿಸಿತು.

'ನನ್ನನ್ನು ಟ್ರೋಲ್ ಮಾಡಿ; ಆದರೆ ರೂಲ್ ಮಾಡಬೇಡಿ' ಎಂದ ಶೋಭರಾಜ್!

ಇಂಥ ಚಿತ್ರಗಳಿಂದ ಏನಾದರೂ ಬದಲಾವಣೆ ಸಾಧ್ಯವೇ?
ಖಂಡಿತ ಸಾಧ್ಯವಿದೆ. ನಮ್ಮ ‘ಪಬ್ಲಿಕ್ ಟಾಯ್ಲೆಟ್’ ಚಿತ್ರ ನೋಡಿದ ಟ್ರೋಲ್ ಪೇಜ್‌ನ ಹುಡುಗನೊಬ್ಬ ‘ನಾನು ಇನ್ನು ಮುಂದೆ ಯಾರನ್ನೂ ಕೆಟ್ಟದಾಗಿ ಟ್ರೋಲ್ ಮಾಡಲ್ಲ’ ಎಂದಿದ್ದು, ‘ಯಾಕಣ್ಣ ಸ್ಟಿಕರ್ ಅನ್ನು ನಾನು ವಾಟ್ಸ್‌ಅಪ್‌ನಲ್ಲಿ ಬಳಸುತ್ತಿದ್ದೆ. ನಿಮ್ಮ ಸಿನಿಮಾ ನೋಡಿದ ಮೇಲೆ ನನಗೆ ಚಪ್ಪಲೀನಲ್ಲಿ ಹೊಡೆದಂತೆ ಆಯಿತು’ ಎಂದು ಮೆಸೇಜ್ ಮಾಡಿದ್ದು, ಯಾಕಣ್ಣ ಎನ್ನುವುದನ್ನೇ ಟಿಕ್‌ಟಾಕ್ ಮಾಡಿದ ಹುಡುಗಿ ಗಿಲ್ಟ್ ಫೀಲ್ ಆಗಿ ಮಾತನಾಡಿದ್ದು... ಇದೆಲ್ಲವೂ ಬದಲಾಣೆಯೇ. 

Follow Us:
Download App:
  • android
  • ios