
ಯಾದಗಿರಿ (ಜ.17) ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಪ್ರಕರಣದಲ್ಲಿ ಇದೀಗ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಟಿಪ್ಪರ್ ಚಾಲಕನ ನಿರ್ಲಕ್ಷ್ಯ, ಅತೀವೇಗದ ಜೊತೆಗೆ ಅಪಘಾತವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯಾ ಅನ್ನೋ ಅನುಮಾನ ಕಾಡತೊಡಗಿದೆ. ಇದರ ಬೆನ್ನಲ್ಲೇ ಅಪಘಾತದ ಬಗ್ಗೆ ಇರುವ ಅನುಮಾನ ಕುರಿತು ಪ್ರಕರಣ ದಾಖಲಾಗಿದೆ. ನಿಖರ ಕಾರಣ ಪತ್ತೆ ಹಚ್ಚುವಂತೆ ದೂರಿನಲ್ಲಿ ಉಲ್ಲೇಖಸಲಾಗಿದೆ. ಇಷ್ಟೇ ಅಲ್ಲ ಈ ಅನುಮಾನಕ್ಕೆ ಕಾರಣವೇನು ಅನ್ನೋದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಸಚಿವ ರಾಜುಗೌಡ ಅವರ ಸಂಬಂಧಿ ಭೀಮುನಾಯಕ ನೀಡಿದ್ದ ದೂರಿನ ಮೇಲೆ ಟಿಪ್ಪರ್ ಚಾಲಕ ಮಾಲಿಕಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಮುಖವಾಗಿ ಮಾಜಿ ಸಚಿವ ರಾಜುಗೌಡ ತೆರಳುತ್ತಿದ್ದ ಕಾರಿಗೆ ಟಿಪ್ಪರ್ ಹಿಂಬದಿಯಿಂದ ಎರಡು ಬಾರಿ ಡಿಕ್ಕಿಯಾಗಿದೆ. ಹೈದ್ರಾಬಾದ್ ನಿಂದ ಯಾದಗಿರಿ ಜಿಲ್ಲೆಯ ಕೊಡೇಕಲ್‌ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ನಿರ್ಲಕ್ಷ್ಯತನದಿಂದ ಟಿಪ್ಪರ್ ಚಲಾಯಿಸಿ ಡಿಕ್ಕಿ ಹೊಡೆದ ಆರೋಪ ಮಾಡಲಾಗಿದೆ. ಇದೇ ವೇಳೆ, ಟಿಪ್ಪರ್ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದನೇ? ಅಥವಾ ಎರಡು ಬಾರಿ ಹೇಗೆ ಡಿಕ್ಕಿ ಹೊಡೆಯಲು ಸಾಧ್ಯ? ಈ ಕುರಿತು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.
ಅಪಘಾತದ ಕುರಿತು ದೂರುದಾರ ಭೀಮಾನಯಕ್ ಹಲವು ಅನುಮಾನಗಳು ವ್ಯಕ್ತಪಡಿಸಿದ್ದಾರೆ. ರಾಜುಗೌಡ ಅವರು ಮಾಜಿ ಸಚಿವರು, ಬಿಜೆಪಿಯಲ್ಲಿ ಮಾಸ್ ಲೀಡರ್ ಆಗಿದ್ದಾರೆ. ವಾಲ್ಮೀಕಿ ಸಮಾಜದ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಹೀಗಾಗಿ ಈ ಅಪಘಾತದ ಸಹಜವಾಗಿ ಅಥವಾ ನಿರ್ಲಕ್ಷ್ಯದಿಂದ ಆಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಎರಡು ಬಾರಿ ಡಿಕ್ಕಿ ಹೊಡೆದಿದ್ದಕ್ಕೆ ಅನುಮಾನ ಇದೆ ಎಂದಿದ್ದಾರೆ.
ಯಾದಗಿರಿಯಿಂದ ಸುರಪುರಗೆ ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಇಂದು ಮುಂಜಾನೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ರಾಜುಗೌಡ ಹಾಗೂ ಕಾರು ಮುಂಭಾಗದಲ್ಲಿ ಕುಳಿತಿದ್ದ ಗೊಲ್ಲಾಳಯ್ಯಗೆ ಸಣ್ಣಪುಟ್ಟ ಗಾಯವಾಗಿತ್ತು. ಇಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೇರೆ ಕಾರಿನ ಮೂಲಕ ಸುರಪುರಕ್ಕೆ ಪ್ರಯಾಣ ಮಾಡಿದ್ದಾರೆ. ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಭಿಮಾನಿಗಳು, ಬೆಂಬಲಿಗರು ಆತಂಕ ಪಡುವ ಅವಶ್ಯಕತೆ ಇಲ್ಲ. ದೇವರ ಆಶೀರ್ವಾದ, ಜನರ ಆಶೀರ್ವಾದಿಂದ ಯಾವುದೇ ಸಮಸ್ಯೆ ಆಗಿಲ್ಲ. ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ ಎಂದು ರಾಜುಗೌಡ ಮನವಿ ಮಾಡಿದ್ದಾರೆ. ಇತ್ತ ಅಭಿಮಾನಿಗಳು ಹಾಗೂ ಬೆಂಬಲಿಗರು ರಾಜುಗೌಡ ಅವರ ಯೋಗ ಕ್ಷಮ ವಿಚಾರಣೆ ಮಾಡಿದ್ದಾರೆ.