ಮಧ್ಯಾಹ್ನದ ಬಿಸಿಯೂಟಕ್ಕೆ ಕಳಪೆ ಆಹಾರ ಪೂರೈಕೆ| ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ|ಅಕ್ಷರ ದಾಸೋಹ ಅಧಿಕಾರಿಗಳ ವಿರುದ್ಧ ಘೋಷಣೆ|ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ|
ಸುರಪುರ[.6]: ಮಧ್ಯಾಹ್ನದ ಬಿಸಿಯೂಟಕ್ಕೆ ಕಳಪೆ ಆಹಾರವನ್ನು ನೀಡುತ್ತಿದ್ದಾರೆಂದು ಆರೋಪಿಸಿ, ಮಂಗಳವಾರ ಮಧ್ಯಾಹ್ನ ನಗರದ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಅಕ್ಷರ ದಾಸೋಹ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ.
ಗುಣಮಟ್ಟದ ಆಹಾರ ಕೊಡುವಂತೆ ಕೇಳಿದರೆ ಅಡುಗೆ ಸಿಬ್ಬಂದಿ ಅವಾಚ್ಯವಾಗಿ ನಿಂದಿಸುತ್ತಾರೆ. ಕೊಡೊದೇ ಇದೇ ಊಟ-ಬೇಕಿದ್ದರೆ ತಿನ್ನಿ. ಇಲ್ಲವೆಂದರೆ ಉಪವಾಸವಿರಿ, ಆಗ ಬುದ್ಧಿ ಬರುತ್ತೆ ಎನ್ನುತ್ತಾರೆ. ನಿಂದಿಸಿದ ಅಡುಗೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವರರೆಗೂ ಪ್ರತಿಭಟನೆ ಕೈಬಿಡುವುದಿಲ್ಲಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಶಾಲೆಯ ಕೆಲ ಶಿಕ್ಷಕರು ಮಧ್ಯಸ್ಥಿಕೆ ವಹಿಸಿ ಅಡುಗೆ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೂ ತಿಳಿಹೇಳಿ ಇನ್ನೂ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಸಮಾಧಾನ ಪಡಿಸಿದರು. ಬಳಿಕ ಪ್ರತಿಭಟನೆ ಹಿಂಪಡೆದರು.
ವಿದ್ಯಾರ್ಥಿಗಳಾದ ವಿಠ್ಠಲ, ಹುಲಿ ಮಾನಪ್ಪ ಮಾತನಾಡಿ, ಅಡುಗೆ ಮಾಡುವವರು ಅನ್ನ ಸರಿಯಾಗಿ ಬೇಯಿಸುವುದಿಲ್ಲ. ಸಾಂಬಾರಿಗೆ ಉಪ್ಪು ಖಾರವೂ ಸರಿಯಾಗಿ ಹಾಕುವುದಿಲ್ಲ. ಸರ್ಕಾರ ವಿತರಿಸುವ ತೊಗರಿ ಬೇಳೆ ಹಾಕದೆ ನೀರು ಸಾಂಬರ್ ಮಾಡುತ್ತಾರೆ. ಕಳಪೆ ಮಟ್ಟದ ಅಡುಗೆಯನ್ನೇ ಹಾಕುತ್ತಾರೆ. ಈ ಬಗ್ಗೆ ಕೇಳಿದರೆ ಅಡುಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿ ಹೆದರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಅಡುಗೆ ಸಿಬ್ಬಂದಿಗೆ ಹಲವು ಬಾರಿ ತಿಳಿಸಿದ್ದಾರಾದರೂ, ಅಡುಗೆ ಸಿಬ್ಬಂದಿ ವರ್ತನೆಯಲ್ಲಿ ಸುಧಾರಣೆಯಾಗಿಲ್ಲ. ಯಾರೊಬ್ಬರಿಗೂ ಕಿಮ್ಮತ್ತು ನೀಡದೆ ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಬಿಸಿಯೂಟಕ್ಕೆ ಸರಕಾರ ನೀಡುವ ಸಾಮಗ್ರಿ ಬಳಸುವುದಿಲ್ಲ. ಅವರು ಮಾಡಿದ್ದನ್ನೇ ತಿನ್ನಬೇಕಾಗಿದೆ ಎಂದು ತಮ್ಮ ಆಳಲು ತೋಡಿಕೊಂಡರು.
ಉತ್ತಮ ಆಹಾರ ನೀಡಬೇಕು. ಅವಾಚ್ಯವಾಗಿ ನಿಂದಿಸುವ ಅಡುಗೆ ಸಿಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಉದಾಸೀನ ಮಾಡಿದರೆ ಬಿಸಿಯೂಟ ಬಹಿಷ್ಕರಿಸಿ ಪೋಷಕರೊಂದಿಗೆ ಅಕ್ಷರ ದಾಸೋಹ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
ಈ ಬಗ್ಗೆ ಅಕ್ಷರ ದಾಸೋಹ ನಿರ್ದೇಶಕ ಮೌನೇಶ ಕಂಬಾರ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೂಡ ಪರೋಕ್ಷವಾಗಿ ಅಡುಗೆ ಸಿಬಂದಿ ಪರವಾಗಿಯೇ ಸೊಪ್ಪು ಹಾಕುತ್ತಿದ್ದಾರೆ ಎಂದು ದೂರಿದರು. ವಿದ್ಯಾರ್ಥಿಗಳಾದ ಬಸವರಾಜ, ರವಿಚಂದ್ರ. ಮೌನೇಶ, ಬೋಜರಾಜ.ನಿಂಗಪ್ಪ ಗುರಪ್ಪ, ಮುತ್ತುರಾಜ ಇತರರು ಇದ್ದರು. (ಸಾಂದರ್ಭಿಕ ಚಿತ್ರ)